ತಿಳಿವಾದರೂ ಸರಿ, ತಿನಿಸಾದರೂ ಸರಿ. ಅಗತ್ಯವಿದ್ದಷ್ಟು ಬಳಸಬೇಕು, ಸಮಯ ಸಂದರ್ಭ ನೋಡಿ ಬಳಸಬೇಕು. ಈ ಚಿಕ್ಕ ಕತೆ ಓದಿ… ~ ಚೇತನಾ ತೀರ್ಥಹಳ್ಳಿ
ಗುರು ಒಬ್ಬನಿದ್ದ. ಅವನ ಶಿಷ್ಯ ಮಾತಿನ ಮಹಾ ಶೂರ. ಗುರು ತನ್ನ ಮಾತಿನ ಕೊನೆಗೆ ‘ಇದು ಹೀಗಿದ್ದರೂ ಇರಬಹುದು, ಇಲ್ಲದೆಯೂ ಇರಬಹುದು’ ಅನ್ನುತ್ತ ವಿನಮ್ರತೆ ತೋರಿದರೆ, ಶಿಷ್ಯ ‘ಇದಮಿತ್ಥಮ್’ ಅನ್ನುತ್ತ ಟೊಂಕ ಕಟ್ಟಿ ನಿಲ್ಲುತ್ತಿದ್ದ.
ಗುರು ಸ್ನಾನ ಮಾಡುವಾಗ ಹೇಳಿದ ವಿವೇಕವನ್ನು ಊಟ ಮಾಡುವಾಗಲೂ, ಊಟ ಮಾಡುವಾಗಿನದನ್ನು ಶೌಚಕ್ಕೂ – ಹೀಗೆ ಯಾವುದನ್ನೋ ಯಾವಾಗಲೋ ಹಚ್ಚಿ ಹಚ್ಚಿ ಊರಿಗೆ ಉಪದೇಶ ಮಾಡುತ್ತಿದ್ದ.
ಶಿಷ್ಯನ ಅವಾಂತರದಿಂದಾಗಿ ಜನಕ್ಕೆ ಗುರುವಿನ ಮೇಲೆ ಸಿಟ್ಟೇ ಬಂತು. ಈ ಗುರು ಬರೀ ತಪ್ಪು ತಪ್ಪೇ ಹೇಳಿಕೊಟ್ಟಿರಬೇಕು, ಅದಕ್ಕೇ ಈ ಶಿಷ್ಯ ಹೀಗೆ – ಅನ್ನುತ್ತಾ ಅತ್ತ ಮುಖ ಹಾಕುವುದನ್ನೇ ಬಿಟ್ಟರು.
ಭಿಕ್ಷೆಯ ಬಟ್ಟಲು ಬರಿದಾಯ್ತು. ಕೊನೆಗೆ ಮೆದುಳುಗುರುಡ ಶಿಷ್ಯನನ್ನು ಕಟ್ಟಿಕೊಂಡು ಗುರು ಆ ಊರನ್ನೇ ಬಿಡಬೇಕಾಯ್ತು.
~
ತಿಳಿವಾದರೂ ಸರಿ, ತಿನಿಸಾದರೂ ಸರಿ. ಅಗತ್ಯವಿದ್ದಷ್ಟು ಬಳಸಬೇಕು, ಸಮಯ ಸಂದರ್ಭ ನೋಡಿ ಬಳಸಬೇಕು.
ಈ ವಿವೇಕ ಉಳ್ಳವರು ದತ್ತೂರವನ್ನೂ ಅಮೃತ ಮಾಡಿಯಾರು. ಇಲ್ಲದವರು ಅಮೃತವನ್ನೂ ಕಾರ್ಕೋಟಕ ಮಾಡುವರು.

