ಪರಿಸರದ ತಿಳಿವಳಿಕೆ ಆಳವಾಗಿ, ವಿಸ್ತಾರವಾಗಿ ಇರಬೇಕು. ನಮ್ಮ ಪ್ರಜ್ಞೆಯಲ್ಲೇ ಕಲ್ಮಶವಿದೆ. ಟಿವಿ, ಮೂವಿ, ಪತ್ರಿಕೆ ಇವೆಲ್ಲ ಕಲಿಕೆಯ ದಾರಿಯೂ ಆಗಬಹುದು, ಕಲ್ಮಶದ ರೂಪಗಳೂ ಆಗಬಹುದು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.10 : ಶಾಂತಿ । ನೆಲದ ಮಕ್ಕಳು
ನಾವೆಲ್ಲರೂ ನೆಲದ ಮಕ್ಕಳು. ಕೆಲವು ಕಾಲದ ನಂತರ ನೆಲ ನಾವೆಲ್ಲ ನೆಲಕ್ಕೇ ಮರಳುತ್ತೇವೆ. ನೆಲದಿಂದ ಎದ್ದು, ನೆಲದಿಂದ ಪೋಷಣೆ ಪಡೆದು, ಮತ್ತೆ ನೆಲಕ್ಕೇ ಮರಳುತ್ತೇವೆ. ಯಾವ ಜೀವವೂ ಶಾಶ್ವತವಲ್ಲ. ನಮ್ಮ ಹಾಗೇ ಗಿಡಗಳೂ ಹುಟ್ಟುತ್ತವೆ, ಒಂದಷ್ಟು ಕಾಲ ಬದುಕುತ್ತವೆ, ಮತ್ತೆ ಮಣ್ಣಿಗೆ ಮರಳುತ್ತವೆ. ಕೊಳೆತ ಗಿಡಗಳು ನಮ್ಮ ತೋಟಕ್ಕೆ ಗೊಬ್ಬರವಾಗುತ್ತವೆ. ನಳನಳಿಸುತ್ತಿರುವ ತಾಜಾ ತರಕಾರಿ ಹಾಗೂ ಕೊಳೆಯುತ್ತಿರುವ ತರಕಾರಿಗಳಯ ಒಂದೇ ವಾಸ್ತವದ ಎರಡು ಅಂಶಗಳು. ಒಂದಿರದಿದ್ದರೆ ಇನ್ನೊಂದೂ ಇರಲು ಸಾಧ್ಯವಿಲ್ಲ. ಆರು ತಿಂಗಳು ಕಳೆದು, ಕೊಳೆತ ಗೊಬ್ಬರ ಮತ್ತೆ ತಾಜಾ ತರಕಾರಿಯಾಗುತ್ತದೆ. ಗಿಡ ಮತ್ತು ನೆಲ ಒಂದನ್ನೊಂದು ನೆಚ್ಚಿಕೊಂಡಿವೆ. ಮಣ್ಣು ಸುಂದರವೋ, ಹಸಿರೋ, ಕೆಂಪೋ, ಕಪ್ಪೋ, ಒಣ ಮರಳೋ ಅನ್ನುವುದು ಗಿಡಗಳನ್ನು ನೆಚ್ಚಿಕೊಂಡಿದೆ. ನಮ್ಮನ್ನೂ ನೆಚ್ಚಿಕೊಂಡಿದೆ.
ಈ ಸೃಷ್ಟಿಯ ಎಷ್ಟೊಂದು ಜೀವಿಗಳು ಯಾವುದೇ ಶರತ್ತಿಲ್ಲದೆ ನಮ್ಮನ್ನು ಪ್ರೀತಿಸುತ್ತವೆ. ಹಕ್ಕಿಯ ಹಾಡು ನಮ್ಮಲ್ಲಿ ಖುಷಿ, ಚೆಲುವು, ಶುದ್ಧಭಾವ, ಚೈತನ್ಯ, ಒಲವುಗಳನ್ನು ಮೂಡಿಸಬಲ್ಲುದು. ಮರ, ನೀರು, ಗಾಳಿ ಇವೆಲ್ಲ ನಮ್ಮಿಂದ ಏನನ್ನೂ ಕೇಳುವುದಿಲ್ಲ. ನಮಗೆ ಪ್ರೀತಿಯನ್ನೇ ಕೊಡುತ್ತವೆ. ಇಂಥ ಪ್ರೀತಿ ನಮಗೆ ಬೇಕು. ಆದರೂ ಇಂಥ ಪ್ರೀತಿಯ ವಸ್ತುಗಳನ್ನೆಲ್ಲ ನಾಶಮಾಡುತ್ತಲೇ ಇದ್ದೇವೆ. ಯಾವುದೇ ಜೀವಿಗೆ ಸಾಧ್ಯವಾದಷ್ಟೂ ಕಡಿಮೆ ತೊಂದರೆ ಕೊಡಲು ನಾವು ಪ್ರಯತ್ನಪಡಲೇಬೇಕು. ಉದಾಹರಣೆಗೆ, ತೋಟ ಮಾಡುವಾಗ ನಮ್ಮ ತರಕಾರಿ ಗಿಡಗಳಿಗೆ ತೊಂದರೆ ಕೊಡುವ ಕೀಟ, ಜಿಂಕೆ, ಮೊಲಗಳಿಗೆ ತೊಂದರೆ ಕೊಡದೆ ಅವು ಹತ್ತಿರ ಬರದಂತೆ ತಡೆಯುವ ನಿರ್ದಿಷ್ಟ ಬಗೆಯ ಗಿಡಗಳನ್ನು ಬೆಳೆಯಬೇಕು. ರಾಸಾಯನಿಕಗಳನ್ನು ಬಳಸದೆ ಹಕ್ಕಿ, ದುಂಬಿ, ಜೇನುಗಳಿಗೆ ತೊಂದರೆ ಆಗದಂತೆ ಕೀಟಗಳನ್ನು ದೂರವಿಡುವ ಸಾವಯವ ವಸ್ತುಗಳನ್ನು ಬಳಸಬೇಕು. ನಮ್ಮಿಂದ ಇತರ ಜೀವಿಗಳಿಗೆ ಆಗುವ ತೊಂದರೆ, ಹಿಂಸೆಗಳು ಕಡಿಮೆಯಾಗುವಂತೆ ಪ್ರಯತ್ನಪಡಬೇಕು. ಪ್ರಾಣಿ, ಗಾಳಿ, ಮರಗಳನ್ನು ನಾಸ ಮಾಡುತ್ತಾ ನಮ್ಮನ್ನೇ ನಾಶಮಾಡಿಕೊಳ್ಳುತಿದ್ದೇವೆ. ಗಾಳಿ, ಮರ, ಪ್ರಾಣಿ, ಲೋಹಗಳು ಎಲ್ಲವೂ ತಾವೇ ತಾವಾಗಿ ಇರುವಂತೆ ಶರತ್ತಿಲ್ಲದ ಪ್ರೀತಿಯನ್ನು ತೋರಲು ಕಲಿತುಕೊಳ್ಳಬೇಕು.
ಓಕ್ ಮರ ಅನ್ನುವುದು ಓಕ್ ಮರ ಅಷ್ಟೇ. ಅದು ಇನ್ನೇನೋ ಆಗಲು ಹೆಣಗದು. ಅದು ಓಕ್ ಮರಕ್ಕಿಂತ ಕಡಿಮೆಯೋ ಹೆಚ್ಚೋ ಆದರೆ ನಾವೆಲ್ಲರೂ ತೊಂದರೆಪಡಬೇಕು. ನಮ್ಮ ಹಿಂದಿನ ಭವಗಲಲ್ಲಿ ನಾವು ಕಲ್ಲು, ಮೋಡ, ಮರಗಳಾಗಿದ್ದೆವು. ಓಕ್ ಮರವೂ ಆಗಿದ್ದೆವು. ಇದು ಬೌದ್ಧನಂಬಿಕೆಯಲ್ಲ, ವಿಜ್ಞಾನ. ನಾವು, ಮನುಷ್ಯರು, ಜೀವರಾಶಿಯಲ್ಲಿ ಅತೀ ಎಳೆಯರು. ಗಿಡಗಳಾಗಿ, ಮರಗಳಾಗಿ ಏನೇನೋ ಆಗಿ ಮನುಷ್ಯರಾಗಿದ್ದೇವೆ. ನಮ್ಮ ಹಿಂದಿನ ಭವಗಳನ್ನು ನೆನೆದು ವಿನಯವಂತರಾಗಿರಬೇಕು. ಓಕ್ ಮರದಿಂದ ನಾವು ಕಲಿಯಬೇಕಾದದ್ದು ಬಹಳವಿದೆ.
ಪರಿಸರದ ತಿಳಿವಳಿಕೆ ಆಳವಾಗಿ, ವಿಸ್ತಾರವಾಗಿ ಇರಬೇಕು. ನಮ್ಮ ಪ್ರಜ್ಞೆಯಲ್ಲೇ ಕಲ್ಮಶವಿದೆ. ಟಿವಿ, ಮೂವಿ, ಪತ್ರಿಕೆ ಇವೆಲ್ಲ ಕಲಿಕೆಯ ದಾರಿಯೂ ಆಗಬಹುದು, ಕಲ್ಮಶದ ರೂಪಗಳೂ ಆಗಬಹುದು. ಹಿಂಸೆ, ಕಳವಳಗಳ ಬೀಜ ಬಿತ್ತಿ ಇವೆಲ್ಲ ಮಾಧ್ಯಮಗಳು ನಮ್ಮನ್ನು ಮಲಿನ ಮಾಡಬಹುದು. ರಾಸಾಯನಿಕಗಳನ್ನು ಬಳಸಿ, ಮರಗಳನ್ನು ಕಡಿದು, ನೀರನ್ನು ಕಲುಷಿತಗೊಳಿಸಿ ನಾವು ಪರಿಸರವನ್ನು ನಾಶಮಾಡುವಂತೆಯೇ ಈ ಮಾಧ್ಯಮಗಳು ನಮ್ಮನ್ನು ನಾಶಮಾಡುತ್ತಿವೆ. ನಾವು ಪರಿಸರವನ್ನು ಕಾಪಾಡುವಂತೆಯೇ ನಮ್ಮ ಮನಸಿನ ಪರಿಸರವನ್ನೂ ಇಂಥ ಹಿಂಸೆಯಿಂದ ಕಾಪಾಡಿಕೊಳ್ಳಬೇಕು. ಒಳಗಿರುವ ಹಿಂಸೆ ನಮ್ಮ ಬದುಕಿನ ಎಲ್ಲ ವಲಯಗಳಲ್ಲೂ ತಾನೇ ಚೆಲ್ಲಾಡಿಕೊಳ್ಳುತ್ತದೆ.
ನಾವು ಜಾಣರೆಂದು ತಿಳಿದುಕೊಂಡಿದ್ದೇವೆ. ಸೀತಾಳೆಗೆ ಸುಂದರವಾದ ವಿನ್ಯಾಸದ ಹೂ ಬಿಡುವುದು ಹೇಗೆಂದು ಗೊತ್ತು. ಚೆಲುವಾದ, ಪ್ರಮಾಣಬದ್ಧವಾದ ಚಿಪ್ಪಿನ ಗೂಡು ಕಟ್ಟುವುದು ಹೇಗೆಂದು ಬಸವನ ಹುಳಕ್ಕೆ ಗೊತ್ತು. ಅವುಗಳ ಜ್ಞಾನಕ್ಕೆ ಹೋಲಿಸಿದರೆ ನಮ್ಮ ಜ್ಞಾನ ಏನೇನೂ ಅಲ್ಲ. ಸೀತಾಳೆಯ, ಬಸವನ ಹುಳುವಿನ, ಚಿಟ್ಟೆಯ ಮುಂದೆ ನಾವು ಗೌರವಪೂರ್ವಕವಾಗಿ ತಲೆಬಾಗಬೇಕು. ಎಲ್ಲ ಜೀವರಾಶಿಗಳ ಬಗ್ಗೆ ನಮ್ಮಲ್ಲಿ ಗೌರವವಿದ್ದರೆ ಅದರಿಂದ ನಮ್ಮೊಳಗಿನ ಸ್ವಭಾವವನ್ನು ಗುರುತಿಸಿ ಉತ್ತಮರಾಗಲು ಸಾಧ್ಯ.
*
ಭೂಮಿಯ ಮೇಲೆ, ಆಕಾಶದ ಕೆಳಗೆ ಇರುವ ಜೀವರಾಶಿಗಳೆಲ್ಲವೂ ಒಂದೇ. ಇಡೀ ಸೃಷ್ಟಿ ಒಂದೇ ಮೈ. ಸೃಷ್ಟಿ ಸತ್ಯವಾದರೆ ಸೃಷ್ಟಿಯ ಅಂಶವೇ ಆಗಿರುವ ನಾವೂ ಸತ್ಯ-ನನ್ನ ಕೈ, ನನ್ನ ಕಾಲು, ನನ್ನ ತಲೆ ಎಲ್ಲವೂ ನಾನು ಅನ್ನುವ ಸತ್ಯದ ಅಂಶಗಳೇ, ನನ್ನ ಒಂದೊಂದು ಅಂಗಾಂಗವೂ ಸತ್ಯವೇ. ಸೃಷ್ಟಿಯಲ್ಲಿ ಯಾವುದೂ ಕಿರಿದೂ ಅಲ್ಲ, ಹಿರಿದೂ ಅಲ್ಲ ಅನ್ನುತ್ತದೆ ಈ ಅಲ್ಲಮ ವಚನ:
ಭೂಮಿಯಾಕಾಶ ಒಂದು ಜೀವನದುದರ
ಅಲ್ಲಿ ಘನವೇನು ಘನವೆನ್ನದವಂಗೆ
ಕಿರಿದೇನು ಕಿರಿದೆನ್ನದವಂಗೆ
ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ

