ನಟ್‌ಪಿಕಿಂಗ್ ತಂತ್ರ

ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

“ನಟ್‌ಪಿಕಿಂಗ್” (Nutpicking) ಎನ್ನುವುದು ಒಂದು ರೀತಿಯ ತಂತ್ರ. ಇದರಲ್ಲಿ ಒಂದು ಸಣ್ಣ ಗುಂಪಿನ, ಅಂಚಿನಲ್ಲಿರುವ ಅಥವಾ ಅತಿರೇಕದ ಅಭಿಪ್ರಾಯವನ್ನು ತೆಗೆದುಕೊಂಡು, ಅದನ್ನೇ ಇಡೀ ಒಂದು ಸಿದ್ಧಾಂತ ಅಥವಾ ನಂಬಿಕೆ ವ್ಯವಸ್ಥೆಯ ಪ್ರತಿನಿಧಿಯಂತೆ ತೋರಿಸಲಾಗುತ್ತದೆ. ಉದಾಹರಣೆಗೆ, ಕೆಲ ಹವಾಮಾನ ಕಾರ್ಯಕರ್ತರು ಮೋನಾ ಲಿಸಾ ಚಿತ್ರದ ಮೇಲೆ ಸೂಪ್ ಎಸೆಯುವುದನ್ನು ತೋರಿಸಿ, “ನೋಡಿ, ಇವರೆಲ್ಲರೂ ಭಯೋತ್ಪಾದಕರೇ!” ಎಂದು ಹೇಳುವುದು. ಅಥವಾ ಒಬ್ಬ ಧರ್ಮೋಪದೇಶಕ “ಚಂಡಮಾರುತಗಳು ಸಲಿಂಗಕಾಮಿತ್ವದಿಂದ ಉಂಟಾಗುತ್ತವೆ” ಎಂದು ಹೇಳಿದ ವಿಡಿಯೋ ತುಣುಕನ್ನು ಹಂಚಿಕೊಂಡು, ಅದನ್ನೇ ಎಲ್ಲ ಧರ್ಮವಿಶ್ವಾಸಿಗಳ ಅಭಿಪ್ರಾಯ ಎಂದು ಬಿಂಬಿಸುವುದು.

ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಮೂರು ರೀತಿಯ ತಾರ್ಕಿಕ ದೋಷಗಳು (fallacies) ಒಂದರೊಳಗೆ ಸೇರಿವೆ.

ಮೊದಲನೆಯದು ಸಾಮಾನ್ಯವಾಗಿ “ಸ್ಟ್ರಾ ಮ್ಯಾನ್” (Straw Man) ಎಂದು ಕರೆಯಲ್ಪಡುವ ದೋಷ. ಅಂದರೆ, ಒಂದು ವಾದದ ಅತ್ಯಂತ ದುರ್ಬಲ ರೂಪವನ್ನು, ಅಥವಾ ಆ ಅಭಿಪ್ರಾಯವನ್ನು ಸಮರ್ಥಿಸುವ ಅಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು, ಅದನ್ನೇ ದಾಳಿ ಮಾಡುವುದು.

ಎರಡನೆಯದು “ಔಟ್‌ಗ್ರೂಪ್ ಹೋಮೋಜಿನಿಟಿ ಬಯಾಸ್” (Outgroup Homogeneity Bias). ಅಂದರೆ, ನಮ್ಮ ಗುಂಪಿಗೆ ಸೇರದ ಇತರ ಗುಂಪಿನ ಎಲ್ಲ ಸದಸ್ಯರೂ ಒಂದೇ ರೀತಿಯಾಗಿ ಯೋಚಿಸುತ್ತಾರೆ, ವರ್ತಿಸುತ್ತಾರೆ ಮತ್ತು ಭಾವಿಸುತ್ತಾರೆ ಎಂದು ಊಹಿಸುವ ಮಾನಸಿಕ ಪ್ರವೃತ್ತಿ.

ಅದಕ್ಕಾಗಿಯೇ ಜನರು “ಮಾಧ್ಯಮ”, “ಎಡಪಂಥೀಯರು”, ಅಥವಾ “ಪೂರ್ವದವರು” ಎಂದು ಹೇಳುವಾಗ, ಅವರು ಒಂದೇ ರೀತಿಯ, ಏಕೀಕೃತ ಗುಂಪು ಎಂಬಂತೆ ಮಾತನಾಡುತ್ತಾರೆ. ಆದರೆ ವಾಸ್ತವದಲ್ಲಿ ಅವುಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ, ವಿಶಾಲವಾದ ಮತ್ತು ಸಂಕೀರ್ಣವಾದ ಜನರ ಜಾಲವಿರುತ್ತದೆ.

ಮೂರನೆಯದು ತತ್ವಜ್ಞಾನಿ ಮಿರಾಂಡಾ ಫ್ರಿಕ್ಕರ್ (Miranda Fricker) ಅವರು “ಎಪಿಸ್ಟೆಮಿಕ್ ಅನ್ಯಾಯ” (Epistemic Injustice) ಎಂದು ಕರೆಯುವ ವಿಚಾರ. ಅಂದರೆ, ಒಬ್ಬ ವ್ಯಕ್ತಿಯ ಅಭಿಪ್ರಾಯಕ್ಕೆ ನಾವು ನೀಡುವ ನಂಬಿಕೆ ಅಥವಾ ವಿಶ್ವಾಸವನ್ನು, ಆ ಅಭಿಪ್ರಾಯದ ನಿಜವಾದ ಗುಣಮಟ್ಟಕ್ಕೆ ಸಂಬಂಧಿಸದ ಅಂಶಗಳ ಆಧಾರದ ಮೇಲೆ ನಿರ್ಧರಿಸುವುದು. ಉದಾಹರಣೆಗೆ, ಅವರು ಎಷ್ಟು ಜೋರಾಗಿ, ಆಕ್ರಮಣಕಾರಿಯಾಗಿ ಅಥವಾ ಭಾವೋದ್ವೇಗದಿಂದ ಮಾತನಾಡುತ್ತಾರೆ ಎನ್ನುವುದನ್ನು ಆಧಾರವಾಗಿಟ್ಟುಕೊಳ್ಳುವುದು.

ಆದರೆ ಯಾರಾದರೂ ಹೆಚ್ಚು ಜೋರಾಗಿ ಅಥವಾ ಹೆಚ್ಚು ಕಾಣಿಸಿಕೊಳ್ಳುವಂತೆ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಅವರು ಸರಿಯಾಗಿರುತ್ತಾರೆ ಎಂದರ್ಥವಲ್ಲ. ನಟ್‌ಪಿಕಿಂಗ್‌ಗೆ ಒಂದೇ ಒಂದು ಸರಳ ಪರಿಹಾರವಿಲ್ಲ. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ: ಒಬ್ಬ ಅಂಚಿನ ಅಥವಾ ಅತಿರೇಕದ ವ್ಯಕ್ತಿಯ ಧ್ವನಿ ಇಡೀ ಗುಂಪಿನ ಪ್ರತಿನಿಧಿಯಾಗುವುದಿಲ್ಲ. ಜಗತ್ತು ನಮ್ಮನ್ನು “ಯಾರು ಸರಿ, ಯಾರು ತಪ್ಪು” ಎಂದು ತಕ್ಷಣ ಎರಡು ಬದಿಗಳಲ್ಲಿ ನಿಲ್ಲಲು ಒತ್ತಾಯಿಸಿದಾಗ, ಸೂಕ್ಷ್ಮತೆ ಮತ್ತು ವೈವಿಧ್ಯತೆಯನ್ನು ಗುರುತಿಸುವುದೇ ತತ್ವಜ್ಞಾನಿಯ ಕೆಲಸ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.