— ಓಶೋ ರಜನೀಶ್ । ಕನ್ನಡಕ್ಕೆ : ಚಿದಂಬರ ನರೇಂದ್ರ
ಸೂಫಿ ಸಂತ ಬಯಾಜಿದ್ ಕುರಿತಾದ ಒಂದು ಕಥೆಯಿದೆ.
ಒಮ್ಮೆ ಬಯಾಜಿದ್ ಒಂದು ಸ್ಮಶಾನದ ಮೂಲಕ ನಡೆದು ಹೋಗುತ್ತಿದ್ದ. ಅಲ್ಲಿ ತಲೆಬುರುಡೆಗಳ ಒಂದು ದೊಡ್ಡ ರಾಶಿ ಕಾಣಿಸಿತು. ಕುತೂಹಲದಿಂದ ಅವನು ಒಂದು ತಲೆಬುರುಡೆಯನ್ನು ಕೈಗೆತ್ತಿಕೊಂಡ. ಇದುವರೆಗೆ ಎಲ್ಲ ತಲೆಬುರುಡೆಗಳೂ ಒಂದೇ ರೀತಿಯಾಗಿರುತ್ತವೆ ಎಂದು ಅವನು ಭಾವಿಸಿದ್ದ. ಆದರೆ ಅದು ಹಾಗಿರಲಿಲ್ಲ. ಕೆಲವು ತಲೆಬುರುಡೆಗಳಲ್ಲಿ ಒಂದು ಕಿವಿಯಿಂದ ಮತ್ತೊಂದು ಕಿವಿಗೆ ಸಂಪರ್ಕವಿತ್ತು; ಅವುಗಳ ನಡುವೆ ಒಂದು ದಾರಿ ಇತ್ತು. ಇನ್ನೂ ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳ ನಡುವೆ ಯಾವುದೇ ಸಂಪರ್ಕ ಇರಲಿಲ್ಲ; ಅವುಗಳ ನಡುವೆ ಒಂದು ಗೋಡೆಯಂತಿರುವ ತಡೆ ಇತ್ತು. ಮತ್ತೆ ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳೂ ಪರಸ್ಪರ ಸಂಪರ್ಕ ಹೊಂದಿರಲಿಲ್ಲ; ಆದರೆ ಎರಡೂ ಕಿವಿಗಳಿಂದ ಹೃದಯದವರೆಗೆ ಒಂದು ದಾರಿ ಇತ್ತು. ಇದನ್ನು ಕಂಡು ಬಯಾಜಿದ್ ಗೆ ಬಹಳ ಆಶ್ಚರ್ಯವಾಯಿತು. ಅವನು ದೇವರನ್ನು ಪ್ರಾರ್ಥಿಸಿ ಕೇಳಿದ:
“ಭಗವಂತ , ಇದರ ಅರ್ಥವೇನು? ನೀನು ನನಗೆ ಏನನ್ನು ತಿಳಿಸಲು ಪ್ರಯತ್ನಿಸುತ್ತಿದ್ದೀ?”
ಆಗ ಒಂದು ದೈವಿಕ ಧ್ವನಿ ಕೇಳಿಸಿತು ಎಂದು ಹೇಳಲಾಗುತ್ತದೆ.
ಭಹವಂತ ಮಾತನಾಡಿದ:
“ಮನುಷ್ಯರಲ್ಲಿ ಮೂರು ಥರ .
ಮೊದಲನೆಯವರು, ಒಂದು ಕಿವಿಯಿಂದ ಕೇಳುತ್ತಾರೆ. ಆದರೆ ಅದು ಎಲ್ಲಿಗೂ ತಲುಪುವುದಿಲ್ಲ. ನಿಜವಾಗಿ ಅವರು ಕೇಳುವುದೇ ಇಲ್ಲ; ಶಬ್ದ ಮಾತ್ರ ಕಿವಿಯಲ್ಲಿ ಕಂಪಿಸಿ ಮಾಯವಾಗುತ್ತದೆ. ಎರಡನೆಯವರು, ಕೇಳುತ್ತಾರೆ, ಆದರೆ ಕ್ಷಣಮಾತ್ರ. ಒಂದು ಕಿವಿಯಿಂದ ಕೇಳಿದುದು ಮತ್ತೊಂದು ಕಿವಿಯಿಂದ ಹೊರಗೆ ಹೋಗಿಬಿಡುತ್ತದೆ. ಮೂರನೆಯವರು, ತುಂಬಾ ವಿರಳರು. ಅವರು ಕಿವಿಯಿಂದ ಕೇಳಿದ ಮಾತುಗಳನ್ನು ಹೃದಯದವರೆಗೆ ತಲುಪಿಸುತ್ತಾರೆ.”
ನಂತರ ಭಗವಂತ ಹೇಳಿದ :
“ಬಯಾಜಿದ್, ನಾನು ನಿನ್ನನ್ನು ಈ ತಲೆಬುರುಡೆಗಳ ರಾಶಿಯ ಬಳಿಗೆ ಕರೆತಂದಿರುವುದು ಒಂದು ಕಾರಣಕ್ಕಾಗಿ. ಮುಂದೆ ನೀನು ಜನರೊಂದಿಗೆ ಮಾತನಾಡುವಾಗ ಇದನ್ನು ನೆನಪಿನಲ್ಲಿಟ್ಟುಕೋ. ನಿನ್ನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳುವವರೊಂದಿಗೆ ಮಾತ್ರ ಮಾತನಾಡು. ಇಲ್ಲದಿದ್ದರೆ ನಿನ್ನ ಶಕ್ತಿಯನ್ನು ವ್ಯರ್ಥ ಮಾಡಬೇಡ, ನಿನ್ನ ಸಮಯವನ್ನೂ ವ್ಯರ್ಥ ಮಾಡಬೇಡ. ನಿನ್ನ ಜೀವನ ಅಮೂಲ್ಯವಾದುದು. ನೀನು ಲೋಕಕ್ಕೆ ಒಂದು ಸಂದೇಶವನ್ನು ತಲುಪಿಸಬೇಕಾಗಿದೆ.”

