ಬೂಟ್ಸ್ ಥಿಯರಿ

ಬೂಟ್ಸ್ ಥಿಯರಿ ಕೇವಲ ಬೂಟುಗಳ ಬಗ್ಗೆ ಅಲ್ಲ. ಇದು ನೀವು ತೆಗೆದುಕೊಳ್ಳಲೇಬೇಕಾದ ಸಾಲದ ಬಗ್ಗೆ, ನೀವು ಒಪ್ಪಿಕೊಳ್ಳಲೇಬೇಕಾದ ಬಡ್ಡಿದರದ ಬಗ್ಗೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಟೆರ್ರಿ ಪ್ರಾಚೆಟ್ ಅವರ “Men at Arms” ಕಾದಂಬರಿಯಲ್ಲಿ, ವೈಮ್ಸ್ (Vimes) ಎಂಬ ಪಾತ್ರವು ಬಡತನದ ಸುಳಿಯನ್ನು ವಿವರಿಸುವ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದನ್ನು ನೀಡುತ್ತದೆ. ಇದನ್ನು “ಬೂಟ್ಸ್ ಥಿಯರಿ” (Boots Theory) ಎಂದು ಕರೆಯಲಾಗುತ್ತದೆ.

ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಜೋಡಿ ಉತ್ತಮ ಗುಣಮಟ್ಟದ ಬೂಟುಗಳ ಬೆಲೆ ರೂಪಾಯಿ 4000 ಎಂದುಕೊಳ್ಳಿ. ಮತ್ತೊಂದು ಜೋಡಿ ಅಷ್ಟೇನೂ ಉತ್ತಮವಲ್ಲದ, ಆದರೆ “ಸದ್ಯಕ್ಕೆ ಸಾಕು” ಎನ್ನಬಹುದಾದ ಬೂಟುಗಳ ಬೆಲೆ ಕೇವಲ 1000 ರೂಪಾಯಿ.

ಶ್ರೀಮಂತ ವ್ಯಕ್ತಿಯೊಬ್ಬರು ರೂ. 4000 ಕೊಟ್ಟು ಉತ್ತಮ ಗುಣಮಟ್ಟದ ಬೂಟುಗಳನ್ನು ಖರೀದಿಸಬಹುದು. ಅವು ಹತ್ತು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಹೀಗಾಗಿ ಹತ್ತು ವರ್ಷಗಳಲ್ಲಿ ಅವರು ಬೂಟುಗಳಿಗಾಗಿ ಖರ್ಚು ಮಾಡುವುದು ಒಟ್ಟು ರೂ. 4000 ಮಾತ್ರ.

ಆದರೆ ಬಡ ವ್ಯಕ್ತಿಗೆ ರೂ. 4000 ಕೊಟ್ಟು ಉತ್ತಮ ಬೂಟುಗಳನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ರೂ. 1000 ಬೆಲೆಯ “ಸದ್ಯಕ್ಕೆ ಸಾಕು” ಎನ್ನಬಹುದಾದ ಬೂಟುಗಳನ್ನು ಖರೀದಿಸಬೇಕಾಗುತ್ತದೆ. ಆದರೆ ಆ ಬೂಟುಗಳು ಕೇವಲ ಒಂದು ವರ್ಷ ಮಾತ್ರ ಬಾಳಿಕೆ ಬರುತ್ತವೆ. ಹೀಗಾಗಿ ಅವರು ಪ್ರತಿವರ್ಷ ಹೊಸ ಜೋಡಿ ಖರೀದಿಸಬೇಕಾಗುತ್ತದೆ. ಹತ್ತು ವರ್ಷಗಳ ಅವಧಿಯಲ್ಲಿ, ಬಡ ವ್ಯಕ್ತಿ ಬೂಟುಗಳಿಗಾಗಿ ಒಟ್ಟು ರೂ. 10000 ಖರ್ಚು ಮಾಡುತ್ತಾನೆ. ಅದೇ ಸಮಯದಲ್ಲಿ ಶ್ರೀಮಂತ ವ್ಯಕ್ತಿ ಕೇವಲ ರೂ. 4000 ಖರ್ಚು ಮಾಡಿರುತ್ತಾನೆ.

ಹೀಗಾಗಿ ವೈಮ್ಸ್ ಹೇಳುವ ಅರ್ಥವೇನೆಂದರೆ, ಬಡತನವೆಂದರೆ ಕೇವಲ ಕಡಿಮೆ ಹಣ ಹೊಂದಿರುವುದು ಮಾತ್ರವಲ್ಲ. ಅದೇ ವಸ್ತುಗಳನ್ನು ದೀರ್ಘಾವಧಿಯಲ್ಲಿ ಬಳಸುವುದಕ್ಕೂ ಬಡವರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಅಂದರೆ, ಬಡವನಿಗೆ ಅಗ್ಗದ ವಸ್ತುವೇ ಕೊನೆಗೆ ಹೆಚ್ಚು ದುಬಾರಿಯಾಗುತ್ತದೆ.

ಇದು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಬಂಡವಾಳಕ್ಕೆ (capital) ಸಂಬಂಧಿಸಿದ್ದು. ಉತ್ತಮ ಬೂಟುಗಳನ್ನು ಖರೀದಿಸಲು ಬೇಕಾದಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಲ್ಲದಿದ್ದರೆ, ಹಣ ಕೈಗೆ ಬಂದಾಗಲೆಲ್ಲಾ ನೀವು ಅಗ್ಗದ ಬೂಟುಗಳನ್ನೇ ಮತ್ತೆ ಮತ್ತೆ ಖರೀದಿಸಬೇಕಾಗುತ್ತದೆ.

ಆದರೆ ಎರಡನೆಯದು ನಿಜವಾದ ಬೆಲೆಗೆ ಸಂಬಂಧಿಸಿದ್ದು. ಶ್ರೀಮಂತ ಕುಟುಂಬಗಳು ಖರೀದಿಸುವ ಅದೇ ವಸ್ತುಗಳಿಗೆ ಬಡ ಕುಟುಂಬಗಳು ಅನೇಕ ಸಂದರ್ಭಗಳಲ್ಲಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ನೀವು ದೊಡ್ಡ ಪ್ರಮಾಣದಲ್ಲಿ ಒಟ್ಟಿಗೆ ಖರೀದಿಸಲು ಸಾಧ್ಯವಾಗದಿದ್ದರೆ, ಮುಂಗಡವಾಗಿ ಹಣ ಪಾವತಿಸಲು ಸಾಧ್ಯವಾಗದಿದ್ದರೆ, ಅಥವಾ ಸೇಲ್ ಬರುವವರೆಗೆ ಕಾಯಲು ಸಾಧ್ಯವಾಗದಿದ್ದರೆ, ಕೊನೆಗೆ ಅದೇ ವಸ್ತುವಿಗೆ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ.

ಖಂಡಿತವಾಗಿಯೂ, ಬೂಟ್ಸ್ ಥಿಯರಿ ಕೇವಲ ಬೂಟುಗಳ ಬಗ್ಗೆ ಅಲ್ಲ. ಇದು ನೀವು ತೆಗೆದುಕೊಳ್ಳಲೇಬೇಕಾದ ಸಾಲದ ಬಗ್ಗೆ, ನೀವು ಒಪ್ಪಿಕೊಳ್ಳಲೇಬೇಕಾದ ಬಡ್ಡಿದರದ ಬಗ್ಗೆ. ಅದೇ ಆಸ್ತಿಗೆ ಗೃಹಸಾಲದ ಮೂಲಕ ಪಾವತಿಸಬೇಕಾಗಿದ್ದ ಮೊತ್ತಕ್ಕಿಂತ ಮೂರು ಪಟ್ಟು ಬಾಡಿಗೆ ಪಾವತಿಸಿ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಗುವ ಪರಿಸ್ಥಿತಿಯ ಬಗ್ಗೆಯೂ ಇದು.

ಅಗ್ಗದ ಬೂಟುಗಳನ್ನು ಖರೀದಿಸಬೇಕಾದರೆ, ನೀವು ಪದೇಪದೇ ಹೊಸ ಬೂಟುಗಳನ್ನು ಖರೀದಿಸಬೇಕಾಗುತ್ತದೆ. ಇದರಿಂದ ಕೇವಲ ಬೂಟುಗಳು ಸವೆಯುವುದಿಲ್ಲ; ಅವುಗಳನ್ನು ಧರಿಸುವ ಜನರೂ ಸವೆದು ಹೋಗುತ್ತಾರೆ. ಅಂದರೆ, ಬಡತನದ ಬೆಲೆ ಕೇವಲ ಹಣದಲ್ಲಿ ಅಳೆಯಲಾಗುವುದಿಲ್ಲ; ಅದು ಮನುಷ್ಯನ ಸಮಯ, ಶಕ್ತಿ ಮತ್ತು ಬದುಕಿನ ಮೇಲೂ ನಿಧಾನವಾಗಿ ತನ್ನ ಗುರುತು ಮೂಡಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.