ಮಾತನಾಡುತ್ತಿದ್ದ ಬುದ್ಧನ ಕಣ್ಣುಗಳು ಸ್ವಸ್ತಿಯಿಂದ ಕದಲಲಿಲ್ಲ. ಬುದ್ಧನ ಮಾತುಗಳಿಗೆ ತಾನೇ ಆಧಾರವೆಂದು ಸ್ವಸ್ತಿಗೆ ಅನ್ನಿಸಿತು. ವರ್ಷಗಳ ಹಿಂದೆ, ಬುದ್ಧ ತನ್ನ ಪಕ್ಕದಲ್ಲಿ ಕುಳಿತು ಎಮ್ಮೆ ಕಾಯುವ ಕೆಲಸದ ಬಗ್ಗೆ ಕೇಳುತ್ತಿದ್ದುದು ಅವನ ನೆನಪಿಗೆ ಬಂತು. ಇಲ್ಲವಾದರೆ, ಅರಮನೆಯಲ್ಲಿ ಬೆಳೆದ ರಾಜಕುಮಾರನಿಗೆ ಎಮ್ಮೆಗಳ ಬಗ್ಗೆ ಇಷ್ಟೆಲ್ಲ ತಿಳಿದಿರಲು ಹೇಗೆ ಸಾಧ್ಯ? । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ಎಮ್ಮೆ ಕಾಯುವುದು । ಬುದ್ಧನೊಡನೆ ಸ್ವಸ್ಥಿಯ ನಡಿಗೆ #2.1
ಅಂದಿನ ಹಗಲು ತಂಪಾಗಿತ್ತು. ಮಧ್ಯಾಹ್ನದ ಊಟವನ್ನು ಮುಗಿಸಿದ ನಂತರ ಎಲ್ಲ ಬಿಕ್ಖುಗಳೂ ತಮ್ಮ ತಮ್ಮ ಭಿಕ್ಷಾಪಾತ್ರೆಗಳನ್ನು ತೊಳೆದು, ನೆಲದ ಮೇಲೆ ಮಣೆ ಇಟ್ಟುಕೊಂಡು ಬುದ್ಧನಿಗೆದುರಾಗಿ ಕುಳಿತರು. ವೇಣುವನದಲ್ಲಿ ವಾಸಿಸುತ್ತಿದ್ದ ಅಳಿಲುಗಳು ಬಿಕ್ಖುಗಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದವು. ಅವುಗಳಲ್ಲಿ ಕೆಲವು ಬಿದಿರು ಮೆಳೆಗಳನ್ನೇರಿ ಆ ಸಭೆಯನ್ನು ದಿಟ್ಟಿ ನೆಟ್ಟು ನೋಡುತ್ತಿದ್ದವು. ಬುದ್ಧನ ಮುಂದೆ ನೇರ ಎದುರಲ್ಲಿ ಕುಳಿತಿದ್ದ ರಾಹುಲನನ್ನು ಕಂಡು ಸ್ವಸ್ತಿ ಅವನತ್ತ ಸದ್ದಿಲ್ಲದೆ ಹೆಜ್ಜೆ ಹಾಕಿದ, ಅವನ ಪಕ್ಕ ಮಣೆ ಇಟ್ಟುಕೊಂಡು ಪದ್ಮಾಸನ ಹಾಕಿ ಕುಳಿತ. ಆ ಪ್ರಶಾಂತವಾದ, ಗಂಭೀರ ವಾತಾವರಣದಲ್ಲಿ ಎಲ್ಲರೂ ಮೌನವಾಗಿದ್ದರು, ಬುದ್ಧನು ಮಾತನಾಡುವುದನ್ನೇ ಕಾಯುತ್ತಾ. ಅಲ್ಲಿದ್ದ ಪ್ರತಿಯೊಬ್ಬ ಬಿಕ್ಖುವೂ ತನ್ನ ಉಸಿರಾಟವನ್ನು ಎಚ್ಚರದಿಂದ ಗಮನಿಸುತ್ತಿರುವುದು ಸ್ವಸ್ತಿಗೆ ಅರಿವಾಯ್ತು.
ಬಿದಿರಿನಿಂದ ಹೆಣೆದು ಮಾಡಿದ್ದ ಬುದ್ಧನ ಮಣೆ ಎತ್ತರದಲ್ಲಿದ್ದು, ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತಿತ್ತು. ಅವನಲ್ಲಿ ಸಿಂಹದಂಥ ರಾಜಗಾಂಭೀರ್ಯದ ಕಳೆ ಸೂಸುತ್ತಿತ್ತು. ಸಭೆಯ ಉದ್ದಗಲ ದಿಟ್ಟಿ ಹಾಯಿಸಿದ ಅವನ ಕಣ್ಣುಗಳಲ್ಲಿ ಪ್ರೀತಿ ಮತ್ತು ಕರುಣೆ ತುಂಬಿತ್ತು. ತನ್ನ ನೋಟ ಸ್ವಸ್ತಿ ಮತ್ತು ರಾಹುಲನ ಮೇಲೆ ಬಿದ್ದಾಗ ಮುಗುಳ್ನಕ್ಕ.
“ನಾನಿವತ್ತು ನಿಮಗೆಲ್ಲ ಎಮ್ಮೆ ಕಾಯುವ ಕೆಲಸದ ಬಗ್ಗೆ ಹೇಳ್ತೀನಿ” ಅಂದ ಬುದ್ಧ. “ಒಬ್ಬ ಒಳ್ಳೆಯ ಎಮ್ಮೆ ಕಾಯುವ ಹುಡುಗನಿಗೆ ಏನೇನು ತಿಳಿದಿರಬೇಕು, ಅವನು ಏನೆಲ್ಲ ಕೆಲಸ ಮಾಡಲು ಸಮರ್ಥನಾಗಿರಬೇಕೆಂದು ಹೇಳ್ತೀನಿ”.
ಬಿಕ್ಖುಗಳು ಮೈಯೆಲ್ಲ ಕಿವಿಯಾದರು.
“ಚೆನ್ನಾಗಿ ಎಮ್ಮೆ ಕಾಯುವ ಹುಡುಗ ತನ್ನ ಉಸ್ತುವಾರಿಯಲ್ಲಿರುವ ಪ್ರತಿಯೊಂದು ಎಮ್ಮೆಯನ್ನು ಸುಲಭವಾಗಿ ಗುರುತಿಸ್ತಾನೆ, ಪ್ರತಿಯೊಂದರ ಗುಣಲಕ್ಷಣವನ್ನೂ ಯಾವುದಕ್ಕೆ ಏನು ಬೇಕು – ಏನು ಬೇಡ ಅನ್ನುವುದನ್ನೂ ತಿಳಿದುಕೊಂಡಿರ್ತಾನೆ, ಅವುಗಳನ್ನು ಹೇಗೆ ಉಜ್ಜಿ ತೊಳೆಯಬೇಕು, ಮೈಮೇಲಿನ ಗಾಯಕ್ಕೆ ಯಾವ ಥರದ ಚಿಕಿತ್ಸೆ ಕೊಡಬೇಕು, ಹೊಗೆಯಾಡಿಸಿ ಸೊಳ್ಳೆಗಳನ್ನು ಹೇಗೆ ದೂರ ಅಟ್ಟಬೇಕು, ಎಮ್ಮೆಗಳನ್ನು ಕರೆದೊಯ್ಯಲು ಸುರಕ್ಷಿತವಾದ ದಾರಿಗಳನ್ನು ಹೇಗೆ ಹುಡುಕಬೇಕು, ಅವುಗಳನ್ನು ಹೊಳೆ ದಾಟಿಸಲು ಆಳವಿಲ್ಲದ ಜಾಗ ಯಾವುದು, ಅವುಗಳನ್ನು ಪ್ರೀತಿಸೋದು ಹೇಗೆ, ಕಾಳಜಿ ಮಾಡೋದು ಹೇಗೆ, ಅವುಗಳಿಗಾಗಿ ತಾಜಾ ಹುಲ್ಲು ಮತ್ತು ನೀರನ್ನು ಒದಗಿಸೋದು ಹೇಗೆ, ಅವು ಮೇಯುವ ಹುಲ್ಲುಗಾವಲುಗಳನ್ನು ಕಾಪಾಡೋದು ಹೇಗೆ, ಮುದಿ ಎಮ್ಮೆಗಳು ಚಿಕ್ಕ ಕಿರಿಯ ಎಮ್ಮೆಗಳಿಗೆ ಉತ್ತಮ ಮಾದರಿಯಾಗುವಂತೆ ನೋಡಿಕೊಳ್ಳೋದು ಹೇಗೆ ಎಂಬುದನ್ನೆಲ್ಲಾ ತಿಳಿದಿರ್ತಾನೆ. ಎಮ್ಮೆ ಕಾಯುವ ಹುಡುಗ ತನ್ನ ಪ್ರತಿಯೊಂದು ಎಮ್ಮೆಯನ್ನೂ ಹೇಗೆ ಗುರುತಿಸ್ತಾನೋ, ಹಾಗೇ ಒಬ್ಬ ಬಿಕ್ಖು ತನ್ನ ದೇಹದ ಪ್ರತಿಯೊಂದು ಅಂಗದ ಅಗತ್ಯವನ್ನು ಗುರುತಿಸಬಲ್ಲವನಾಗಿರುತ್ತಾನೆ. ಎಮ್ಮೆ ಕಾಯುವ ಹುಡುಗನಿಗೆ ಪ್ರತಿಯೊಂದು ಎಮ್ಮೆಯ ಗುಣಲಕ್ಷಣ ಮತ್ತು ಬೇಕು – ಬೇಡಗಳು ಹೇಗೆ ತಿಳಿದಿರುತ್ತೋ, ಹಾಗೇ ಒಬ್ಬ ಬಿಕ್ಖುವಿಗೆ ದೇಹ, ಮಾತು ಮತ್ತು ಮನಸ್ಸಿನ ಕ್ರಿಯೆಗಳಲ್ಲಿ ಯಾವುದು ಯೋಗ್ಯ – ಯಾವುದು ಯೋಗ್ಯವಲ್ಲ ಅನ್ನೋದು ತಿಳಿದಿರುತ್ತೆ. ಎಮ್ಮೆ ಕಾಯುವ ಹುಡುಗನು ತನ್ನ ಎಮ್ಮೆಗಳನ್ನು ಹೇಗೆ ಉಜ್ಜುಜ್ಜಿ ಶುಚಿಗೊಳಿಸ್ತಾನೋ, ಹಾಗೇ ಬಿಕ್ಖುವಾದವನೂ ತನ್ನ ಮನಸ್ಸು ಮತ್ತು ದೇಹವನ್ನು ಬಯಕೆ, ವ್ಯಾಮೋಹ, ಕೋಪ ಮತ್ತು ದ್ವೇಷಗಳಿಂದ ಮುಕ್ತಗೊಳಿಸಿ ಶುಚಿಯಾಗಿಟ್ಟುಕೊಳ್ಳಬೇಕು.”
ಮಾತನಾಡುತ್ತಿದ್ದ ಬುದ್ಧನ ಕಣ್ಣುಗಳು ಸ್ವಸ್ತಿಯಿಂದ ಕದಲಲಿಲ್ಲ. ಬುದ್ಧನ ಮಾತುಗಳಿಗೆ ತಾನೇ ಆಧಾರವೆಂದು ಸ್ವಸ್ತಿಗೆ ಅನ್ನಿಸಿತು. ವರ್ಷಗಳ ಹಿಂದೆ, ಬುದ್ಧ ತನ್ನ ಪಕ್ಕದಲ್ಲಿ ಕುಳಿತು ಎಮ್ಮೆ ಕಾಯುವ ಕೆಲಸದ ಬಗ್ಗೆ ಕೇಳುತ್ತಿದ್ದುದು ಅವನ ನೆನಪಿಗೆ ಬಂತು. ಇಲ್ಲವಾದರೆ, ಅರಮನೆಯಲ್ಲಿ ಬೆಳೆದ ರಾಜಕುಮಾರನಿಗೆ ಎಮ್ಮೆಗಳ ಬಗ್ಗೆ ಇಷ್ಟೆಲ್ಲ ತಿಳಿದಿರಲು ಹೇಗೆ ಸಾಧ್ಯ?
ಬುದ್ಧನು ಸಾಧಾರಣ ದನಿಯಲ್ಲೇ ಮಾತನಾಡುತ್ತಿದ್ದರೂ ಪ್ರತಿಯೊಂದು ಶಬ್ದವೂ ಸ್ಪಷ್ಟವಾಗಿ ಮತ್ತು ನಿಚ್ಚಳವಾಗಿ ಹೊಮ್ಮುತ್ತಿತ್ತು, ಯಾರಿಗೂ ಯಾವ ಪದವೂ ತಲುಪದೆ ಇರುತ್ತಿರಲಿಲ್ಲ. “ಎಮ್ಮೆ ಕಾಯುವ ಹುಡುಗ ತನ್ನ ಎಮ್ಮೆಗಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ತಾನೋ ಹಾಗೇ ಒಬ್ಬ ಬಿಕ್ಖು ತನ್ನ ಮನಸ್ಸು ಮತ್ತು ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ದೇಹದ ಮೇಲೆ ನಿಗಾವಹಿಸ್ತಾನೆ, ಅವು ಚದುರಿ ಕಳೆದುಹೋಗದಂತೆ ನೋಡಿಕೊಳ್ತಾನೆ. ಎಮ್ಮೆ ಕಾಯುವ ಹುಡುಗ ಹೊಗೆ ಹರಡಿ ಸೊಳ್ಳೆಗಳ ಕಡಿತದಿಂದ ತನ್ನ ಎಮ್ಮೆಗಳನ್ನು ಹೇಗೆ ಕಾಪಾಡಿಕೊಳ್ತಾನೋ, ಹಾಗೇ ಬಿಕ್ಖುವಾದವನು ಜಾಗೃತಿಯ ಬೋಧನೆ ಹರಡಿ, ತನ್ನ ಸುತ್ತಲಿನವರಿಗೆ ದೇಹ ಮತ್ತು ಮನಸ್ಸಿನ ಕ್ಲೇಶಗಳಿಂದ ಪಾರಾಗುವ ಬಗೆಯನ್ನು ತೋರಿಸಿಕೊಡ್ತಾನೆ. ಆ ಹುಡುಗ ಎಮ್ಮೆಗಳ ಸಂಚಾರಕ್ಕಾಗಿ ಸುರಕ್ಷಿತ ದಾರಿಯನ್ನೇ ಹುಡುಕುವಂತೆ ಬಿಕ್ಖುವಾದವನು ಕೀರ್ತಿ, ಸಂಪತ್ತು ಮತ್ತು ಲೈಂಗಿಕ ಬಯಕೆಯತ್ತ ಸೆಳೆಯುವ ಮದ್ಯದಂಗಡಿ ಮತ್ತು ನಾಟ್ಯಶಾಲೆಯಂಥ ದಾರಿಗಳನ್ನು ತಪ್ಪಿಸಿ ಸಂಚರಿಸ್ತಾನೆ. ಎಮ್ಮೆ ಕಾಯುವ ಹುಡುಗ ತನ್ನ ಎಮ್ಮೆಗಳನ್ನು ಹೇಗೆ ಪ್ರೀತಿಸ್ತಾನೋ ಹಾಗೇ ಬಿಕ್ಖುವಾದವನು ಧ್ಯಾನದಿಂದ ಸಿಗುವ ಸಂತೋಷ ಮತ್ತು ಶಾಂತಿಯನ್ನು ಪ್ರೀತಿಸ್ತಾನೆ. ಹುಡುಗ ಎಮ್ಮೆಗಳು ಹೊಳೆ ದಾಟಲು ಆಳವಿಲ್ಲದ ಜಾಗವನ್ನು ಹೇಗೆ ನೆಚ್ಚಿಕೊಳ್ತಾನೋ ಹಾಗೇ ಬಿಕ್ಖುವಾದವನು ತನ್ನ ಜೀವನಕ್ಕಾಗಿ ಅಪಾಯದಿಂದ ಪಾರು ಮಾಡುವ ನಾಲ್ಕು ಆರ್ಯ ಸತ್ಯಗಳನ್ನು ಅವಲಂಬಿಸ್ತಾನೆ. ಹುಡುಗನು ತನ್ನ ಎಮ್ಮೆಗಳ ಪೋಷಣೆಗೆ ತಾಜಾ ಹುಲ್ಲು ಮತ್ತು ನೀರುಣಿಸಬೇಕೆಂದು ಅರಿತಿರುವಂತೆ, ಬಿಕ್ಖುವಾದವನು ಸಹಜ ಪ್ರಜ್ಞೆಯ ನಾಲ್ಕು ನೆಲೆಗಳೇ ತನ್ನ ವಿಮೋಚನೆಯ ಪೋಷಣೆ ಎಂದು ಅರಿತಿರುತ್ತಾನೆ. ಹುಡುಗ ಎಮ್ಮೆಗಳನ್ನು ಅತಿಯಾಗಿ ಮೇಯಿಸದೆ ಹೊಲವನ್ನು ಹೇಗೆ ಕಾಪಾಡ್ತಾನೋ ಹಾಗೇ ಬಿಕ್ಖುವೂ ತಾನು ಭಿಕ್ಷೆ ಬೇಡುವಾಗ ಸಮುದಾಯಗಳ ಜೊತೆಗಿನ ಸಂಬಂಧ ಹಾಳಾಗದಂತೆ ಎಚ್ಚರದಿಂದ ಕಾಪಾಡಿಕೊಳ್ತಾನೆ. ಹಿರಿಯ ಎಮ್ಮೆಗಳು ಕಿರಿಯವಕ್ಕೆ ಮಾದರಿ ಎಂದು ಹುಡುಗನಿಗೆ ತಿಳಿದಿರುವಂತೆಯೇ, ಹಿರಿಯರ ಬುದ್ಧಿವಂತಿಕೆ ಮತ್ತು ಅನುಭವಗಳು ನನಗೆ ಮಾದರಿ ಎಂದು ಬಿಕ್ಖುವಿಗೂ ತಿಳಿದಿರುತ್ತೆ. ಬಿಕ್ಖುಗಳೇ, ನಾನು ಹೇಳಿದ ಈ ಹನ್ನೊಂದು ಅಂಶಗಳನ್ನು ಅನುಸರಿಸ್ತಾ ಆರು ವರ್ಷಗಳ ಕಾಲ ಅಭ್ಯಾಸ ಮಾಡಿದವರು ಅರ್ಹತ್ ಪದವಿಯನ್ನು ಹೊಂದುತ್ತಾರೆ. ಎಮ್ಮೆ ಕಾಯುವ ಹುಡುಗನಿಗೆ ತಾಜಾ ಹುಲ್ಲಿನಿಂದ ಪೋಷಣೆ ಸಿಗುತ್ತದೆಂದು ಹೇಗೆ ತಿಳಿದಿರುತ್ತೋ, ಹಾಗೇ ಸಹಜ ಪ್ರಜ್ಞೆಯ ನಾಲ್ಕು ನೆಲೆಗಳು ವಿಮೋಚನೆಯತ್ತ ಕರೆದೊಯ್ಯುವವೆಂದು ಬಿಕ್ಖುವಿಗೂ ತಿಳಿದಿರುತ್ತೆ”
ಸ್ವಸ್ತಿ ಅಚ್ಚರಿಯಿಂದ ಆಲಿಸಿದ. ಹತ್ತು ವರ್ಷಗಳ ಹಿಂದೆ ತಾನು ಹೇಳಿದ್ದ ಪ್ರತಿಯೊಂದನ್ನೂ ಬುದ್ಧ ನೆನಪಿಟ್ಟುಕೊಂಡಿದ್ದ, ಮತ್ತು ಪ್ರತಿಯೊಂದು ವಿವರವನ್ನೂ ಬಿಕ್ಖುಗಳಿಗೆ ಅನ್ವಯವಾಗುವಂತೆ ವ್ಯಾಖ್ಯಾನಿಸಿದ್ದ. ಬುದ್ಧ ಇಡೀ ಬಿಕ್ಖುಗಳ ಸಭೆಯನ್ನು ಕುರಿತು ಮಾತಾಡುತ್ತಿದ್ದಾನೆಂದು ತಿಳಿದಿದ್ದರೂ, ಅವನು ನೇರವಾಗಿ ತನಗೇ ಹೇಳುತ್ತಿದ್ದಾನೆಂಬ ಭಾವನೆ ಸ್ವಸ್ತಿಯಲ್ಲಿ ಮೂಡಿತು. ಆ ತರುಣನ ಕಣ್ಣುಗಳು ಕ್ಷಣಮಾತ್ರವೂ ಬುದ್ಧನಿಂದ ಆಚೀಚೆ ಕದಲಲಿಲ್ಲ.
(ಮುಂದುವರಿಯುವುದು)

