ಅಂದುಕೊಂಡದ್ದೆಲ್ಲಾ ನಿಜವಲ್ಲ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.15

 ಚೆಲುವಾದ ಸೂರ್ಯಾಸ್ತ ನೋಡುತ್ತೀರಿ. ನೀವು ನೋಡುತ್ತಿರುವುದು ಸೂರ್ಯನನ್ನೇ ಎಂದು ದೃಢವಾಗಿ ಹೇಳಬಹುದು. ವಿಜ್ಞಾನಿಗಳಾದರೋ ನೀವು ನೋಡುತ್ತಿರುವ ಸೂರ್ಯನು ಎಂಟು ನಿಮಿಷದ ಹಿಂದೆ ಇದ್ದ ಸೂರ್ಯನ ಬಿಂಬ ಅನ್ನುತ್ತಾರೆ. ಸೂರ್ಯನ ಬೆಳಕು ಭೂಮಿಯ ಮೇಲಿರುವ ನಿಮ್ಮ ಕಣ್ಣಿಗೆ ಕಾಣಲು ಅಷ್ಟು ಸಮಯ ಬೇಕು. ಹಾಗೆಯೇ ನೀವೊಂದು ನಕ್ಷತ್ರವನ್ನು ನೋಡಿದಾಗ ಅದು ನಕ್ಷತ್ರವೇ ಆಗಿದ್ದರೂ ಅದು ಒಂದು, ಎರಡು, ಹತ್ತು ಸಾವಿರ, ಲಕ್ಷ ವರ್ಷಗಳ ಹಿಂದಿನದು ಅಗಿರಬಹುದು! ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.15: ಭಾವ-ಸಂಬಂಧ । ಅಂದುಕೊಂಡದ್ದೆಲ್ಲಾ ನಿಜವಲ್ಲ

ಒಬ್ಬಾತ ಬಹಳ ಕಾಲ ಮನೆಯಿಂದ ದೂರ ಇರಬೇಕಾಯಿತು. ಅವನು ಹೋಗುವ ಮೊದಲೇ ಅವನ ಹೆಂಡತಿ ಬಸುರಿಯಾಗಿದ್ದಳು. ಅವನಿಗದು ಗೊತ್ತಿರಲಿಲ್ಲ. ಅವನು ವಾಪಸು ಬರುವ ಹೊತ್ತಿಗೆ ಹೆಂಡತಿ ಗಂಡು ಮಗುವನ್ನು ಹೆತ್ತಿದ್ದಳು. ಅವನಿಗೆ ಆ ಪುಟ್ಟ ಕೂಸು ತನ್ನದಲ್ಲ, ನಮ್ಮ ಮನೆಗೆ ಆಗಾಗ ಬಂದು ಸಹಾಯ ಮಾಡುತಿದ್ದ ನೆರೆಮನೆಯಾತನ ಮಗು ಎಂಬ ಸಂಶಯ ಹುಟ್ಟಿತು. ಮಗುವಿನ ಮುಖದಲ್ಲಿ ನೆರೆಯಾತನ ಮುಖವೇ ಕಾಣುತಿತ್ತು. ಮಗುವಿನ ಬಗ್ಗೆ ದ್ವೇಷ ಹುಟ್ಟಿತು.

ಆಮೇಲೊಂದು ದಿನ ಆ ವ್ಯಕ್ತಿಯ ಮನೆಗೆ ಅವನ ಅಣ್ಣ, ದೂರದ ಊರಿನಲ್ಲಿದ್ದವನು, ಮೊದಲ ಬಾರಿಗೆ ಬಂದ. ತಮ್ಮನ ಮಗನನ್ನು ನೋಡಿದ ತಕ್ಷಣ, “ಇವನು ಪೂರಾ ನಿನ್ನ ಥರಾನೇ ಕಾಣ್ತಾನೆ, ನಿನ್ನದೇ ಅಚ್ಚು,” ಎಂದು ಮೆಚ್ಚಿಗೆಯ ಮಾತಾಡಿದ. ಅಣ್ಣ ಬಂದದ್ದು, ಅವನು ಹೇಳಿದ ಮಾತು ಇದೆಲ್ಲರಿಂದ ಅವನಲ್ಲಿ ಸಮಾಧಾನ ಸಂತೋಷ ತುಂಬಿದವು. ಮಗುವಿನ ತಂದೆಯ ಮನಸಿನಲ್ಲಿದ್ದ ಸಂಶಯ ತೊಲಗಿತು. ಆದರೂ ಹನ್ನೆರಡು ವರ್ಷ ಕಾಲ ಆ ವ್ಯಕ್ತಿ ತನ್ನ ತಪ್ಪು ತಿಳಿವಳಿಕೆಯಿಂದ ನರಳಿದ್ದ. ಅವನ ಹೆಂಡತಿಯೂ ಸಂಕಟಪಟ್ಟಿದ್ದಳು. ತಂದೆಯ ಮನಸಿನಲ್ಲಿದ್ದ ದ್ವೇಷದ ಕಾರಣದಿಂದ ಪುಟ್ಟ ಹುಡುಗ ಕೂಡ ಕಷ್ಟಪಡುತಿದ್ದ.

ಬಹಳಷ್ಟು ಸಲ ತಪ್ಪು ತಿಳಿವಳಿಕೆಗಳನ್ನು ನೆಚ್ಚಿಕೊಂಡೇ ಎಷ್ಟೋ ಕೆಲಸ ಮಾಡುತ್ತೇವೆ. ನಮ್ಮ ಗ್ರಹಿಕೆಗಳು ಎಷ್ಟೋ ಸಲ ಅನಿಸಿಕೆಗಳು ಮಾತ್ರ ಆಗಿರುತ್ತವೆ. ಅವನ್ನೆಲ್ಲ ನಿಜವೆಂದು ನಂಬಲಾಗದು. ಚೆಲುವಾದ ಸೂರ್ಯಾಸ್ತ ನೋಡುತ್ತೀರಿ. ನೀವು ನೋಡುತ್ತಿರುವುದು ಸೂರ್ಯನನ್ನೇ ಎಂದು ದೃಢವಾಗಿ ಹೇಳಬಹುದು. ವಿಜ್ಞಾನಿಗಳಾದರೋ ನೀವು ನೋಡುತ್ತಿರುವ ಸೂರ್ಯನು ಎಂಟು ನಿಮಿಷದ ಹಿಂದೆ ಇದ್ದ ಸೂರ್ಯನ ಬಿಂಬ ಅನ್ನುತ್ತಾರೆ. ಸೂರ್ಯನ ಬೆಳಕು ಭೂಮಿಯ ಮೇಲಿರುವ ನಿಮ್ಮ ಕಣ್ಣಿಗೆ ಕಾಣಲು ಅಷ್ಟು ಸಮಯ ಬೇಕು. ಹಾಗೆಯೇ ನೀವೊಂದು ನಕ್ಷತ್ರವನ್ನು ನೋಡಿದಾಗ ಅದು ನಕ್ಷತ್ರವೇ ಆಗಿದ್ದರೂ ಅದು ಒಂದು, ಎರಡು, ಹತ್ತು ಸಾವಿರ, ಲಕ್ಷ ವರ್ಷಗಳ ಹಿಂದಿನದು ಅಗಿರಬಹುದು.

ನಮ್ಮ ಗ್ರಹಿಕೆ, ಅನಿಸಿಕೆಗಳ ಬಗ್ಗೆ ಎಚ್ಚರ ತಪ್ಪಿದರೆ ಸಂಕಟ ಅನುಭವಿಸಬೇಕಾಗುತ್ತದೆ. ನಮ್ಮ ಕೋಣೆಯ ಗೋಡೆಯ ಮೇಲೆ “ನನಗೆ ಖಚಿತವಾಗಿ ಗೊತ್ತೇ?” ಎಂದು ಎದ್ದು ಕಾಣುವ  ಹಾಗೆ ಬರೆದುಕೊಳ್ಳುವುದು ಒಳ್ಳೆಯದು. “ಖಚಿತವಾಗಿದ್ದರೂ ಮತ್ತೊಮ್ಮೆ ಪರೀಕ್ಷಿಸಿ” ಎಂದು ಎಷ್ಟೋ ಆಸ್ಪತ್ರೆ, ಕ್ಲಿನಿಕ್ಕುಗಳಲ್ಲಿ ಬರೆದುಕೊಂಡಿರುತ್ತಾರೆ. ರೋಗವನ್ನು ಸಾಧ್ಯವಾದಷ್ಟೂ ಬೇಗ ಪತ್ತೆ ಮಾಡದಿದ್ದರೆ ವಾಸಿಮಾಡಲು ಬಹಳ ಕಷ್ಟವಾಗುತ್ತದೆ ಅನ್ನುವ ಎಚ್ಚರಿಕೆ ಅದು. ಡಾಕ್ಟರುಗಳ ಚಿಂತೆ ಕಾಯಿಲೆಯ ಪತ್ತೆಯ  ಬಗ್ಗೆಯೇ ಹೊರತು ಮನಸಿನಲ್ಲಿ ಮೂಡುವ ಅನಿಸಿಕೆಗಳ ಬಗ್ಗೆ ಅಲ್ಲ. 

“ಖಚಿತ ಅನಿಸಿದರೂ ಇನ್ನೊಮ್ಮೆ ಪರೀಕ್ಷಿಸಿ” ಎಂದು ನಾವೂ ಹೇಳಿಕೊಳ್ಳಬಹುದು. ನಮ್ಮ ಅನಿಸಿಕೆಗಳನ್ನು ಮಾತ್ರವೇ ನೆಚ್ಚಿಕೊಂಡು ನಮ್ಮ ಬದುಕು, ನಮ್ಮ ಪ್ರೀತಿ ಪಾತ್ರರ ಬದುಕು ನರಕ ಮಾಡಿಕೊಂಡಿದ್ದೇವೆ. ನಿಮ್ಮ ಅನಿಸಿಕೆಗಳು ಎಲ್ಲವೂ ನಿಜವೆಂದು ಖಚಿತವಾಗಿ ಹೇಳಬಲ್ಲಿರಾ?

ಎಷ್ಟೋ ಜನ ಅನಿಸಿಕೆಗಳನ್ನು ಆಧರಿಸಿದ ತಪ್ಪು ತಿಳಿವಳಿಕೆಗಳನ್ನು ನೆಚ್ಚಿ ಹತ್ತು, ಇಪ್ಪತ್ತು ವರ್ಷ ನರಳಿದ್ದಾರೆ. ಇಂಥವರು ನನಗೆ ಮೋಸ ಮಾಡಿದರು, ನನ್ನ ಕಂಡರೆ ಅವರಿಗೆ ಆಗಲ್ಲ ಅಂತೆಲ್ಲ ಅಂದುಕೊಳ್ಳುತ್ತೇವೆ. ಇಂಥವರು ಒಳ್ಳೆಯ ಉದ್ದೇಶದಿಂದಲೇ ಸುಳ್ಳು  ಹೇಳಿದರು, ಇನ್ನು ಯಾರಿಗೋ ನಮ್ಮ ಬಗ್ಗೆ ಇರುವುದು ಅಸಮಾಧಾನವೇ ಹೊರತು ದ್ವೇಷವಲ್ಲ ಅನ್ನುವುದು ಅರಿವಿಗೆ ಬರಲು ನಾವು ಬಿಡುವುದೇ ಇಲ್ಲ. ತಪ್ಪು ತಿಳಿವಳಿಕೆಗೆ ಬಲಿಯಾದವರು ತಾವು ನರಳುವುದು ಮಾತ್ರವಲ್ಲ, ಸುತ್ತಲೂ ಇರುವವರನ್ನೂ ನರಳಿಸುತ್ತಾರೆ.

ನಿಮ್ಮ ಸಿಟ್ಟು ನಿಮಗೆ ಸಂಕಟ ತರುತ್ತದೆ. ಸಂಕಟವಾದಾಗ ಹಿಂದೆ ನಡೆದದ್ದನ್ನೆಲ್ಲ ಮತ್ತೊಮ್ಮೆ ಆಳವಾಗಿ ಗಮನಿಸಿ ನೋಡಿ. ನಿಮ್ಮ ಅನಿಸಿಕೆಗಳನ್ನು ಪರೀಕ್ಷೆ ಮಾತಿಕೊಳ್ಳಿ. ತಪ್ಪು ತಿಳಿವಳಿಕೆಯನ್ನು ದೂರ ಮಾಡಿಕೊಳ್ಳಲು ನಿಮಗೆ ಸಾಧ್ಯವಾದರೆ ಅದರಿಂದ ಶಾಂತಿ, ಸಮಾಧಾನಗಳು ಮತ್ತೆ ದೊರೆಯುತ್ತವೆ. ನೀವು ದ್ವೇಷಿಸಿ ದೂರ ಇಟ್ಟವರನ್ನೂ ಪ್ರೀತಿಸಬಲ್ಲವರಾಗುತ್ತೀರಿ.

*

೧. ನಮ್ಮ ಮೈ, ಮನಸು, ಭಾವ, ತವಕಗಳೇ ಹೇಗೆ ನಿಜವನ್ನು ಕಾಣಲು ಅಡ್ಡಿಯಾಗಿ ನಿಲ್ಲುತ್ತವೆ ಎಂದು ಈ ಬಸವ ವಚನ ಹೇಳುವಂತಿದೆ.

ಕಾಯದ ಲಜ್ಜೆಯ ಕಲ್ಪಿತವ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಟ ಬತ್ತಲೆಯೆಂದರಿದು
ತವಕದ ಸ್ನೇಹ ವ್ಯವಹಾರಕ್ಕೆ ಹುಗದು
ಕೂಡಲಸಂಗಮದೇವಯ್ಯಾ

೨. ಕಾಮನೆ, ಕಲ್ಪನೆಗಳಿರದ ಸ್ವಯಂಭು ಎಂದರೆ ಕೂಡಲಸಂಗಮ ಮಾತ್ರವಲ್ಲ, ನಮ್ಮ ನಿಜತನವನ್ನು ಸ್ವಯಂ ನಾವೇ ನಿರ್ಮಿಸಿಕೊಳ್ಳಬಹುದು ಎಂದು ಬಸವ ವಚನ ಹೇಳುವಂತಿದೆ.

ಕಾಮ್ಯ ಕಲ್ಪಿತಂಗಳಿಲ್ಲದೆ

ನಿಮ್ಮಿಂದ ನೀವೆ ಸ್ವಯಂಭುವಾಗಿದ್ದಿರ[ಲ್ಲಾ],
ನಿಮ್ಮ ಪರಮಾನಂದದ ಪ್ರಭಾಪರಿಣಾಮದಲ್ಲಿ ಒಂದನಂತಕಾಲವಿದ್ದಿರಲ್ಲಾ
ನಿಮ್ಮಾದ್ಯಂತವ ನೀವೆ ಅರಿವುತಿದ್ದಿರಲ್ಲಾ
ನಿಮ್ಮ ಸ್ವಭಾವದುದಯವ ನೀವೆ ಬಲ್ಲಿರಿ

ಕೂಡಲಸಂಗಮದೇವಾ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.