ಹೊಂದಾಣಿಕೆ-ಅಳವಡಿಕೆ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #4.9

ಕ್ರಿಯೆಯಲ್ಲಿ ತೊಡಗಲು ನಮಗೆ ಸಾತ್ವಿಕ ರೋಷ ಬೇಕಾಗುತ್ತದೆ. ಸಾತ್ವಿಕ ರೋಷವೊಂದೇ ಸಾಲದು. ನ್ಯಾಯಯುತ, ಕಾನೂನುಬದ್ಧ ಆಕ್ರೋಶವೂ ಸಾಲದು. ಕ್ರಿಯೆಗೆ ಮುನ್ನುಗ್ಗಲು ತಯಾರಾಗಿರುವ ಜನಕ್ಕೆ ಕೊರತೆ ಇಲ್ಲ. ಯಾವ ಒಂದು ಪಕ್ಷವನ್ನೂ ವಹಿಸಿಕೊಳ್ಳದೆ, ತನ್ನ ಮರಿಗಳನ್ನೆಲ್ಲ ಎರಡೂ ರೆಕ್ಕೆ ಹರಡಿ ತನ್ನವರಂತೆ ಕಾಪಾಡುವ ತಾಯಿ ಕೋಳಿಯ ಹಾಗೆ, ಇಡೀ ವಾಸ್ತವವನ್ನು ಕಾಣುವ, ಪ್ರೀತಿಸು ಸಾಮರ್ಥ್ಯ ಇರುವವರು ಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 4.9 : ಶಾಂತಿ । ಹೊಂದಾಣಿಕೆ-ಅಳವಡಿಕೆ

ಶಾಂತಿ-ಕರುಣೆಗಳು ಅರಿವು-ಸಮಾನತೆಗಳ ಕೈಕೈ ಹಿಡಿದು ಸಾಗುತ್ತವೆ. ಮೇಲು ಕೀಳುಗಳ ಭಾವವಿದ್ದಾಗ ವ್ಯತ್ಯಾಸ ಮಾಡುವ ಮನೋಧರ್ಮ ಬೆಳೆಯುತ್ತದೆ. ಕರುಣೆಯ ಕಣ್ಣು ಇದ್ದರೆ ನಾವು ಎಲ್ಲ ಜೀವಿಗಳ ಸತ್ಯವನ್ನು ಒಮ್ಮೆಗೇ ಸಮಾನವಾಗಿ ಕಾಣಬಲ್ಲೆವು. ವಾಸ್ತವವನ್ನು ಹಲವು ಕೋನಗಳಿಂದ ನೋಡುವ ಸಾಮರ್ಥ್ಯವಿರುವಾಗ ಅವೆಲ್ಲ ಕೋನಗಳನ್ನೂ ದಾಟಿ ಯಾವುದೇ ಸನ್ನವೇಶದಲ್ಲಿ ಕರುಣೆಯಿಂದ ವರ್ತಿಸಬಹುದು. ಹೊಂದಾಣಿಕಗೆ ಎಂಬ ಶಬ್ದದ ಹಿರಿದಾದ ಅರ್ಥ ಇದು.

ವಂಚನೆ, ಕ್ರೌರ್ಯಗಳನ್ನು ಬಚ್ಚಿಟ್ಟುಕೊಂಡು ರಾಜೀ ಪತ್ರಕ್ಕೆ ಸಹಿ ಹಾಕುವುದು ಹೊಂದಾಣಿಕೆಯಲ್ಲ. ಹೊಂದಾಣಿಕೆಯು ಎಲ್ಲ ಬಗೆಯ ಮಹತ್ವಾಕಾಂಕ್ಷೆಗಳಿಗೆ ವಿರುದ್ಧವಾದದ್ದು, ಯಾವ ಒಂದು ಪಕ್ಷಕ್ಕೂ ಸೇರದೆ ಇರುವುದು. ಯಾವುದೇ ಘರ್ಷಣೆ, ಹೋರಾಟ ಎದುರಾದಾಗ ನಮ್ಮಲ್ಲಿ ಅನೇಕರು ಯಾವುದಾದರೊಂದು ಪಕ್ಷವನ್ನುವಹಿಸಲು ಮುಂದಾಗುತ್ತೇವೆ. ನಾವೇ ಸಂಗ್ರಹಿಸಿದ ಅರೆಬರೆ ಸಾಕ್ಷಿ, ಅಥವಾ ಪ್ರಚಾರ ಇಲ್ಲವೇ ಹೇಳಿಕೆಯ ಮಾತುಗಳನ್ನು ಒಪ್ಪಿ ಸರಿ-ತಪ್ಪುಗಳ ನಿರ್ಣಯವನ್ನು ಮಾಡುತ್ತೇವೆ.

ಕ್ರಿಯೆಯಲ್ಲಿ ತೊಡಗಲು ನಮಗೆ ಸಾತ್ವಿಕ ರೋಷ ಬೇಕಾಗುತ್ತದೆ. ಸಾತ್ವಿಕ ರೋಷವೊಂದೇ ಸಾಲದು. ನ್ಯಾಯಯುತ, ಕಾನೂನುಬದ್ಧ ಆಕ್ರೋಶವೂ ಸಾಲದು. ಕ್ರಿಯೆಗೆ ಮುನ್ನುಗ್ಗಲು ತಯಾರಾಗಿರುವ ಜನಕ್ಕೆ ಕೊರತೆ ಇಲ್ಲ. ಯಾವ ಒಂದು ಪಕ್ಷವನ್ನೂ ವಹಿಸಿಕೊಳ್ಳದೆ, ತನ್ನ ಮರಿಗಳನ್ನೆಲ್ಲ ಎರಡೂ ರೆಕ್ಕೆ ಹರಡಿ ತನ್ನವರಂತೆ ಕಾಪಾಡುವ ತಾಯಿ ಕೋಳಿಯ ಹಾಗೆ, ಇಡೀ ವಾಸ್ತವವನ್ನು ಕಾಣುವ, ಪ್ರೀತಿಸು ಸಾಮರ್ಥ್ಯ ಇರುವವರು ಬೇಕು.

ಎಲ್ಲ ಜೀವಿಗಳ ಒಳಇರುವನ್ನು ಹೊಂದಿರುವ ಧ್ಯಾನದ ಅನುಷ್ಠಾನದಿಂದ ಇಂಥ ಸತ್ಯ ಕಾಣುತ್ತದೆ. ಅದು ಸಾಧ್ಯಾವಾದಾಗ ತಾರತಮ್ಯ, ಮೇಲು ಕೀಳುಗಳು ಮಾಯವಾಗುತ್ತವೆ, ವಾಸ್ತವನ್ನು ಪರಿಕಲ್ಪನೆಗಳ ಕತ್ತಿಯಿಂದ ತುಂಡು ತುಂಡು ಮಾಡಿ ನೋಡುವುದು ನಿಲ್ಲುತ್ತದೆ. ಒಳಿತು-ಕೆಡುಕುಗಳ ಗಡಿರೇಖೆ ಮಸುಕಾಗಿ, ಉದ್ದೇಶ-ದಾರಿಗಳು ಒಂದೇ ಆಗಿ ನೋಡಬಲ್ಲವರಾಗುತ್ತೇವೆ. ಉಗಾಂಡದಲ್ಲೋ ಇತಿಯೋಪಿಯದಲ್ಲೋ ಹಸಿದು ಮೂಳೆ ಚಕ್ಕಳವಾಗಿರುವ ಮಗುವಿನ ದೇಹ ಬೇರೆಯಲ್ಲ ನಮ್ಮ ದೇಹ ಬೇರೆಯಲ್ಲ ಎಂದು ನೋಡಲು ಸಾಧ್ಯವಾದಾಗ,ಎಲ್ಲ ಹಸಿವು, ಎಲ್ಲ ನೋವು ಎಲ್ಲ ಜೀವಿಗಳಿಗೂ ಸಮಾನವೆನ್ನುವುದು ಅರಿವಾದಾಗ ನಾವು ಪಕ್ಷಪಾತವಿರದ, ತಾರತಮ್ಯವಿರದ ನಿಜವಾದ ಪ್ರೀತಿಯನ್ನು ಪಡೆಯುತ್ತೇವೆ, ಕೊಡುತ್ತೇವೆ.

*

ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
ಕೀಳಿಂಗಲ್ಲದೆ ಹಯನು ಕರೆವುದೆ
ಮೇಲಾಗಿ ನರಕದಲೋಲಾಡಲಾರೆನು.
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.

ಮೇಲು ಕೀಳು ಎಂಬ ಭೇದವೇ ಸರಿಯಲ್ಲ. ಹಾಗೂ ಅಂಥ ಭೇದ ಇರುವುದಾದರೆ ನಾನು ಕೀಳಾಗುವೆನೇ ಹೊರತು ಮೇಲಾಗೆನು. ಮೇಲಾಗುವುದು ನರಕ, ಕೀಳಾದರೆ ಕೆಳಗಿರುವ ಕರುವಿಗೆ ಹಾಲು ಸಿಗುವ ಹಾಗೆ ನನಗೆ ಸುಖ. ಮೇಲು-ಕೀಳು ಅನ್ನುವ ಹಣೆಪಟ್ಟಿ ಹಚ್ಚದ ವಿನಯವಂತರ ಪಾದದ ಅಡಿಯಲ್ಲಿ ನನ್ನನ್ನು ಇರಿಸು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.