ಝೆನ್‌ ಗುರು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.11

“ತಟ್ಟೆ ಬಟ್ಟಲು ತೊಳೆದಿಟ್ಟು ಬಾ” ಅನ್ನುವುದೂ ಒಂದೇ, “ಸತ್ಯ ಸಾಕ್ಷಾತ್ಕಾರವಾದ ಬದುಕನ್ನು ಬಾಳು” ಅನ್ನುವುದೂ ಒಂದೇ! ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.11: ಅರಿವಿನ ಬೆಳಕು  ಝೆನ್‌ ಗುರು

ನಮ್ಮ ನಿಜದ ನೆಲೆಗೆ ಮರಳುವುದು, ನಮ್ಮ ನಿಜ ಸ್ವಭಾವವನ್ನು ಕಾಣುವುದು—ಇದು ಎಲ್ಲ ಅನುಷ್ಠಾನದ ಗುರಿ. ಪ್ರತಿಯೊಂದು ಕ್ಷಣದಲ್ಲೂ ಪೂರ್ಣ ಗಮನದೊಡನೆ  ಬದುಕುವುದಕ್ಕೆ ಸಾಧ್ಯವಾದಾಗ ನಮ್ಮ ನಿಜ ಸ್ವಭಾವ ಅರಿವಾಗುತ್ತದೆ. ಅಂಗಳದಲ್ಲಿ ನಡೆದಾಡುವಾಗ ಅಲ್ಲಿರುವ ಸೈಪ್ರಸ್‌ ಮರವನ್ನು ನಿಜವಾಗಲೂ ನೋಡುತೇವೆ. ನಮ್ಮ ಅಂಗಳದಲ್ಲೇ ಇರುವ ಸೈಪ್ರಸ್‌ ಮರವನ್ನು ಕಾಣಲಾಗದಿದ್ದರೆ ನಮ್ಮ ನಿಜ ಸ್ವಭಾವವನ್ನು ಕಾಣಬಲ್ಲೆವೇ?

ಜೀವಂತ ವಾಸ್ತವವನ್ನು ಕಣ್ಣಾರೆ ಕಾಣಬಲ್ಲವನೇ ಅರಿವು ಎಚ್ಚರಗೊಂಡಿರುವ ಝೆನ್‌ ಗುರು. ಪರಿಕಲ್ಪನೆಗಳ ಲೋಕದಲ್ಲಿ ದಿಕ್ಕು ತಪ್ಪಿದ್ದು ಆನಂತರ ತನ್ನ ನಿಜದ ನೆಲೆಗೆ ಮರಳಿ, ಅಂಗಳದ ನಿಜ ಸೈಪ್ರಸ್‌ ಮರವನ್ನೂ ತನ್ನ ನಿಜ ಸ್ವರೂಪವನ್ನೂ ಕಂಡ ವ್ಯಕ್ತಿಯೇ ಝೆನ್‌ ಗುರು. ಹಾಗಾಗಿ ಶಿಷ್ಯರು ಪರಿಕಲ್ಪನೆಗಳ ಲೋಕದಲ್ಲಿ ಅಲೆಯುತ್ತಾ ತನ್ನ ನಿಜವನ್ನು ಕಾಣದೆ ಬದುಕಲು ಝೆನ್‌ ಗುರು ಬಿಡುವುದಿಲ್ಲ.

ಹಾಗಾಗಿ ಶಿಷ್ಯರಾದವರು ಬುದ್ಧನ ತತ್ವಗಳಾದ ಧರ್ಮಕಾಯ ಅಂದರೇನು, ತಥತಾ ಅಂದರೇನು ಎಂದು ಪ್ರಶ್ನೆಮಾಡಿದರೆ “ಈ ಯುವ ಮನಸು ಪರಿಕಲ್ಪನೆಗಳ ಮೂಲಕ ಸತ್ಯವನ್ನು ಅರಸಲು ಬಯಸುತಿದೆ” ಎಂದು ಗುರು ಅರಿತು ಕರುಣೆಯಿಂದ ವರ್ತಿಸುತ್ತಾರೆ. ಶಿಷ್ಯರನ್ನು ಐಡಿಯಾಗಳ ಲೋಕದಿಂದ ಬಿಡಿಸಿ ಜೀವಂತ ವಾಸ್ತವದಲ್ಲಿ ಇರಿಸುತ್ತಾರೆ. ಅಂಗಳದ ಸೈಪ್ರಸ್‌ ಮರ ನೋಡಿ! ಅಂಗಳದ ಸೈಪ್ರಸ್‌ ಮರ ನೋಡಿ! ಅನ್ನುತ್ತಾರೆ.

ಚಾವೊ ಚೌ ಒಬ್ಬ ಝೆನ್‌ ಗುರು. ಸಂನ್ಯಾಸಿಯೊಬ್ಬ ಬಂದು ಝೆನ್‌ ಅಂದರೇನು ಎಂದು ಕೇಳಿದ. “ಬೆಳಗಿನ ಉಪಾಹಾರವಾಯಿತೇ?ʼ ಗುರು ಕೇಳಿದ. ʼಆಯಿತು, ಗುರುವೇ,” ಎಂದು ಸಂನ್ಯಾಸಿ ಉತ್ತರ ಹೇಳಿದ. “ಸರಿ, ಹೋಗಿ ತಟ್ಟೆ, ಬಟ್ಟಲು ತೊಳೆದಿಟ್ಟು ಬಾ,” ಎಂದ ಗುರು. 

“ತಟ್ಟೆ ಬಟ್ಟಲು ತೊಳೆದಿಟ್ಟು ಬಾ” ಅನ್ನುವುದೂ ಒಂದೇ, “ಸತ್ಯ ಸಾಕ್ಷಾತ್ಕಾರವಾದ ಬದುಕನ್ನು ಬಾಳು” ಅನ್ನುವುದೂ ಒಂದೇ. ಶಿಷ್ಯನಿಗೆ ಝೆನ್‌ ಕುರಿತು ವಿವರವಾದ ವ್ಯಖ್ಯಾನ ಮಾಡಲಿಲ್ಲ ಗುರು. ಬದಲಾಗಿ ವಾಸ್ತವಲೋಕದಲ್ಲಿ ಬದುಕುವುದನ್ನು ಕಲಿಯುವ ದಾರಿಯನ್ನು ತೋರಿದ.

“ತಟ್ಟೆ ಬಟ್ಟಲು ತೊಳೆದಿಡು” ಅನ್ನುವ ಮಾತಿನಲ್ಲಿ ಹುಡುಕಿ ತಿಳಿಯಬೇಕಾದ, ವಿವರಿಸಿ ಹೇಳಬೇಕಾದ ಯಾವ ನಿಗೂಢ ಅರ್ಥವೂ ಇಲ್ಲ. ಸರಳವಾದ, ನೇರವಾದ ಮಾತು. ಸಂಕೇತವೂ ಇಲ್ಲ, ಒಗಟೂ ಇಲ್ಲ. ಸ್ಪಷ್ಟ, ಖಚಿತ ವಾಸ್ತವನ್ನು ಕುರಿತ ಮಾತು ಅವು.

*

ಪರಿಕಲ್ಪನೆ, ವಿಚಾರ, ತರ್ಕಗಳ ಮೂಲಕ ನಿಜದ ಅರಿವು ಪಡೆಯಲು ಆಗದು ಅನ್ನುವ ಈ ಅಲ್ಲಮವಚನವನ್ನು ನೋಡಿ:

ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ
ವಿಚಾರಿಸುವನ್ನಕ್ಕರ ನೀನಾರೆಂಬುದನೆತ್ತ ಬಲ್ಲೆ
ಮರುಳೆ ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೆ
ಗುಹೇಶ್ವರನೆಂಬ ಲಿಂಗವು ತನ್ನ ತಿಳಿದು ನೋಡಿಹೆನೆಂಬವರನು
ವಿಚಾರವೆಂಬ ಬಲೆಯಲ್ಲಿ ಕೆಡಹಿದನು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.