ಸ್ವ-ಸಂಶಯ: ಬುದ್ಧಿವಂತಿಕೆಯ ಲಕ್ಷಣ!

ಬರ್ಟ್ರಾಂಡ್ ರಸೆಲ್ ಅವರ ಪ್ರಕಾರ, ಯಾವುದಾದರೂ ವಿಷಯದ ಬಗ್ಗೆ ನೀವು ನಿಜವಾಗಿಯೂ ಹೆಚ್ಚು ಹೆಚ್ಚು ತಿಳಿದುಕೊಂಡಂತೆ, ಅದರಲ್ಲಿರುವ ಸೂಕ್ಷ್ಮತೆಗಳು ನಿಮ್ಮ ಕಣ್ಣಿಗೆ ಬೀಳಲಾರಂಭಿಸುತ್ತವೆ. ಅದರಲ್ಲಿರುವ ವಿನಾಯಿತಿಗಳು, ಮಿತಿಗಳು, ಷರತ್ತುಗಳು, ಮತ್ತು ತಾವು ತಪ್ಪಾಗಿರಬಹುದಾದ ಸಾಧ್ಯತೆಗಳು ಸ್ಪಷ್ಟವಾಗಿ ಕಾಣಲು ಆರಂಭವಾಗುತ್ತವೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಿಮ್ಮನ್ನು ಯಾವಾಗಲೂ self doubt (ಸ್ವ ಸಂಶಯ) ಕಾಡುತ್ತಿರುತ್ತದೆಯಾದರೆ, ನೀವು ಮಾಡುವ ಪ್ರತಿಯೊಂದು ನಿರ್ಧಾರವನ್ನೂ ನೀವು ಮರುಪರಿಶೀಲಿಸುತ್ತಿರುತ್ತೀರಿ ಎಂದಾದರೆ, ನಿಮಗಾಗಿ ಒಂದು ಸಂತೋಷದ ಸುದ್ದಿ ಇದೆ. ಏಕೆಂದರೆ, ಇದೇ ನಿಮ್ಮಲ್ಲಿರುವ ಅತ್ಯಂತ ಬುದ್ಧಿವಂತಿಕೆಯ ಲಕ್ಷಣವಾಗಿರಬಹುದು. ಇದು ನಿಮ್ಮನ್ನು ನಿಜವಾದ ಜ್ಞಾನಿಯಾಗಿ ಮಾಡಬಹುದು.

1933ರಲ್ಲಿ ತತ್ವಜ್ಞಾನಿ ಬರ್ಟ್ರಾಂಡ್ ರಸೆಲ್ ಒಂದು ಕತ್ತಲೆಯ ಯುಗಕ್ಕೆ ಸಾಕ್ಷಿಯಾದರು. ಆ ಸಮಯದಲ್ಲಿ ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದಿದ್ದ ಮತ್ತು ಫ್ಯಾಸಿಸಂ (Fascism) ಯುರೋಪಿನಾದ್ಯಂತ ಜನಪ್ರಿಯವಾಗುತ್ತಿತ್ತು. ಆ ಸಂದರ್ಭದಲ್ಲಿ ರಸೆಲ್ ಹೀಗೆ ಹೇಳುತ್ತಾರೆ : “ ಮೂರ್ಖರು ಯಾವಾಗಲೂ ತಮ್ಮ ಬಗ್ಗೆ ಅಪಾರ ಆತ್ಮವಿಶ್ವಾಸ ಹೊಂದಿರುತ್ತಾರೆಯಾದರೆ ; ಬುದ್ಧಿವಂತರು ಮಾತ್ರ ಸದಾ ಸಂದೇಹಗಳಿಂದ ತುಂಬಿಕೊಂಡಿರುತ್ತಾರೆ.” ತಾನು ಎಲ್ಲವನ್ನೂ ತಿಳಿದಿದ್ದೇನೆ ಎಂದು ಅಚಲವಾದ ನಂಬಿಕೆ ಹೊಂದಿರುವವನು ಬಹುಶಃ ತಪ್ಪಾಗಿರಬಹುದು. ಆದರೆ ತನ್ನ ಆಲೋಚನೆಗಳನ್ನು ಪ್ರಶ್ನಿಸುವವನು, ತನ್ನ ನಿರ್ಧಾರಗಳನ್ನು ಮರುಪರಿಶೀಲಿಸುವವನು ಮತ್ತು ಸಂದೇಹಗಳನ್ನು ಹೊಂದಿರುವವನು ನಿಜವಾದ ಜ್ಞಾನವನ್ನು ಹುಡುಕುವ ದಾರಿಯಲ್ಲಿರುತ್ತಾನೆ.

ಬರ್ಟ್ರಾಂಡ್ ರಸೆಲ್ ಅವರ ಪ್ರಕಾರ, ಯಾವುದಾದರೂ ವಿಷಯದ ಬಗ್ಗೆ ನೀವು ನಿಜವಾಗಿಯೂ ಹೆಚ್ಚು ಹೆಚ್ಚು ತಿಳಿದುಕೊಂಡಂತೆ, ಅದರಲ್ಲಿರುವ ಸೂಕ್ಷ್ಮತೆಗಳು ನಿಮ್ಮ ಕಣ್ಣಿಗೆ ಬೀಳಲಾರಂಭಿಸುತ್ತವೆ. ಅದರಲ್ಲಿರುವ ವಿನಾಯಿತಿಗಳು, ಮಿತಿಗಳು, ಷರತ್ತುಗಳು, ಮತ್ತು ತಾವು ತಪ್ಪಾಗಿರಬಹುದಾದ ಸಾಧ್ಯತೆಗಳು ಸ್ಪಷ್ಟವಾಗಿ ಕಾಣಲು ಆರಂಭವಾಗುತ್ತವೆ.

ನಿಜವಾದ ಜ್ಞಾನ ಎಂದರೆ ಅಪರೂಪಕ್ಕೆ ಮಾತ್ರ ಸಂಪೂರ್ಣ ಖಚಿತತೆ. ಮುಂದೆ ಯಾವ ಪ್ರಶ್ನೆಗಳನ್ನು ಕೇಳಬೇಕು ಎನ್ನುವುದನ್ನು ತಿಳಿದುಕೊಳ್ಳುವ ಸಾಮರ್ಥ್ಯವೇ ಜ್ಞಾನ. ಆದರೆ ಅಜ್ಞಾನಿಯ ಸ್ಥಿತಿ ಇದಕ್ಕೆ ಸಂಪೂರ್ಣ ವಿರುದ್ಧ. ಅವನಿಗೆ ಇಂತಹ ಸಂಕೀರ್ಣತೆಗಳು ಕಾಣುವುದಿಲ್ಲ. ಏಕೆಂದರೆ, ಅವನ ಬಳಿ ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಬೇಕಾದ ವಿವರಗಳೇ ಇರುವುದಿಲ್ಲ. ಆದ್ದರಿಂದ, ಅಜ್ಞಾನಿಯ ದೃಷ್ಟಿಯಲ್ಲಿ ಈ ಜಗತ್ತು ತುಂಬಾ ಸರಳವೂ, ಸ್ಪಷ್ಟವೂ ಆಗಿ ಕಾಣುತ್ತದೆ. ಹೀಗಾಗಿ, ಅಜ್ಞಾನದ ಒಳಗಿನಿಂದ ನೋಡಿದಾಗ ಅದು ಆತ್ಮವಿಶ್ವಾಸದಂತೆ, ಅಚಲ ನಿಶ್ಚಿತತೆಯಂತೆ ಭಾಸವಾಗುತ್ತದೆ. ಇದೇ ಅಜ್ಞಾನದ ದೊಡ್ಡ ಮೋಸ.

ಸಮಸ್ಯೆಯೆಂದರೆ, ಆಧುನಿಕ ಜಗತ್ತು ಸರಿಯಾಗಿ ಇರುವುದಕ್ಕಿಂತ (being right) ಆತ್ಮವಿಶ್ವಾಸವನ್ನು (being confident) ಹೆಚ್ಚು ಪುರಸ್ಕರಿಸುತ್ತದೆ. ವಾದ-ವಿವಾದದಲ್ಲಿ, ಯಾವುದೇ ಸಂದೇಹವಿಲ್ಲದೆ ತನ್ನ ಮಾತನ್ನು ಗಟ್ಟಿಯಾಗಿ ಹೇಳುವ ವ್ಯಕ್ತಿ, ವಿಷಯದ ಎರಡೂ ಬದಿಗಳನ್ನು ಎಚ್ಚರಿಕೆಯಿಂದ ಪರಿಗಣಿಸುವ ವ್ಯಕ್ತಿಗಿಂತ ಹೆಚ್ಚು ಪರಿಣಿತನಂತೆ ಕಾಣುತ್ತಾನೆ. ಹೀಗಾಗಿ, ಮೂರ್ಖರು ಮತ್ತು ಮತಾಂಧರು ಮೈಕ್ ಮತ್ತು ವೇದಿಕೆಯನ್ನು ಪಡೆಯುತ್ತಾರೆ; ಅವರ ಧ್ವನಿಯೇ ಎಲ್ಲರಿಗೂ ಹೆಚ್ಚು ಕೇಳಿಸುತ್ತದೆ. ಆದರೆ ಆಳವಾಗಿ ಯೋಚಿಸುವವರು ಬದಿಗೆ ತಳ್ಳಲ್ಪಡುತ್ತಾರೆ, ಅವರ ಮಾತುಗಳು ಗದ್ದಲದಲ್ಲಿ ಮುಚ್ಚಿಹೋಗುತ್ತವೆ.

ಇದೇ ರೀತಿ, ಒಂದು ದೇಶವು ತನ್ನ ತಪ್ಪನ್ನು ಅರಿಯದೇ, ಹೆಮ್ಮೆ ಮತ್ತು ಗಟ್ಟಿಯಾದ ಘೋಷಣೆಗಳನ್ನು ನೆಚ್ಚಿಕೊಳ್ಳುತ್ತ , ವಿನಾಶದ ಅಂಚಿನತ್ತ ನಡೆದುಹೋಗಬಹುದು. ಜನರು, ಪ್ರಶ್ನಿಸುವ ಬುದ್ಧಿವಂತರಿಗಿಂತ, ಅಚಲ ಆತ್ಮವಿಶ್ವಾಸದಿಂದ ಮಾತನಾಡುವವರನ್ನೇ ಹೆಚ್ಚು ನಂಬಲು ಆರಂಭಿಸಿದಾಗ, ಸಮಾಜ ಮತ್ತು ರಾಷ್ಟ್ರ ಎರಡೂ ಅಪಾಯಕಾರಿ ದಿಕ್ಕಿನತ್ತ ಸಾಗುವ ಸಾಧ್ಯತೆ ಹೆಚ್ಚುತ್ತದೆ.

ತನ್ನ ಮಾತಿನ ಬಗ್ಗೆ ಅಚಲವಾದ ಆತ್ಮವಿಶ್ವಾಸ ಮತ್ತು ಸಂಪೂರ್ಣ ನಿಶ್ಚಿತತೆ ಹೊಂದಿರುವ ವ್ಯಕ್ತಿಯನ್ನು ನೀವು ಭೇಟಿಯಾದರೆ, ಅದನ್ನು ಗೌರವದ ಸಂಕೇತವೆಂದು ಭಾವಿಸಬೇಡಿ. ಬದಲಾಗಿ, ಅದನ್ನು ಒಂದು ಎಚ್ಚರಿಕೆಯ ಸಂಕೇತವೆಂದು ನೋಡಿ. ಮತ್ತೊಂದೆಡೆ, ಸಂದೇಹಗಳಿಂದ ಮತ್ತು ಅನಿಶ್ಚಿತತೆಗಳಿಂದ ತುಂಬಿರುವ ವ್ಯಕ್ತಿಯನ್ನು ನೀವು ಭೇಟಿಯಾದರೆ, ಅದನ್ನು ಮೆಚ್ಚಬೇಕಾದ ಗುಣವೆಂದು ಪರಿಗಣಿಸಿ. ಏಕೆಂದರೆ, ಸಂದೇಹವು ದೌರ್ಬಲ್ಯದ ಧ್ವನಿಯಲ್ಲ; ಅದು ಜ್ಞಾನದ ಧ್ವನಿಯಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.