ಒಳಗೊಳ್ಳುವ ಉದ್ದೇಶ ನಮಗಿದ್ದಾಗ “ನೀವು ಆರಾಮವಾಗಿರುವುದಕ್ಕೆ ಏನು ಸಹಾಯಮಾಡಲಿ?” ಎಂದು ಕೇಳುವುದು ಸುಲಭವಾಗುತ್ತದೆ. ಅವರ ಶಾಂತಿ, ರಕ್ಷಣೆಗಳ ಬಗ್ಗೆ ನಮಗೆ ಆಸಕ್ತಿ ಇದೆ, ಅವರು ತಮ್ಮ ಪಾಡಿಗೆ ಇರಲು ಸಾಧ್ಯವಾಗಬೇಕು ಅನ್ನುವುದು ನಮ್ಮ ಉದ್ದೇಶವೆಂದಾದಗ ಸಂಘರ್ಷದ ಪರಿಸ್ಥಿತಿ ಬಲು ಬೇಗನೆ ಬದಲಾಗುತ್ತದೆ, ಹಾಗೆ ಬದಲಾಗಲು ಮೊದಲ ಹೆಜ್ಜೆಯಾಗಿ ನಮ್ಮ ಹೃದಯದಲ್ಲಿ ಬದಲಾವಣೆ ಆಗಿರಬೇಕು, ಇನ್ನೊಂದು ಹಣೆಪಟ್ಟಿ ಹೊತ್ತವರನ್ನು ಒಳಗೊಳ್ಳುವಂತೆ ನಿಮ್ಮ ಹೃದಯದ ಬಾಗಿಲು ತೆರೆಯಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.8 : ಶಾಂತಿ । ಒಳಗೊಳ್ಳುವುದು-ಸ್ವೀಕಾರ
ನಮ್ಮ ಹೃದಯ ಎಷ್ಟು ವಿಶಾಲವಾಗಿದೆ? ದಿನ ದಿನವೂ ನನ್ನ ಹೃದಯವನ್ನು ಹೇಗೆ ಹಿಗ್ಗಿಸಿಕೊಳ್ಳಲಿ? ಈ ಪ್ರಶ್ನೆಗಳನ್ನು ನಾವು ಒಬ್ಬೊಬ್ಬರೂ ಕೇಳಿಕೊಳ್ಳಬೇಕು. ಬದುಕನ್ನು ಸಾಧ್ಯವಾದಷ್ಟೂ ಒಳಗೊಳ್ಳುವ ಕೆಲಸಕ್ಕೆ ಅರಿವು, ಕರುಣೆ, ಪ್ರೀತಿಗಳೇ ಬುನಾದಿ. ಗಹನವಾಗಿ ನೋಡುವ ಅಭ್ಯಾಸ ಬೆಳೆದ ಹಾಗೆ ನಿಮ್ಮ ಹೃದಯದಲ್ಲಿ ಕರುಣೆಯ ಅಮೃತ ಸಹಜವಾಗಿಯೇ ಉಕ್ಕುತ್ತದೆ. ಮೈತ್ರಿ, ಪ್ರೀತಿ, ಕರುಣೆ, ಸಹಾನುಭೂತಿ, ಇವೆಲ್ಲವೂ ಕೊನೆಯಿರದೆ ಬೆಳೆಯುತ್ತಲೇ ಇರುತ್ತವೆ. ಅರಿವು ಮತ್ತು ಪ್ರೀತಿ ಇರುವಾಗ ನೀವು ಏನನ್ನು ಬೇಕಾದರೂ ಯಾರನ್ನು ಬೇಕಾದರೂ ಎಲ್ಲವನ್ನೂ ಬೇಕಾದರೂ ಒಪ್ಪಿ ಒಳಗೊಳ್ಳಬಹುದು.
ನಮ್ಮೊಳಗೆ ಶಾಂತಿ-ಸಮಾಧಾನಗಳಿರುವಾಗ ನಮ್ಮದಲ್ಲದ, ನಮಗಿರುವುದಕ್ಕಿಂತ ಬೇರೆಯದಾದ ನಂಬಿಕೆ, ವಿಶ್ವಾಸಗಳಿರುವ ಜನರೊಡನೆ ಇರುವ ಸಂಘರ್ಷವು ಇಲ್ಲವಾಗುತ್ತದೆ. ನಮ್ಮದಲ್ಲದ ಬೇರೆಯ ಗುಂಪಿಗೆ ಸೇರಿದವರನ್ನು ನಾಶಮಾಡುವ, ನಮ್ಮ ಸಮಾಜದಿಂದಲೇ ಇಲ್ಲದಂತೆ ಮಾಡುವ ಉದ್ದೇಶದಿಂದಲು ನಾವು ಪ್ರಚೋದನೆ ಪಡೆಯಬಹುದು, ಆಳವಾಗಿ ನೋಡಿದಾಗಷ್ಟೇ ಆ ಬೇರೆಯವರೂ ನಮ್ಮ ಹಾಗೇ ನೋವು ತಿಂದಿದ್ದಾರೆ, ಸಂಕಟಪಟ್ಟಿದ್ದಾರೆ ಅನ್ನವುದು ತಿಳಿಯುತ್ತದೆ. ನಮ್ಮದಲ್ಲದ ಗುಂಪಿನವರು ಕೂಡ ನಮ್ಮಷ್ಟೇ ಚೆನ್ನಾಗಿ ಬದುಕುವ ಅವಕಾಶ ಮಾಡಿಕೊಟ್ಟಾಗ ಮಾತ್ರವೇ ನಾವು ಶಾಂತಿ, ಸುರಕ್ಷೆ, ನೆಮ್ಮದಿಯ ಬಾಳಿನ ಅವಕಾಶ ಪಡೆಯುತ್ತೇವೆ. ನಮ್ಮದಲ್ಲದ ಗುಂಪಿಗೆ ಸೇರಿದವರನ್ನು ಹೊರಗಿಡದೆ, ಬಹಿಷ್ಕರಿಸದೆ, ಒಳಗೊಳ್ಳುವುದಕ್ಕೆ, ಸ್ವೀಕರಿಸುವುದಕ್ಕೆ, ನಮ್ಮವರಾಗಿಸಿಕೊಳ್ಳುವುದಕ್ಕೆ ಸಾಧ್ಯವಾದರೆ, ನಮಗೆ ಅಂಥ ಉದ್ದೇಶವಿದ್ದರೆ ಶಾಂತಿ, ಸುರಕ್ಷತೆಗಳು ಬೆಳೆಯುತ್ತವೆ.
ಒಳಗೊಳ್ಳುವ ಉದ್ದೇಶ ನಮಗಿದ್ದಾಗ “ನೀವು ಆರಾಮವಾಗಿರುವುದಕ್ಕೆ ಏನು ಸಹಾಯಮಾಡಲಿ?” ಎಂದು ಕೇಳುವುದು ಸುಲಭವಾಗುತ್ತದೆ. ಅವರ ಶಾಂತಿ, ರಕ್ಷಣೆಗಳ ಬಗ್ಗೆ ನಮಗೆ ಆಸಕ್ತಿ ಇದೆ, ಅವರು ತಮ್ಮ ಪಾಡಿಗೆ ಇರಲು ಸಾಧ್ಯವಾಗಬೇಕು ಅನ್ನುವುದು ನಮ್ಮ ಉದ್ದೇಶವೆಂದಾದಗ ಸಂಘರ್ಷದ ಪರಿಸ್ಥಿತಿ ಬಲು ಬೇಗನೆ ಬದಲಾಗುತ್ತದೆ, ಹಾಗೆ ಬದಲಾಗಲು ಮೊದಲ ಹೆಜ್ಜೆಯಾಗಿ ನಮ್ಮ ಹೃದಯದಲ್ಲಿ ಬದಲಾವಣೆ ಆಗಿರಬೇಕು, ಇನ್ನೊಂದು ಹಣೆಪಟ್ಟಿ ಹೊತ್ತವರನ್ನು ಒಳಗೊಳ್ಳುವಂತೆ ನಿಮ್ಮ ಹೃದಯದ ಬಾಗಿಲು ತೆರೆಯಬೇಕು.
ಸಂಘರ್ಷಗಳಲ್ಲಿ ಸಿಲುಕಿರುವ ಸಮಾಜಗಳು, ದೇಶಗಳು “ಪರಸ್ಪರ ಒಳಗೊಳ್ಳುವ” ಅಭ್ಯಾಸವನ್ನು ಕಲಿಯಬೇಕು. ಆಗ ಮಾತ್ರ ಶಾಂತಿಯ ಸಹಜೀವನ ಸಾಧ್ಯವಾಗುತ್ತದೆ. ನಮ್ಮದಲ್ಲದ ಗುಂಪಿಗೆ ಕೂಡ ಬದುಕುವ ಜಾಗವಿರಬೇಕು, ರಕ್ಷಣೆ ಇರಬೇಕು, ಸ್ಥಿರವಾದ ಬದುಕಿನ ಅವಕಾಶವಿರಬೇಕು, ಶಾಂತವಾಗಿ ಬದುಕುತ್ತ ಅವರ ಸಮಾಜವೂ ಏಳಿಗೆ ಹೊಂದಬೇಕು ಅನ್ನುವುದನ್ನು ನಮ್ಮ ಗುಂಪಿನವರು ಒಪ್ಪಲು ಸಿದ್ಧವಾಗಿದ್ದೇವೆಯೇ? ನಮ್ಮದೇ ನೋವು ಸಂಕಟಗಳನ್ನು ಅರಿಯಲು ಸಾಧ್ಯವಾದರೆ ಬೇರೊಂದು ಗುಂಪಿನ ಜನರ ನೋವು, ಸಂಕಟಗಳನ್ನೂ ನಾವು ಅರಿಯಬಹುದು. ಇನ್ನೊಂದು ಗುಂಪಿನಲ್ಲಿ ಶಾಂತಿ, ಸಮಾಧಾನ, ಸುರಕ್ಷತೆ ಇರದಿದ್ದರೆ ನಾವು ಕೂಡ ಶಾಂತಿ, ಸಮಾಧಾನದಿಂದ ಇರಲು ಸಾಧ್ಯವಿಲ್ಲವೆಂದು ತಿಳಿಯುತ್ತದೆ. ಒಳ ಇರುವಿಕೆಯ ಅರ್ಥ ಇದೇ. ಈ ಅರಿವಿನೊಡನೆ ನಾವು ಅನ್ಯರನ್ನೂ ನಮ್ಮವರಾಗಿ ಒಳಗೊಳ್ಳಲು ಆಗುತ್ತದೆ.
*
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ
ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ
ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ
ನೀವು ನನಗೊಂದು ಹಣೆಪಟ್ಟಿ ಹಚ್ಚಿದ ತಕ್ಷಣ ʻನಾನುʼ ಇಲ್ಲವಾಗುವ ಹಾಗೆ ಮಾಡುತ್ತೀರಿ, ನನ್ನನ್ನು ಧಿಕ್ಕರಿಸುತ್ತೀರಿ
-ಸೊರೆನ್ ಕಿರ್ಕೆಗಾರ್ಡ್

