ಪ್ರೀತಿಯ ಏಣಿಯ ಮೊದಲ ಕಂಬಿ, ನೀವು ಶಾರೀರಿಕ ಆಕರ್ಷಣೆಯ ಕಾರಣವಾಗಿ ಒಬ್ಬ ವ್ಯಕ್ತಿಯನ್ನು ಮೊದಲು ಇಷ್ಟಪಡಲು ಶುರು ಮಾಡುತ್ತೀರಿ. ಪ್ಲೇಟೋನ ಪ್ರಕಾರ ಇದು ತಪ್ಪಲ್ಲ. ಅವನು ಇದನ್ನು ಒಂದು ಬಾಗಿಲು ಎಂದು ಗುರುತಿಸುತ್ತಾನೆ… । ಚಿದಂಬರ ನರೇಂದ್ರ
ಪ್ಲೇಟೊನಿಕ್ ಲವ್, ಹಾಗೆಂದರೇನು? ಬಹಳಷ್ಟು ಜನರಿಗೆ ಈ ಪದದ ಸರಿಯಾದ ಅರ್ಥವೇ ಗೊತ್ತಿಲ್ಲ. ನಾವು ಕೇವಲ ಗೆಳೆಯರು, ನಮ್ಮ ನಡುವೆ ಯಾವ ಶಾರೀರಿಕ ವಾಂಛೆಯೂ ಇಲ್ಲ ಎನ್ನುವುದನ್ನ ಹೇಳುವುದಕ್ಕಾಗಿ ಬಹುತೇಕರು ಈ ಪದವನ್ನು ಬಳಸುತ್ತಾರೆ. ಆದರೆ ಪ್ಲೇಟೋ ತನ್ನ Symposium ಪುಸ್ತಕದಲ್ಲಿ ಈ ಪದಕ್ಕೆ ಕೊಟ್ಟಿರುವ ಅರ್ಥ ನಮ್ಮ ಸಾಮಾನ್ಯ ತಿಳುವಳಿಕೆಗೆ ವಿಪರೀತವಾದದ್ದು. ಆ ಪುಸ್ತಕದಲ್ಲಿ ಸಾಕ್ರೆಟಿಸ್ ಹೇಳುವ ಪ್ರಕಾರ ಈ ಪದವನ್ನು ಅವನು ಡೈಯೊಟಿಮಾ ಎನ್ನುವ ಹೆಣ್ಣಿನಿಂದ ಕಲಿಯುತ್ತಾನೆ. ಆಕೆ ಪ್ರೀತಿಯ ಏಣಿಯ (Ladder of love) ಉದಾಹರಣೆಯ ಮೂಲಕ ಸಾಕ್ರೆಟಿಸ್ ಗೆ ಪ್ಲೇಟೊನಿಕ್ ಪದದ ಅರ್ಥವನ್ನು ವಿವರಿಸುತ್ತಾಳೆ.
ಪ್ರೀತಿಯ ಏಣಿಯ ಮೊದಲ ಕಂಬಿ, ನೀವು ಶಾರೀರಿಕ ಆಕರ್ಷಣೆಯ ಕಾರಣವಾಗಿ ಒಬ್ಬ ವ್ಯಕ್ತಿಯನ್ನು ಮೊದಲು ಇಷ್ಟಪಡಲು ಶುರು ಮಾಡುತ್ತೀರಿ. ಪ್ಲೇಟೋನ ಪ್ರಕಾರ ಇದು ತಪ್ಪಲ್ಲ. ಅವನು ಇದನ್ನು ಒಂದು ಬಾಗಿಲು ಎಂದು ಗುರುತಿಸುತ್ತಾನೆ. ಈ ಬಾಗಿಲ ಮೂಲಕ ಹಾಯದೇ ನೀವು ಏಣಿಯ ಬಾಕಿ ಮೆಟ್ಟಿಲುಗಳನ್ನು ಏರುವುದು ಸಾಧ್ಯವಾಗುವುದಿಲ್ಲ. ಆಮೇಲೆ ನಿಮಗೆ ಗೊತ್ತಾಗುತ್ತದೆ ಆ ವ್ಯಕ್ತಿಯ ಶರೀರದ ಮೂಲಕ ನೀವು ಕಂಡ ಚೆಲುವು ಬೇರೆ ಕಡೆಯೂ ಇದೆ, ಇನ್ನೊಬ್ಬರ ಶರೀರದಲ್ಲಿ, ಇನ್ನೊಬ್ಬರ ದನಿಯಲ್ಲಿಯೂ ಇದೆ ಎನ್ನುವುದು. ಆಗಲೇ ನೀವು ಆ ಶರೀರದ ಗುಲಾಮಗಿರಿಯಿಂದ ಹೊರಗೆ ಬರುತ್ತೀರಿ. ಇದುವೇ love of ladder ನ ಎರಡನೇ ಕಂಬಿ. ಏಣಿಯ ಮೂರನೇ ಕಂಬಿ ಯಾವುದೆಂದರೆ ನಿಮಗೆ ಗೊತ್ತಾಗುವುದು, ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಶರೀರ ಆ ವ್ಯಕ್ತಿಯ ಅತ್ಯಂತ ಕಡಿಮೆ ಕುತೂಹಲಕರ ಸಂಗತಿಗಳಲ್ಲಿ ಒಂದು ಎನ್ನುವುದು. ಆಗ ನೀವು ಆ ವ್ಯಕ್ತಿಯ ಆಲೋಚನೆ, ಧೈರ್ಯ, ಸ್ವಭಾವಗಳನ್ನು ಪ್ರೀತಿಸಲು ಶುರು ಮಾಡುತ್ತೀರಿ. ಮತ್ತು ನಾಲ್ಕನೇಯ ಕಂಬಿ ಏರುವಾಗ ನೀವು ಆ ವ್ಯಕ್ತಿಯನ್ನೂ ದಾಟಿ ಹೋಗುತ್ತೀರಿ. ಆಗ ನಿಮಗೆ ಆ ವ್ಯಕ್ತಿಯ ಐಡಿಯಾಗಳು, ಕಲೆ, ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಲು ಶುರುವಾಗುತ್ತದೆ. ಆಗ ನಿಮಗೆ ಯಾವುದು, ಯಾವುದೇ ವ್ಯಕ್ತಿಯನ್ನು ಅವಲಂಬಿಸಿರುವುದಿಲ್ಲವೋ ಆ ಸತ್ಯದೊಂದಿಗೆ ಪ್ರೀತಿ ಶುರುವಾಗುತ್ತದೆ. ಕೊನೆಯ ಕಂಬಿಯನ್ನು ತಲುಪಿದಾಗ ನಿಮಗೆ, ಪ್ರತೀ ಸುಂದರ ವಿಷಯವನ್ನು ಸುಂದರಗೊಳಿಸುವ ಸಂಗತಿ ಕಾಣಿಸಲು ಶುರುವಾಗುತ್ತದೆ. ಯಾವುದು ಹುಟ್ಟುವುದಿಲ್ಲವೋ ಯಾವುದು ಸಾಯುವುದಿಲ್ಲವೋ, ಯಾವುದಕ್ಕೆ ಯಾವ ಶರೀರ, ಯಾವ ಹೆಸರು, ಯಾವ ಸಂಬಂಧದ ಅವಶ್ಯಕತೆಯಿಲ್ಲವೋ ಅಂಥ ಸತ್ಯದ ದರ್ಶನ ನಿಮಗಾಗುತ್ತದೆ.
ಆದ್ದರಿಂದ ಪ್ಲೆಟೊನಿಕ್ ಎನ್ನುವುದು ಸಾಮಾನ್ಯ ಸಂಗತಿಯಲ್ಲ. ಇದು ಮನುಷ್ಯ ಪ್ರೀತಿಯ ಅತ್ಯಂತ ದುರ್ಗಮ ಪ್ರಯಾಣವಾಗಿದೆ. ಆದರೆ ಇಲ್ಲೊಂದು ಬಿಕ್ಕಟ್ಟು ಇದೆ. ಯಾವಾಗ ನೀವು love of ladder ನ ತುದಿಯನ್ನು ತಲುಪುತ್ತೀರೋ ಆಗ, ಅಂಥದೊಂದು ಕ್ಷಣ ಎದುರಾಗುತ್ತದೆ, ಈಗ ನೀವು ಚೆಲುವನ್ನು ಪ್ರೀತಿಸುತ್ತೀರಿ ನಿಜ ಆದರೆ ಒಬ್ಬ ವ್ಯಕ್ತಿಯನ್ನು ಮಾತ್ರ ಪ್ರೀತಿಸುವುದನ್ನು ನಿಲ್ಲಿಸಿಬಿಡುತ್ತೀರಿ. ಹಾಗೆಂದರೆ ನೀವು ಎಲ್ಲರನ್ನೂ ಪ್ರೀತಿಸಲು ಶುರು ಮಾಡುತ್ತೀರಿ ಅಥವಾ ಯಾರನ್ನೂ ಪ್ರೀತಿಸುವುದಿಲ್ಲ. ನಿಮ್ಮ ಉದ್ದೇಶ ಈ ತುದಿಯನ್ನು ತಲುಪುವುದು ಆಗಿರದೇ ಇದ್ದರೂ , ಮೊದಲ ಕಂಬಿಯ ಮೇಲೆಯೇ ಸಿಕ್ಕಿ ಹಾಕಿಕೊಳ್ಳುವುದು ಮಾತ್ರ ಆಗಿರಬಾರದು. ಬಹಳಷ್ಟು ಜನರು ಈ ತಪ್ಪನ್ನು ಮಾಡುತ್ತಾರೆ, ಅವರು ಒಬ್ಬ ವ್ಯಕ್ತಿಯ ಶಾರೀರಿಕ ಚೆಲುವಿನ ಕಾರಣಕ್ಕೆ ಪ್ರೀತಿಸುತ್ತ ಅಲ್ಲಿಯೇ ಉಳಿದುಬಿಡುತ್ತಾರೆ.

