ಕೀಳರಿಮೆ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.17

ನಮ್ಮನ್ನು ನಾವು ಕೀಳು ಅಂದುಕೊಳ್ಳಬಾರದು.ನಮಗೆ ಯೋಗ್ಯತೆ ಇಲ್ಲವೆಂದು ನಮಗೇ ಹೇಳಿಕೊಂಡು ಹಿನ್ನೆಲೆಗೆ ಸರಿಯಬಾರದು… ನಮ್ಮನ್ನು ಎಚ್ಚರಿಸುವ ಮಾತು ಇದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.17: ಭಾವ-ಸಂಬಂಧ । ಕೀಳರಿಮೆ

ನಾವು ಯಾವ ಕೆಲಸಕ್ಕೂ ಬಾರದವರು, ನಾವು ಬೇರೆಯವರ ಹಾಗೆ ಎಂದೂ ಗೆಲ್ಲುವವರಲ್ಲ—ಎಂದೆಲ್ಲ ಯೋಚನೆ ಮಾಡುವವರು ತುಂಬ ಜನ ಇದ್ದಾರೆ. ಅವರು ಸಂತೋವಾಗಿ ಇರಲಾರರು. ಉಳಿದವರು ಮಾಡಿರುವ ಸಾಧನೆ, ಅವರಿಗೆ ಸಮಾಜದಲ್ಲಿ ಸಿಗುವ ಮನ್ನಣೆ ಇವನ್ನೆಲ್ಲ ನೋಡುತ್ತಾ ತಮ್ಮನ್ನು ಅವರೊಡನೆ ಹೋಲಿಸಿಕೊಳ್ಳುತ್ತಾ “ನಾನು ಅವರ ಹಾಗೆ ಗೆಲ್ಲಲು ಸಾಧ್ಯವಿಲ್ಲ” ಅಂದುಕೊಳ್ಳುತ್ತಾರೆ.

ಹೀಗೆ ಭಾವಿಸುವವರಿಗೆ ನಾವು ಸಹಾಯ ಮಾಡಬೇಕು. “ನೀವು ಕೆಲಸಕ್ಕೆ ಬಾರದವರು ಅಂದುಕೊಳ್ಳಬೇಡಿ. ನಿಮ್ಮೊಳಗೆ ದೊಡ್ಡದನ್ನು ಸಾಧಿಸುವ, ಹೆಮ್ಮರವಾಗಿ ಬೆಳೆಯುವ ದೊಡ್ಡತನದ ಬಿತ್ತಗಳಿವೆ. ನಿಮ್ಮನ್ನೆ ನೀವು ನೋಡಿಕೊಳ್ಳುತ್ತ, ಆ ಒಳಿತಿನ ಬಿತ್ತಗಳನ್ನು ಸ್ಪರ್ಶಿಸುವುದಕ್ಕೆ ಸಾಧ್ಯವಾದರೆ ʻನಾನು ಅಯೋಗ್ಯʼ ಎಂಬ ಭಾವವನ್ನು ಮೀರಿ ನಿಮ್ಮ ನಿಜ ಸ್ವಭಾವವನ್ನು ತೋರಬಹುದು,” ಎಂದು ಹೇಳಬೇಕು.

ಚೀನೀಯರ ಗುರು Guishan (ಸಾಮಾನ್ಯಶಕೆ ೭೭೧) ಹೀಗೆ ಬರೆದಿದ್ದಾರೆ:

“ನಮ್ಮನ್ನು ನಾವು ಕೀಳು ಅಂದುಕೊಳ್ಳಬಾರದು.ನಮಗೆ ಯೋಗ್ಯತೆ ಇಲ್ಲವೆಂದು ನಮಗೇ ಹೇಳಿಕೊಂಡು ಹಿನ್ನೆಲೆಗೆ ಸರಿಯಬಾರದು.”

ನಮ್ಮನ್ನು ಎಚ್ಚರಿಸುವ ಮಾತು ಇದು. ಆಧುನಿಕ ಸಮಾಜದಲ್ಲಿ ಬಹಳ ಜನ ತಮ್ಮನ್ನು ತಾವು ಅಸಮರ್ಥರು, ಯೋಗ್ಯತೆ ಇಲ್ಲದವರು ಎಂದು ಹೇಳಿಕೊಳ್ಳುತ್ತ ವೇದನೆ ಪಡುತ್ತಿದ್ದಾರೆ ಎಂದು ಮನೋ ಚಿಕಿತ್ಸಕರು ಹೇಳುತ್ತಾರೆ. ಯಾವ ಯೋಗ್ಯತೆಯೂ ಇಲ್ಲದವರು, ಸಮಾಜಕ್ಕೆ ಏನನ್ನೂ ಕೊಡಲಾರದವರು ಅಂದುಕೊಳ್ಳುತ್ತ ಹತಾಶರಾಗುತ್ತಾರೆ. ತಮ್ಮ ಕುಟುಂಬನ್ನು ನೋಡಿಕೊಳ್ಳುವುದಿರಲಿ, ತಮ್ಮನ್ನೇ ತಾವು ನಿಭಾಯಿಸಲು ಆಗದೆ ಸೋತಂತೆ ಇರುತ್ತಾರೆ. ಇಂಥವರ ಸಮೀಪದಲ್ಲಿರುವ ಚಿಕಿತ್ಸರು, ವೈದ್ಯರು, ಸಮಾಲೋಚಕರು, ಧಾರ್ಮಿಕ ಮುಖಂಡರು, ಅಧ್ಯಾಪಕರು ಅವರಿಗೆ ಸಹಾಯ ಮಾಡಬೇಕು. ಅವರ ನಿಜ ಸ್ವಭಾವ ವ್ಯಕ್ತವಾಗುವ ಹಾಗೆ ನೆರವು ನೀಡಬೇಕು. ಅಯೋಗ್ಯರೆಂಬ ಭಾವನೆಯಿಂದ ಅವರನ್ನು ಹೊರತರುವುದು ಸ್ವಸ್ಥರಾಗಿರುವ ನಮ್ಮೆಲ್ಲರ ಕರ್ತವ್ಯ.

ನಮ್ಮ ಗೆಳೆಯರು, ಬಂಧುಗಳು ಅಥವಾ ಮನೆಯಲ್ಲಿರುವ ಸೋದರ ಸೋದರಿ, ಅಪ್ಪ, ಅಮ್ಮ, ಜೀವನ ಸಂಗಾತಿ ಯಾರೇ ಆಗಿರಲಿ ತಾವು ಅಯೋಗ್ಯರು, ಶಕ್ತಿ ಹೀನರು, ಒಳ್ಳೆಯದನ್ನು, ಅರ್ಥಪೂರ್ಣವಾದದ್ದನ್ನು ಏನನ್ನೂ ಮಾಡಲಾರೆವು ಅನ್ನುವ ಮಂಕು ಬಿಂಬವನ್ನು ಬೆಳೆಸಿಕೊಂಡವರು ಇದ್ದರೆ ಅವರ ಈ ಮನೋಭಾವ ಹೋಗಲಾಡಿಸುವುದು ನಮ್ಮ ಕೆಲಸ. ಹಾಗೆಯೇ ಅವರಲ್ಲಿರುವ ಅ-ಯೋಗ್ಯತೆಯ ಭಾವನೆಗೆ ಇಂಬುಕೊಡದ ಹಾಗೆ ವರ್ತಿಸುವುದೂ ನಾವು ಬೆಳೆಸಿಕೊಳ್ಳಬೇಕಾದ ಅಭ್ಯಾಸ. ನಮ್ಮ ದಿನದಿನದ ಬದುಕಿನಲ್ಲಿ ಅಸಹನೆ ಹುಟ್ಟಿದಾಗ, ಕಿರಿಕಿರಿಯಾದಾಗ ನಾವು ಕಠಿಣವಾದ ಮಾತು, ಟೀಕೆಯ ಮಾತು ಆಡಿಬಿಡುತ್ತೇವೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ಇದು ಹೆಚ್ಚು ನಿಜ.

ಇಂಥ ಮಾತಿನ ಒತ್ತಡಕ್ಕೆ ಗುರಿಯಾದ ಮಕ್ಕಳು ತಪ್ಪು ಮಾಡುತ್ತಾರೆ, ತಾವೂ ಕರುಣೆ ಇರದ, ನಿಂದಿಸುವ, ದೋಷಾರೋಪ ಮಾಡುವ ಮಾತುಗಳನ್ನು ಆಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಮಕ್ಕಳ ಪ್ರಜ್ಞೆ ಎಳೆಯಾಗಿ, ತಾಜಾ ಆಗಿರುತ್ತದೆ. ನಾವು ಕಠಿಣ, ನಿಂದನೆಯ ನುಡಿ ಬೀಜಗಳನ್ನು ಅವರಲ್ಲಿ ಬಿತ್ತಿದರೆ ಅವರಲ್ಲಿರುವ ಸಂತೋಷಪಡುವ ಸಾಮರ್ಥ್ಯವನ್ನೇ ನಾಶಮಾಡುತ್ತೇವೆ. ಹೆತ್ತವರು, ಪಾಠ ಹೇಳುವ ಅಧ್ಯಾಪಕರು, ಸೋದರ ಸೋದರಿಯರು, ಗೆಳೆಯರು ಎಲ್ಲರೂ ಕೂಡ ಎಳೆಯ ಮನಸುಗಳಲ್ಲಿ ಅ-ಯೋಗ್ಯತೆಯ ಬೀಜವನ್ನು ಬಿತ್ತುವ ಕೆಲಸ ಮಾಡದ ಹಾಗೆ ಗಮನದ ಎಚ್ಚರವನ್ನು ಬೆಳೆಸಿಕೊಳ್ಳಬೇಕು.

*

ಮೋಳಿಗೆ ಮಾರಯ್ಯನವರ ಈ ವಚನ ಎಲ್ಲರ ಮನಸಿನ ಕೂಗೂ ಇರಬಹುದು. ಸನ್ನದ್ಧರ ಇರುವಿಕೆ ಹೇಗೆ ಇರುತ್ತದೆ, ಇರಬೇಕು ಎಂದು ಹೇಳುವಂತಿದೆ.

ನಾ ತಪ್ಪಿ ನುಡಿದಡೆ ಒಪ್ಪವಿಟ್ಟುಕೊಳ್ಳಿರಣ್ಣಾ
ಕಣ್ಣಿನಲ್ಲಿ ಕಸ ಹೊಕ್ಕಡೆ ಕೈ ಹಗೆಯೆ ಅಯ್ಯಾ

ಇದು ಬಣ್ಣಗಾರಿಕೆಯಲ್ಲ

ಸನ್ನರ್ಧರಿರವು
ನಿಃಕಳಂಕ ಮಲ್ಲಿಕಾರ್ಜುನಾ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.