ಬುದ್ಧನು ಹಿಂದಿರುಗಿರುವ ಸುದ್ದಿ ವಿಹಾರದಾದ್ಯಂತ ವೇಗವಾಗಿ ಹರಡಿತು. ಕೆಲವೇ ಕ್ಷಣಗಳಲ್ಲಿ ಅವನ ಸ್ವಾಗತಕ್ಕಾಗಿ ನಾನೂರು ಬಿಕ್ಖುಗಳು ಜಮಾಯಿಸಿದರು. ಬುದ್ಧ ಹೆಚ್ಚು ಮಾತನಾಡಲಿಲ್ಲ, ಆದರೆ ಎಲ್ಲರ ಯೋಗಕ್ಷೇಮ ಮತ್ತು ಧ್ಯಾನಾಭ್ಯಾಸದ ಬಗ್ಗೆ ವಿಚಾರಿಸಿದ. ಅವನು ಸ್ವಸ್ತಿಯನ್ನು ಸಾರಿಪುತ್ತನಿಗೆ ಒಪ್ಪಿಸಿದ್ದ. ಸಾರಿಪುತ್ತ ರಾಹುಲನಿಗೂ ಆಧ್ಯಾತ್ಮಿಕ ಗುರುವಾಗಿದ್ದ. ವೇಣುವನ ವಿಹಾರದ ನವ ಬಿಕ್ಖುಗಳ ಗುರುವಾಗಿದ್ದ ಸಾರಿಪುತ್ತ, ಸಂಘಕ್ಕೆ ಬಂದು ಮೂರು ವರ್ಷಗಳಿಗಿಂತ ಕಡಿಮೆಯಾಗಿದ್ದ ಸುಮಾರು ಐವತ್ತು ಯುವ ಬಿಕ್ಖುಗಳ ಅಧ್ಯಯನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ. ಕೊಂಡಣ್ಣ ಎಂಬ ಬಿಕ್ಖು ಆ ವಿಹಾರದ ಮುಖ್ಯಸ್ಥನಾಗಿದ್ದ । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ನಡಿಗೆ, ನಡಿಗೆಗಾಗಿಯಷ್ಟೆ । ಬುದ್ಧನೊಡನೆ ಸ್ವಸ್ಥಿಯ ನಡಿಗೆ #1.3
ಸ್ವಸ್ತಿಯ ಮನಸ್ಸಿನಲ್ಲಿ ಭಯ ಮತ್ತು ಸಂತೋಷಗಳ ಹೊಯ್ದಾಟ ನಡೆಯುತ್ತಿತ್ತು. ಹೊಟ್ಟೆಯಲ್ಲಿ ಏನೋ ತಳಮಳ. ಅವನು ಉರುವೇಲವನ್ನು ಬಿಟ್ಟುಹೋಗುತ್ತಿರುವುದು ಇದೇ ಮೊದಲು. ರಾಜಗೃಹವನ್ನು ತಲುಪಲು ಹತ್ತು ದಿನಗಳು ಬೇಕಾಗುವುದೆಂದು ಬುದ್ಧ ಹೇಳಿದ್ದ. ಬಹುತೇಕರು ಚುರುಕಾಗಿ ಕಾಲು ಬೀಸುತ್ತಿದ್ದರು. ಆದರೆ ಬುದ್ಧ ಮತ್ತು ಅವನ ಬಿಕ್ಖುಗಳು ನಿಧಾನವಾಗಿ ಮತ್ತು ಹಗುರವಾಗಿ ನಡೆಯುತ್ತಿದ್ದರು. ಸ್ವಸ್ತಿಯ ನಡಿಗೆಯ ವೇಗ ಕಡಿಮೆಯಾದಂತೆ, ಅವನ ಮನಸ್ಸೂ ಶಾಂತವಾಯಿತು. ಅವನು ಸಂಪೂರ್ಣವಾಗಿ ತನ್ನನ್ನು ಬುದ್ಧ, ಧಮ್ಮ ಮತ್ತು ಸಂಘದಲ್ಲಿ ತೊಡಗಿಸಿಕೊಂಡ. ಇದೇ ಅವನ ಮುಂದಿನ ದಾರಿಯಾಗಿತ್ತು. ತನಗೆ ತಿಳಿದಿದ್ದ ಏಕೈಕ ನಾಡು ಮತ್ತು ಜನರನ್ನು ಕಡೆಯ ಸಲ ನೋಡಲು ಹಿಂತಿರುಗಿ ದಿಟ್ಟಿ ಹಾಯಿಸಿದ. ಸುಜಾತಾ ಮತ್ತು ತನ್ನ ಒಡಹುಟ್ಟಿದವರು ಕಾಡಿನ ಮರಗಳ ನೆರಳಿನಲ್ಲಿ ಕರಗುತ್ತಿರುವ ಸಣ್ಣ ಚುಕ್ಕೆಗಳಂತೆ ಕಂಡರು.
ಎಲ್ಲಿಗೂ ತಲುಪುವ ಧಾವಂತವಿಲ್ಲದೆ, ಬುದ್ಧ ಕೇವಲ ನಡಿಗೆಯನ್ನು ಆನಂದಿಸಲೆಂದೇ ನಡೆಯುತ್ತಿದ್ದಾನೆ ಎಂದು ಸ್ವಸ್ತಿಗೆ ಅನ್ನಿಸಿತು. ಎಲ್ಲ ಬಿಕ್ಖುಗಳ ನಡಿಗೆಯೂ ಅದೇ ರೀತಿಯದಾಗಿತ್ತು. ತಮ್ಮ ಗಮ್ಯಸ್ಥಾನವನ್ನು ತಲುಪಲು ಯಾರಲ್ಲೂ ಯಾವುದೇ ಆತಂಕ ಅಥವಾ ಆತುರವಿರಲಿಲ್ಲ. ಪ್ರತಿಯೊಬ್ಬರ ಹೆಜ್ಜೆಗಳೂ ನಿಧಾನ, ಸಮತೋಲಿತ ಮತ್ತು ಪ್ರಶಾಂತವಾಗಿದ್ದವು. ಅವರೆಲ್ಲರೂ ಒಟ್ಟಾಗಿ ಆಹ್ಲಾದಕರವಾದ ವಿಹಾರಕ್ಕೆ ಹೊರಟವರಂತಿದ್ದರು. ಅವರು ಪ್ರತಿದಿನವೂ ಸಾಕಷ್ಟು ದೂರವನ್ನು ಕ್ರಮಿಸುತ್ತಿದ್ದರು, ಆದರೂ ಯಾರೊಬ್ಬರೂ ಸುಸ್ತಾದಂತೆ ಕಾಣುತ್ತಿರಲಿಲ್ಲ.
ಪ್ರತಿದಿನ ಬೆಳಿಗ್ಗೆ ಅವರು ತಮ್ಮ ಸಮೀಪದ ಹಳ್ಳಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಬುದ್ಧ ಮುಂಚೂಣಿಯಲ್ಲಿ ನಡೆಯುತ್ತಿದ್ದರೆ, ಅವರ ಹಿಂದೆ ಎಲ್ಲರೂ ಒಂದೇ ಸಾಲಿನಲ್ಲಿ ಬೀದಿಗುಂಟ ನಡೆಯುತ್ತಿದ್ದರು. ಸ್ವಸ್ತಿ ಎಲ್ಲರಿಗಿಂತ ಕೊನೆಯಲ್ಲಿ, ರಾಹುಲನ ಹಿಂದೆ ಸಾಗುತ್ತಿದ್ದ. ಅವರೆಲ್ಲರೂ ತಮ್ಮ ಪ್ರತಿಯೊಂದು ಉಸಿರು ಮತ್ತು ಹೆಜ್ಜೆಯನ್ನು ಗಮನಿಸುತ್ತಾ, ಶಾಂತ ಗಾಂಭೀರ್ಯದಿಂದ ನಡೆಯುತ್ತಿದ್ದರು. ಹಳ್ಳಿಗರು ಬಟ್ಟಲಿಗೆ ಹಾಕಲು ಆಹಾರ ತಂದಾಗ ನಿಲ್ಲುತ್ತಿದ್ದರು. ಕೆಲವರು ಭಕ್ತಿಯಿಂದ ರಸ್ತೆಯ ಬದಿಯಲ್ಲಿ ಮಂಡಿಯೂರಿ ಬಿಕ್ಖುಗಳಿಗೆ ನಮಸ್ಕರಿಸುತ್ತಿದ್ದರು. ಅವರು ಆಹಾರ ಸ್ವೀಕರಿಸಿ, ಜನರಿಗಾಗಿ ಮೌನಪ್ರಾರ್ಥನೆ ಮಾಡುತ್ತಿದ್ದರು.
ಭಿಕ್ಷಾಟನೆ ಮುಗಿದ ನಂತರ ಅವರೆಲ್ಲರೂ ಊಟ ಮಾಡುವ ಸಲುವಾಗಿ ಮರ ಅಥವಾ ಹುಲ್ಲಿನ ಬಯಲನ್ನು ಹುಡುಕುತ್ತಾ ಹಳ್ಳಿಯಿಂದ ಹೊರಗೆ ನಡೆಯುತ್ತಿದ್ದರು. ಸೂಕ್ತ ಜಾಗ ಸಿಕ್ಕೊಡನೆ ವೃತ್ತಾಕಾರದಲ್ಲಿ ಕುಳಿತು ಆಹಾರವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಯಾರ ಬಟ್ಟಲಾದರೂ ಖಾಲಿಯಿದ್ದರೆ ಅದನ್ನು ತುಂಬಲು ಎಚ್ಚರ ವಹಿಸುತ್ತಿದ್ದರು. ರಾಹುಲ ಹತ್ತಿರದ ತೊರೆಯಿಂದ ಮಡಕೆಯಲ್ಲಿ ನೀರು ತುಂಬಿಕೊಂಡು, ಅದನ್ನು ಭಕ್ತಿಯಿಂದ ಬುದ್ಧನ ಬಳಿ ತರುತ್ತಿದ್ದ. ಬುದ್ಧನು ತನ್ನ ಅಂಗೈಗಳನ್ನು ಕಮಲದ ಹೂವಿನಂತೆ ಜೋಡಿಸಿದ ನಂತರ, ರಾಹುಲ ನೀರೆರೆದು ಬುದ್ಧನ ಕೈಗಳನ್ನು ತೊಳೆಸುತ್ತಿದ್ದ. ಅವನು ಇತರ ಎಲ್ಲರಿಗೂ ಇದೇ ರೀತಿ ಮಾಡುತ್ತಾ, ಕೊನೆಯದಾಗಿ ಸ್ವಸ್ತಿಯ ಬಳಿಗೆ ಬರುತ್ತಿದ್ದ. ಸ್ವಸ್ತಿಯ ಬಳಿ ಇನ್ನೂ ಭಿಕ್ಷಾಪಾತ್ರೆ ಇರದ ಕಾರಣ, ರಾಹುಲ ತನ್ನ ಅರ್ಧದಷ್ಟು ಆಹಾರವನ್ನು ತಾಜಾ ಬಾಳೆಎಲೆಯ ಮೇಲೆ ಹಾಕಿ ತನ್ನ ಹೊಸ ಗೆಳೆಯನಿಗೆ ಉಣಬಡಿಸುತ್ತಿದ್ದ. ಊಟ ಮಾಡುವ ಮೊದಲು, ಬಿಕ್ಖುಗಳು ಕೈಮುಗಿದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ಪ್ರತಿಯೊಂದು ತುತ್ತನ್ನೂ ಎಚ್ಚರದಿಂದ ಗಮನಿಸುತ್ತಾ, ಮೌನವಾಗಿ ಉಣ್ಣುತ್ತಿದ್ದರು.
ಊಟ ಮುಗಿದ ಬಳಿಕ, ಕೆಲವು ಬಿಕ್ಖುಗಳು ನಡೆದಾಡುತ್ತಾ ಧ್ಯಾನ ಮಾಡಿದರೆ, ಕೆಲವರು ಕುಳಿತು ಧ್ಯಾನ ಮಾಡುತ್ತಿದ್ದರು; ಇನ್ನು ಕೆಲವರು ಮಲಗಿ ನಿದ್ರಿಸುತ್ತಿದ್ದರು. ಹಗಲಿನ ಬಿಸಿಲು ಕಡಿಮೆಯಾದ ನಂತರ, ಅವರು ಮತ್ತೆ ರಸ್ತೆಗಿಳಿಯುತ್ತಿದ್ದರು, ಕತ್ತಲಾಗುವವರೆಗೂ ನಡೆಯುತ್ತಿದ್ದರು. ರಾತ್ರಿಯ ಹೊತ್ತು ಕಾಡಿನಲ್ಲೇ ಒಂದೊಳ್ಳೆ ಜಾಗವನ್ನು ಹುಡುಕಿಕೊಂಡು ವಿಶ್ರಮಿಸುತ್ತಿದ್ದರು. ಪ್ರತಿ ಬಿಕ್ಖುವಿನ ಬಳಿಯೂ ಅವರದೇ ಆದ ಮಣೆ ಇರುತ್ತಿತ್ತು. ಬಹುತೇಕರು ಅರ್ಧ ರಾತ್ರಿಯವರೆಗೆ ಪದ್ಮಾಸನದಲ್ಲಿ ಕುಳಿತು ಧ್ಯಾನಿಸಿ, ಆನಂತರ ತಮ್ಮ ಚೀವರಗಳನ್ನು ಹಾಸಿಕೊಂಡು ಮಲಗುತ್ತಿದ್ದರು. ಪ್ರತಿಯೊಬ್ಬ ಬಿಕ್ಖುವೂ ಎರಡು ಚೀವರಗಳನ್ನು ಕೊಂಡೊಯ್ಯುತ್ತಿದ್ದ, ಒಂದು ತೊಟ್ಟುಕೊಳ್ಳಲು, ಮತ್ತೊಂದು ಗಾಳಿ ಹಾಗೂ ಚಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು. ಸ್ವಸ್ತಿಯೂ ಇತರರಂತೆ ಧ್ಯಾನಕ್ಕೆ ಕುಳಿತುಕೊಳ್ಳುವುದನ್ನು ಮತ್ತು ಮರದ ಬೊಡ್ಡೆಯನ್ನೇ ದಿಂಬಾಗಿ ಮಾಡಿಕೊಂಡು ನೆಲದ ಮೇಲೆ ಮಲಗುವುದನ್ನು ಕಲಿತುಕೊಂಡ.
ಬೆಳಗ್ಗೆ ಸ್ವಸ್ತಿ ಏಳುವ ಹೊತ್ತಿಗಾಗಲೇ ಬುದ್ಧ ಮತ್ತು ಬಹುತೇಕ ಬಿಕ್ಖುಗಳು ಪ್ರಶಾಂತವಾಗಿ ಧ್ಯಾನಕ್ಕೆ ಕುಳಿತಿರುತ್ತಿದ್ದರು. ಅವರಿಂದ ಗಾಢವಾದ ಶಾಂತಿ ಮತ್ತು ಗಾಂಭೀರ್ಯ ಹೊಮ್ಮುತ್ತಿತ್ತು. ದಿಗಂತದಲ್ಲಿ ಸೂರ್ಯ ಮೂಡುತ್ತಿದ್ದಂತೆಯೇ ಪ್ರತಿಯೊಬ್ಬ ಬಿಕ್ಖುವೂ ಚೀವರವನ್ನು ಮಡಚಿ, ಭಿಕ್ಷಾಪಾತ್ರೆಯನ್ನು ಕೈಗೆತ್ತಿಕೊಂಡು ದಿನದ ಪ್ರಯಾಣವನ್ನು ಆರಂಭಿಸುತ್ತಿದ್ದ.
ಹಗಲು ನಡೆಯುತ್ತಾ, ರಾತ್ರಿ ವಿಶ್ರಮಿಸುತ್ತಾ, ಹತ್ತು ದಿನಗಳ ನಂತರ ಅವರೆಲ್ಲರೂ ಮಗಧದ ರಾಜಧಾನಿಯಾದ ರಾಜಗೃಹವನ್ನು ತಲುಪಿದರು. ಸ್ವಸ್ತಿ ನಗರವನ್ನು ನೋಡುತ್ತಿರುವುದು ಇದೇ ಮೊದಲು. ಮನೆಗಳು ಕಿಕ್ಕಿರಿದು ತುಂಬಿದ್ದ ಬೀದಿಗಳಲ್ಲಿ ಕುದುರೆಗಾಡಿಗಳು ನುಗ್ಗುತ್ತಿದ್ದವು; ಎಲ್ಲೆಡೆ ಕೂಗು ಮತ್ತು ನಗುವಿನ ಸದ್ದು ಪ್ರತಿಧ್ವನಿಸುತ್ತಿತ್ತು. ಆದರೂ ಆ ಬಿಕ್ಖುಗಳ ಮೌನ ಮೆರವಣಿಗೆ, ಶಾಂತವಾದ ಹೊಳೆ ದಂಡೆಯಲ್ಲಿ ಅಥವಾ ಹಳ್ಳಿಯ ಭತ್ತದ ಗದ್ದೆಗಳ ಬದುವಿನಲ್ಲಿ ಇದ್ದಷ್ಟೇ ಪ್ರಶಾಂತವಾಗಿ ಮುಂದುವರೆಯಿತು. ನಗರದ ಕೆಲವು ನಿವಾಸಿಗಳು ಅವರನ್ನು ನೋಡಲು ನಿಂತರು. ಬುದ್ಧನನ್ನು ಗುರುತಿಸಿದ ಕೆಲವರು ಗೌರವ ಸೂಚಿಸಲು ಭಕ್ತಿಯಿಂದ ತಲೆಬಾಗಿದರು. ಆ ನಗರದಿಂದ ಸ್ವಲ್ಪವೇ ದೂರವಿದ್ದ ವೇಣುವನ ವಿಹಾರವನ್ನು ತಲುಪುವವರೆಗೂ ಬಿಕ್ಖುಗಳ ಆ ಪ್ರಶಾಂತ ಮೆರವಣಿಗೆ ಮುಂದುವರೆಯಿತು.
ಬುದ್ಧನು ಹಿಂದಿರುಗಿರುವ ಸುದ್ದಿ ವಿಹಾರದಾದ್ಯಂತ ವೇಗವಾಗಿ ಹರಡಿತು. ಕೆಲವೇ ಕ್ಷಣಗಳಲ್ಲಿ ಅವನ ಸ್ವಾಗತಕ್ಕಾಗಿ ನಾನೂರು ಬಿಕ್ಖುಗಳು ಜಮಾಯಿಸಿದರು. ಬುದ್ಧ ಹೆಚ್ಚು ಮಾತನಾಡಲಿಲ್ಲ, ಆದರೆ ಎಲ್ಲರ ಯೋಗಕ್ಷೇಮ ಮತ್ತು ಧ್ಯಾನಾಭ್ಯಾಸದ ಬಗ್ಗೆ ವಿಚಾರಿಸಿದ. ಅವನು ಸ್ವಸ್ತಿಯನ್ನು ಸಾರಿಪುತ್ತನಿಗೆ ಒಪ್ಪಿಸಿದ್ದ. ಸಾರಿಪುತ್ತ ರಾಹುಲನಿಗೂ ಆಧ್ಯಾತ್ಮಿಕ ಗುರುವಾಗಿದ್ದ. ವೇಣುವನ ವಿಹಾರದ ನವ ಬಿಕ್ಖುಗಳ ಗುರುವಾಗಿದ್ದ ಸಾರಿಪುತ್ತ, ಸಂಘಕ್ಕೆ ಬಂದು ಮೂರು ವರ್ಷಗಳಿಗಿಂತ ಕಡಿಮೆಯಾಗಿದ್ದ ಸುಮಾರು ಐವತ್ತು ಯುವ ಬಿಕ್ಖುಗಳ ಅಧ್ಯಯನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ. ಕೊಂಡಣ್ಣ ಎಂಬ ಬಿಕ್ಖು ಆ ವಿಹಾರದ ಮುಖ್ಯಸ್ಥನಾಗಿದ್ದ.
ವಿಹಾರದ ಜೀವನ ಕ್ರಮವನ್ನು ಸ್ವಸ್ತಿಗೆ ಪರಿಚಯಿಸುವಂತೆ ರಾಹುಲನಿಗೆ ಸೂಚಿಸಲಾಯಿತು. ಹೇಗೆ ನಡೆಯಬೇಕು, ಕುಳಿತುಕೊಳ್ಳಬೇಕು, ನಿಲ್ಲಬೇಕು, ಇತರರನ್ನು ಹೇಗೆ ವಂದಿಸಬೇಕು, ನಡೆದಾಡುತ್ತಾ ಧ್ಯಾನ ಮಾಡುವುದು ಹೇಗೆ, ಕುಳಿತುಕೊಂಡು ಧ್ಯಾನ ಮಾಡುವುದು ಹೇಗೆ, ಉಸಿರಾಟವನ್ನು ಹೇಗೆ ಗಮನಿಸಬೇಕು ಇತ್ಯಾದಿಯನ್ನೆಲ್ಲ ಅವನಿಗೆ ಹೇಳಿಕೊಡಬೇಕಿತ್ತು. ಬಿಕ್ಖುಗಳ ಚೀವರವನ್ನು ಹೇಗೆ ಧರಿಸಬೇಕು, ಭಿಕ್ಷೆ ಬೇಡುವುದು ಹೇಗೆ, ಪ್ರಾರ್ಥನೆಗಳನ್ನು ಪಠಿಸುವುದು ಮತ್ತು ಭಿಕ್ಷಾಪಾತ್ರೆಯನ್ನು ತೊಳೆಯುವುದು ಹೇಗೆ ಎಂಬುದನ್ನೂ ಅವನು ಸ್ವಸ್ತಿಗೆ ತೋರಿಸಿಕೊಟ್ಟ. ಇವುಗಳನ್ನೆಲ್ಲಾ ಚೆನ್ನಾಗಿ ಕಲಿಯುವ ಸಲುವಾಗಿ ಸತತ ಮೂರು ದಿನಗಳ ಕಾಲ ಸ್ವಸ್ತಿ ರಾಹುಲನನ್ನು ಬಿಟ್ಟು ಕದಲಲಿಲ್ಲ. ರಾಹುಲ ತನ್ನೆಲ್ಲಾ ಶ್ರದ್ಧೆಯಿಂದ ಸ್ವಸ್ತಿಗೆ ಮಾರ್ಗದರ್ಶನ ಮಾಡಿದ. ಆದರೆ ಈ ಎಲ್ಲವನ್ನೂ ಸಹಜವಾಗಿ ಮತ್ತು ಸಲೀಸಾಗಿ ಮಾಡಲು ತನಗೆ ಇನ್ನು ಹಲವು ವರ್ಷಗಳ ಅಭ್ಯಾಸವೇ ಬೇಕೆಂಬುದು ಸ್ವಸ್ತಿಗೆ ತಿಳಿದಿತ್ತು. ಈ ಪ್ರಾಥಮಿಕ ತರಬೇತಿಯ ನಂತರ, ಸಾರಿಪುತ್ತನು ಸ್ವಸ್ತಿಯನ್ನು ತನ್ನ ಎಲೆಮನೆಗೆ ಕರೆದು ಬಿಕ್ಖುವಿನ ನಿಯಮಗಳನ್ನು ವಿವರಿಸಿದ.
ತನ್ನ ಕುಟುಂಬವನ್ನು ತೊರೆದು, ಬುದ್ಧನನ್ನು ಗುರುವಾಗಿಯೂ ಜ್ಞಾನೋದಯದತ್ತ ಕೊಂಡೊಯ್ಯುವ ದಾರಿಯಾಗಿ ಧಮ್ಮವನ್ನೂ ಈ ಸಾಧನೆಯ ದಾರಿ ನಡೆಯಲು ಸಹಕಾರಿಯಾಗಿ ಸಂಘವನ್ನೂ ಅನುಸರಿಸುವವನೇ ಬಿಕ್ಖು. ಬಿಕ್ಖುವಿನ ಜೀವನ ಸರಳ ಮತ್ತು ವಿನಯಶೀಲ. ಭಿಕ್ಷೆ ಬೇಡುವುದು ವಿನಯವನ್ನು ಬೆಳೆಸಲು ಸಹಾಯ ಮಾಡುವುದರ ಜೊತೆಗೆ, ಇತರರೊಂದಿಗೆ ಸಂಪರ್ಕದಲ್ಲಿರಲು ಮತ್ತು ಬುದ್ಧನು ಬೋಧಿಸಿದ ಪ್ರೀತಿ ಹಾಗೂ ತಿಳುವಳಿಕೆಯ ಮಾರ್ಗವನ್ನು ಅಕ್ಷರಶಃ ಅನುಸರಿಸುವಂತೆ ಮಾಡಲು ಒಂದು ಸಾಧನವೂ ಆಗಿತ್ತು.
ಹತ್ತು ವರ್ಷಗಳ ಹಿಂದೆ ಬುದ್ಧನು ಬೋಧಿ ವೃಕ್ಷದ ಕೆಳಗೆ ಕುಳಿತು, ಪ್ರೀತಿ ಮತ್ತು ತಿಳುವಳಿಕೆಯ ಮಾರ್ಗವೇ ಜ್ಞಾನೋದಯದ ಮಾರ್ಗವೆಂದು ಹೇಳಿದ್ದನ್ನು ಸ್ವಸ್ತಿ ಮತ್ತು ಅವನ ಗೆಳೆಯರು ಕೇಳಿದ್ದರು; ಆದ್ದರಿಂದ ಸಾರಿಪುತ್ತನು ಹೇಳಿದ್ದೆಲ್ಲವನ್ನೂ ಗ್ರಹಿಸುವುದು ಅವನಿಗೆ ಸುಲಭವಾಗಿತ್ತು. ಸಾರಿಪುತ್ತನ ಮುಖ ಗಂಭೀರವಾಗಿ ತೋರುತ್ತಿದ್ದರೂ, ಅವನ ಕಣ್ಣು ಮತ್ತು ಮುಗುಳ್ನಗೆಯಲ್ಲಿ ಅಪಾರವಾದ ಪ್ರೀತಿ – ಕರುಣೆಗಳು ಹೊಮ್ಮುತ್ತಿದ್ದವು. ಬಿಕ್ಖುಗಳ ಸಂಘಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲು ದೀಕ್ಷಾ ಸಮಾರಂಭ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರಗಳನ್ನೂ ಸ್ವಸ್ತಿಗೆ ಕಲಿಸಲಾಯಿತು.
ಸ್ವತಃ ಸಾರಿಪುತ್ತನೇ ಆ ದೀಕ್ಷಾ ಸಮಾರಂಭದ ಮುಂದಾಳತ್ವ ವಹಿಸಿದ್ದ. ಸುಮಾರು ಇಪ್ಪತ್ತು ಬಿಕ್ಖುಗಳು ಅದರಲ್ಲಿ ಪಾಲ್ಗೊಂಡಿದ್ದರು. ಬುದ್ಧ ಮತ್ತು ರಾಹುಲ ಕೂಡ ಅಲ್ಲಿದ್ದುದು ಸ್ವಸ್ತಿಯ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿತು. ಸಾರಿಪುತ್ತನು ಮೌನವಾಗಿ ಒಂದು ಗಾಥೆಯನ್ನು ಪಠಿಸಿ, ಸ್ವಸ್ತಿಯ ತಲೆಗೂದಲನ್ನು ಸ್ವಲ್ಪವಾಗಿ ಸವರಿದ. ಆನಂತರ ತಾನು ಹಿಡಿದಿದ್ದ ಕ್ಷೌರದ ಕತ್ತರಿಯನ್ನು ರಾಹುಲನ ಕೈಗಿತ್ತ; ಅವನು ಸ್ವಸ್ತಿಯ ತಲೆಬೋಳಿಸುವ ಕಾರ್ಯವನ್ನು ಪೂರ್ಣಗೊಳಿಸಿದ. ಸಾರಿಪುತ್ತನು ಸ್ವಸ್ತಿಗೆ ಮೂರು ಚೀವರಗಳು, ಒಂದು ಭಿಕ್ಷಾಪಾತ್ರೆ ಮತ್ತು ನೀರು ಸೋಸುವ ಬಟ್ಟೆಯೊಂದನ್ನು ನೀಡಿದ. ಚೀವರವನ್ನು ಹೇಗೆ ಧರಿಸಬೇಕೆಂದು ರಾಹುಲ ಮೊದಲೇ ಹೇಳಿಕೊಟ್ಟಿದ್ದರಿಂದ, ಸ್ವಸ್ತಿ ಯಾವ ಕಷ್ಟವೂ ಇಲ್ಲದೆ ಅದನ್ನು ತೊಟ್ಟುಕೊಂಡ. ಬುದ್ಧ ಮತ್ತು ಅಲ್ಲಿದ್ದ ಬಿಕ್ಖುಗಳಿಗೆ ಭಕ್ತಿಯಿಂದ ನಮಸ್ಕರಿಸಿ ತನ್ನ ಕೃತಜ್ಞತೆಯನ್ನು ತೋರ್ಪಡಿಸಿದ.
ಆ ದಿನ ಬೆಳಿಗ್ಗೆ ಸ್ವಲ್ಪ ಹೊತ್ತಿನ ನಂತರ, ದೀಕ್ಷೆ ಪಡೆದ ಬಿಕ್ಖುವಾಗಿ ಸ್ವಸ್ತಿ ಮೊದಲ ಸಲ ಭಿಕ್ಷಾಟನೆಯ ಅಭ್ಯಾಸಕ್ಕೆ ತೆರಳಿದ. ವೇಣುವನ ವಿಹಾರದ ಬಿಕ್ಖುಗಳು ಹಲವಾರು ಸಣ್ಣ ಸಣ್ಣ ಗುಂಪುಗಳಲ್ಲಿ ರಾಜಗೃಹದೊಳಗೆ ನಡೆದುಹೋದರು. ಸ್ವಸ್ತಿಯು ಸಾರಿಪುತ್ತನ ನೇತೃತ್ವದ ಗುಂಪಿನಲ್ಲಿದ್ದ. ವಿಹಾರದಿಂದ ಹೊರಗೆ ಹೆಜ್ಜೆ ಇಡುವಾಗಲೇ ಸ್ವಸ್ತಿ, ಭಿಕ್ಷಾಟನೆಯು ಧಮ್ಮವನ್ನು ಅಭ್ಯಾಸ ಮಾಡುವ ಸಾಧನಗಳಲ್ಲೊಂದು ಎಂದು ತನಗೆ ತಾನೇ ಹಲವು ಸಲ ಹೇಳಿಕೊಂಡಿದ್ದ. ತನ್ನ ಉಸಿರಾಟವನ್ನು ಗಮನಿಸುತ್ತಾ, ಪ್ರತಿಯೊಂದು ಹೆಜ್ಜೆಯನ್ನೂ ಮೌನವಾಗಿ, ಎಚ್ಚರದಿಂದ ಇರಿಸಿದ. ಇನ್ನೂ ಸಮಣನಾಗಿದ್ದ ರಾಹುಲ ಅವನ ಹಿಂದೆ ನಡೆಯುತ್ತಿದ್ದ. ತಾನೀಗ ಬಿಕ್ಖುವಾಗಿದ್ದರೂ, ತನ್ನ ಅನುಭವ ರಾಹುಲನಿಗಿಂತ ಬಹಳ ಕಡಿಮೆ ಅನ್ನುವುದು ಸ್ವಸ್ತಿಗೆ ತಿಳಿದಿತ್ತು. ತಾನು ವಿನಯ ಮತ್ತು ಸದ್ಗುಣಗಳನ್ನು ಸಂಪೂರ್ಣವಾಗಿ ಬೆಳೆಸಿಕೊಳ್ಳಬೇಕೆಂಬ ದೃಢನಿಶ್ಚಯ ಅವನ ಮನಸ್ಸಿನಲ್ಲಿತ್ತು.
(ಮುಂದುವರಿಯುವುದು)

