ಧ್ಯಾನದ ಗಂಟೆಯ ನಿರಂತರ ಮೊಳಗು ನಮ್ಮಲ್ಲಿನ ಬೇಡದ ಆಲೋಚನೆ, ಬೇಡದ ಮಾತನ್ನು ನಿಲ್ಲಿಸಿ ನಮ್ಮ ಈ ಕ್ಷಣದ ಉಸಿರಾಟದತ್ತ ಗಮನ ಸೆಳೆಯುತ್ತದೆ. ಗಂಟೆಯ ಸದ್ದು ನಮ್ಮ ಮನಸಿನಲ್ಲಿರುವ ನೋವಿನ, ವೇದನೆಯ ಚಿತ್ರವನ್ನು ಮಸುಕುಗೊಳಿಸಿ ನಮ್ಮ ಉಸಿರು ಆಳವಾಗುವ ಹಾಗೆ, ನಮ್ಮ ಮೈ ಮನಸುಗಳು ಶಾಂತವಾಗುವ ಹಾಗೆ ಮಾಡಬಲ್ಲುದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.2: ಭಾವ-ಸಂಬಂಧ । ತಕ್ಕ ಗಮನ
ನಮ್ಮ ಏಳನೆಯ ವಯಸಿನಲ್ಲಿ ಯಾರಾದರೂ ನಮ್ಮನ್ನು ಬೈದು ಕೆಟ್ಟದಾಗಿ ನಡೆಸಿಕೊಂಡಿದ್ದರೆ ಆ ಏಳು ವರುಷದ ಮಗುವಿನ ಬಿಂಬವನ್ನು ನಮ್ಮೊಳಗೆ ಹೊತ್ತು ಸಾಗುತ್ತೇವೆ. ಸುಲಭವಾಗಿ ಘಾಸಿಯಾಗಬಹುದಾದ ಭೀತ ಮಗುವಿನ ಚಿತ್ರ ಅದು. ಆ ನೋವಿಗೆ ಕಾರಣವಾದದ್ದನ್ನು ನೆನಪಿಸುವಂಥದ್ದು ಏನೇ ನಡೆದರೂ ಅದರಿಂದ ನಮ್ಮ ಮನಸು ಆ ಹಳೆಯ ಬಿಂಬದ ಸಂಪರ್ಕವನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಈ ಕ್ಷಣದಲ್ಲಿ ನಾವು ಕಾಣುವ, ಕೇಳುವ ಅನುಭವಿಸುವ ಎಲ್ಲವೂ ಬಾಲ್ಯದ ಆ ವೇದನೆಯ ನೆನಪು ಮೇಲೆದ್ದು ಬರುವಂತೆ ಮಾಡುತ್ತವೆ.
ಮಗುವಾಗಿದ್ದಾಗ ನಮ್ಮನ್ನು ಯಾರಾದರೂ ಕೆಟ್ಟದಾಗಿ ನಡೆಸಿಕೊಂಡಿದ್ದರೆ ಬಲು ಮಟ್ಟಿಗೆ ನಾವು ನೋಡುವ, ಕೇಳುವ ಎಲ್ಲ ಸಂಗತಿಗಳೂ ಆ ಕೆಟ್ಟ ಕ್ಷಣದ ಬಿಂಬವನ್ನು ಮನಸಿಗೆ ಮತ್ತೆ ತರುತ್ತವೆ. ಹೀಗೆ ಆ ಬಿಂಬಗಳ ಒಡನಾಟ ಬೆಳೆಯುತ್ತಾ ನಮ್ಮೊಳಗೆ ಭಯ, ಹತಾಶೆಯ ಭಾವಗಳು ತಲೆ ಎತ್ತುತ್ತವೆ. ಇದನ್ನು ನಾವು ವಿಪರ್ಯಾಸ ಅಥವಾ ತಕ್ಕುದಲ್ಲದ ಗಮನ ಎಂದು ಕರೆಯಬಹುದು. ವಿಪರ್ಯಾಸ ಯಾಕೆಂದರೆ ಅದು ನಮ್ಮನ್ನು ಜೀವಂತವಾದ ಈ ಕ್ಷಣದಿಂದ ನಮಗೆ ನೋವು ಆಗಿದ್ದ ಗತಕಾಲಕ್ಕೆ ನಮ್ಮನ್ನು ಒಯ್ಯುತ್ತದೆ. ಆ ಹಳೆಯ ಬಿಂಬ ಮತ್ತೆ ಮೂಡಿದಾಗಲೆಲ್ಲ ನಮ್ಮಲ್ಲಿ ದುಃಖ, ಭಯ, ವೇದನೆಗಳು ಹುಟ್ಟುತ್ತವೆ.
ಧ್ಯಾನದ ಗಂಟೆಯ ನಿರಂತರ ಮೊಳಗು ನಮ್ಮಲ್ಲಿನ ಬೇಡದ ಆಲೋಚನೆ, ಬೇಡದ ಮಾತನ್ನು ನಿಲ್ಲಿಸಿ ನಮ್ಮ ಈ ಕ್ಷಣದ ಉಸಿರಾಟದತ್ತ ಗಮನ ಸೆಳೆಯುತ್ತದೆ. ಗಂಟೆಯ ಸದ್ದು ನಮ್ಮ ಮನಸಿನಲ್ಲಿರುವ ನೋವಿನ, ವೇದನೆಯ ಚಿತ್ರವನ್ನು ಮಸುಕುಗೊಳಿಸಿ ನಮ್ಮ ಉಸಿರು ಆಳವಾಗುವ ಹಾಗೆ, ನಮ್ಮ ಮೈ ಮನಸುಗಳು ಶಾಂತವಾಗುವ ಹಾಗೆ ಮಾಡಬಲ್ಲುದು. ನಮ್ಮ ಮನಸಿನಲ್ಲಿ ವೇದನೆ ತಲೆ ಎತ್ತಿದಾಗ ಉಸಿರಾಟವನ್ನು ಗಮನಿಸಬೇಕು. “ಉಸಿರೆಳೆದುಕೊಳ್ಳುತಿದ್ದೇನೆ. ಈ ವೇದನೆ ನನ್ನದು ಅನ್ನುವುದನ್ನು ಬಲ್ಲೆ,” ಎಂದು ಒಳಗೇ ಹೇಳಿಕೊಳ್ಳುತ್ತೇನೆ. ನನ್ನ ಮನಸಿನಲ್ಲಿ ತಲೆ ಎತ್ತುವ ಭಾವ ರೂಪಗಳನ್ನು ಗುರುತಿಸಿ ಒಪ್ಪಿಕೊಳ್ಳುವುದು ಅನುಷ್ಠಾನದ ಒಂದು ದಾರಿ. ಎಚ್ಚರದ ಗಮನದ ಮೂಲಕ ಭಾವದ ಬಿಂಬ ಏಕೆ ಮೂಡಿತು ಅನ್ನುವುದನ್ನು ಅರಿಯಬಹುದು. ಇದು ನನ್ನ ಅನುಭವಕ್ಕೆ ಬಂದಿದೆ.
ಭಾವ ಬಿಂಬಗಳ ಲೋಕದಿಂದ ಹೊರಬರಲು ನಮ್ಮಲ್ಲಿ ಅನೇಕರಿಗೆ ಆಗುವುದೇ ಇಲ್ಲ. ಎಚ್ಚರದ ಗಮನದ ಚೈತನ್ಯದೊಂದಿಗೆ ನಮ್ಮ ವೇದನೆಯು ನಿಜವಲ್ಲ, ಅದು ಕಳೆದು ಹೋದ ಕಾಲದ ಬಿಂಬ ಮಾತ್ರ ಅನ್ನುವುದು ಅರಿವಾಗುತ್ತದೆ. ಬದುಕಿನ ಎಲ್ಲ ಅಚ್ಚರಿ, ಬೆರಗು ನಮ್ಮ ಸುತ್ತಲೂ ಈಗ, ಈ ಕ್ಷಣದಲ್ಲಿಯೆ ಇವೆ. ಈ ಕ್ಷಣದಲ್ಲಿ ಸಂತೋಷವಾಗಿ ಇದ್ದರೆ ನಮ್ಮ ಒಳಗಿನ ಪರಿಸ್ಥಿತಿ ಬದಲಾಗುತ್ತದೆ ಅನ್ನುವುದು ನಮಗೇ ಅರಿವಾಗುತ್ತದೆ.
*
[ಪಾಳಿಯಲ್ಲಿ “ಅಯೋನಿಸೋ ಮನಸಕಾರ” ಎಂಬ ಮಾತನ್ನು ಬಳಸುತ್ತಾರೆ. ಅಯೋನಿಸೋ-ಸೂಕ್ತವಲ್ಲದ, ವಿವೇಕವಿರದ; ಮನಸಕಾರ ಅಥವಾ ಮನಸಿಕಾರ-ಗಮನ. ಅಥವಾ ನಮಗೆ ಪರಿಚಿತವಾದ ವಿಪರ್ಯಾಸ ಅನ್ನುವ ಮಾತನ್ನೂ ಬಳಸಬಹುದು. ಕಳೆದು ಹೋದ ಕ್ಷಣದ ಅನುಭವವನ್ನು ನೆನಪಿನ ಮೂಲಕ ಶಾಶ್ವತಗೊಳಿಸಿಕೊಂಡು ನರಳುವುದು, ಹಾಗೆ ಮಾಡುತ್ತಾ ದುರಾಸೆ, ದ್ವೇಷ, ಭಯಗಳಿಗೆ ಗುರಿಯಾಗುವುದು, ನಮ್ಮ ಭಾವ, ಚಿಂತನೆಗಳನ್ನು ಮೇಲುಪದರದಲ್ಲಷ್ಟೇ ಗ್ರಹಿಸಿ ಅವುಗಳ ಮೂಲ ತಿಳಿಯಲಾಗದಿರುವುದು ವಿಪರ್ಯಾಸಕ್ಕೆ ಕಾರಣವೆಂದು ತಾತ್ವಿಕವಾಗಿ ಅಯೋನಿಸೋಮನಸಿಕಾರವನ್ನು ವಿವರಿಸುತ್ತಾರೆ. ಯೋನಿಸೋ ಮನಸಕಾರ-ಸೂಕ್ತವಾದ ಗಮನ]

