ಎಚ್ಚರದ ಗಮನದ ಶಕ್ತಿಯ ಮೂಲಕ ನಾವು ಐಡಿಯಾಗಳ ಬೇರನ್ನು ಗುರುತಿಸಬಹುದು. ಯಾವ ಭಾವ, ಯಾವ ಆಸೆಯಿಂದ ಇಂಥ ಒಂದು ಐಡಿಯ ಹುಟ್ಟಿದೆ ಎಂದು ತಿಳಿಯಬಹುದು. ನಿಶ್ಚಲ ಗಮನದ ಮೂಲಕ ದೊರೆಯುವ ಒಳನೋಟವು ನಮ್ಮ ಮನಸಿನಲ್ಲಿ ಬಲವಾಗಿ ಬೇರು ಬಿಟ್ಟಿರುವ ವಸ್ತುವನ್ನು ಬಿಡಲು ಸಹಾಯವಾಗುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.16: ಭಾವ-ಸಂಬಂಧ । ಬಿಡುವುದು
“ಬಿಡುವುದು” ಅಂದರೆ ಏನನ್ನಾದರೂ ಬಿಡುವುದು, ಬಿಟ್ಟುಬಿಡುವುದು. ಏನಾದರೂ ಅಂದರೆ, ನಾವು ಮೂಡಿಸಿಕೊಂಡ ಕಲ್ಪನೆ, ನಾವೇ ಸೃಷ್ಟಿ ಮಾಡಿದ ಚಿತ್ರ, ಪದ್ಯ, ಕಥೆ, ನಾವೇ ಕಟ್ಟಿದ ಮನೆ, ನಾವೇ ರೂಪಿಸಿದ ಐಡಿಯಾ, ಭಾವ, ಮೂಡಿಸಿ ಬೆಳೆಸಿಕೊಂಡ ಬಯಕೆ, ಅಥವಾ ನಂಬಿಕೆ—ಹೀಗೆ.
ಯಾವುದೇ ಒಂದು ಐಡಿಯಾಕ್ಕೆ ಬಿಡಲಾಗದೆ ಗಂಟುಬಿದ್ದು ಬದುಕುವುದು ಕಿರಿಕಿರಿ, ಕಳವಳ, ದುಃಖಗಳನ್ನು ತರಬಹುದು. ಆಗ ನಾವು ಆ ಐಡಿಯಾವನ್ನು ಬಿಡಬೇಕು, ಅಲ್ಲವೇ? ಅದನ್ನು ಸುಮ್ಮನೆ ಬಿಡಬೇಕು ಅಂದುಕೊಂಡರೆ ಸಾಲದು. ಅದು ನಿಜ, ನಮ್ಮನ್ನು ಕಾಡುತಿದೆ ಎಂದು ಗುರುತಿಸಬೇಕು.
ಐಡಿಯಾದ ಸ್ವಭಾವವೇನು, ಅದು ಎಲ್ಲಿಂದ ಬಂದಿದ್ದು ಅನ್ನುವುದನ್ನು ಗಮನಿಸಿ ನೋಡಬೇಕು. ಯಾಕೆಂದರೆ ಐಡಿಯಾಗಳು ಭಾವನೆಗಳಿಂದ ಹುಟ್ಟುತ್ತವೆ. ನಮಗೆ ಆದ ಅನುಭವಗಳಿಂದ, ನಾವು ಕೇಳಿದ, ಕಂಡ ಸಂಗತಿಗಳಿಂದ ಹುಟ್ಟುತ್ತವೆ. ಎಚ್ಚರದ ಗಮನದ ಶಕ್ತಿಯ ಮೂಲಕ ನಾವು ಐಡಿಯಾಗಳ ಬೇರನ್ನು ಗುರುತಿಸಬಹುದು. ಯಾವ ಭಾವ, ಯಾವ ಆಸೆಯಿಂದ ಇಂಥ ಒಂದು ಐಡಿಯ ಹುಟ್ಟಿದೆ ಎಂದು ತಿಳಿಯಬಹುದು. ನಿಶ್ಚಲ ಗಮನದ ಮೂಲಕ ದೊರೆಯುವ ಒಳನೋಟವು ನಮ್ಮ ಮನಸಿನಲ್ಲಿ ಬಲವಾಗಿ ಬೇರು ಬಿಟ್ಟಿರುವ ವಸ್ತುವನ್ನು ಬಿಡಲು ಸಹಾಯವಾಗುತ್ತದೆ.
“ಸುಖ” ಅನ್ನುವುದರ ಒಂದು ಐಡಿಯಾ, ಯಾವುದರಿಂದ ಅಥವಾ ಏನು ಮಾಡಿದರೆ ನಿಮಗೆ ಸುಖದೊರೆಯುತ್ತದೆ ಅನ್ನುವ ಐಡಿಯಾ ನಿಮ್ಮಲ್ಲಿದೆ ಅಂದುಕೊಳ್ಳಿ. ಈ ಐಡಿಯಾ ಹತ್ತೋ ಇಪ್ಪತ್ತೋ ವರ್ಷಗಳಿಂದ ನಿಮ್ಮೊಳಗೆ ಬೆಳೆದಿರಬಹುದು. ಇಂಥದು ಸುಖವೆಂಬ ನಿಮ್ಮ ಐಡಿಯ ಇದೆಯಲ್ಲ ಅದೇ, ಸ್ವತಃ ಆ ಐಡಿಯ ನಿಮ್ಮ ನರಳಾಟಕ್ಕೆ ಕಾರಣವಾಗಿದೆ ಎಂದು ನಿಮಗೆ ಅರಿವಾಗಬಹುದು. ನಿಮ್ಮೊಳಗಿರುವ ಆ ಐಡಿಯಾದ ಬಗ್ಗೆ ಭ್ರಾಮಕತೆ-ಐಡಿಯಾ ನಿಜವಾದರೆ ಅನ್ನುವ ಚಿತ್ರಗಳು ಮೂಡುತ್ತವೆ; ಸಿಟ್ಟು-ಇಷ್ಟು ವರ್ಷದ ನಂತರವೂ ಬಯಸಿದ ಸುಖ ಸಿಗಲಿಲ್ಲವೆಂಬ ಸಿಟ್ಟು ಹುಟ್ಟುತ್ತದೆ; ಹಂಬಲ-ಏನೇ ಆಗಲಿ ನಾನು ಸುಖ ಅಂದುಕೊಂಡದ್ದನ್ನು ಅನುಭವಿಸಲೇಬೇಕು ಅನ್ನುವ ಹಾತೊರೆತಗಳು ಮೂಡುತ್ತದೆ. ಈ ಭಾವಗಳೇ ನಿಮ್ಮ ಸಂಕಟಕ್ಕೆ, ವೇದನೆಗೆ ಕಾರಣವಾಗುತ್ತವೆ.
ಹೀಗೆಯೇ ನಿಮ್ಮಲ್ಲಿ ಬೇರೆಯ ಭಾವಗಳೂ ಇರುತ್ತವೆ: ಸಂತೋಷದ ಕ್ಷಣ, ಬಿಡುಗಡೆಯ ಕ್ಷಣ, ನಿಜ ಪ್ರೀತಿಯ ಗಳಿಗೆ…ಹೀಗೆ. ಇವು ನಿಜವಾದ ಸಂತೋಷದ ಗಳಿಗೆಗಳು ಅನ್ನುವುದು ತಕ್ಷಣವೇ ನಿಮಗೆ ಹೊಳೆಯುತ್ತದೆ. ನಿಜವಾದ ಸಂತೋಷ ಕ್ಷಣ ಕಾಲ ದೊರೆತರೂ ಅದು ನೀವು ಹಂಬಲಿಸುವ, ಹಾತೊರೆಯುವ ಕಲ್ಪಿತ ಸುಖಕ್ಕಿಂತ ಬೇರೆ ಎಂಬುದು ಹೊಳೆಯುತ್ತದೆ. ಬರಿದೇ ಹಂಬಲಿಸುವ, ಹಾತೊರೆಯುವ ವಸ್ತುಗಳಿಂದ ನಮಗೆ ಸಂತೋಷ ದೊರೆಯದು ಅನ್ನುವ ಒಳನೋಟ ದೊರೆತಾಗ ಸಂತೋಷದ ಅಂಥ ಸುಳ್ಳು ಐಡಿಯಗಳನ್ನು ಬಿಡುವುದು ಸುಲಭವಾಗುತ್ತದೆ.
ಬಹಳಷ್ಟು ಜನರಿಗೆ ಏನೇನನ್ನೋ ಬಿಡುವ ಆಸೆ ಇರುತ್ತದೆ, ಆದರೂ ಬಿಡಲಾಗದು. ಯಾಕೆಂದರೆ ಅವರಿಗೆ ಒಳನೋಟ ಇನ್ನೂ ಸಿಕ್ಕಿರುವುದಿಲ್ಲ. ಸಂತೋಷದ ಐಡಿಯಾದ ಬದಲಾಗಿ ಮತ್ತೇನೂ ಅವರಿಗೆ ಕಾಣಿಸಿರುವುದಿಲ್ಲ, ಸಂತೋಷ, ಶಾಂತಿಯ ಇತರ ದಾರಿಗಳು ತಿಳಿದಿರುವುದಿಲ್ಲ.
ಭಯ ಇದಕ್ಕೆ ಕಾರಣ. ಏನನ್ನಾಗಲೀ ಬಿಡದಿರಲು ಭಯವೇ ಕಾರಣ. ಇದನ್ನು ಬಿಟ್ಟರೆ ನಂಬಿಕೆಯ ಬೇರೆ ಯಾವ ಅಸರೆ ಇದೆ ನನಗೆ ಎಂದು ತಿಳಿಯದಿರುವ ಭಯ ಅದು.
“ಬಿಡುವುದು” ಅದೊಂದು ಕಲೆ, ಅದೊಂದು ದೀರ್ಘವಾದ ಅನುಷ್ಠಾನ. ನಿಮ್ಮ ವೇದನೆ ಸಂಕಟಗಳಿಗೆ ಕಾರಣವಾಗಿರುವುದನ್ನೆಲ್ಲ ಬಿಡಬೇಕು ಅನ್ನುವ ದೃಢತೆ ದೊರೆತಾಗ ನಿಮ್ಮನ್ನು ಅಳಲಿಸುವ ಸಂಗತಿಗಳನ್ನೆಲ್ಲ ಬಿಡುತ್ತೀರಿ.
*
ಜಿಡ್ಡು ಕೃಷ್ಣಮೂರ್ತಿ ಹೇಳಿದ ಈ ಮಾತು ನೆನಪಾದವು:
ಮನಸು ಏನನ್ನು ಅರಸುತ್ತದೋ ಅದನ್ನೇ ಕಾಣುತ್ತದೆ. ಹಾಗೆ ಕಂಡದ್ದು ನಿಜವಲ್ಲ. [ದಿ ಫಸ್ಟ್ ಅಂಡ್ ಲಾಸ್ಟ್ ಫ್ರೀಡಂ]
ಸತ್ಯವೆಂಬುದು ಸುಳ್ಳು ಎಂಬುದರ ವಿರುದ್ಧವಲ್ಲ. ಯಾವುದಕ್ಕೆ ವಿರುದ್ಧವಾದದ್ದು ಇನ್ನೊಂದು ಇರುತ್ತದೋ ಅದು ಸತ್ಯವಲ್ಲ. [ಫ್ರೀಡಂ ಫ್ರಂ ದಿ ನೋನ್]
ಸುಳ್ಳಾದದ್ದು ಸುಳ್ಳು ಎಂದು ಕಾಣದಿದ್ದರೆ ಸತ್ಯ ಇರುವುದಿಲ್ಲ
ಸತ್ಯವನ್ನು ಅರಸುವುದೆಂದರೆ ಸತ್ಯವನ್ನು ನಿರಾಕರಿಸುವುದು. ಸತ್ಯ ಯಾವಾಗಲೂ ನಿಮ್ಮೆದುರೇ ಇರುತ್ತದೆ.
೨ ಆದಯ್ಯನವರ ವಚನವು ಕಾಮನೆ, ಕಲ್ಪನೆ, ಹೆಸರು, ಮಿತಿಗಳನ್ನು ತೊರೆದು ನಿಜವನ್ನು ಕಂಡದ್ದರ ವಿವರವನ್ನು ನೀಡುವಂತಿದೆ.
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ
ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ
ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ
ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ
ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ
ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿರ್ಲೇಪವಾದ
ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ

