ಅಸಮರ್ಥತೆಯ ಅಸ್ತ್ರ

ಯಾವುದೋ ಕೆಲಸದಲ್ಲಿ ನೀವು ಸಮರ್ಥರಲ್ಲ ಎನ್ನುವುದು ಗೊತ್ತಿದ್ದರೆ, ಅದಕ್ಕೆ ಬೇಕಾದ ತರಬೇತಿ ಪಡೆಯಬೇಕು ಅಥವಾ ಅದನ್ನು ಕಲಿತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕನಿಷ್ಠಪಕ್ಷ, ನಿಮ್ಮ ಅಸಮರ್ಥತೆಯಿಂದ ಇತರರಿಗೆ ಹಾನಿಯಾಗಬಹುದಾದ ಪರಿಸ್ಥಿತಿಯಿಂದ ದೂರವಿರಬೇಕು. ಉದಾಹರಣೆಗೆ, ನೀವು ಸರ್ಜನ್ ಆಗಲು ಯೋಗ್ಯರಲ್ಲ ಎನ್ನುವುದು ನಿಮಗೆ ಗೊತ್ತಿದ್ದರೆ, ನೀವು ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಬೇಕು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನನ್ನ ಸ್ನೇಹಿತನೊಬ್ಬ ಕ್ರಿಸ್ಮಸ್ ಮಧ್ಯಾಹ್ನದ ಊಟದ ನಂತರ ಪಾತ್ರೆ ತೊಳೆಯುವುದರಿಂದ ತಪ್ಪಿಸಿಕೊಳ್ಳಲು ಒಂದು ತಂತ್ರವನ್ನು ಬಳಸುತ್ತಿದ್ದ. ಅವನು ಪಾತ್ರೆಗಳನ್ನು ಎಷ್ಟು ಕಳಪೆಯಾಗಿ ಮತ್ತು ಎಷ್ಟು ಅರೆಮನಸ್ಸಿನಿಂದ ತೊಳೆಯುತ್ತಿದ್ದನೆಂದರೆ, ಕೊನೆಗೆ ಎಲ್ಲರೂ, “ಅಯ್ಯೋ, ನೀನು ಸುಮ್ಮನೆ ಹೋಗಿ ಕುಳಿತುಕೋ!” ಎಂದು ಹೇಳುತ್ತಿದ್ದರು. ಆದರೆ ಅವನು ಏನು ಮಾಡುತ್ತಿದ್ದಾನೆ ಎನ್ನುವುದು ಅವನಿಗೆ ಮಾತ್ರ ಚೆನ್ನಾಗಿಯೇ ಗೊತ್ತಿತ್ತು. ಅವನು ಕೇಂಬ್ರಿಡ್ಜ್‌ನಲ್ಲಿ ಓದಿದ್ದ. ಕಾರನ್ನು ರಿಪೇರಿ ಮಾಡಬಲ್ಲವನಾಗಿದ್ದ, ಶೆಲ್ಫ್‌ಗಳನ್ನೂ ತಯಾರು ಮಾಡಬಲ್ಲವನಾಗಿದ್ದ. ಹಾಗಿರುವಾಗ ಪಾತ್ರೆ ತೊಳೆಯುವುದು ಅವನಿಗೆ ಗೊತ್ತಿರಲಿಲ್ಲವೆಂದಲ್ಲ. ಬದಲಾಗಿ, ಆ ಒಂದು ಕೆಲಸದಿಂದ ತಪ್ಪಿಸಿಕೊಳ್ಳಲು ಅವನು ತನ್ನ “ಅಸಮರ್ಥತೆಯನ್ನು” ಉದ್ದೇಶಪೂರ್ವಕವಾಗಿ ಒಂದು ಅಸ್ತ್ರದಂತೆ ಬಳಸಿಕೊಂಡಿದ್ದ. ಇದನ್ನೇ “Weaponised Incompetence” ‘ಉದ್ದೇಶಪೂರ್ವಕವಾಗಿ ಅಸಮರ್ಥತೆಯನ್ನು ಅಸ್ತ್ರವಾಗಿ ಬಳಸುವುದು’ ಎಂದು ಕರೆಯಬಹುದು.

ಹ್ಯಾನ್ಲನ್‌ನ ನಿಯಮ (Hanlon’s Law) ಹೀಗೆ ಹೇಳುತ್ತದೆ: “ಒಬ್ಬರ ಅಜಾಗರೂಕತೆ, ತಪ್ಪು ಅಥವಾ ಅಸಮರ್ಥತೆಯಿಂದ ನಡೆದಿರಬಹುದಾದ ಸಂಗತಿಯನ್ನು, ಅವರು ಉದ್ದೇಶಪೂರ್ವಕವಾಗಿ ಕೆಟ್ಟದ್ದನ್ನು ಮಾಡಲು ಹೀಗೆ ಮಾಡಿದ್ದಾರೆ ಎಂದು ಭಾವಿಸಬೇಡಿ.” ಏಕೆಂದರೆ, ಹತ್ತರಲ್ಲಿ ಒಂಬತ್ತು ಬಾರಿ, ಯಾರಾದರೂ ನಿಮ್ಮನ್ನು ಗ್ರೂಪ್ ಚಾಟ್‌ಗೆ ಸೇರಿಸಲು ಮರೆತಿದ್ದರೆ ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ನಿಮಗೆ ಡಿಕ್ಕಿ ಹೊಡೆದಿದ್ದರೆ, ಅವರು ಅದನ್ನು ಬೇಕೆಂದೇ ಮಾಡಿರುವುದಿಲ್ಲ. ಅದು ಕೇವಲ ಮರೆವು, ಅಜಾಗರೂಕತೆ ಅಥವಾ ಆಕಸ್ಮಿಕವಾಗಿ ನಡೆದ ತಪ್ಪಾಗಿರುತ್ತದೆ.

ಆದರೆ ವಿಷಯ ಯಾವಾಗಲೂ ಇಷ್ಟು ಸರಳವಾಗಿರುವುದಿಲ್ಲ. ಏಕೆಂದರೆ ಗ್ರೇಸ್‌ನ ನಿಯಮ (Grey’s Law) ಎನ್ನುವ ಮತ್ತೊಂದು ನಿಯಮವೂ ಇದೆ. ಅದು ಹೀಗೆ ಹೇಳುತ್ತದೆ: “ಅಸಮರ್ಥತೆ ಒಂದು ನಿರ್ದಿಷ್ಟ ಮಟ್ಟವನ್ನು ಮೀರಿದಾಗ, ಅದು ದುರುದ್ದೇಶದಿಂದ ಮಾಡಿದ ಕೃತ್ಯಕ್ಕಿಂತ ಭಿನ್ನವಾಗಿ ಕಾಣುವುದಿಲ್ಲ.” ಹಾಗೆಂದರೆ, ಒಬ್ಬ ವ್ಯಕ್ತಿ ಬಹಳ ಕಾಲದಿಂದ ಅಸಮರ್ಥನಾಗಿಯೇ ಇದ್ದು, ತನ್ನ ಅಸಮರ್ಥತೆಯನ್ನು ಸರಿಪಡಿಸಿಕೊಳ್ಳಲು ಯಾವುದೇ ಪ್ರಯತ್ನವನ್ನೂ ಮಾಡದಿದ್ದರೆ, ಒಂದು ಹಂತದ ನಂತರ ಅವನ ಆ ಅಸಮರ್ಥತೆಯಿಂದ ಆಗುವ ಕೃತ್ಯಗಳು ಉದ್ದೇಶಪೂರ್ವಕವಾಗಿ ಹಾನಿ ಮಾಡಿದಂತೆಯೇ ಆಗುತ್ತವೆ.

ಏಕೆಂದರೆ, ನಿಮಗೆ ಯಾವುದೋ ಕೆಲಸದಲ್ಲಿ ನೀವು ಸಮರ್ಥರಲ್ಲ ಎನ್ನುವುದು ಗೊತ್ತಿದ್ದರೆ, ಅದಕ್ಕೆ ಬೇಕಾದ ತರಬೇತಿ ಪಡೆಯಬೇಕು ಅಥವಾ ಅದನ್ನು ಕಲಿತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕನಿಷ್ಠಪಕ್ಷ, ನಿಮ್ಮ ಅಸಮರ್ಥತೆಯಿಂದ ಇತರರಿಗೆ ಹಾನಿಯಾಗಬಹುದಾದ ಪರಿಸ್ಥಿತಿಯಿಂದ ದೂರವಿರಬೇಕು. ಉದಾಹರಣೆಗೆ, ನೀವು ಸರ್ಜನ್ ಆಗಲು ಯೋಗ್ಯರಲ್ಲ ಎನ್ನುವುದು ನಿಮಗೆ ಗೊತ್ತಿದ್ದರೆ, ನೀವು ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಬೇಕು.

ನಮ್ಮ ಜೀವನದಲ್ಲೂ ತಮ್ಮ ಅಸಮರ್ಥತೆಯನ್ನು ಉದ್ದೇಶಪೂರ್ವಕವಾಗಿ ಒಂದು ಅಸ್ತ್ರದಂತೆ ಬಳಸಿಕೊಂಡು, ಯಾವುದಾದರೂ ಕೆಲಸದಿಂದ ತಪ್ಪಿಸಿಕೊಳ್ಳುವ ಅಥವಾ ಆ ಕೆಲಸದ ಹೊರೆಯನ್ನು ಬೇರೆಯವರ ಮೇಲೆ ಹಾಕುವ ಜನರನ್ನು ನಾವೆಲ್ಲರೂ ನೋಡಿಯೇ ನೋಡಿರುತ್ತೇವೆ ಎನ್ನುವುದು ಖಂಡಿತ.
ಆದರೆ ಗ್ರೇಸ್‌ನ ನಿಯಮ (Grey’s Law) ಹೇಳುವುದೇನೆಂದರೆ, ಅಂತಹವರು ಈಗ ಕೇವಲ ಅಸಮರ್ಥರು ಮಾತ್ರವಲ್ಲ ; ಅವರು ನೈತಿಕವಾಗಿಯೂ ತಪ್ಪು ಮಾಡುತ್ತಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.