ಕಲೆ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #4.11

ನೀವು ಕಲೆಯ ಬಗ್ಗೆ ಯೋಚನೆ ಮಾಡದಿರುವಾಗ ಅದು ನಿಮ್ಮ ಅರಿವಿನ, ಪ್ರಜ್ಞೆಯ ಆಳದಲ್ಲಿ ರೂಪು ಪಡೆದು ತಾನಾಗೇ ವ್ಯಕ್ತವಾಗುತ್ತದೆ. ಕಲೆಯ ಬಗ್ಗೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 4.11 : ಶಾಂತಿ ।  ಕಲೆ

ನೀವು ಒಬ್ಬೊಬ್ಬರೂ  ಬದುಕು ಬದುಕುತ್ತಾ ಕಲಾ ಕೃತಿಗಳನ್ನು ಸೃಷ್ಟಿ ಮಾಡುತ್ತಾ ನಮ್ಮ ಜನ ಸಮುದಾಯ ಎಚ್ಚರಗೊಳ್ಳಲು ನಿವು ಕಾಣಿಕೆ ನೀಡಬಹುದು. ಬೋಧಿಸತ್ವನೆಂದರೆ ಎಚ್ಚರಗೊಂಡಿರುವವನು, ಗಮನವುಳ್ಳವನು, ಇತರರು ಎಚ್ಚರಗೊಳ್ಳಲು ಸಹಾಯ ಮಾಡುವ ಇಚ್ಛೆ ಇರುವವನು.

ಕಲಾವಿದರು, ನಟರು, ಚಿತ್ರನಿರ್ಮಾಣಮಾಡುವವರು, ಕಾದಂಬರಿಕಾರರು ಇವರೆಲ್ಲರೂ ಬೋಧಿಸತ್ವರಾಗುವ ಆಸೆಯಿಂದ ಸ್ಫೂರ್ತಿಪಡೆದವರಾಗಿರಬಹುದು. ಜನರನ್ನು ಎಚ್ಚರಿಸುವ, ಅವರೊಳಗಿರುವ  ಶಾಂತಿ, ಸಂತೋಷಗಳ ಬೀಜಗಳನ್ನು ಅವರೇ ಬೆಳೆದುಕೊಳ್ಳುವಂತೆ ಮಾಡುವ, ಅವರೊಳಗಿರುವ ತಾರತಮ್ಯ, ಭಯ, ಬಯಕೆಗಳ ಬೀಜಗಳನ್ನು ಬದಲಿಸುವ ಆಸೆಯಿಂದ ಪ್ರೇರಣೆ ಪಡೆದಿರಬಹುದು. ಕಲಾವಿದರು ಈ ಎಲ್ಲ ಕೆಲಸ ಮಾಡಬಲ್ಲರು. ಅಂಥ ಹಂಬಲ ನಿಮ್ಮಲ್ಲಿದ್ದರೆ ಕೀರ್ತಿಯ ಆಸೆ. ಅಧಿಕಾರದೆ ಆಸೆ ನಿಮ್ಮನ್ನು ಸೆಳೆಯುವುದಿಲ್ಲ. ಈ ಭೂಮಿಯ ಮೇಲಿನ ನಿಮ್ಮ ಬದುಕು ಚೆಲುವಾಗಿದೆ, ಜೀವಿಗಳಿಗೆ ಸಹಾಯಕವಾಗಿದೆ ಅನ್ನುವ ಸಂತೋಷದ ಮುಂದೆ ಬೇರೆ ಏನೂ ನಿಮಗೆ ಬೇಕು ಅನಿಸದು.

ಒಮ್ಮೆ ನ್ಯೂ ಯಾರ್ಕ್‌ ನಗರದಲ್ಲಿ ಬೌದ್ಧ ವಿದ್ವಾಂಸರೊಬ್ಬರನ್ನು ಭೇಟಿಯಾಗಿದ್ದೆ. ಎಚ್ಚರದ ಗಮನವನ್ನು ಪಡೆಯಲು ಅಭ್ಯಾಸ ನಿರತನಾಗಿದ್ದೇನೆ, ಅದಕ್ಕಾಗಿ ತರಕಾರಿಯ ತೋಟದಲ್ಲಿ ಕೆಲಸ ಮಾಡುತ್ತೇನೆ ಎಂದು ಆಕೆಗೆ ಹೇಳಿದೆ. ಟೊಮ್ಯಾಟೊ, ಸೊಪ್ಪು, ಇನ್ನೂ ಬೇರೆ ಬೇರೆ ತರಕಾರಿ ಬೆಳೆಯುವುದು ನನಗೆ ಸಂತೋಷ ತರುತ್ತದೆ ಅಂದೆ.

ಅದಕ್ಕೆ ಆಕೆ, “ನೀವು ತರಕಾರಿ ಬೆಳೆಯುವ ಕೆಲಸ ಮಾಡಬಾರದು. ಯಾರು ಬೇಕಾದರೂ ಅದನ್ನು ಮಾಡುತ್ತಾರೆ. ನೀವು ಕವಿತೆ ಬರೆಯಿರಿ ನಿಮ್ಮ ಕವಿತೆ ಎಷ್ಟು ಚಂದ. ಎಲ್ಲರೂ ನಿಮ್ಮ ಹಾಗೆ ಕವಿತೆ ಬರೆಯಲಾರರು,” ಅಂದರು.

“ತರಕಾರಿ, ಸೊಪ್ಪು ಬೆಳೆಯದಿದ್ದರೆ ನಾನು ಕವಿತೆಯನ್ನೂ ಬರೆಯಲಾರೆ,” ಎಂದೆ.

ನಾನು ಸೊಪ್ಪಿನ ಆರೈಕೆ ಮಾಡುತ್ತಿರುವಾಗ, ಗಿಡಗಳಿಗೆ ನೀರು ಹನಿಸುವಾಗ ಕವಿತೆಯ ಬಗ್ಗೆಯೋ ಬರವಣಿಗೆಯ ಬಗ್ಗೆಯೋ ಯೋಚನೆ ಮಾಡುವುದಿಲ್ಲ. ನನ್ನ ಮನಸ್ಸು ಪೂರ್ತಿಯಾಗಿ ಸೊಪ್ಪಿನ ಆರೈಕೆಯಲ್ಲಿ, ನೀರು ಹನಿಸುವುದರಲ್ಲಿ  ಮಗ್ನವಾಗಿರುತ್ತದೆ. ಬೇರೆ ಯಾವ ಯೋಚನೆಯನ್ನೂ ಮಾಡದೆ ಆ ಕ್ಷಣದಲ್ಲಿ ಬದುಕುವುದು ಸಂತೋಷ ತರುತ್ತದೆ. ಹಾಗೆ ಮಾಡುತ್ತಿರುವ ಕೆಲಸದಲ್ಲಿ ಮಗ್ನವಾಗುವುದೇ  “ನಿಶ್ಚಿಂತೆಯಾಗಿ” ಬದುಕುವುದನ್ನು ಕೂಡ ಕಲಿಸುತ್ತದೆ.

ನೀವು ಕಲೆಯ ಬಗ್ಗೆ ಯೋಚನೆ ಮಾಡದಿರುವಾಗ ಅದು ನಿಮ್ಮ ಅರಿವಿನ, ಪ್ರಜ್ಞೆಯ ಆಳದಲ್ಲಿ ರೂಪು ಪಡೆದು ತಾನಾಗೇ ವ್ಯಕ್ತವಾಗುತ್ತದೆ. ಕಲೆಯ ಬಗ್ಗೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಬರೆಯುವುದು, ವ್ಯಕ್ತಗೊಳಿಸುವುದು ಹೆರಿಗೆಯ ಕ್ಷಣದ ಹಾಗೆ. ಮಗು ಒಳಗೇ ಬೆಳೆಯುವ ಸಮಯ, ಆ ಬೆಳವಣಿಗೆಯ ಅನುಭೂತಿ ಇವೆಲ್ಲವೂ ಅನುಭವಕ್ಕೆ ಬಂದರೆ ಮಾತ್ರ ನಿಮ್ಮ ಮಗು ಅರಿವಿನಿಂದ, ಕರುಣೆಯಿಂದ ಜನ್ಮ ತಳೆಯುತ್ತದೆ.

ಜನ ತಮ್ಮ ನೋವು ನರಳಾಟಗಳ ಸ್ವಭಾವವನ್ನು ಅರಿಯಲು ಕಲಾಕೃತಿ ಸಹಾಯ ಮಾಡಬಹುದು. ಕಲಾಕೃತಿಯ ಅನುಭವದ ಮೂಲಕ ಜನ ತಮ್ಮೊಳಗಿನ ಹಿತರಕವಲ್ಲದ ಭಾವ, ಪ್ರವೃತ್ತಿಗಳನ್ನು ತಾವೇ ಹಿತಕರವಾಗಿ ಬದಲಿಸಿಕೊಳ್ಳಲು ಸಾಧ್ಯವಾಗಬಹುದು. ಬರೆಯುವುದು, ಸಿನಿಮಾ ಮಾಡುವುದು, ಕಲಾಕೃತಿ ರಚಿಸುವುದು ಇವೆಲ್ಲವೂ ಪ್ರೀತಿಯ ಕ್ರಿಯೆಗಳೇ ಆಗಬಹುದು. ಪ್ರೀತಿಯ ಕ್ರಿಯೆ ನಿಮ್ಮನ್ನೂ ಬೇರೆಯವರನ್ನೂ ಪೋಷಿಸುತ್ತದೆ, ಬೆಳೆಸುತ್ತದೆ, ಬದಲಿಸುತ್ತದೆ.

ನೀವು ಆನಂದವಾಗಿದ್ದರೆ, ಪ್ರತಿಯೊಂದು ಕ್ಷಣವನ್ನೂ ಇಡಿಯಾಗಿ, ಗಹನವಾಗಿ ಬದುಕುವುದನ್ನು ಕಲಿತಿದ್ದರೆ ಆಗ ಆಳವಾದ ಅರಿವು, ಸಂತೋಷ, ಕರುಣೆಗಳು ಮೂಡುತ್ತವೆ. ಈ ಅರಿವು, ಸಂತೋಷಗಳನ್ನು ನಿಮ್ಮ ಕಲೆ ಬೇರೆಯವರಿಗೂ ನೀಡುತ್ತದೆ.  

*

ದೇಹವೇ ವಾದ್ಯವಾಗಿ, ಬದುಕೇ ಸಂಗೀತವಾಗುವುದು ಸಹಜವಾದ ಕಲೆ. ಅದಕ್ಕೆ ಶಾಸ್ತ್ರ, ಛಂದಸ್ಸು, ಇಂಥ ಕಟ್ಟುಪಾಡುಗಳ ಬಂಧನವಿಲ್ಲ. ʻಕಲೆʼ ಕಲಿತದ್ದು, ಆದರೂ ಕಲಿತದ್ದು ಮಾತ್ರವಲ್ಲ; ಬದುಕಿನೊಡನೆಯೇ ಹುಟ್ಟಿ ಬಂದದ್ದು, ಸಹ-ಜವಾದದ್ದು ಅನ್ನುವ ಅರಿವಿನಿಂದ ಮೂಡಿದ್ದು. ಇದನ್ನು ಸುಪ್ರಸಿದ್ಧವಾದ ಬಸವವಚನಗಳು ಹೇಳುತ್ತಿವೆ:

ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಪಾಡಯ್ಯಾ

ಉರದಲೊತ್ತಿ ಬಾರಿಸು
ಕೂಡಲಸಂಗಮದೇವಾ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.