ಎರಡು ಬಾಣಗಳು : ಜೆನ್ ಕ್ಷಣ #10

 ಒಂದು ಸಂಬಂಧ ಮುರಿದರೆ ಅದರ ದುಃಖ ಮೊದಲ ಬಾಣ. ಆದರೆ “ನನ್ನ ಜೀವನವೇ ಮುಗಿಯಿತು, ನನಗೆ ಮತ್ತೆ ಸಂತೋಷ ಸಿಗುವುದಿಲ್ಲ” ಎಂದು ಭವಿಷ್ಯವನ್ನು ಆ ಘಟನೆಯ ಆಧಾರದ ಮೇಲೆ ನಿರ್ಧರಿಸುವುದು ಎರಡನೇ ಬಾಣ... । ಡಾ. ಸಹನಾ ಪ್ರಿಯದರ್ಶಿನಿ

ಒಬ್ಬ ಶಿಷ್ಯನು ತನ್ನ ಝೆನ್ ಗುರುಗಳ ಬಳಿಗೆ ಬಂದು ಕೇಳಿದನು,

ಗುರುಗಳೇ, ನನ್ನ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬರುತ್ತಲೇ ಇವೆ. ನನಗೆ  ಶಾಂತಿಯಿಂದ  ಬದುಕಲು  ಸಾಧ್ಯವಾಗುತ್ತಿಲ್ಲ.  ಏನು ಮಾಡಲಿ ?”

ಗುರುಗಳು  ಏನೂ ಉತ್ತರಿಸಲಿಲ್ಲ. ಅವರು ಶಿಷ್ಯನನ್ನು ಕಾಡಿನ ಕಡೆಗೆ ಕರೆದುಕೊಂಡು ಹೋದರು.

ಅಲ್ಲಿ ನೆಲದ ಮೇಲೆ ಬಿದ್ದಿದ್ದ ಒಂದು ಬಾಣವನ್ನು ತೋರಿಸಿ ಗುರು ಹೇಳಿದರು,

ಬಾಣ ನಿನ್ನನ್ನು ಚುಚ್ಚಿದರೆ  ನೋವಾಗುತ್ತದೆ. ಅದು ಜೀವನದಲ್ಲಿ ಅನಿವಾರ್ಯವಾಗಿ ಎದುರಾಗುವ ದುಃಖ, ನಷ್ಟ ಅಥವಾ ಕಷ್ಟದಂತೆ.”

ನಂತರ ಗುರುಗಳು   ಮತ್ತೊಂದು ಬಾಣವನ್ನು ಕೈಗೆತ್ತಿಕೊಂಡು ಹೇಳಿದರು,

ಆದರೆ ಮೊದಲ  ಬಾಣ ತಗುಲಿದ ನಂತರ, ‘ಏಕೆ ನನಗೇ ಹೀಗಾಯಿತು?’, ‘ನನ್ನ ಜೀವನವೇ ಹಾಳಾಯಿತು‘, ‘ಇದು ಯಾವಾಗ ಮುಗಿಯುತ್ತದೆ?’ ಎಂದು ಚಿಂತಿಸುತ್ತಾ ನೀನೇ ನಿನ್ನನ್ನು ಮತ್ತೆ ಮತ್ತೆ ನೋಯಿಸಿಕೊಳ್ಳುತ್ತೀಯಲ್ಲ, ಅದು ಎರಡನೇ ಬಾಣ.”

ಶಿಷ್ಯ ಆಶ್ಚರ್ಯದಿಂದ ಕೇಳಿದನು,

ಹಾಗಾದರೆ ಎರಡನೇ ಬಾಣದಿಂದ  ನಾನು ತಪ್ಪಿಸಿಕೊಳ್ಳಬಹುದೇ?”

ಗುರುಗಳು ಮಂದಹಾಸದಿಂದ ಹೇಳಿದರು,

ಹೌದು. ಮೊದಲ ಬಾಣವನ್ನು ತಪ್ಪಿಸಲು ಸಾಧ್ಯವಾಗದಿರಬಹುದು. ಆದರೆ ಎರಡನೇ ಬಾಣದಿಂದ  ತಪ್ಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.”

ಆ ದಿನದಿಂದ ಶಿಷ್ಯನು ಪ್ರತಿಯೊಂದು ಸಮಸ್ಯೆಯನ್ನು ಸಮಚಿತ್ತದಿಂದ ಎದುರಿಸಲು ಕಲಿತನು.

 ***                

ಜೀವನದಲ್ಲಿ ಎದುರಾಗುವ ನೋವುಗಳು  ಯಾವಾಗಲೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ; ಆದರೆ ಆ ನೋವಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಬಹುಮಟ್ಟಿಗೆ ನಮ್ಮ ಕೈಯಲ್ಲಿದೆ.

ಮೊದಲ ಬಾಣ ಎಂದರೆ ಜೀವನ ಸಹಜವಾಗಿ ನೀಡುವ ಕಷ್ಟಗಳು: ಅನಾರೋಗ್ಯ, ಸಂಬಂಧಗಳಲ್ಲಿ ಬಿರುಕು, ಆರ್ಥಿಕ ತೊಂದರೆ, ಸೋಲು, ನಿರಾಶೆ, ಪ್ರೀತಿಪಾತ್ರರ ಅಗಲಿಕೆ, ಕೆಲಸದ ಒತ್ತಡ, ಇತರರ ಟೀಕೆ ಅಥವಾ ಅನಿರೀಕ್ಷಿತ ಘಟನೆಗಳು. ಇವು ಸಂಭವಿಸಿದಾಗ ನೋವು, ದುಃಖ, ಕೋಪ ಅಥವಾ ಭಯ ಉಂಟಾಗುವುದು ಸಹಜ.

ಆದರೆ ಎರಡನೇ ಬಾಣವನ್ನು ಬಹುಸಾರಿ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ನಡೆದ ಘಟನೆಯನ್ನು ಮನಸ್ಸಿನಲ್ಲಿ ಮತ್ತೆ ಮತ್ತೆ ನೆನೆಪಿಸಿಕೊಳ್ಳುವುದು, ನನಗೇ ಯಾಕೆ ಹೀಗಾಗಬೇಕು?”, ಅವನು ಹಾಗೆ ಮಾಡಬಾರದಿತ್ತು, ನನ್ನ ಜೀವನದಲ್ಲಿ ಏನೂ ಸರಿಯಾಗುವುದಿಲ್ಲ, ಮುಂದೆಯೂ ಇದೇ ಆಗುತ್ತದೆ ಎಂದು ಯೋಚಿಸುತ್ತಾ ಮೊದಲ ನೋವಿನ ಮೇಲೆ ಮತ್ತಷ್ಟು ನೋವನ್ನು ಸೇರಿಸಿಕೊಳ್ಳುವುದು ಎರಡನೇ ಬಾಣ.

ಉದಾಹರಣೆಗೆ, ಯಾರಾದರೂ ನಮ್ಮನ್ನು ಅವಮಾನಿಸಿದರೆ ಅವರ ಮಾತು ಮೊದಲ ಬಾಣ. ಆದರೆ ಮನೆಗೆ ಬಂದ ನಂತರವೂ ಅದನ್ನೇ ನೆನೆದು, ಅವರ ಮೇಲೆ ಕೋಪ ಮಾಡಿಕೊಂಡು, ನಿದ್ರೆ ಕಳೆದುಕೊಂಡು, ಮರುದಿನವೂ ಮನಸ್ಸು ಕೆಡಿಸಿಕೊಂಡರೆ ಅದು ಎರಡನೇ ಬಾಣ.

ಪರೀಕ್ಷೆಯಲ್ಲಿ ವಿದ್ಯಾರ್ಥಿ ಕಡಿಮೆ ಅಂಕ ಪಡೆದರೆ ಅದು ಮೊದಲ ಬಾಣ. ನಾನು ಯಾವುದಕ್ಕೂ ಲಾಯಕ್ಕಿಲ್ಲ, ನನ್ನಿಂದ ಏನೂ ಸಾಧ್ಯವಿಲ್ಲ ಎಂದು ತನ್ನ ಸಾಮರ್ಥ್ಯವನ್ನೇ ಅನುಮಾನಿಸುವುದು ಎರಡನೇ ಬಾಣ.

ಒಂದು ಸಂಬಂಧ ಮುರಿದರೆ ಅದರ ದುಃಖ ಮೊದಲ ಬಾಣ. ಆದರೆ ನನ್ನ ಜೀವನವೇ ಮುಗಿಯಿತು, ನನಗೆ ಮತ್ತೆ ಸಂತೋಷ ಸಿಗುವುದಿಲ್ಲ ಎಂದು ಭವಿಷ್ಯವನ್ನು ಆ ಘಟನೆಯ ಆಧಾರದ ಮೇಲೆ ನಿರ್ಧರಿಸುವುದು ಎರಡನೇ ಬಾಣ.

ಇಲ್ಲಿ ಸಮಚಿತ್ತ ಎಂದರೆ ನೋವನ್ನು ನಿರಾಕರಿಸುವುದಲ್ಲ. ದುಃಖವಾದಾಗ ದುಃಖಿಸಬಹುದು; ಬೇಜಾರಾದಾಗ, ಕೋಪ ಬಂದಾಗ ಅದನ್ನು ಗುರುತಿಸಬಹುದು. ಆದರೆ ಆ ಭಾವನೆ ನಮ್ಮ ಜೀವನವನ್ನು ನಿಯಂತ್ರಿಸಲು ಬಿಡದೆ, ಇದು ಸಂಭವಿಸಿದೆ. ಈಗ ನಾನು ಏನು ಮಾಡಬಹುದು?” ಎಂದು ಯೋಚಿಸುವುದು ಸಮಚಿತ್ತ. ನಡೆದದ್ದನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ, ಅದನ್ನು ನಾವು ಹೇಗೆ ಹೊತ್ತುಕೊಂಡು ಮುಂದೆ ಸಾಗುತ್ತೇವೆ ಎಂಬುದನ್ನು ಬದಲಾಯಿಸಬಹುದು.

ಹೀಗಾಗಿ ಈ ಕಥೆಯ ಸರಳ ಜೀವನ ಪಾಠ:

ಮೊದಲ ಬಾಣ ಜೀವನದ್ದು; ಎರಡನೇ ಬಾಣ ನಮ್ಮ ಮನಸ್ಸಿನದು.
ಮೊದಲನೆಯದನ್ನು ಯಾವಾಗಲೂ ತಪ್ಪಿಸಲಾಗದು, ಎರಡನೆಯದನ್ನು ತಪ್ಪಿಸಲು ಕಲಿಯಬಹುದು. ಆದ್ದರಿಂದ ಜೀವನವು ಎಸೆಯುವ ಮೊದಲ ಬಾಣವನ್ನು ಸ್ವೀಕರಿಸಿ, ಎರಡನೇ ಬಾಣವನ್ನು ನಾವು ಸ್ವತಃ ಚುಚ್ಚಿಕೊಳ್ಳದಂತೆ ಎಚ್ಚರವಾಗಿರಬೇಕು.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.