ಅಪೂರ್ಣ ಪಶ್ಚಾತ್ತಾಪ

ಯಾರಾದರೂ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವುದು ನಿಜವಾದ ಪಶ್ಚಾತ್ತಾಪದಿಂದಲ್ಲ; ನರಕದ ಭಯದಿಂದ ಅಥವಾ ಸ್ವರ್ಗವನ್ನು ಪಡೆಯಬೇಕೆಂಬ ಆಸೆಯಿಂದ ಆಗಿದ್ದರೆ, ಅದನ್ನು ಅಪೂರ್ಣ ಪಶ್ಚಾತ್ತಾಪ ಎಂದು ಕರೆಯಲಾಗುತ್ತದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಸಾಂಟಾ ನ ಪಟ್ಟಿಯ ವೈರುಧ್ಯ (The Paradox of Santa’s List) ಎನ್ನುವುದು ನೈತಿಕ ಪ್ರೇರಣೆಗೆ (moral motivation) ಸಂಬಂಧಿಸಿದ ಒಂದು ತಾತ್ವಿಕ ಸಮಸ್ಯೆ.
ಊಹಿಸಿಕೊಳ್ಳಿ. ಮೂವರು ಮಕ್ಕಳು ಆಟದ ಮೈದಾನದಲ್ಲಿ ಆಟವಾಡುತ್ತಿದ್ದಾರೆ — ಅಬ್ಬಿ, ಬಾಬಿ ಮತ್ತು ಚಾರ್ಲಿ. ಇದ್ದಕ್ಕಿದ್ದಂತೆ ಬಾಬಿ ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುತ್ತಾನೆ. ದಯಾಳು ಸ್ವಭಾವದ ಚಾರ್ಲಿ ತಕ್ಷಣ ಬಾಬಿಯ ಬಳಿಗೆ ಓಡಿ ಹೋಗಿ ಅವನಿಗೆ ಸಹಾಯ ಮಾಡುತ್ತಾನೆ. ಆದರೆ ಅಬ್ಬಿ ಸ್ವಲ್ಪ ಹೊತ್ತು ಯೋಚಿಸುತ್ತಾಳೆ : “ಸರಿ, ಮುಂದಿನ ವಾರ ಕ್ರಿಸ್‌ಮಸ್. ಸಾಂಟಾ ನನ್ನನ್ನು ಗಮನಿಸುತ್ತಿದ್ದಾನೆ. ಅವನ ಒಳ್ಳೆಯ ಮಕ್ಕಳ ಪಟ್ಟಿಯಲ್ಲಿ ನನ್ನ ಹೆಸರು ಇರಬೇಕೆಂದರೆ, ನಾನು ಬಾಬಿಗೆ ಸಹಾಯ ಮಾಡಲೇಬೇಕು , ಎಂದುಕೊಂಡು ಅವಳೂ ಬಾಬಿಯ ಬಳಿಗೆ ಓಡಿ ಹೋಗಿ ಸಹಾಯ ಮಾಡುತ್ತಾಳೆ. ಇಲ್ಲಿಯೇ ನೈತಿಕ ಪ್ರೇರಣೆಯ ಸಮಸ್ಯೆ ಎದುರಾಗುತ್ತದೆ.

ನಾವು ಒಂದು ಕೆಲಸವನ್ನು ಕೇವಲ ಅದು ಒಳ್ಳೆಯ ಕೆಲಸ ಎನ್ನುವ ಕಾರಣಕ್ಕೆ ಮಾಡದೆ, ಅದರ ಪ್ರತಿಫಲವಾಗಿ ಏನಾದರೂ ಪಡೆಯಬೇಕೆಂಬ ಆಸೆಯಿಂದ ಮಾಡಿದರೆ, ಅದನ್ನು ನಿಜವಾಗಿಯೂ ಒಳ್ಳೆಯ ಕೃತ್ಯ ಎಂದು ಕರೆಯಬಹುದೇ? ಅಬ್ಬಿ ಬಾಬಿಗೆ ಸಹಾಯ ಮಾಡಿದ್ದು ಅವನ ಬಗ್ಗೆ ಕಾಳಜಿಯಿಂದಲ್ಲ, ಬದಲಾಗಿ ತನಗೆ Paw Patrol ಕ್ರೂಸರ್ ಆಟಿಕೆ ಸಿಗಬೇಕೆಂಬ ಆಸೆಯಿಂದ ಮಾತ್ರವಾಗಿದ್ದರೆ, ಅವಳ ಕೃತ್ಯವನ್ನು ನಿಜವಾದ ಒಳ್ಳೆಯ ಕೆಲಸ ಎಂದು ಕರೆಯಬಹುದೇ? ಇದು ನೈತಿಕತೆಯ ಒಂದು ಆಳವಾದ ಪ್ರಶ್ನೆಯನ್ನು ಎತ್ತುತ್ತದೆ: ಒಂದು ಕೃತ್ಯ ಒಳ್ಳೆಯದಾಗಿರುವುದು ಅದರ ಫಲಿತಾಂಶದಿಂದಾ, ಅಥವಾ ಅದನ್ನು ಮಾಡುವ ಹಿಂದಿನ ಉದ್ದೇಶವೂ ಅಷ್ಟೇ ಮುಖ್ಯವೇ?

ಇಮ್ಮಾನುಯೆಲ್ ಕಾಂಟ್ ನ ವಾದದ ಪ್ರಕಾರ, ಒಂದು ಕ್ರಿಯೆ ನಿಜವಾಗಿಯೂ ಒಳ್ಳೆಯದಾಗಿರಬೇಕಾದರೆ ಅದು ‘Categorical’ (ನಿರಪೇಕ್ಷ) ಆಗಿರಬೇಕು. ಹಾಗೆಂದರೆ, ಮುಂದೆ ಯಾವುದಾದರೂ ಪ್ರತಿಫಲ ಸಿಗುತ್ತದೆ ಎನ್ನುವ ನಿರೀಕ್ಷೆಯಿಂದಲ್ಲ, ಆ ಕ್ರಿಯೆ ತನ್ನದೇ ಆದ ಕಾರಣಕ್ಕಾಗಿ ಮಾಡಲ್ಪಟ್ಟಿರಬೇಕು. ಕ್ಯಾಥೊಲಿಕ್ ಧರ್ಮಶಾಸ್ತ್ರದಲ್ಲಿಯೂ ‘Imperfect Contrition’ (ಅಪೂರ್ಣ ಪಶ್ಚಾತ್ತಾಪ) ಎಂಬ ಪರಿಕಲ್ಪನೆ ಇದೆ. ಅಂದರೆ, ಯಾರಾದರೂ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವುದು ನಿಜವಾದ ಪಶ್ಚಾತ್ತಾಪದಿಂದಲ್ಲ; ನರಕದ ಭಯದಿಂದ ಅಥವಾ ಸ್ವರ್ಗವನ್ನು ಪಡೆಯಬೇಕೆಂಬ ಆಸೆಯಿಂದ ಆಗಿದ್ದರೆ, ಅದನ್ನು ಅಪೂರ್ಣ ಪಶ್ಚಾತ್ತಾಪ ಎಂದು ಕರೆಯಲಾಗುತ್ತದೆ.

ಆದರೆ ಪ್ರಶ್ನೆ ಏನೆಂದರೆ, ಇದು ನಿಜ ಜೀವನದಲ್ಲಿ ಎಷ್ಟು ವಾಸ್ತವಿಕ? ಅಥವಾ ಇದು ಸಾಧ್ಯವೇ?

ಏಕೆಂದರೆ, ಉದಾಹರಣೆಗೆ, ಡೇವಿಡ್ ಹ್ಯೂಮ್ ನ ಪ್ರಕಾರ, ನಾವು ಏನೇ ಮಾಡಿದರೂ ಅದರ ಹಿಂದೆ ಯಾವುದಾದರೂ ಭಾವನೆ ಅಥವಾ ಆಸೆ (passion) ಇದ್ದೇ ಇರುತ್ತದೆ. ನಾವು ಯಾವುದನ್ನಾದರೂ ಬಯಸಲೇಬೇಕು. ಕಾಂಟ್ ಅಥವಾ ಪ್ಲೇಟೋ ಯೋಚಿಸಿದಂತೆ, ನಾವು ಯಾವಾಗಲೂ ಮತ್ತು ಅನಿವಾರ್ಯವಾಗಿ ಒಳ್ಳೆಯದನ್ನೇ ಮಾಡಬೇಕು ಎಂಬ ಕಲ್ಪನೆ, ಮನುಷ್ಯರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ, ನಾವು ಯಾವಾಗಲೂ ಯಾವುದನ್ನಾದರೂ ಬಯಸುತ್ತಿರುತ್ತೇವೆ; ನಮ್ಮ ಕ್ರಿಯೆಗಳ ಹಿಂದೆ ಯಾವುದಾದರೂ ಆಸೆ ಅಥವಾ ಪ್ರೇರಣೆ ಇದ್ದೆ ಇರುತ್ತದೆ.

ಹಾಗಾದರೆ, ಸಾಂಟಾ ನ ಒಳ್ಳೆಯ ಮಕ್ಕಳ ಪಟ್ಟಿಯ ಬಗ್ಗೆ ತಿಳಿದಿರುವುದೇ ಒಂದು ಶಾಪವೇ? ಏಕೆಂದರೆ, ಸಾಂಟಾ ನ ಒಳ್ಳೆಯ ಮಕ್ಕಳ ಪಟ್ಟಿಯಲ್ಲಿ ಹೆಸರು ಬರಬೇಕೆಂಬ ಉದ್ದೇಶದಿಂದ ನಾವು ಏನಾದರೂ ಒಳ್ಳೆಯ ಕೆಲಸ ಮಾಡಿದರೆ, ವೈರುಧ್ಯವೆಂಬಂತೆ, ಅದೇ ಕಾರಣದಿಂದ ನಾವು ಆ ಪಟ್ಟಿಯಿಂದ ಹೊರಗುಳಿಯುವಂತಾಗುತ್ತದೆ.
ಹಾಗಾದರೆ, ನಾವು ಆ ಪಟ್ಟಿಯ ಬಗ್ಗೆ ಏನೂ ಗೊತ್ತಿಲ್ಲದವರಂತೆ ನಟಿಸಿ ಸುಳ್ಳು ಹೇಳಬೇಕೆಂದು ನಿರೀಕ್ಷಿಸಲಾಗುತ್ತದೆಯೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.