ಎರಡನೆಯ ಬಾಣ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.3

ಬಾಣವನ್ನು ನಾರಿ (ಹೆದೆ, ಬಿಲ್ಲಿನ ಹಗ್ಗ)ದಲ್ಲಿ ಹೂಡಿ, “ಆರೈಕೆ” ಮಾಡಿ, ಎಳೆದು ಬಿಟ್ಟರೆ ಅದು ಮನಸಿನ ಗುರಿಯನ್ನು ಮುಟ್ಟಿತ್ತು. ಹೇಗೆ? ಬಿಲ್ಲಿನ ಕೋಲು ಬಾಗಿ, ಹಗ್ಗವನ್ನು ಎಳೆದು ಶರ ಸಂಧಾನ ಮಾಡಿದ ಹಾಗೆ. ಮನಸಿನ ಅಂಗೈಯಲ್ಲಿರುವ ಲಿಂಗವನ್ನು ಕಂಡು ಸಂಧಾನ ಮಾಡಿದರೆ ನಮ್ಮ ಮನಸು, ಮಾತು, ಮೈಗಳಲ್ಲೆಲ್ಲ ಅದರ ಪರಿಣಾಮ ಕಾಣುತ್ತದೆ, ಕಾಯದ ನೆಮ್ಮದಿ (ನೆಮ್ಮುಗೆ)ಯಲ್ಲಿ ಸದಾಶಿವಮೂರ್ತಿಯ ಬೆಳಗಿನ ಕಳೆ ಕಾಣುತ್ತದೆ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.3: ಭಾವ-ಸಂಬಂಧ  ಎರಡನೆಯ ಬಾಣ

ನಾವು, ಮನುಷ್ಯರು, ವಿಶ್ರಾಂತಿಯ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ. ತುಂಬ ʻವರಿʼ ಮಾಡಿಕೊಳ್ಳುತ್ತೇವೆ. ನಮ್ಮ ಮೈ ಚೇತರಿಸಿಕೊಳ್ಳಲು, ಮನಸ್ಸು ಸುದಾರಿಸಿಕೊಳ್ಳಲು ನಾವು ಅವಕಾಶವನ್ನೇ ಕೊಡುವುದಿಲ್ಲ. ನಮಗೆ ಹಲವು ವಾರಗಳ ಕಾಲ ರಜೆ ದೊರೆತರೂ ವಿಶ್ರಾಂತಿ ಪಡೆಯುವುದು ಹೇಗೆಂದು ನಮಗೆ ಗೊತ್ತಿಲ್ಲ. ನೂರೆಂಟು ʻವರಿʼ ಹತ್ತಾರು ಭಯಗಳು ಪರಿಸ್ಥಿತಿಯನ್ನು ಇನ್ನೂ ಕೆಡಿಸುತ್ತವೆ. ನಮ್ಮ ಟೆನ್‌ಶನ್‌ ನೀಗಿಕೊಳ್ಳಲು, ನಮ್ಮ ʻವರಿʼ, ನಮ್ಮ ಭಯಗಳನ್ನು ಅಪ್ಪಿಕೊಳ್ಳಲು ಧ್ಯಾನವು ಸಹಾಯಮಾಡಬಹುದು. ಇದರಿಂದ ಚೇತರಿಕೆ ಪಡೆಯಬಹುದು. ವಿಶ್ರಾಂತಿಯ ಕಲೆಯನ್ನು ನಾವು ಮತ್ತೆ ಕಲಿಯಬೇಕಾಗಿದೆ.

ನಮ್ಮೊಳಗೆ ಶಾಂತಿ ಇರುವಾಗ ನಮ್ಮ ಮೈ, ಮನಸುಗಳು ಸರಾಗವಾಗಿ ಕೆಲಸ ಮಾಡುತ್ತವೆ. ಈ ಸರಾಗವೇ ನಮ್ಮ ಆರೋಗ್ಯದ ಬುನಾದಿ. ನಮಗೆ ಅಗತ್ಯವಾದಷ್ಟು ಪ್ರಮಾಣದ ರಾಸಾಯನಿಕಗಳು ದೇಹದೊಳಗೆ ಬಿಡುಗಡೆಯಾಗುತ್ತವೆ. ಭಯ, ಆತಂಕ, ಅಥವಾ ಒತ್ತಡದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಆಡ್ರಿನಾಲಿನ್‌ ಎಂದೂ ಮಿತಿ ಮೀರುವುದಿಲ್ಲ.

ಬುದ್ಧ “ಎರಡನೆಯ ಬಾಣ”ದ ಬಗ್ಗೆ ಹೇಳುತ್ತಾನೆ. ಬಾಣ ಬಂದು ನಮ್ಮ ಮೈಗೆ ತಾಕಿದಾಗ ನೋವಾಗುತ್ತದೆ. ಅದೇ ಜಾಗಕ್ಕೆ ಎರಡನೆಯ ಬಾಣ ಬಂದು ಬಡಿದಾಗ ನೋವು ಸಹಿಸಲಾಗದಷ್ಟು ಹೆಚ್ಚುತ್ತದೆ. ಮೈಯಲ್ಲೋ ಮನಸಿನಲ್ಲೋ ನೋವು ಕಂಡಾಗ ಉಸಿರು ತೆಗೆದುಕೊಳ್ಳುತ್ತಾ ಬಿಡುತ್ತಾ ನೋವನ್ನು ಗುರುತಿಸಿ, ಅದರ ಮಹತ್ವವನ್ನು ಅರಿಯಿರಿ, ಅದು ಬಹಳ ದೊಡ್ಡ ನೋವು ಅನ್ನುವ ಅತಿ ಉತ್ಪ್ರೇಕ್ಷೆ ಬೇಡ.

ನೋವಿನ ಬಗ್ಗೆ “ವರಿ”, ಭಯ, ವಿರೋಧ, ಸಿಟ್ಟು ನಿಮ್ಮಲ್ಲಿ ಇದ್ದರೆ ನಿಮ್ಮ ನೋವು ಅದು ಇರುವುದಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿದೆ ಅನಿಸುತ್ತದೆ. ನೀವು ಮಾಡಿಕೊಳ್ಳುವ “ವರಿ” ಅಥವಾ ನಿಮ್ಮಲ್ಲಿ ಮೂಡುವ ಆತಂಕ ಇದೇ ಎರಡನೆಯ ಬಾಣ.

ನಿಮ್ಮನ್ನು ನೀವು ಕಾಪಾಡಿಕೊಳ್ಳಿ, ಎರಡನೆಯ ಬಾಣ ನಿಮಗೆ ನಾಟದ ಹಾಗೆ ಕಾಪಾಡಿಕೊಳ್ಳಿ

ಯಾಕೆಂದರೆ—ಆ ಎರಡನೆಯ ಬಾಣವನ್ನು ಬಿಡುವವರು ಸ್ವತಃ ನೀವೇ. ಅದನ್ನು ಬಿಡದಿರುವುದು ನಿಮ್ಮ ಕೈಯಲ್ಲೇ ಇದೆ.

*

ಈ ಭಾಗವನ್ನು ಅನುವಾದ ಮಾಡುವಾಗ ನೆನಪಿಗೆ ಬಂದ ಸಂಗತಿಗಳು

೧. ಬಾಣದ ಹೋಲಿಕೆ ಬಹಳ ಮಟ್ಟಿಗೆ ಇದೇ ಥರ ಕಾಣುವುದು ಅರಿವಿನ ಮಾರಿತಂದೆಯವರ ವಚನದಲ್ಲಿ.

ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ
ತಾಗಿತು ಮನ ಸಂದ ಗುರಿಯ.
ಅದೇತರ ಗುಣದಿಂದ?
ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ
ಚಿತ್ತ ಹಸ್ತದ ಲಿಂಗದ ದೃಷ್ಟ.
ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು
ಕಾಯದ ನೆಮ್ಮುಗೆಯಲ್ಲಿ ಕಾಣಬೇಕು.
ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ
ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.

ಬಾಣವನ್ನು ನಾರಿ (ಹೆದೆ, ಬಿಲ್ಲಿನ ಹಗ್ಗ)ದಲ್ಲಿ ಹೂಡಿ, “ಆರೈಕೆ” ಮಾಡಿ, ಎಳೆದು ಬಿಟ್ಟರೆ ಅದು ಮನಸಿನ ಗುರಿಯನ್ನು ಮುಟ್ಟಿತ್ತು. ಹೇಗೆ? ಬಿಲ್ಲಿನ ಕೋಲು ಬಾಗಿ, ಹಗ್ಗವನ್ನು ಎಳೆದು ಶರ ಸಂಧಾನ ಮಾಡಿದ ಹಾಗೆ. ಮನಸಿನ ಅಂಗೈಯಲ್ಲಿರುವ ಲಿಂಗವನ್ನು ಕಂಡು ಸಂಧಾನ ಮಾಡಿದರೆ ನಮ್ಮ ಮನಸು, ಮಾತು, ಮೈಗಳಲ್ಲೆಲ್ಲ ಅದರ ಪರಿಣಾಮ ಕಾಣುತ್ತದೆ, ಕಾಯದ ನೆಮ್ಮದಿ (ನೆಮ್ಮುಗೆ)ಯಲ್ಲಿ ಸದಾಶಿವಮೂರ್ತಿಯ ಬೆಳಗಿನ ಕಳೆ ಕಾಣುತ್ತದೆ. ಮನಸಂದ ಎಂಬ ಮಾತು ಯೋನಿಮನಸಕಾರಕ್ಕೆ ಹತ್ತಿರದ್ದು ಎಂಬಂತೆ ಹಲವು ವಚನಕಾರರು ಬಳಸುತ್ತಾರೆ. ಮನಸಂದ ಎಂದರೆ ಅತ್ತಿತ್ತ ಚಲಿಸುವ ಮನಸು ಸಂದ-ಇಲ್ಲವಾದ ಸ್ಥಿತಿ.

೨. ಇಂಗ್ಲಿಶ್‌ನ ಕವಿ ವರ್ಡ್ಸ್‌ವರ್ತ್ ಬರೆದಿರುವ “ದಿ ವರ್ಲ್ಡ್‌ ಈಸ್‌ ಟೂ ಮಚ್ ವಿತ್‌ ಅಸ್”‌ ಅನ್ನುವ ಪುಟ್ಟ ಪದ್ಯದಲ್ಲಿ “ಈ ಲೋಕವೇ ನಮ್ಮ ತುಂಬ ತುಂಬಿತುಳುಕುತಿದೆ. ತಡವಾಯಿತು, ಬೇಗ ಮುಗಿಸಬೇಕು, ಸಂಪಾದಿಸಬೇಕು, ಖರ್ಚು ಮಾಡಬೇಕು ಅನ್ನುತ್ತಾ ನಮ್ಮನ್ನು ನಾವೇ ವ್ಯರ್ಥಮಾಡಿಕೊಳ್ಳುತೇವೆ. ನಿಸರ್ಗದಲ್ಲಿ ನಾವು, ನಮ್ಮಲ್ಲಿ ನಿಸರ್ಗವನ್ನು ಕಾಣಲಾರೆವು. ನಮ್ಮ ಹೃದಯವೆಂಬ ಅಪರೂಪದ ಕೊಡುಗೆಯನ್ನು ಬೀಸಾಡಿದ್ದೇವೆ. ಬೆಳುದಿಂಗಳಿಗೆ ಎದೆ ತೆರೆದಿರುವ ಕಡಲು, ಕಡಲಿನ ಮೇಲೆ ಸದಾ ಅಬ್ಬರಿಸುವ, ಈಗ ನಿದ್ದೆ ಮಾಡುವ ಹೂಗಳಂತಿರುವ ಗಾಳಿ, ಇಂಥ ಎಲ್ಲದರ ಶ್ರುತಿ ನಮಗೆ ತಪ್ಪಿಹೋಗಿದೆ. We are out of tune. ಎಂದು ಹೇಳುತ್ತದೆ.

೩.  ನೀಲಮ್ಮನವರ ವಚನ ನೋಡಿ. ಇದು ವ್ಯಕ್ತಿಯ ಬದುಕನ್ನು ಕುರಿತದ್ದು. “ಆಗಿ ಹೋದದ್ದಕ್ಕೆ ಸೇಡು ತೀರಿಸಿಕೊಳ್ಳಲು ಹಂಬಲಿಸಬೇಡ, ಸಿಗದಿರುವ ತಿರುಳು ಸಿಗಬೇಕೆಂದು ಬೆನ್ನು ಬೀಳಬೇಡ. ಆಗುವುದು ನಿನ್ನ ಕೈಯಲ್ಲಿಲ್ಲ, ಆಗಬಾರದು ಅನ್ನುವುದು ನಿನ್ನ ಇಚ್ಛೆಯಂತೆ ನಡೆಯುವುದಿಲ್ಲ—ಆದ್ದರಿಂದ ತಳಮಳ,ಆತಂಕ “ವರಿ” ಬೇಡ ಅನ್ನುತ್ತದೆ ಈ ವಚನ.

ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು,
ಆಹಾ ಮನವೆ, ಸಂತೈಸಿಕೊ ನಿನ್ನ ನೀನೆ.
ಆಗೆಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಫೆಯಲ್ಲ,
ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ.

೪. ಪೃಥ್ವಿ ಆಕಾಶದ ಮಧ್ಯದಲ್ಲಿ ಖೇಚರ ಮಂಡಲ
ಆ ಮಂಡಲದರಸು ವಿಹಂಗರಾಜ, ಮರೀಚಿಕ ಪ್ರಧಾನ, ಮಹೀತಳ ತಳವಾರ,
ಇಂತೀ ಮಂಡಲ ಸುರಕ್ಷದಲ್ಲಿ ಇರುತಿರಲಾಗಿ,
ಗೋರಕ್ಷನೆಂಬ ಅರಸು ಮುತ್ತಿದ ಮಂಡಲವ.
ಪಟ್ಟಣ ಕೋಳುಹೋಗದು, ಮುತ್ತಿದರಸು ಬಿಟ್ಟುಹೋಗ.
ಇದ ಸಂತೈಸಲಂಜಿ,
ಅಲೇಖಮಯನಾದ ಶೂನ್ಯ ಕಲ್ಲಿನೊಳಹೊಕ್ಕು, ಎಲ್ಲರ ಗೆದ್ದ.

ಮನುಷ್ಯರ ಸಾಮಾಜಿಕ ಬದುಕನ್ನು ಕುರಿತು ವಚನಭಂಡಾರಿ ಶಾಂತರಸ ಹೇಳುವುದು ಹೀಗೆ: “ಭೂಮಿಗೂ ಆಕಾಶಕ್ಕೂ ಮಧ್ಯೆ ಇರುವ ರಾಜ್ಯ. ಹದ್ದು ಆ ಮಂಡಲದ ರಾಜ. ಬಿಸಿಲ್ಗುದುರೆ ಆ ರಾಜ್ಯದ ಪ್ರಧಾನಿ. ನೆಲವೇ ತಳವಾರ. ಹೀಗೆ ಇರುವಾಗ ಶತ್ರು ಬಂದು ಮುತ್ತಿಗೆ ಹಾಕಿದ. ಪಟ್ಟಣ ವಶವಾಗದು, ಮುತ್ತಿಗೆ ಹಾಕಿದ  ರಾಜ ಕದಲುತ್ತಿಲ್ಲ. ಸಂತೈಸಲು ಆಗದೆ ಬರಹಕ್ಕೆ, ಅಕ್ಷರಕ್ಕೆ ಸಿಕ್ಕದ ಸೊನ್ನೆ ದೇವರು ಕಲ್ಲಿನೊಳಗಾಗಿ ಎಲ್ಲರನ್ನೂ ಗೆದ್ದ,ʼ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.