ನೀವು ಇರುವಂತೆಯೇ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಕೊಂಡು ನಿಮ್ಮೊಂದಿಗೆ ಸಮಾಧಾನ ಸಾಧಿಸಿಕೊಂಡಾಗ, ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಅಥವಾ ಏನು ತೀರ್ಪು ನೀಡುತ್ತಾರೆ ಎನ್ನುವುದು ನಿಮ್ಮ ಮನಸ್ಸನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ… । ಸಂಗ್ರಹ – ಅನುವಾಅ : ಚಿದಂಬರ ನರೇಂದ್ರ
ಸಂತೋಷವಾಗಿರಲು ನೀವು ಎಷ್ಟೇ ಹೆಚ್ಚು ಪ್ರಯತ್ನಿಸಿದರೂ, ಯಾಕೆ ಇನ್ನಷ್ಟು ದುಃಖಿತರಾಗಿರುವಂತೆ ಅನಿಸುತ್ತದೆ?
ನಿಮ್ಮನ್ನು ಉತ್ತಮಗೊಳಿಸಿಕೊಳ್ಳಲು ನೀವು ಮಾಡಿದ ಪ್ರಯತ್ನವೇ ಏಕೆ ಕೆಲವೊಮ್ಮೆ ನಿಮ್ಮನ್ನು ಇನ್ನಷ್ಟು ಅಪೂರ್ಣ ಅನ್ನಿಸುವಂತೆ ಮಾಡುತ್ತದೆ? ತತ್ವಜ್ಞಾನಿ ಅಲಾನ್ ವಾಟ್ಸ್ ಅವರ ಪ್ರಕಾರ, ಇದಕ್ಕೆ ಕಾರಣ ಅವರು “ಹಿಮ್ಮುಖ ನಿಯಮ” (Backwards Law) ಎಂದು ಕರೆಯುವ ಒಂದು ತತ್ವ. ವಾಟ್ಸ್ ಅವರ ವಾದವೇನೆಂದರೆ, ನಾವು ಒಂದು ಸಕಾರಾತ್ಮಕ ಅನುಭವವನ್ನು, ಉದಾಹರಣೆಗೆ ಸಂತೋಷ, ಯಶಸ್ಸು ಅಥವಾ ಶಾಂತಿಯನ್ನು, ಎಷ್ಟೇ ಬಲವಾಗಿ ಬೆನ್ನಟ್ಟಿದರೂ, ನಾವು ಅದನ್ನು ಈಗ ಹೊಂದಿಲ್ಲ ಎಂಬ ಸತ್ಯವನ್ನು ನಮ್ಮ ಮನಸ್ಸಿನಲ್ಲಿ ಮತ್ತಷ್ಟು ಅಷ್ಟೇ ಗಟ್ಟಿಗೊಳಿಸುತ್ತಿರುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, “ನಾನು ಸಂತೋಷವಾಗಬೇಕು” ಎಂಬ ನಿರಂತರ ಹಂಬಲವೇ, “ನಾನು ಈಗ ಸಂತೋಷವಾಗಿಲ್ಲ” ಎಂಬ ಭಾವನೆಯನ್ನು ನಮ್ಮಲ್ಲಿ ಇನ್ನಷ್ಟು ಬಲಪಡಿಸುತ್ತದೆ. ಹೀಗಾಗಿ, ಸಂತೋಷವನ್ನು ಬಲವಂತವಾಗಿ ಹುಡುಕುವ ಪ್ರಯತ್ನವೇ ಕೆಲವೊಮ್ಮೆ ನಮ್ಮನ್ನು ಇನ್ನಷ್ಟು ಅಸಂತೋಷದತ್ತ ತಳ್ಳುತ್ತದೆ.
ಹೀಗೆ, “ಸಾಕಾಗಿಲ್ಲ” ಎಂಬ ಭಾವನೆಯ ಒಂದು ದುಷ್ಟಚಕ್ರ (feedback loop) ಸೃಷ್ಟಿಯಾಗುತ್ತದೆ.
ಉದಾಹರಣೆಗೆ, ನೀವು ಅತ್ಯಂತ ಶ್ರೀಮಂತರಾಗಬೇಕೆಂದು ತೀವ್ರವಾಗಿ ಬಯಸಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ, ಜೀವನಪೂರ್ತಿ ನಿಮಗೆ “ನಾನು ಬಡವನು, ನಾನು ಅಯೋಗ್ಯನು” ಎಂಬ ಭಾವನೆಯೇ ಕಾಡುತ್ತಿರುತ್ತದೆ.
ನೀವು ಸುಂದರವಾಗಿ ಮತ್ತು ಎಲ್ಲರಿಗೂ ಆಕರ್ಷಕವಾಗಿ ಕಾಣಬೇಕೆಂದು ಅತಿಯಾಗಿ ಬಯಸಿದರೆ, ನಿಮ್ಮಲ್ಲಿರುವ ಪ್ರತಿಯೊಂದು ಸಣ್ಣ ನ್ಯೂನತೆಯ ಮೇಲೆಯೇ ನಿಮ್ಮ ಗಮನ ಕೇಂದ್ರೀಕೃತವಾಗುತ್ತದೆ. ಅದರ ಪರಿಣಾಮವಾಗಿ, ನೀವು ನಿಮ್ಮನ್ನು ಇನ್ನಷ್ಟು ಕುರೂಪಿಯೆಂದು ಭಾವಿಸಲು ಆರಂಭಿಸುತ್ತೀರಿ. ಆಧ್ಯಾತ್ಮಿಕತೆ ಅಥವಾ ಆತ್ಮಜ್ಞಾನವನ್ನು ಪಡೆಯುವ ಪ್ರಯತ್ನದಲ್ಲಿಯೂ ಇದೇ ಸಂಗತಿ ಸಂಭವಿಸಬಹುದು.
Alan Watts ಅವರು ಇದನ್ನು “ಹಿಮ್ಮುಖ ನಿಯಮ” (Backwards Law) ಎಂದು ಕರೆಯುವುದಕ್ಕೆ ಒಂದು ಸ್ಪಷ್ಟವಾದ ವಿರೋಧಾಭಾಸವೇ ಕಾರಣ. ಅದು ಏನೆಂದರೆ, ನೀವು ಒಂದು ಸಕಾರಾತ್ಮಕ ಅನುಭವವನ್ನು ಎಷ್ಟು ಹೆಚ್ಚು ಬೆನ್ನಟ್ಟುತ್ತೀರೋ, ಅದು ಅಷ್ಟೇ ಹೆಚ್ಚು ನಿಮ್ಮಿಂದ ದೂರವಾಗಿ, ಋಣಾತ್ಮಕ ಅನುಭವವಾಗಿ ಪರಿಣಮಿಸುತ್ತದೆ. ಆದರೆ, ಇದರಲ್ಲಿ ಒಂದು ಸಂತೋಷದ ಸುದ್ದಿಯೂ ಇದೆ. ಇದು ಎರಡೂ ದಿಕ್ಕಿನಲ್ಲಿ ಕೆಲಸ ಮಾಡುವ ನಿಯಮ. ಆದ್ದರಿಂದ, ಇದನ್ನೇ ನಮ್ಮ ಒಳಿತಿಗೂ ಬಳಸಿಕೊಳ್ಳಬಹುದು. ಏಕೆಂದರೆ, ವಾಟ್ಸ್ ಅವರ ಪ್ರಕಾರ, ನೀವು ಒಂದು ಋಣಾತ್ಮಕ ಅನುಭವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಾಗ, ಅದೇ ಅನುಭವವು ಸಕಾರಾತ್ಮಕವಾಗಿ ರೂಪಾಂತರಗೊಳ್ಳಲು ಆರಂಭಿಸುತ್ತದೆ.
ನಿಮ್ಮ ಆತಂಕವನ್ನು (Anxiety) ಒಪ್ಪಿಕೊಂಡಾಗ, ನೀವು ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳುತ್ತೀರಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಂಡಾಗ, ನೀವು ನಿಜವಾದ ಆತ್ಮವಿಶ್ವಾಸವನ್ನು ಪಡೆಯುತ್ತೀರಿ. ಮತ್ತು, ನೀವು ಇರುವಂತೆಯೇ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಕೊಂಡು ನಿಮ್ಮೊಂದಿಗೆ ಸಮಾಧಾನ ಸಾಧಿಸಿಕೊಂಡಾಗ, ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಅಥವಾ ಏನು ತೀರ್ಪು ನೀಡುತ್ತಾರೆ ಎನ್ನುವುದು ನಿಮ್ಮ ಮನಸ್ಸನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ.
“ಈ ಕ್ಷಣವು ಈಗಿರುವುದಕ್ಕಿಂತ ಇನ್ನೂ ಉತ್ತಮವಾಗಿರಬೇಕು” ಎಂಬ ಕಲ್ಪನೆಯನ್ನು ನಾವು ಬಿಟ್ಟುಬಿಟ್ಟಾಗ, ನಮಗೆ ಒಂದು ಸತ್ಯದ ಅರಿವಾಗುತ್ತದೆ, ನಾವು ಯೋಚಿಸಿದ್ದಕ್ಕಿಂತಲೂ ಈ ಕ್ಷಣ ಮೊದಲಿನಿಂದಲೇ ಹೆಚ್ಚು ಉತ್ತಮವಾಗಿರಬಹುದು ಎನ್ನುವ ಸತ್ಯ.

