ತತ್ತ್ವಜ್ಞಾನಿ ಐರಿಸ್ ಮರ್ಡಾಕ್ (Iris Murdoch) ಅವರ ಪ್ರಕಾರ, ನಾವು “ಸೊಂಡರ್” ಎಂದು ಕರೆಯುವುದೇ ನಿಜವಾಗಿ ನಾವು ಒಬ್ಬ ಒಳ್ಳೆಯ ಮನುಷ್ಯನಾಗಿರುವುದರ ಸೂಚನೆ. ಆದರೆ ಅದನ್ನು ಸಾಧಿಸುವುದು ಅತ್ಯಂತ ಕಷ್ಟದ ಸಂಗತಿಗಳಲ್ಲೊಂದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದುಕೊಳ್ಳಿ. ನಿಮ್ಮ ಪಕ್ಕದಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಯನ್ನು ನೋಡಿದಾಗ, ಇದ್ದಕ್ಕಿದ್ದಂತೆ ನಿಮ್ಮ ಜಗತ್ತಿನ ದೃಷ್ಟಿಕೋನವೇ ಬದಲಾಗುತ್ತದೆ. ಆ ವ್ಯಕ್ತಿಯ ಬಳಿ ಅವನು ಪ್ರತಿ ವಾರಕ್ಕೊಮ್ಮೆಯಾದರೂ ತಿನ್ನಲು ಇಷ್ಟಪಡುವ ಒಂದು ಅಚ್ಚುಮೆಚ್ಚಿನ ಸ್ಯಾಂಡ್‌ವಿಚ್ ಇದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಅವನ ಹತ್ತಿರ ಕೇಳಿದಾಗಲೆಲ್ಲ ಕಣ್ಣೀರು ತರಿಸುವ ಒಂದು ಹಾಡು ಇದೆ. ಅವನು ಯಾರ ಬಳಿಯೂ ಹೇಳಿಕೊಳ್ಳದೆ ತನ್ನೊಳಗೇ ಹೊತ್ತುಕೊಂಡು ಹೋಗುತ್ತಿರುವ ಹಲವಾರು ಒತ್ತಡಗಳು, ಚಿಂತೆಗಳು ಮತ್ತು ಬದುಕಿನ ಅನೇಕಾನೇಕ ನಾಟಕಗಳಿವೆ.
ಲೇಖಕ John Koenig ಅವರ ಪ್ರಕಾರ, ಈ ಅನುಭವಕ್ಕೆ ಒಂದು ಪದವಿದೆ, “Sonder” (ಸೊಂಡರ್). ಸೊಂಡರ್ ಎಂದರೆ, ಪ್ರತಿಯೊಬ್ಬರೂ ತಮ್ಮದೇ ಜೀವನದ ಕಥೆಯಲ್ಲಿ ಕಥಾ ನಾಯಕರು ಎನ್ನುವ ಅರಿವು. ಬಸ್ ನಿಲ್ದಾಣದಲ್ಲಿರುವ ಆ ಹುಡುಗ.
ಕ್ಯಾಷಿಯರ್ ಬಳಿ ನಿಂತಿರುವ ಆ ವ್ಯಕ್ತಿ. ಪಕ್ಕದ ಕಾರಿನಲ್ಲಿರುವ ಆ ಮಹಿಳೆ. ಈ ಎಲ್ಲರೂ ತಮ್ಮ ತಮ್ಮ ಕತೆಗಳ ಕಥಾ ನಾಯಕರು. ಅವರವರ ಜೀವನದ ಕೇಂದ್ರಬಿಂದು ಅವರೇ. ಅವರ ಜೀವನವೂ ನಿಮ್ಮ ಜೀವನದಷ್ಟೇ ಪೂರ್ಣ, ವಿವರಗಳಿಂದ ಕೂಡಿದ, ಆತಂಕಗಳಿಂದ ತುಂಬಿದ ಮತ್ತು ಪ್ರೀತಿಯಿಂದ ಕೂಡಿದ ಜೀವನವಾಗಿದೆ.
ತತ್ತ್ವಜ್ಞಾನಿ ಐರಿಸ್ ಮರ್ಡಾಕ್ (Iris Murdoch) ಅವರ ಪ್ರಕಾರ, ನಾವು “ಸೊಂಡರ್” ಎಂದು ಕರೆಯುವುದೇ ನಿಜವಾಗಿ ನಾವು ಒಬ್ಬ ಒಳ್ಳೆಯ ಮನುಷ್ಯನಾಗಿರುವುದರ ಸೂಚನೆ. ಆದರೆ ಅದನ್ನು ಸಾಧಿಸುವುದು ಅತ್ಯಂತ ಕಷ್ಟದ ಸಂಗತಿಗಳಲ್ಲೊಂದು. ಏಕೆಂದರೆ, ನಮ್ಮ ಜೀವನದ ಬಹುಪಾಲು ಸಮಯ ನಾವು ಒಂದು ರೀತಿಯ ಅರೆ ಪ್ರಜ್ಞೆಯ ಸ್ಥಿತಿಯಲ್ಲಿ ಸಾಗುತ್ತಿರುತ್ತೇವೆ. ನಮ್ಮ ಸುತ್ತಲಿರುವ ಇತರರನ್ನು, ತಮ್ಮದೇ ಸಂಪೂರ್ಣ ಜೀವನ ಮತ್ತು ಕಥೆಗಳನ್ನು ಹೊಂದಿರುವ ಮನುಷ್ಯರಂತೆ ನೋಡುವ ಬದಲು, ಅವರನ್ನು ನಮ್ಮ ಜೀವನದ ಹಿನ್ನೆಲೆಯ ದೃಶ್ಯಗಳಂತೆ ಮಾತ್ರ ಕಾಣುತ್ತೇವೆ.
ಸೊಂಡರ್ ಎಂದರೆ, “ನಾನು ನನ್ನ ಜೀವನದ ಮುಖ್ಯ ಪಾತ್ರಧಾರಿ ಹೇಗೋ, ನನ್ನ ಸುತ್ತಲಿರುವ ಪ್ರತಿಯೊಬ್ಬರೂ ತಮ್ಮ ಜೀವನದ ಮುಖ್ಯ ಪಾತ್ರಧಾರಿಗಳೇ” ಎಂಬ ಆಳವಾದ ಅರಿವು.
ಆದರೆ, ಮತ್ತೊಬ್ಬ ವ್ಯಕ್ತಿಯನ್ನು ನಿಜವಾಗಿಯೂ ನಮ್ಮಷ್ಟೇ ನಿಜವಾದ ವ್ಯಕ್ತಿಯಾಗಿ ಕಾಣುವುದು ಮತ್ತು ಹಾಗೆಯೇ ಪರಿಗಣಿಸುವುದು, ಮರ್ಡಾಕ್ ಅವರು “Unselfing” ಎಂದು ಕರೆಯುವ ಒಂದು ಸಂಗತಿಯನ್ನು ಮುಖ್ಯವಾಗಿಸುತ್ತದೆ. ಅದು ನಮ್ಮ ಸ್ವಕೇಂದ್ರಿತತೆಯಿಂದ ಸ್ವಲ್ಪ ಹಿಂದೆ ಸರಿದು, ಮತ್ತೊಬ್ಬ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ, ಗಮನವಿಟ್ಟು ನೋಡುವ ಪ್ರಯತ್ನ. ಆದರೆ ಬಹುತೇಕ ಸಮಯ ನಾವು ಅಂಥದನ್ನು ಮಾಡಲು ಪ್ರಯತ್ನಿಸುವುದೇ ಇಲ್ಲ.
ನಮ್ಮ ಎದುರಿನ ವ್ಯಕ್ತಿಯನ್ನು ನಾವು ಒಂದು ಸಂಪೂರ್ಣ ಮನುಷ್ಯನಾಗಿ ನೋಡುವ ಬದಲು, ಅವನನ್ನು ಕೇವಲ “ಅಪರಿಚಿತ ವ್ಯಕ್ತಿ”, “ಸಹಪ್ರಯಾಣಿಕ”, “ಸರದಿಯಲ್ಲಿ ನಿಂತಿರುವವ, “ ಅಡ್ಡಿ ಮಾಡುತ್ತಿರುವವ” ಎನ್ನುವ ಮಟ್ಟಕ್ಕೆ ಇಳಿಸಿಬಿಡುತ್ತೇವೆ.
ನಗರಗಳು ಹೀಗೆ ಕಾರ್ಯನಿರ್ವಹಿಸುತ್ತವೆ. ಸಂಸ್ಥೆಗಳು ಹೀಗೆ ಕಾರ್ಯನಿರ್ವಹಿಸುತ್ತವೆ. ಕ್ರೌರ್ಯವೂ ಹೀಗೆ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ನಮ್ಮ ಕಣ್ಣೆದುರೇ ಒಬ್ಬ ವ್ಯಕ್ತಿಯನ್ನು ನೋಡಿಕೊಂಡು, ಅವರ ಇಡೀ ಬದುಕಿನ ಭಾರ ನಮ್ಮನ್ನು ಕುಗ್ಗಿಸದೆ ಅವರ ಪಕ್ಕದಿಂದ ನಡೆದುಹೋಗಲು ನಮಗೆ ಸಾಧ್ಯವಾಗುವುದೂ ಹೀಗೆಯೇ.
“ಸೊಂಡರ್” ಎಂದರೆ, ನಾವು ಯಾರನ್ನಾದರೂ ನಿಜವಾಗಿ ಗಮನವಿಟ್ಟು ನೋಡುವ ಆ ಕ್ಷಣ.
ಆ ಕ್ಷಣದಲ್ಲಿ, ನಮ್ಮ ಕಣ್ಣಿಗೆ ಕೇವಲ ಒಂದು “ವಸ್ತು” ಅಥವಾ “ಯಾರೋ ಒಬ್ಬರು” ಆಗಿ ಕಾಣುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ “ಒಬ್ಬ ವ್ಯಕ್ತಿ, ತನ್ನದೇ ಜಗತ್ತು, ತನ್ನದೇ ಕಥೆ, ತನ್ನದೇ ನೋವು ಮತ್ತು ಸಂತೋಷಗಳನ್ನು ಹೊಂದಿರುವ ‘ಯಾರೋ ಒಬ್ಬ’ ಆಗಿ ಪರಿವರ್ತನೆಯಾಗುತ್ತಾನೆ. ಮತ್ತು ಐರಿಸ್ ಮರ್ಡಾಕ್ ಅವರ ಮಾತನ್ನು ನಾವು ನಂಬುವುದಾದರೆ, ಜಗತ್ತನ್ನು ಉತ್ತಮಗೊಳಿಸಲು ನಮಗೆ ಇರುವ ಏಕೈಕ ಮಾರ್ಗ ಇದೇ.

