ಬುದ್ಧನ ಸ್ಪರ್ಶ  । ಹಳೆಯ ಹಾದಿ, ಬಿಳಿಯ ಮೋಡ ಅಧ್ಯಾಯ #3.2

ಸ್ವಸ್ತಿಯ ಮುಂದೆ ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿಯೊಬ್ಬ ನಿಂತಿದ್ದ. ಅವನ ನಿಲುವಿನಿಂದಲೇ ಸ್ವಸ್ತಿಗೆ ಇವನು ತನ್ನ ಸ್ಥಾನಮಾನದವನಲ್ಲವೆಂದು ಗೊತ್ತಾಗಿಹೋಯಿತು. ನೋಟದಲ್ಲೂ ನಗುವಿನಲ್ಲೂ ಕರುಣೆಯ ಹೊಳೆಯನ್ನೇ ಹರಿಸುತ್ತಿರುವ ಈತ ತಾನು ಮುಟ್ಟಿದರೂ ಹೊಡೆಯುವುದಿಲ್ಲವೆಂಬ ಧೈರ್ಯವಿದ್ದರೂ ಸ್ವಸ್ತಿ ತನ್ನಿಂದಾಗಿ ಅವನಿಗೆ ತೊಂದರೆಯಾಗುವುದು ಬೇಡವೆಂದು ಹಲವು ಹೆಜ್ಜೆಗಳ ಅಂತರ ಕಾಯ್ದುಕೊಂಡು ನಿಂತ । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಬುದ್ಧನ ಸ್ಪರ್ಶ । ಒಂದು ಕಟ್ಟು ದರ್ಭೆ ಹುಲ್ಲು  #3.2

ಸ್ವಸ್ತಿ ಒಬ್ಬ ಅಸ್ಪೃಶ್ಯನಾಗಿದ್ದ. ಅವನು ಸಮಾಜ ಗುರುತಿಸಿದ್ದ ನಾಲ್ಕು ಜಾತಿಗಳಲ್ಲಿ ಪೈಕಿ ಯಾವುದಕ್ಕೂ ಸೇರಿದವನಾಗಿರಲಿಲ್ಲ. ಸ್ವಸ್ತಿಯ ತಂದೆ ಅವನಿಗೆ ಈ ಬಗ್ಗೆ ತಿಳುವಳಿಕೆ ನೀಡಿದ್ದರು. ಬ್ರಾಹ್ಮಣರು ಸೃಷ್ಟಿಕರ್ತ ಬ್ರಹ್ಮನ ಮುಖದಿಂದ ಸೃಷ್ಟಿಯಾದವರೆಂದೂ ಆದ್ದರಿಂದಲೇ ವೇದ ಶಾಸ್ತ್ರಗಳನ್ನು ಓದಬಲ್ಲರು ಮತ್ತು ಬೋಧನೆ ಮಾಡಬಲ್ಲರೆಂದೂ ಅವರು ಹೇಳಿದ್ದರು. ಅದೇ ರೀತಿ ಕ್ಷತ್ರಿಯರು ಬ್ರಹ್ಮನ ಭುಜಗಳಿಂದ ಸೃಷ್ಟಿಯಾಗಿದ್ದು, ರಾಜಕೀಯ ಮತ್ತು ಸೈನ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರೆಂದೂ; ಬ್ರಹ್ಮನ ತೊಡೆಗಳಿಂದ ಸೃಷ್ಟಿಯಾದ ವೈಶ್ಯರು ವ್ಯಾಪಾರ ಮತ್ತು ಕೃಷಿಗಾರಿಕೆ ಮಾಡುವರೆಂದೂ; ಬ್ರಹ್ಮನ ಕಾಲುಗಳಿಂದ ಸೃಷ್ಟಿಯಾದ ಶೂದ್ರರು ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಾ ಮೇಲ್ಜಾತಿಯವರ ಸೇವಕರಾಗಿರುವರೆಂದೂ ವಿವರಿಸಿದ್ದರು. ಅವರು ಹೇಳಿದ್ದಂತೆ, ಈ ನಾಲ್ಕರಲ್ಲಿ ಶೂದ್ರರೇ ಅತ್ಯಂತ ಕೆಳಗಿನವರಾಗಿದ್ದರು. ಆದರೆ ಸ್ವಸ್ತಿಯ ಕುಟುಂಬ ಈ ನಾಲ್ಕನೆಯದಕ್ಕಿಂತ ಕೆಳಗಿತ್ತು. ಯಾವ ಜಾತಿಯೂ ಇಲ್ಲದ ಇವರನ್ನು ಅಸ್ಪೃಶ್ಯರು ಎಂದು ಕರೆಯಲಾಗುತ್ತಿತ್ತು. ಅವರು ಹಳ್ಳಿಯ ಸರಹದ್ದಿನ ಹೊರಗೆ ವಾಸಿಸಬೇಕಿತ್ತು. ಅವರು ಕಸ ಗುಡಿಸುವುದು, ಗೊಬ್ಬರ ಹರಡುವುದು, ರಸ್ತೆ ಮಾಡುವುದು, ಹಂದಿಗಳಿಗೆ ಮೇವು ಹಾಕುವುದು ಅಥವಾ ಎಮ್ಮೆ ಕಾಯುವಂತಹ ಕೆಲಸಗಳನ್ನು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರೂ ತಾವು ಹುಟ್ಟಿದ ಜಾತಿಯನ್ನು ಒಪ್ಪಿಕೊಳ್ಳಲೇಬೇಕಿತ್ತು. ಹಾಗೆ ಒಪ್ಪಿಕೊಳ್ಳುವುದೇ ಪರಮಾನಂದಕ್ಕೆ ದಾರಿ ಎಂದು ಶಾಸ್ತ್ರಗ್ರಂಥಗಳ ಮೂಲಕ ಸಾರಲಾಗಿತ್ತು. ಸ್ವಸ್ತಿಯಂತಹ ಅಸ್ಪೃಶ್ಯ ಏನಾದರೂ ಮೇಲ್ಜಾತಿಯವರನ್ನು ಮುಟ್ಟಿದರೆ ಅವನನ್ನು ಥಳಿಸಲಾಗುತ್ತಿತ್ತು. ಉರುವೇಲ ಹಳ್ಳಿಯಲ್ಲಿ ಬ್ರಾಹ್ಮಣನೊಬ್ಬನನ್ನು ಅಕಸ್ಮಾತಾಗಿ ಮುಟ್ಟಿದ ಅಸ್ಪೃಶ್ಯನೊಬ್ಬನನ್ನು ಸಾಯುವಂತೆ ಬಡಿಯಲಾಗಿತ್ತು.  ಅಸ್ಪೃಶ್ಯರಿಂದ ಮುಟ್ಟಲ್ಪಟ್ಟ ಬ್ರಾಹ್ಮಣ ಅಥವಾ ಕ್ಷತ್ರಿಯರನ್ನು ಮೈಲಿಗೆಯಾದವರೆಂದು ಪರಿಗಣಿಸಲಾಗುತ್ತಿತ್ತು. ಅಂಥವರು ಹಲವು ವಾರಗಳ ಕಾಲ ಉಪವಾಸ – ಪ್ರಾಯಶ್ಚಿತ್ತಗಳ ಮೂಲಕ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳಬೇಕಾಗಿತ್ತು.

ಸ್ವಸ್ತಿ ಎಮ್ಮೆಗಳನ್ನು ಮನೆಗೆ ಹೊಡೆದುಕೊಂಡು ಹೋಗುವಾಗ ದಾರಿಯಲ್ಲಿ  ಯಾವುದೇ ಮೇಲ್ಜಾತಿಯ ವ್ಯಕ್ತಿಯ ಹತ್ತಿರ ಸುಳಿಯದಂತೆ ಬಹಳ ಎಚ್ಚರಿಕೆ ವಹಿಸುತ್ತಿದ್ದ. ತಾನು ಮೇಯಿಸುವ ಎಮ್ಮೆಗಳು ಬ್ರಾಹ್ಮಣರಿಗೆ ಸೋಕಿದರೆ ಮೈಲಿಗೆಯಾಗುತ್ತಿರಲಿಲ್ಲವಾಗಿ, ಆ ಎಮ್ಮೆಗಳೇ ತನಗಿಂತ ಹೆಚ್ಚು ಅದೃಷ್ಟವಂತರು ಎಂದು ಸ್ವಸ್ತಿಗೆ ಅನ್ನಿಸುತ್ತಿತ್ತು. ಅಸ್ಪೃಶ್ಯರು ಯಾವುದೇ ತಪ್ಪು ಮಾಡದಿದ್ದರೂ, ಮೇಲ್ಜಾತಿಯ ವ್ಯಕ್ತಿಯೊಬ್ಬ ತಾನಾಗೇ ಅವರಿಗೆ ಮೈ ಸೋಕಿಸಿಕೊಂಡರೂ ಶಿಕ್ಷೆಯಾಗುತ್ತಿದ್ದುದು ಮಾತ್ರ ಅಸ್ಪೃಶ್ಯರಿಗೇ.

ಇಲ್ಲಿ, ಈ ಹೊತ್ತು ಸ್ವಸ್ತಿಯ ಮುಂದೆ ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿಯೊಬ್ಬ ನಿಂತಿದ್ದ. ಅವನ ನಿಲುವಿನಿಂದಲೇ ಸ್ವಸ್ತಿಗೆ ಇವನು ತನ್ನ ಸ್ಥಾನಮಾನದವನಲ್ಲವೆಂದು ಗೊತ್ತಾಗಿಹೋಯಿತು. ನೋಟದಲ್ಲೂ ನಗುವಿನಲ್ಲೂ ಕರುಣೆಯ ಹೊಳೆಯನ್ನೇ ಹರಿಸುತ್ತಿರುವ ಈತ ತಾನು ಮುಟ್ಟಿದರೂ ಹೊಡೆಯುವುದಿಲ್ಲವೆಂಬ ಧೈರ್ಯವಿದ್ದರೂ ಸ್ವಸ್ತಿ ತನ್ನಿಂದಾಗಿ ಅವನಿಗೆ ತೊಂದರೆಯಾಗುವುದು ಬೇಡವೆಂದು ಹಲವು ಹೆಜ್ಜೆಗಳ ಅಂತರ ಕಾಯ್ದುಕೊಂಡು ನಿಂತ.  

ಅವನ ಹಿಂಜರಿಕೆಯನ್ನು ಕಂಡು ಆ ವ್ಯಕ್ತಿಯೇ ಮುಂದೆ ಬಂದ. ಮೈಸೋಕುವುದೆಂಬ ಆತಂಕದಿಂದ ಸ್ವಸ್ತಿ ಮತ್ತೆ ಹಿಂದೆ ಸರಿದ. ಅವನಿಗೆ ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ಆ ವ್ಯಕ್ತಿ ಸ್ವಸ್ತಿಯ ಹೆಗಲ ಮೇಲೆ ಕೈಹಾಕಿ, ಮತ್ತೊಂದು ಕೈಯಿಂದ ಅವನ ತಲೆ ನೇವರಿಸಿದ. ಸ್ವಸ್ತಿಗೆ ಏನೂ ತೋಚದೆ ಅವಾಕ್ಕಾಗಿ ನಿಂತುಬಿಟ್ಟ. ಆವರೆಗೆ ಯಾರೂ ಅವನ ತಲೆಯನ್ನು ಅಷ್ಟು ಪ್ರೀತಿಯಿಂದ ನೇವರಿಸಿರಲಿಲ್ಲ, ಆಷ್ಟು ಸ್ನೇಹದಿಂದ ಅವನನ್ನು ಮುಟ್ಟಿರಲಿಲ್ಲ. ಅವನಿಗೆ ಆನಂದದ ಜೊತೆ ಭಯವೂ ಆಯಿತು.  

“ಹೆದರಬೇಡ ಮಗು” ಆ ವ್ಯಕ್ತಿ ಮೆಲುದನಿಯಲ್ಲಿ ಅಭಯ ನೀಡುವಂತೆ ನುಡಿದ.

ಆ ದನಿಯನ್ನು ಕೇಳಿದ ಕೂಡಲೇ, ಸ್ವಸ್ತಿಯ ಭಯವೆಲ್ಲಾ ಮಾಯವಾಯಿತು. ತಲೆಯೆತ್ತಿ, ಮುಗುಳ್ನಗೆ ಸೂಸುತ್ತಿದ್ದ ಆ ಕರುಣಾಮಯಿ ವ್ಯಕ್ತಿಯ ಮುಖವನ್ನು ದಿಟ್ಟಿಸಿದ. ಒಂದು ಕ್ಷಣ ಹಿಂಜರಿದರೂ ಸಾವರಿಸಿಕೊಂಡು, “ಅಯ್ಯಾ, ನೀವೆಷ್ಟು ಒಳ್ಳೆಯವರು” ಅಂದ.

ಆ ವ್ಯಕ್ತಿ ಸ್ವಸ್ತಿಯ ಗಲ್ಲವನ್ನು ಪ್ರೀತಿಯಿಂದ ಹಿಡಿದೆತ್ತಿ, ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ “ಎಷ್ಟು ಒಳ್ಳೆ ಹುಡುಗ ನೀನು. ಇಲ್ಲೇನಾ ನಿನ್ನ ಮನೆ?” ಎಂದು ಕೇಳಿದ.

ಸ್ವಸ್ತಿ ಉತ್ತರಿಸಲಿಲ್ಲ. ಅವನು ಆ ವ್ಯಕ್ತಿಯ ಎಡಗೈಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು, ಧೈರ್ಯ ಒಗ್ಗೂಡಿಸಿ ಕೇಳಿಯೇಬಿಟ್ಟ, “ನಾನು ಮುಟ್ಟಿದ್ರೆ ನಿಮಗೆ ಮೈಲಿಗೆಯಾಗೋದಿಲ್ವಾ?”

ಆ ವ್ಯಕ್ತಿ ಮತ್ತೆ ಮುಗುಳ್ನಕ್ಕು ತಲೆಯಾಡಿಸಿದ. “ಖಂಡಿತಾ ಇಲ್ಲ ಮಗು. ನೀನೊಬ್ಬ ಮನುಷ್ಯ, ನಾನೂ ಒಬ್ಬ ಮನುಷ್ಯನೇ. ನೀನು ಮುಟ್ಟಿದ್ರೆ ಮೈಲಿಗೆ ಹೇಗಾಗುತ್ತೆ?”

ಅವನು ಸ್ವಸ್ತಿಯ ಕೈ ಹಿಡಿದುಕೊಂಡೇ ಕಾಡಿನ ಅಂಚಿನವರೆಗೆ ನಡೆದ. ಎಮ್ಮೆಗಳು ತಮ್ಮ ಪಾಡಿಗೆ ಮೇಯುತ್ತಿದ್ದವು.  ಆ ವ್ಯಕ್ತಿ ಸ್ವಸ್ತಿಯತ್ತ ನೋಡಿ, “ನೀನು ಎಮ್ಮೆ ಕಾಯೋ ಕೆಲಸ ಮಾಡ್ತೀಯಾ? ಈ ಹುಲ್ಲಿನ ಕಟ್ಟು ರಾತ್ರಿಯ ಮೇವಿಗೋಸ್ಕರ ಕೊಯ್ದಿಟ್ಟಿರೋದಾ? ನಿನ್ನ ಹೆಸರೇನು?” ಎಂದೆಲ್ಲ ಕೇಳಿದ.

ಉತ್ತರಿಸುವ ಮುನ್ನ ಸ್ವಸ್ತಿ, ಅವನಿಗಾಗಿ ಒಂದು ಕಟ್ಟು ದರ್ಬೆ ಹುಲ್ಲು ತಂದು ಚಾಪೆಯಂತೆ ಹರಡಿದ.

(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.