ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಾವು ತಪ್ಪಾಗಿರುವವರನ್ನು ಅಷ್ಟು ಸುಲಭವಾಗಿ ಏಕೆ ಸಹಿಸಿಕೊಳ್ಳುತ್ತೇವೆ? ಉದ್ದೇಶಪೂರ್ವಕ ಅಜ್ಞಾನವನ್ನು, ಅಥವಾ ಹಠಮಾರಿತನವನ್ನು ಏಕೆ ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ? ನಾವು ಆಗಾಗ, “ಅದು ಅವರ ತಪ್ಪಲ್ಲ,” ಅಥವಾ “ಅವರನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ!” ಎಂದು ಹೇಳುತ್ತೇವೆ. ಆದರೆ ತತ್ವಜ್ಞಾನಿ Quassim Cassam ಅವರ ಪ್ರಕಾರ, ನಾವು ಈ ‘ಜ್ಞಾನಸಂಬಂಧಿ ದುರ್ಗುಣಗಳು’ (epistemic vices) ಎಂದು ಕರೆಯಲಾಗುವ ಸಂಗತಿಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು.
‘ದುರ್ಗುಣ’ (vice) ಎಂದರೆ ಸಾಮಾನ್ಯವಾಗಿ ವ್ಯಕ್ತಿತ್ವದ ಒಂದು ದೋಷ. ನಾವು ಇದನ್ನು ಹೆಚ್ಚಾಗಿ ನೈತಿಕ ದೃಷ್ಟಿಯಿಂದ ಅರ್ಥೈಸುತ್ತೇವೆ. ಉದಾಹರಣೆಗೆ, ಹೇಡಿತನ, ಕ್ರೌರ್ಯ ಮತ್ತು ಸ್ವಾರ್ಥ ಇವು ದುರ್ಗುಣಗಳಾಗಿವೆ. ಇಂತಹ ಗುಣಗಳನ್ನು ನಾವು ಖಂಡಿಸುತ್ತೇವೆ. “ಸ್ವಾರ್ಥಿಯಾಗಿರುವುದು ತಪ್ಪು,” ಎಂದು ಹೇಳುತ್ತೇವೆ. ಮಕ್ಕಳಿಗೆ “ಕ್ರೂರರಾಗಬಾರದು,” ಎಂದು ಕಲಿಸುತ್ತೇವೆ. ಇಂತಹ ನೈತಿಕ ದುರ್ಗುಣಗಳಿಗೆ ಸಮಾಜದಲ್ಲಿ ಬಹಿಷ್ಕಾರದ ಮೂಲಕವಾಗಲಿ ಅಥವಾ ಕಾನೂನು ವ್ಯವಸ್ಥೆಯ ಮೂಲಕವಾಗಲಿ ಶಿಕ್ಷೆ ವಿಧಿಸುತ್ತೇವೆ.
ಆದರೆ ಕಸ್ಸಾಮ್ ಅವರು ಒಂದು ಮಹತ್ವದ ಪ್ರಶ್ನೆಯನ್ನು ಕೇಳುತ್ತಾರೆ: ಜ್ಞಾನಸಂಬಂಧಿ ದುರ್ಗುಣಗಳ ವಿಷಯದಲ್ಲಿ ನಾವು ಇದೇ ರೀತಿಯ ನಿಲುವನ್ನು ಏಕೆ ತಳೆಯುವುದಿಲ್ಲ?
ಯಾರಾದರೂ ಉದ್ದೇಶಪೂರ್ವಕವಾಗಿ ಅಜ್ಞಾನಿಯಾಗಿದ್ದರೆ, ಅಂದರೆ ಅವರಿಗೆ ಸತ್ಯದ ಬಗ್ಗೆ ಆಸಕ್ತಿಯೇ ಇಲ್ಲ, ಅಥವಾ ಅವರು ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ ಇತ್ಯಾದಿ, ಅಂತಹವರನ್ನು ನಾವು ಏಕೆ ಪ್ರಶ್ನಿಸುವುದಿಲ್ಲ? ಹಠಮಾರಿ, ಅಹಂಕಾರಿ, ಅಥವಾ ತಮ್ಮ ನಂಬಿಕೆಗಳಿಗೆ ವಿರುದ್ಧವಾದ ಬೇರೆ ದೃಷ್ಟಿಕೋನಗಳನ್ನು ಪರಿಗಣಿಸಲು ಸಂಪೂರ್ಣವಾಗಿ ನಿರಾಕರಿಸುವ ಜನರನ್ನು ನಾವು ಏಕೆ ಖಂಡಿಸುವುದಿಲ್ಲ?
ಕಸ್ಸಾಮ್ ಅವರ ವಾದವೇನೆಂದರೆ, ಬೌದ್ಧಿಕ ದುರ್ಗುಣಗಳು (intellectual vices) ಬಹಳ ತಪ್ಪು. ಏಕೆಂದರೆ ಅವು ನಿಖರವಾದ ನಂಬಿಕೆಗಳ ಆಧಾರದ ಮೇಲೆ ಉತ್ತಮವಾದ ನೈಜ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅಡ್ಡಿಯಾಗುತ್ತವೆ.
ಇದಕ್ಕೆ ಉದಾಹರಣೆಯಾಗಿ ಅವರು, ಅಮೇರಿಕದ ಆಗಿನ ಅಧ್ಯಕ್ಷ ಬುಶ್ ಆಡಳಿತದ ಜ್ಞಾನಸಂಬಂಧಿ ಅಹಂಕಾರವನ್ನು (epistemic arrogance) ಉಲ್ಲೇಖಿಸುತ್ತಾರೆ. ಅವರ ಅಭಿಪ್ರಾಯದಲ್ಲಿ, ಇದೇ ಅಹಂಕಾರ, ಇರಾಕ್ ಮೇಲಿನ ಆಕ್ರಮಣದ ನಂತರ ಅಲ್ಲಿನ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾದ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.
ಅದೇ ರೀತಿ, ಪಿತೂರಿ ಸಿದ್ಧಾಂತಗಳನ್ನು (conspiracy theories) ನಂಬುವವರ closed-mindedness ಮತ್ತು wishful thinking ನಮ್ಮ ಸಮಾಜವನ್ನು ನೈಜ ಸಮಸ್ಯೆಗಳಿಗೆ ನೈಜ ಪರಿಹಾರಗಳನ್ನು ಕಂಡುಕೊಳ್ಳುವುದರಿಂದ ದೂರವಿಡುತ್ತವೆ ಎನ್ನುವುದು ಅವರ ನಂಬಿಕೆ.
ಕಸ್ಸಾಮ್ ಅವರ ದೃಷ್ಟಿಯಲ್ಲಿ, ಇಂತಹ ಬೌದ್ಧಿಕ ದುರ್ಗುಣಗಳನ್ನು ನಾವು ಕೇವಲ ನಕ್ಕು ಬಿಟ್ಟುಬಿಡಬಾರದು ಅಥವಾ ಅಲಕ್ಷಿಸಬಾರದು. ಬದಲಾಗಿ, ಇವುಗಳನ್ನು ಹೊಂದಿರುವವರನ್ನು ಹೊಣೆಗಾರರನ್ನಾಗಿಸಲು (accountable) ಪ್ರಯತ್ನಿಸಬೇಕು ಮತ್ತು ಅವರ ವರ್ತನೆಗೆ ಅವರು ಜವಾಬ್ದಾರರು (blameworthy) ಎಂದು ಹೇಳಬೇಕು.
ನಾವು ಹೀಗೆ ಮಾಡದಿದ್ದರೆ, ವಾಸ್ತವ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ ಈ ಜನರು ತೆಗೆದುಕೊಳ್ಳುವ ಅವಿವೇಕಿ, ಅಪಕ್ವ ಮತ್ತು ಮೂರ್ಖತನದ ನಿರ್ಧಾರಗಳ ದುಷ್ಪರಿಣಾಮಗಳನ್ನು ಅಂತಿಮವಾಗಿ ಇಡೀ ಸಮಾಜವೇ ಅನುಭವಿಸಬೇಕಾಗುತ್ತದೆ.

