The Burrow ಕಥೆ ತೋರಿಸುವ ಭಯಾನಕ ಸತ್ಯ

ಕಾಫ್ಕಾನ The Burrow ಕಥೆ ಎರಡು ರೀತಿಯಲ್ಲಿ ನಮಗೆ ಭಯಾನಕವಾದ ಸತ್ಯವನ್ನು ತೋರಿಸುತ್ತದೆ. ಮೊದಲನೆಯದು… (ಮುಂದೆ ಓದಿ) । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

The Burrow ಎನ್ನುವ ಒಂದು ಚಿಕ್ಕ ಕಥೆ ಇದೆ ಕಾಫ್ಕಾ ಬರೆದಿದ್ದು. ಅದರಲ್ಲಿ ಒಂದು ಪ್ರಾಣಿ ತನಗೆ ಎಂದೂ ಎದುರಾಗದೇ ಇರಬಹುದಾದ ಕಲ್ಪಿತ ಅಪಾಯಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಗೀಳಿಗೆ ಒಳಗಾಗುತ್ತದೆ. ಅದು ಭೂಮಿಯೊಳಗೆ ಆಳವಾಗಿ ಬಿಲವನ್ನು ತೋಡುತ್ತದೆ, ದಪ್ಪವಾದ ಗೋಡೆಗಳನ್ನು ಕಟ್ಟಿಕೊಳ್ಳುತ್ತದೆ, ಮತ್ತು ಹಗಲು-ರಾತ್ರಿ ಜಾಗರಣೆ ಮಾಡಿ, ಯಾವತ್ತೂ ಬಾರದ ಆ ಕಲ್ಪಿತ ಶತ್ರುವಿಗಾಗಿ ಕಾದಿರುತ್ತದೆ. ಆದರೆ, ನಿಜವಾಗಿ ಈ ಕಥೆ ಆ ಪ್ರಾಣಿಯ ಬಗ್ಗೆ ಮಾತ್ರ ಅಲ್ಲ. ಅದು ನಿಮ್ಮ ಮತ್ತು ನನ್ನ ಬಗ್ಗೆ ಕೂಡ.

ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಬಹುತೇಕ ಅಪಾಯಗಳು ಎಂದಿಗೂ ಸಂಭವಿಸುವುದಿಲ್ಲ. ಕಳ್ಳತನ, ದ್ರೋಹ, ಗಂಭೀರ ಕಾಯಿಲೆಯ ಕುರಿತಾದ ಡೈಗ್ನಾಸಿಸ್, ಉದ್ಯೋಗ ಕಳೆದುಕೊಳ್ಳುವುದು, ಈ ಎಲ್ಲವೂ ನಮ್ಮ ಮನಸ್ಸಿನಲ್ಲಿ ದೊಡ್ಡ ಭಯಗಳಾಗಿ ಬೆಳೆಯುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ಸುತ್ತ ಮಾನಸಿಕ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೆ. ಇನ್ನೂ ಸಂಭವಿಸದ ಭಯಕ್ಕಾಗಿ ಸದಾ ಆತಂಕದಿಂದ ಸಿದ್ಧರಾಗಿಯೇ ಬದುಕುತ್ತೇವೆ. ಆ ಭಯಗಳು ವಾಸ್ತವದಲ್ಲಿ ಎಂದಿಗೂ ಸಾಕಾರವಾಗದಿದ್ದರೂ, ನಾವು ಸದಾ ಅವುಗಳ ನಿರೀಕ್ಷೆಯಲ್ಲೇ ಬದುಕುತ್ತೇವೆ. ಕೊನೆಗೆ, ನಮ್ಮ ಮನಸ್ಸಿಗೆ ನಿಜವಾದ ಅಪಾಯ ಮತ್ತು ಕಲ್ಪಿತ ಅಪಾಯದ ನಡುವಿನ ವ್ಯತ್ಯಾಸ ತಿಳಿಯದೆ ಹೋಗುತ್ತದೆ. ಅದರ ಪರಿಣಾಮವಾಗಿ, ನಾವು ಆತಂಕದ ಬಲೆಗೆ ಸಿಲುಕಿ, ನಮ್ಮದೇ ಭಯಗಳ ಕೈದಿಗಳಾಗಿಬಿಡುತ್ತೇವೆ.

ಕಾಫ್ಕಾನ The Burrow ಕಥೆ ಎರಡು ರೀತಿಯಲ್ಲಿ ನಮಗೆ ಭಯಾನಕವಾದ ಸತ್ಯವನ್ನು ತೋರಿಸುತ್ತದೆ.
ಮೊದಲನೆಯದು, ನಾವು ಕೇವಲ ಕಲ್ಪನೆಯಲ್ಲಿರುವ ಶತ್ರುವಿನ ವಿರುದ್ಧದ ಯುದ್ಧವನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನಮಗೆ ಅದು ಏನು ಎನ್ನುವುದೇ ತಿಳಿಯದ ಅಪಾಯದ ವಿರುದ್ಧ ನಾವು ನಮ್ಮನ್ನು ರಕ್ಷಿಸಿಕೊಳ್ಳಲಾರೆವು. ಕೇವಲ ದುಃಸ್ವಪ್ನದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಶತ್ರುವನ್ನು ನಾವು ಎಂದಿಗೂ ಸೋಲಿಸಲಾರೆವು.

ಎರಡನೆಯದು, ಸ್ಟೋಯಿಕ್ ತತ್ವಜ್ಞಾನಿ ಸೆನೇಕಾ ಹೇಳಿದಂತೆ, “ನಾವು ವಾಸ್ತವಕ್ಕಿಂತ ನಮ್ಮ ಕಲ್ಪನೆಯಲ್ಲೇ ಹೆಚ್ಚಾಗಿ ದುಃಖವನ್ನು ಅನುಭವಿಸುತ್ತೇವೆ.” ನಮ್ಮ ಮನಸ್ಸು, ಸಂಭವಿಸಬಹುದಾದ ಸಂಗತಿಗಳನ್ನು ಅತಿ ಭಯಾನಕವಾಗಿ ಚಿತ್ರಿಸುತ್ತದೆ. ಸಣ್ಣ ಸಾಧ್ಯತೆಗಳನ್ನೇ ದೊಡ್ಡ ದುರಂತಗಳಾಗಿ ಊಹಿಸುತ್ತದೆ. ನಮ್ಮ ದುಃಸ್ವಪ್ನಗಳು ನಿಧಾನವಾಗಿ ತಮ್ಮದೇ ಆದ ಭಾರವನ್ನು ಪಡೆದು, ನಿಜವಾದ ಜೀವನಕ್ಕಿಂತಲೂ ಹೆಚ್ಚು ನಮ್ಮ ಮೇಲೆ ಒತ್ತಡ ಹೇರುತ್ತವೆ.

ಹೀಗೆ ಬಿಲವನ್ನು ಕಟ್ಟಿಕೊಂಡ ಆ ಪ್ರಾಣಿ, ಅನುಮಾನ ಮತ್ತು ಭಯಗಳಿಂದ ನಿರ್ಮಿಸಿಕೊಂಡ ಕೋಟೆಯೊಳಗೆ ಎಷ್ಟೋ ಕಾಲ ಕಳೆಯುತ್ತದೆ; ಕೊನೆಗೆ ಅದು ಬದುಕುವುದನ್ನೇ ಮರೆತುಬಿಡುತ್ತದೆ. ದೂರದ ಅಂಚಿನಲ್ಲಿ ಯಾವುದೋ ಅಪಾಯ ಅಡಗಿದೆ ಎನ್ನುವ ಕಲ್ಪಿತ ಭಯದಲ್ಲಿಯೇ ಅದು ಸದಾ ಬದುಕುತ್ತದೆ. ಆ ಭಯದಿಂದ ಮತ್ತು ಬಿಲದಿಂದ ಹೊರಬಂದು, ನಿಜವಾಗಿ ತನ್ನ ಪಾಲಿನ ಜೀವನವನ್ನು ಆನಂದಿಸುವುದನ್ನೇ ಅದು ಮರೆತುಬಿಡುತ್ತದೆ. ಏಕೆಂದರೆ, ಕೆಲವೊಮ್ಮೆ ನಾವು ಭಯಪಡಬೇಕಾದ ಏಕೈಕ ವಿಷಯ ಇಂಥ ಭಯವೇ ಆಗಿರುತ್ತದೆ. ಮತ್ತು ಕೆಲವೊಮ್ಮೆ, ನಿಜವಾಗಿಯೂ ಬದುಕಬೇಕೆಂದರೆ, ನಾವು ನಮ್ಮ ಇಂಥ ಭಯದ ಬಿಲದಿಂದ ಹೊರಬರಲೇಬೇಕಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.