ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಜವಾದ ಇಂಟಿಮಸಿ ಯಾರಾದರೊಬ್ಬರ ಸಾಮಿಪ್ಯದಲ್ಲಿ ನಾವು ಸುರಕ್ಷಿತವಾಗಿರುವ ಭಾವನೆಯಿಂದ ಆರಂಭವಾಗುತ್ತದೆ. ಅದು ನೀವು ನಿಮ್ಮ ಅತ್ಯಂತ ನೈಜ ರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಅತ್ಯಂತ ಮೃದುವಾಗಿ ಸ್ವೀಕರಿಸಲ್ಪಡುವುದರಿಂದ ಶುರುವಾಗುತ್ತದೆ. ನಿಮ್ಮ ಭಯಗಳನ್ನು ಕಡಿಮೆ ಮಾಡುವ ಆ ತಡರಾತ್ರಿಯ ಆತ್ಮೀಯ ಮಾತುಕತೆಗಳಲ್ಲಿದೆ ಇಂಟಿಮಸಿ. ನಿಮ್ಮ ಭೂತಕಾಲದ ಸಂಗತಿಗಳನ್ನ ಜಡ್ಜ್ ಮಾಡುವ ಭಯವಿಲ್ಲದೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವ ಪ್ರಾಮಾಣಿಕತೆಯಲ್ಲಿದೆ ಇಂಟಿಮಸಿ. ನೀವು ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ತೋರಿಸಿಕೊಳ್ಳುವುದು ಮತ್ತು ಅದಕ್ಕಾಗಿ ಪ್ರೀತಿಸಲ್ಪಡುವುದೇ ಇಂಟಿಮಸಿ. ನೀವು ಕೇಳದೆ ಇದ್ದರೂ “ನಾನು ನಿನ್ನ ಜೊತೆಯಲ್ಲಿದ್ದೇನೆ” ಎಂದು ತೋರಿಸಿಕೊಡುವ ಸಣ್ಣ ಸಣ್ಣ ಕ್ಷಣಗಳಲ್ಲೂ ಇರುತ್ತದೆ ಇಂಟಿಮಸಿ . ಹೊಟ್ಟೆ ನೋವಾಗುವಷ್ಟು ನಗುವ ನಗುಗಳಲ್ಲಿ, ಅಥವಾ ನೀವು ಅವರು ಮರೆತಿರಬಹುದು ಎಂದುಕೊಂಡ ವಿಷಯಗಳನ್ನು ಅವರು ನೆನಪಿಟ್ಟುಕೊಳ್ಳುವ ಕ್ಷಣಗಳಲ್ಲಿ ಕಾಣಿಸುತ್ತದೆ ಇಂಟಿಮಸಿ.
ನಿಜವಾದ ಇಂಟಿಮಸಿ ಕೇವಲ ದೈಹಿಕವಲ್ಲ; ಅದು ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಮಾನಸಿಕವೂ ಆಗಿದೆ. ನೀವು ಪ್ರಕಾಶಮಾನವಾಗಿರುವ ಸಮಯದಲ್ಲಿ ಮಾತ್ರವಲ್ಲ, ನಿಮ್ಮ ಜೀವನದ ಅತ್ಯಂತ ಕಷ್ಟದ ಕ್ಷಣಗಳಲ್ಲಿಯೂ ನಿಮ್ಮೊಂದಿಗೆ ನಿಲ್ಲುವ ವ್ಯಕ್ತಿಯಲ್ಲಿದೆ ಇಂಟಿಮಸಿ. ನಿಮ್ಮ ಮಾತುಗಳನ್ನು ಮಾತ್ರವಲ್ಲ, ನಿಮ್ಮ ಮೌನವನ್ನು ಸಹ ಆಲಿಸುವವರಲ್ಲಿದೆ ಇಂಟಿಮಸಿ. ನೀವು ಕುಸಿದುಬಿದ್ದರೂ ಸಹ ಕಾಳಜಿಯಿಂದ ಹಿಡಿದುಕೊಳ್ಳಲ್ಪಡುವಿರಿ ಎಂಬ ನಂಬಿಕೆಯಲ್ಲಿದೆ ಇಂಟಿಮಸಿ. ಯಾರನ್ನಾದರೂ ಸರಿಪಡಿಸಲು ಬಯಸುವುದಲ್ಲ; ಅವರು ಎದುರಿಸುತ್ತಿರುವ ನೋವಿನ ನಡುವೆಯೂ ಅವರನ್ನು ಪ್ರೀತಿಸಲು ಬಯಸುವುದರಲ್ಲಿದೆ ಇಂಟಿಮಸಿ. ನೀವು ಅವರನ್ನು ಗುಣಪಡಿಸುವುದು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿದ್ದರೂ, ಅವರು ಗುಣಮುಖರಾಗುವ ದಾರಿಯನ್ನು ಕಂಡುಕೊಳ್ಳಲು ಅವರಿಗೆ ನೆರವಾಗುವುದಾಗಿದೆ ಇಂಟಿಮಸಿ.
ನಿಜವಾದ ಇಂಟಿಮಸಿ ಎಂದರೆ, ಸಹನೆ, ಕಟ್ಟಿಕೊಂಡ ನಂಬಿಕೆ ಮತ್ತು ಮನದಾಳವನ್ನು ತೆರೆಯುವ ಧೈರ್ಯ. ಅದು ಸಂಪಾದಿಸಬೇಕಾದ ಪ್ರೀತಿ ಅಲ್ಲ. ನಿಮ್ಮ ಆತ್ಮವು ತನ್ನ ಮನೆಯನ್ನು ಕಂಡುಕೊಂಡು ವಿಶ್ರಾಂತಿ ಪಡೆಯುವ ಭಾವನೆ. ಯಾರಾದರೂ ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನು — ಎಲ್ಲ ದುರ್ಬಲತೆಗಳೊಂದಿಗೆ — ನಿಜವಾಗಿ ನೋಡಿ, ಹಾಗೆಯೇ ನಿಮ್ಮೊಂದಿಗೆ ಉಳಿಯುವಾಗ ಅದೇ ನಿಜವಾದ ಇಂಟಿಮಸಿ.

