ಅನುಭೋಗದತ್ತ ಎಚ್ಚರದ ಗಮನ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.8

ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ಮೈಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ತಲೆಯ ನೋವು, ಬೆನ್ನು ನೋವು, ಮೈಯೆಲ್ಲ ನೋವು. ಮೈಯಿಗೆ ವ್ಯಾಯಾಮ, ಮಸಾಜು ದೊರೆಯುವಂತೆ ಮಾಡಿ ಮೈಯ ನೋವುಗಳನ್ನು ದೂರ ಮಾಡಿಕೊಳ್ಳಬಹುದು. ಬಗೆಬಗೆಯ ವಸ್ತು, ಮನರಂಜನೆ, ಖಾದ್ಯ, ಪಾನೀಯಗಳ ಬಳಕೆಗೆ ಮನಸು ತೆತ್ತು ನಮ್ಮೊಳಗಿನ ಭಾವಗಳ ಸಹಜ ಸಂಚಾರಕ್ಕೆ ನಿರ್ಬಂಧ ವಿಧಿಸಿದರೆ ಮನಸಿನ ಸ್ವಾಸ್ಥ್ಯ ಕೆಡುತ್ತದೆ. ಹಾಗಾಗಿ ನಮ್ಮ ನೋವು, ಭಯ, ದುಃಖಗಳು ವ್ಯಕ್ತವಾಗುವುದಕ್ಕೆ ಅವಕಾಶ ಮಾಡಿಕೊಡುವುದು ಮುಖ್ಯ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.8: ಭಾವ-ಸಂಬಂಧ  ಅನುಭೋಗದತ್ತ ಎಚ್ಚರದ ಗಮನ

ನಮ್ಮೊಳಗೆ ನೋವಿದೆ, ದುಃಖವಿದೆ, ಭಯವಿದೆ, ಹಿಂಸೆಯಿದೆ ಅನ್ನುವುದನ್ನು ಮರೆತು, ನಾವೇ ಕಳೆದು ಹೋಗಲು ಬಯಸಿ ʻಬಳಕೆದಾರರುʼ ಆಗುತ್ತೇವೆ. ನಾವು ಟಿವಿ ನೋಡುವುದು ಯಾಕೆ? ನೋಡುತ್ತಿರುವ ಕಾರ್ಯಕ್ರಮ ಕುತೂಹಲ ಹುಟ್ಟಿಸದಿದ್ದರೂ ನೋಡುತ್ತಲೇ ಇರುವುದು ಯಾಕೆ? ಯಾಕೆಂದರೆ, ನಮ್ಮ ನೋವು, ದುಃಖ, ಭಯ, ಸಿಟ್ಟುಗಳನ್ನು ಮರೆಮಾಡಲು ಬಯಸುತ್ತೇವೆ, ಅದಕ್ಕೆ.

ನಮ್ಮೊಳಗಿರುವ ಈ ಭಾವಗಳು ತಲೆ ಎತ್ತದ ಹಾಗೆ ಅವನ್ನು ಅದುಮಿಡಲು ಏನೇನೊ ಮಾಡುತ್ತೇವೆ, ಬಳಕೆದಾರರು ಆಗುತ್ತೇವೆ. ನಮ್ಮೊಳಗಿರುವ ಒಂಟಿತನ, ಭಯ, ಹತಾಶೆ ಕಾಣಬಾರದೆಂದು ದಿನದ ಪೇಪರ್‌ ಎತ್ತಿಕೊಂಡು ಓದುತ್ತೇವೆ, ರೇಡಿಯೋ ಹಾಕುತ್ತೇವೆ, ಟಿವಿ ನೋಡುತ್ತೇವೆ. ಫೋನ್‌ನಲ್ಲಿ ಮಾತಾಡುತ್ತೇವೆ. ಲಾಂಗ್‌ ಡ್ರೈವ್‌ ಹೋಗುತ್ತೇವೆ. ನಮ್ಮೊಳಗಿರುವ ನಿಜವನ್ನು ನೋಡದೆ ಇರಲು ಏನೇನೆಲ್ಲ ಮಾಡುತ್ತೇವೆ.

ಈ ಬಗೆಯ ಬಳಕೆಯ ದಾರಿ ಇದೆಯಲ್ಲ ಅದು ನಮ್ಮಿಂದ ನಾವೇ ಓಡಿಹೋಗುವ ದಾರಿ. ಈ ದಾರಿಯಲ್ಲಿ ನಾವು ಬಳಸುವ ವಸ್ತುಗಳು ಹಿಂಸೆ, ಭಯ, ಸಿಟ್ಟಿನ ಮತ್ತಷ್ಟು ವಿಷವನ್ನು ನಮ್ಮೊಳಗೆ ತುಂಬುತ್ತವೆ. ನಮ್ಮೊಳಗಿನ ಭಾವ ಸಂಚಾರವನ್ನು ಪೂರ್ತಿಯಾಗಿ ನಿರ್ಬಂಧಿಸಿ, ರಕ್ತಪರಿಚಲನೆಯ ಹಾಗೆ ಭಾವ ಪರಿಚಲನೆಯೂ ಮುಖ್ಯವೆಂಬುದನ್ನು ಮರೆಯುತ್ತೇವೆ. ಬೇಡದ ಇಂಥ ಭಾವಗಳು ನಮ್ಮ ಮನಸಿನೊಳಗೇ ಉಳಿದು ವಿಷವಾಗುತ್ತವೆ. ಮನಸನ್ನು ಕುಗ್ಗಿಸಿ ಮನೋರೋಗಕ್ಕೆ ದಾರಿ ಮಾಡುತ್ತವೆ.

ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ಮೈಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ತಲೆಯ ನೋವು, ಬೆನ್ನು ನೋವು, ಮೈಯೆಲ್ಲ ನೋವು. ಮೈಯಿಗೆ ವ್ಯಾಯಾಮ, ಮಸಾಜು ದೊರೆಯುವಂತೆ ಮಾಡಿ ಮೈಯ ನೋವುಗಳನ್ನು ದೂರ ಮಾಡಿಕೊಳ್ಳಬಹುದು. ಬಗೆಬಗೆಯ ವಸ್ತು, ಮನರಂಜನೆ, ಖಾದ್ಯ, ಪಾನೀಯಗಳ ಬಳಕೆಗೆ ಮನಸು ತೆತ್ತು ನಮ್ಮೊಳಗಿನ ಭಾವಗಳ ಸಹಜ ಸಂಚಾರಕ್ಕೆ ನಿರ್ಬಂಧ ವಿಧಿಸಿದರೆ ಮನಸಿನ ಸ್ವಾಸ್ಥ್ಯ ಕೆಡುತ್ತದೆ. ಹಾಗಾಗಿ ನಮ್ಮ ನೋವು, ಭಯ, ದುಃಖಗಳು ವ್ಯಕ್ತವಾಗುವುದಕ್ಕೆ ಅವಕಾಶ ಮಾಡಿಕೊಡುವುದು ಮುಖ್ಯ.

ನೀವು ಸನ್ನದ್ಧರಾಗಿದ್ದರೆ ಮಾತ್ರ ಭಾವಗಳು ವ್ಯಕ್ತವಾಗಲು ಅವಕಾಶ ಮಾಡಿಕೊಡಬಹುದು. ಅಥವಾ ಭಾವಗಳು ನಿಮ್ಮ ಹತೋಟಿಯನ್ನೂ ಮೀರಿ ವ್ಯಕ್ತವಾಗುವ ಸಂದರ್ಭ ಬರಬೇಕು. ನಿಮ್ಮ ಗಮನದ ಎಚ್ಚರದ ಅಭ್ಯಾಸವು ಭಾವಗಳನ್ನು ಕಣ್ಣಿಟ್ಟು ನೋಡುವ ಚೈತನ್ಯವನ್ನು ನೀಡುತ್ತದೆ. ಈ ಚೈತನ್ಯದ ಮೂಲಕ ನಮ್ಮೊಳಗಿನ ಸಲ್ಲದ ಭಾವಗಳನ್ನು ಗುರುತು ಹಿಡಿಯುವ, ಅಪ್ಪಿ ಆಲಂಗಿಸಿ ಬದಲಿಸಬಹುದು. ಭಾವ ಬದಲಾದಾಗ ವೇದನೆಯೂ ಇಲ್ಲವಾಗುವುದು. ಗಮನದ ಎಚ್ಚರವೆಂಬ ಚೈತನ್ಯವು ನಿಮ್ಮೊಳಗಿನ ಭಯ, ಸಿಟ್ಟು, ಹತಾಶೆಗಳ ಶಕ್ತಿಯ್ನು ಕುಂದಿಸುತ್ತದೆ.

*

೧. ಬಸವಣ್ಣನವರ ವಚನ

ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ

೨ ಸಿದ್ಧರಾಮರ ವಚನ

ಎನ್ನ ತನು ಕರಗಿ, ಎನ್ನ ಮನ ಕರಗಿ ಕೊರಗಿದ
ದುಃಖವಿದಾರದಯ್ಯಾ?
`ಅಯ್ಯಾ ಅಯ್ಯಾ’ ಎಂದು ಆಳುವ ಅಕ್ಕೆ ಇದಾರದಯ್ಯಾ?
ಮರಹೆಂಬ ಕೂರಸಿಗೆ ಗುರಿಮಾಡಿದವರಾರಯ್ಯಾ?
ಹಾ! ಹಾ! ಎಂಬ ಧ್ವನಿಯ ಕೇಳಲಾರದೆ,
ಕಂಡು ಕರುಣಂದ ಶಿರವ ಹಿಡಿದೆತ್ತಿ,
ಎನ್ನ ಕಣ್ಣ ನೀರ ತೊಡೆದನು ಕಪಿಲಸಿದ್ಧಮಲ್ಲಿನಾಥಯ್ಯನು.

೩ ಅಕ್ಕಮಹಾದೇವಿಯವರ ವಚನ

ಸುಖದ ಸುಖಿಗಳ ಸಂಭಾಷಣೆಯಿಂದ
ದುಃಖಕ್ಕೆ ವಿಶ್ರಾಮವಾಯಿತ್ತು.
ಭಾವಕ್ಕೆ ತಾರ್ಕಣೆಯಾದಲ್ಲಿ,
ನೆನಹಕ್ಕೆ ವಿಶ್ರಾಮವಾಯಿತ್ತು.
ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.