ಮನವೊಲಿಸುವ ಕಲೆ ಎಂದರೆ ಈ ಮೂರೂ ವಿಧಾನಗಳನ್ನು ಸಮರ್ಥವಾಗಿ ಬಳಸುವುದು. ಇವುಗಳಲ್ಲಿ ಯಾವುದಕ್ಕೆ ಎಷ್ಟು ಮಹತ್ವ ನೀಡಬೇಕು ಎನ್ನುವುದು ನೀವು ಇರುವ ಪರಿಸ್ಥಿತಿ ಮತ್ತು ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
2,500 ವರ್ಷಗಳ ಹಿಂದೆ ಅರಿಸ್ಟಾಟಲ್, ಜನರು ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಮನವೊಲಿಸಲು ಮೂರು ಮಾರ್ಗಗಳಿವೆ ಎಂದು ವಾದ ಮಾಡುತ್ತಾನೆ. ಇದು ವ್ಯಾವಹಾರಿಕ ಮಾತುಕತೆಗಳಲ್ಲಿಯೂ, ನಿಮ್ಮ ಸಂಗಾತಿಯೊಂದಿಗೆ ನಡೆಯುವ ವಾದದಲ್ಲಿಯೂ ಅಷ್ಟೇ ಸತ್ಯ. ಇದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಬಹುದು, ಹಾಗೆಯೇ ಕೆಟ್ಟ ಉದ್ದೇಶಕ್ಕೂ ಬಳಸಬಹುದು.
ಮೊದಲನೆಯದು, Logos (ಲೋಗೋಸ್):
ಇದು ಸಮರ್ಥವಾದ ತರ್ಕ ಮತ್ತು ಚತುರವಾದ ವಾದವನ್ನು ಸೂಚಿಸುತ್ತದೆ. ಅಂದರೆ, ನೀವು ನಿಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮತ್ತು ತಾರ್ಕಿಕವಾಗಿ ಮಂಡಿಸುತ್ತೀರಿ; ಎದುರಿನ ವ್ಯಕ್ತಿ ಸಾಕಷ್ಟು ವಿವೇಚನೆಯುಳ್ಳವರಾಗಿದ್ದು, ಆ ವಿಚಾರಗಳನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇರುತ್ತದೆ.
ಎರಡನೆಯದು, Ethos (ಈಥೋಸ್):
ಇದು ಮಾತನಾಡುವ ವ್ಯಕ್ತಿಯ ಸ್ವಭಾವ, ವಿಶ್ವಾಸಾರ್ಹತೆ ಮತ್ತು ನಂಬಿಕೆಗೆ ಅರ್ಹತೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ವೈದ್ಯರು ಔಷಧಿ ಅಥವಾ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರೆ, ಅಥವಾ ಶಿಕ್ಷಕರು ತಮ್ಮ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ರಸ್ತೆಯಲ್ಲಿ ಸಿಕ್ಕ ಯಾವುದೋ ಅಪರಿಚಿತ ವ್ಯಕ್ತಿ ಹೇಳುವುದಕ್ಕಿಂತ ಅವರ ಮಾತನ್ನು ನಾವು ಹೆಚ್ಚು ನಂಬುವ ಸಾಧ್ಯತೆ ಇರುತ್ತದೆ.
Ethos ಎಂದರೆ ಅಧಿಕಾರ, ಸ್ಥಾನಮಾನ, ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆ.
ಮತ್ತು ಕೊನೆಯದಾಗಿ, Pathos (ಪಾಥೋಸ್). ಇದು ನಮ್ಮ ಭಾವನೆಗಳಿಗೆ ಮನವಿ ಮಾಡುವ ವಿಧಾನ.
ಉದಾಹರಣೆಗೆ, ಒಂದು ಜನಸಮೂಹದಲ್ಲಿ ಕೋಪವನ್ನು ಹುಟ್ಟಿಸಬೇಕೆಂದಿದ್ದರೆ, ಆ ಜನರಿಗೆ “ಈ ವ್ಯಕ್ತಿ ಅಥವಾ ಆ ವಸ್ತುವಿನಿಂದ ನಿಮಗೆ ಅನ್ಯಾಯವಾಗಿದೆ; ಆದ್ದರಿಂದ ಅದಕ್ಕೆ ಹಾನಿ ಮಾಡುವುದು ನಿಮಗೆ ನ್ಯಾಯಸಮ್ಮತ” ಎಂದು ಹೇಳಬೇಕು ಎಂದು ಅರಿಸ್ಟಾಟಲ್ ವಾದಿಸಿದ್ದ.
ಸಹಜವಾಗಿಯೇ, ಮನವೊಲಿಸುವ ಕಲೆ ಎಂದರೆ ಈ ಮೂರೂ ವಿಧಾನಗಳನ್ನು ಸಮರ್ಥವಾಗಿ ಬಳಸುವುದು. ಇವುಗಳಲ್ಲಿ ಯಾವುದಕ್ಕೆ ಎಷ್ಟು ಮಹತ್ವ ನೀಡಬೇಕು ಎನ್ನುವುದು ನೀವು ಇರುವ ಪರಿಸ್ಥಿತಿ ಮತ್ತು ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅರಿಸ್ಟಾಟಲ್ ನ ಪ್ರಕಾರ, Logos, ಅಂದರೆ ತರ್ಕ ಮತ್ತು ವಿಚಾರಬದ್ಧವಾದ ವಾದ. ಇದು ಅತ್ಯಂತ ಮುಖ್ಯವಾದದ್ದು. ಆದರೆ ಇಂದಿನ ಕಾಲದಲ್ಲಿ ನಾವು ಅವನ ಅಭಿಪ್ರಾಯವನ್ನು ಒಪ್ಪದೇ ಇರಬಹುದು. ಆದ್ದರಿಂದ, ಮುಂದಿನ ಬಾರಿ ಯಾರಾದರೂ ನಿಮ್ಮ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸಿದಾಗ, ಅಥವಾ ತಮ್ಮ ಅಧಿಕಾರ, ಸ್ಥಾನಮಾನ ಮತ್ತು ಅರ್ಹತೆಗಳನ್ನು ಮುಂದಿಟ್ಟು ನಿಮ್ಮನ್ನು ನಂಬಿಸಲು ಪ್ರಯತ್ನಿಸಿದಾಗ, ಅರಿಸ್ಟಾಟಲ್ ನ ಈ ಮೂರು ವಿಧಾನಗಳನ್ನು ನೆನಪಿಸಿಕೊಳ್ಳಿ. ಏಕೆಂದರೆ ಅವರು ನಿಮ್ಮನ್ನು ಕೇವಲ ಮನವೊಲಿಸಲು ಪ್ರಯತ್ನಿಸುತ್ತಿರಬಹುದು. ಅಥವಾ ನಿಮ್ಮ ನಂಬಿಕೆಗಳು ಮತ್ತು ಅಭಿಪ್ರಾಯಗಳನ್ನು ನಿಮ್ಮ ಅರಿವಿಲ್ಲದೆ ನಿಯಂತ್ರಿಸಲು, ಅಂದರೆ ನಿಮ್ಮನ್ನು ಪ್ರಭಾವಿತಗೊಳಿಸಲು ಅಥವಾ manipulate ಮಾಡಲು ಪ್ರಯತ್ನಿಸುತ್ತಿರಬಹುದು.

