ಧ್ಯಾನವೆಂಬ ಅಪ್ಪುಗೆ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.9

ಧ್ಯಾನದೊಳಗಿರುವಾಗ ನೀವು ಉಸಿರೊಡನೆ ಬದುಕಿನ ಅಶಾಶ್ವತತೆಯ ನೋಟವನ್ನು ಮನಸಿಗೆ ತಂದುಕೊಳ್ಳಿ. “ಈ ಕ್ಷಣ ಅಮೂಲ್ಯವೆಂದು ಗೊತ್ತು. ಉಸಿರೆಳೆದುಕೊಳ್ಳುವೆ. ಈ ಕ್ಷಣವನ್ನು ಆನಂದಿಸುವೆ, ಉಸಿರು ಬಿಡುವೆ,” ಹೀಗೆ ಪ್ರತಿ ಉಸಿರಿನೊಡನೆಯೂ ಹೇಳಿಕೊಳ್ಳಿ. ನಿಮ್ಮೆದುರು ಇರುವವರತ್ತ ನಗೆಯನ್ನು ಬೀರಿ. ಅವರನ್ನು ಆಲಂಗಿಸುವ ಆಸೆ ಇರುವುದನ್ನು ಹೇಳಿ. ಇದು ಅನುಷ್ಠಾನವೂ ಹೌದು, ಆಚರಣೆಯೂ ಹೌದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.9: ಭಾವ-ಸಂಬಂಧ  ಧ್ಯಾನವೆಂಬ ಅಪ್ಪುಗೆ

ನಾಳೆ ಏನಾಗುವುದೋ ನಮಗೆ ಗೊತ್ತಿಲ್ಲ. ಆಕ್ಸಿಡೆಂಟ್‌  ಆಗಬಹುದು. ನಮಗೆ ಪ್ರಿಯರಾದವರಿಗೆ ವಾಸಿಯಾಗದ ಕಾಯಿಲೆ ಬಂದಿರುವುದು ತಿಳಿಯಬಹುದು. ನಾಳೆ ನಾವು ಇರುತ್ತೇವೋ ಇಲ್ಲವೋ ಅದೂ ಗೊತ್ತಿಲ್ಲ. ಬದುಕು ತುಂಬ ಅಸ್ಥಿರ. ಇವೆಲ್ಲವೂ ಅಶಾಶ್ವತ ಅನ್ನುತ್ತೇವಲ್ಲ ಅದರ ಭಾಗಗಳು. ಯಾವುದೂ ಶಾಶ್ವತ ಅಲ್ಲ ಅನ್ನುವ ಭಾವ ಬಂದಾಗ ನಮಗೆ ಸಂಕಟವಾಗುತ್ತದೆ.

ಈ ಅನಿಶ್ಚಿತ, ಅಸುರಕ್ಷಿತ ಎಂಬ ಭಾವವನ್ನು ಎದುರಿಸುವುದು ಹೇಗೆ?

ಇರುವ ಈ ಕ್ಷಣದಲ್ಲಿ ಸಾಧ್ಯವಾದಷ್ಟೂ ಆಳಕ್ಕೆ ಮುಳುವುದನ್ನು ಕಲಿಯುವುದೊಂದೇ ದಾರಿ. ಇರುವ ಈ ಕ್ಷಣವನ್ನು ಚೆನ್ನಾಗಿ ನಿಭಾಯಿಸಬೇಕು. ಇರುವ ಈ ಕ್ಷಣದ ಆಳದಲ್ಲಿ ಬದುಕಿದರೆ ಮುಂದೆ, ಭವಿಷ್ಯದಲ್ಲಿ ಯಾವುದೇ ಥರದ ಪಶ್ಚಾತ್ತಾಪ ಇರುವುದಿಲ್ಲ. ನಾವು ನಿಜ, ನಮ್ಮೆದುರು ಇರುವವರು ನಿಜ, ನಾವಿಬ್ಬರೂ ಏನೇ ಮಾಡಿದರೂ ಈ ಕ್ಷಣದಲ್ಲಿ ನಮ್ಮ ಬದುಕು ಸಂತೋಷವಾಗಿ, ಅರ್ಥಭರಿತವಾಗಿರುವಂತೆ ಮಾಡಬೇಕು.

ನಮ್ಮ ಕುಟುಂಬಕ್ಕೆ ಸೇರಿದವರ ಮೇಲೆ ನಾವು ಸಿಟ್ಟುಗೊಂಡಿದ್ದರೆ ಧ್ಯಾನದ ಅಪ್ಪುಗೆಯನ್ನು ಮಾಡುವುದು ಸೂಕ್ತ ಅನ್ನುತ್ತೇನೆ. ಸಿಟ್ಟು ಇರದಿದ್ದಾಗಲು ಅದು ಒಳ್ಳೆಯದೇ! ಕಣ್ಣು ಮುಚ್ಚಿ, ಆಳವಾಗಿ ಉಸಿರೆಳೆದು, ನಾವು-ನಮ್ಮ ಪ್ರೀತಿಪಾತ್ರರು ಮುನ್ನೂರು ವರ್ಷಗಳ ನಂತರ ಭೇಟಿಯಾದ ಹಾಗೆ ಕಲ್ಪನೆ ಮಾಡಿಕೊಳ್ಳೋಣ. ಆಗ ನಾವು ಮಾಡಬಹುದಾದ ಒಂದೇ ಒಂದು ಅರ್ಥಪೂರ್ಣ ಕೆಲಸವೆಂದರೆ ನಮ್ಮ ತೋಳು ತೆರೆದು ನಮ್ಮ ಪ್ರಿಯರನ್ನು ಅಪ್ಪಿಕೊಳ್ಳುವುದು ಮಾತ್ರ!

ಧ್ಯಾನದೊಳಗಿರುವಾಗ ನೀವು ಉಸಿರೊಡನೆ ಬದುಕಿನ ಅಶಾಶ್ವತತೆಯ ನೋಟವನ್ನು ಮನಸಿಗೆ ತಂದುಕೊಳ್ಳಿ. “ಈ ಕ್ಷಣ ಅಮೂಲ್ಯವೆಂದು ಗೊತ್ತು. ಉಸಿರೆಳೆದುಕೊಳ್ಳುವೆ. ಈ ಕ್ಷಣವನ್ನು ಆನಂದಿಸುವೆ, ಉಸಿರು ಬಿಡುವೆ,” ಹೀಗೆ ಪ್ರತಿ ಉಸಿರಿನೊಡನೆಯೂ ಹೇಳಿಕೊಳ್ಳಿ. ನಿಮ್ಮೆದುರು ಇರುವವರತ್ತ ನಗೆಯನ್ನು ಬೀರಿ. ಅವರನ್ನು ಆಲಂಗಿಸುವ ಆಸೆ ಇರುವುದನ್ನು ಹೇಳಿ. ಇದು ಅನುಷ್ಠಾನವೂ ಹೌದು, ಆಚರಣೆಯೂ ಹೌದು. ದೇಹ ಮನಸುಗಳೆರಡೂ ಒಂದುಗೂಡಿರುವಾಗ ನೀವು ಇಡಿಯಾಗಿ ಇರುತ್ತೀರಿ, ಜೀವಭರಿತರಾಗಿರುತ್ತೀರಿ. ಇದು ಆಚರಣೆ. ನೀರು ಕುಡಿಯುವಾಗ ನಾನು ನೂರಕ್ಕೆ ನೂರರಷ್ಟು ನೀರು ಕುಡಿಯುವುದರಲ್ಲೇ ಮಗ್ನನಾಗಿರುವೆ. ನಿಮ್ಮ ಬದುಕಿನ ಪ್ರತಿ ಕ್ಷಣವೂ ಹೀಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಅಪ್ಪುಗೆ ಬಹಳ ಗಹನವಾದದ್ದು. ಇನ್ನೊಬ್ಬರನ್ನು ಸರಿಯಾಗಿ ಅಪ್ಪಿಕೊಳ್ಳಲು ನೀವು ಪೂರ್ಣವಾಗಿ ಆ ಕ್ಷಣದಲ್ಲಿರಬೇಕು. ತೋಳು ಪೂರ್ತಿಯಾಗಿ ಅಗಲಿಸಿ, ಇನ್ನೊಬ್ಬ ವ್ಯಕ್ತಿಯನ್ನು ಅಲಂಗಿಸಿಕೊಳ್ಳುವಾಗ “ಈ ಕ್ಷಣ ಇವರು ನನ್ನ ತೋಳಿನಲ್ಲಿ ಜೀವಂತ, ಉಸಿರೆಳೆದುಕೊಳ್ಳುವೆ. ನನಗೆ ಬಹಳ ಸಂತೋಷ, ಉಸಿರು ಬಿಡುವೆ,” ಎಂದು ಹೇಳಿಕೊಳ್ಳಿ.

ಆ ಕ್ಷಣದಲ್ಲಿ ಬದುಕು ನಿಜವಾಗುವುದು. ಜನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲು ಅನುವಾಗುವ ಹಾಗೆ ವಾಸ್ತುಶಿಲ್ಪಿಗಳು ರೈಲು ನಿಲ್ದಾಣ, ಏರ್ಪೋರ್ಟುಗಳನ್ನು ವಿನ್ಯಾಸ ಮಾಡಬೇಕು. ಇನ್ನೊಂದು ಥರದಲ್ಲೂ ಅಪ್ಪುಗೆಯ ಧ್ಯಾನವನ್ನು ಮಾಡಬಹದು: ಮೊದಲ ಉಸಿರು ತೆಗೆದುಕೊಳ್ಳುವಾಗ ನೀವು, ನಿಮ್ಮ ಪ್ರೀತಿ ಪಾತ್ರರು ಇಬ್ಬರೂ ಜೀವಂತವೆನ್ನುವ ಎಚ್ಚರ ಮೂಡಿಸಿಕೊಳ್ಳಿ. ಎರಡನೆಯ ಬಾರಿ ಉಸಿರೆಳೆದುಕೊಳ್ಳುವಾಗ ನೀವಿಬ್ಬರೂ ಮುನ್ನೂರು ವರ್ಷದ ನಂತರ ಹೇಗಿರುತ್ತೀರೆಂದು ಯೋಚಿಸಿ. ಮೂರನೆಯ ಬಾರಿ ಉಸಿರೆಳೆದುಕೊಳ್ಳುವಾಗ, ಬಿಡುವಾಗ ಈ ಕ್ಷಣದಲ್ಲಿ ನೀವಿಬ್ಬರೂ ಜೀವಂತವೆಂಬುದು ನಿಮ್ಮ ಗಮನದಲ್ಲಿರಲಿ. ನಿಮ್ಮ ಅಪ್ಪುಗೆ, ನಿಮ್ಮ ಸಂತೋಷ ಎರಡೂ ಸಂತೋಷಭರಿತವಾಗಿರುತ್ತವೆ.

***

ಅಲ್ಲಮಪ್ರಭುಗಳ ಎರಡು ವಚನ ನೆನಪಾಗುತ್ತಿವೆ.

೧. ನಿಮ್ಮಲ್ಲಿ ನೀವು ತಿಳಿದು ನೋಡಿದರೆ ಅನ್ಯವಿಲ್ಲ ಕಾಣಿರಣ್ಣಾ
ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ
ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು

೨. ನಿಮ್ಮ ನೆನೆವುತ್ತಿದ್ದಿತ್ತು ನೆನೆವ ಮುಖವಾವುದೆಂದರಿಯದೆ
ಪೂಜೆಯ ಪೂಜಿಸುತ್ತಿದ್ದಿತ್ತು ಪೂಜೆಯ ಮುಖವಾವುದೆಂದರಿಯದೆ
ಆಡಿ ಹಾಡಿ ಬೇಡುತ್ತಿದ್ದಿತ್ತು ಬೇಡುವ ಮುಖವಾವುದೆಂದರಿಯದೆ
ಕಾಯದಲ್ಲಿ ಇಲ್ಲ  ಜೀವದಲ್ಲಿಇಲ್ಲ ಭಾವದಲ್ಲಿ ಇಲ್ಲ
ಭರಿತವು ಅದು ತಾನಪ್ಪುದು
ತಾನಲ್ಲದುದೇನ ಹೇಳುವೆ ಕೌತುಕವ
ಗುಹೇಶ್ವರನೆಂಬ ಹೆಸರೊಳಗಿದ್ದುದ
ಬೆಸಗೊಂಬವರಿಲ್ಲ ನಿರಾಳದ ಘನವ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.