ಪಕ್ಷಪಾತಿ ಭಕ್ತ

ನಾವು ನಮ್ಮ ದೇವರನ್ನು, ನಮ್ಮ ಮಾರ್ಗವನ್ನು, ನಮ್ಮ ಪರಂಪರೆಯನ್ನು, ನಮ್ಮ ಸತ್ಯವನ್ನು ಪ್ರೀತಿಸುತ್ತೇವೆ. ಮತ್ತು ಅರಿವಿಲ್ಲದೆಯೇ ಅದರ ಸುತ್ತ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಭಕ್ತಿ ಬಂಧನವಾಗಿ ಬದಲಾದಾಗ, ಅದು ಭಕ್ತಿಯಾಗಿ ಉಳಿಯುವುದಿಲ್ಲ.

ಒಬ್ಬ ಮೂರ್ಖ ಭಕ್ತಳೊಬ್ಬಳು ತಾನು ಎಲ್ಲಿಗೇ ಹೋದರೂ ತನ್ನೊಂದಿಗೆ ಒಂದು ಚಿನ್ನದ ಬುದ್ಧನ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಳು. ಒಂದು ದಿನ ಅವಳು ನೂರಾರು ಬುದ್ಧನ ವಿಗ್ರಹಗಳಿಂದ ತುಂಬಿದ್ದ ಒಂದು ವಿಹಾರಕ್ಕೆ ಹೋದಳು. ಆದರೆ ಅವಳಿಗೆ ಪ್ರಿಯವಾಗಿದ್ದು ತನ್ನ ಬುದ್ಧನೊಬ್ಬನೇ. ಪ್ರತಿಸಾರಿ ಅವಳು ತನ್ನ ಪ್ರೀತಿಯ ಬುದ್ಧನ ಮುಂದೆ ಧೂಪ ಹಚ್ಚುವಾಗ, ಆ ಧೂಪದ ಹೊಗೆ ಇತರ ಬುದ್ಧರ ಕಡೆಗೆ ಹೋಗುವುದನ್ನು ಇಷ್ಟಪಡುತ್ತಿರಲಿಲ್ಲ. ಆದ್ದರಿಂದ ತನ್ನ ಬುದ್ಧನ ಸುತ್ತಲೂ ಒಂದು ಸಣ್ಣ ಪರದೆಯನ್ನು ಕಟ್ಟಿದಳು.

ತಿಂಗಳುಗಳು ಕಳೆದವು.

ಧೂಪದ ಹೊಗೆಯಿಂದಾಗಿ ಅವಳ ಬುದ್ಧನ ವಿಗ್ರಹ ಕಪ್ಪಾಗಿ, ಮಂಕಾಗಿ ಕಾಣತೊಡಗಿತು. ಆದರೆ ಉಳಿದ ಬುದ್ಧರ ವಿಗ್ರಹಗಳು ಮೊದಲಿನ ಹಾಗೆಯೇ ಪ್ರಕಾಶಿಸುತ್ತಿದ್ದವು.
ಇದರಲ್ಲಿರುವ ಪಾಠ ಬಹಳ ಸೂಕ್ಷ್ಮವಾದದ್ದು.

ಕೆಲವೊಮ್ಮೆ ನಾವು ನಮ್ಮ ಧರ್ಮದೊಂದಿಗೂ ಇದೇ ರೀತಿ ವರ್ತಿಸುತ್ತೇವೆ. ನಾವು ನಮ್ಮ ದೇವರನ್ನು, ನಮ್ಮ ಮಾರ್ಗವನ್ನು, ನಮ್ಮ ಪರಂಪರೆಯನ್ನು, ನಮ್ಮ ಸತ್ಯವನ್ನು ಪ್ರೀತಿಸುತ್ತೇವೆ. ಮತ್ತು ಅರಿವಿಲ್ಲದೆಯೇ ಅದರ ಸುತ್ತ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೆ. ಮತ್ತು ನಂಬತೊಡಗುತ್ತೇವೆ:

“ನನ್ನ ಮಾರ್ಗವೇ ಸರಿ. ನಿನ್ನ ಮಾರ್ಗ ತಪ್ಪು.”

ಆದರೆ ಸತ್ಯವನ್ನು ಎಂದಿಗೂ ಒಂದು ನಂಬಿಕೆಯ ವ್ಯವಸ್ಥೆಯೊಳಗೆ ಬಂಧಿಸಿಡಲು ಸಾಧ್ಯವಿಲ್ಲ. ಎಲ್ಲ ಉಪನದಿಗಳನ್ನೂ ಸ್ವೀಕರಿಸಲು ನಿರಾಕರಿಸುವ ನದಿ, ಕೊನೆಗೆ ತಾನೇ ಬತ್ತಿಹೋಗುತ್ತದೆ.

ಅದೇ ರೀತಿ, ತನ್ನದೇ ದೃಷ್ಟಿಕೋನವನ್ನು ಹೊರತುಪಡಿಸಿ ಬೇರೆ ಯಾವುದೇ ದೃಷ್ಟಿಕೋನವನ್ನು ಸ್ವೀಕರಿಸಲು ನಿರಾಕರಿಸುವ ಹೃದಯವೂ ನಿಧಾನವಾಗಿ ಕಿರಿದಾಗುತ್ತದೆ, ಕಠಿಣವಾಗುತ್ತದೆ ಮತ್ತು ಭಯದಿಂದ ತುಂಬಿಕೊಳ್ಳುತ್ತದೆ.

ಸೂಫಿ ಹೃದಯವನ್ನು ತೆರೆದು ಹೀಗೆ ಹೇಳುತ್ತಾನೆ:

“ಬಾಗಿಲುಗಳು ಅನೇಕ; ಆದರೆ ಪ್ರಿಯತಮನು ಒಬ್ಬನೇ.”

ಝೆನ್ ಮನಸ್ಸು ನಿಧಾನವಾಗಿ ಪಿಸುಗುಟ್ಟುತ್ತದೆ:

“ಯಾವುದಕ್ಕೂ ಅಂಟಿಕೊಳ್ಳಬೇಡ, ಸತ್ಯದ ಬಗ್ಗೆ ನಿನಗಿರುವ ಕಲ್ಪನೆಗೂ ಸಹ.”

ಬಹುಶಃ ಆಧ್ಯಾತ್ಮಿಕ ಪರಿಪಕ್ವತೆ ಎಂದರೆ, ನಮ್ಮ ಮಾರ್ಗವನ್ನು ಇತರರಿಂದ ಕಾಪಾಡಿಕೊಳ್ಳುವುದಲ್ಲ,
ಬದಲಾಗಿ, ನಮ್ಮ ಮಾರ್ಗವನ್ನು ಕಳೆದುಕೊಳ್ಳದೆ, ಮತ್ತೊಬ್ಬರ ಪ್ರಯಾಣವನ್ನೂ ಗೌರವಿಸುವಷ್ಟು ವಿಶಾಲವಾದ ಹೃದಯವನ್ನು ಬೆಳೆಸಿಕೊಳ್ಳುವುದು.
ಆಳವಾದ ಭಕ್ತಿಗೆ ಹೋರಾಡುವ ಅಗತ್ಯವಿಲ್ಲ.
ಆಳವಾದ ಸತ್ಯಕ್ಕೆ ರಕ್ಷಣೆಯ ಅಗತ್ಯವಿಲ್ಲ.
ಆಳವಾದ ಪ್ರೀತಿಗೆ ಗಡಿಗಳ ಅಗತ್ಯವಿಲ್ಲ.

ನಿಮ್ಮ ನಂಬಿಕೆಯು ನಿಮ್ಮ ಹೃದಯವನ್ನು ವಿಶಾಲವಾಗಿಸಲಿ, ಸಣ್ಣದಾಗಿಸದಿರಲಿ.

ನಿಮ್ಮ ಭಕ್ತಿಯು ನಿಮ್ಮನ್ನು ಹೆಚ್ಚು ಕರುಣಾಮಯರನ್ನಾಗಿಸಲಿ, ಹೆಚ್ಚು ತೀರ್ಪು ನೀಡುವವರನ್ನಲ್ಲ.

ನಿಮ್ಮ ಆಧ್ಯಾತ್ಮಿಕತೆಯು ಗೋಡೆಯಾಗದೆ, ಸೇತುವೆಯಾಗಲಿ.

ಎಲ್ಲರನ್ನೂ ಅಪ್ಪಿಕೊಳ್ಳುವ, ಯಾರೊಂದಿಗೂ ಹೋರಾಡದ ಧರ್ಮವೇ ಸತ್ಯ, ಪವಿತ್ರ. ಅಹಿಂಸೆ ಮತ್ತು ಪ್ರೀತಿಯ ಧರ್ಮ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.