ದೇವರು ನಿಜವಾಗಿಯೂ ಇರಬಹುದು ಎಂಬ ಸಾಧ್ಯತೆಯನ್ನು ಫ್ರಾಯ್ಡ್ ತಳ್ಳಿಹಾಕಲಿಲ್ಲ. ಅವನು ಹೇಳಲು ಪ್ರಯತ್ನಿಸಿದ್ದು ಧರ್ಮವು ನಮಗೆ ಏಕೆ ಇಷ್ಟೊಂದು ಆಕರ್ಷಕವಾಗಿದೆ ಎನ್ನುವುದನ್ನು ಮಾತ್ರ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
1927ರಲ್ಲಿ ಸಿಗ್ಮಂಡ್ ಫ್ರಾಯ್ಡ್, “ಧರ್ಮವು ಆಶಾಭರಿತ ಭ್ರಮೆಗಳ ಒಂದು ವ್ಯವಸ್ಥೆ” ಎಂದು ವಾದಿಸಿದ. ಅದು ನಮಗೆ ಅಸುರಕ್ಷತೆ, ಅಪಾಯ ಮತ್ತು ಮರಣವನ್ನು ಎದುರಿಸಬೇಕಾದ ಜಗತ್ತಿನೊಂದಿಗೆ ಹೊಂದಿಕೊಳ್ಳಲು ಸಹಾಯ ಮಾಡುವ ಒಂದು ಮನೋವೈಜ್ಞಾನಿಕ ವಿಧಾನ. ಏಕೆಂದರೆ ಕೆಲವೊಮ್ಮೆ ನಾವೆಲ್ಲರೂ ನಮ್ಮನ್ನು ಅಸಹಾಯಕರಂತೆ ಮತ್ತು ತುಚ್ಛರಂತೆ ಭಾವಿಸಬಹುದು. ಆದ್ದರಿಂದ ನಮ್ಮ ಮೇಲೆ ಹಾಗೂ ನಮ್ಮ ಸುತ್ತಲಿನ ಜಗತ್ತಿನ ಮೇಲೆ ಮತ್ತೆ ಒಂದು ರೀತಿಯ ನಿಯಂತ್ರಣದ ಭಾವನೆಯನ್ನು ಪಡೆಯಲು ನಾವು ಧರ್ಮವನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಫ್ರಾಯ್ಡ್ ಅಭಿಪ್ರಾಯಪಟ್ಟ.
ನಾವು ಪ್ರಕೃತಿಯನ್ನು ಕಂಡು ಭಯಪಡುತ್ತೇವೆ ಎಂದು ಫ್ರಾಯ್ಡ್ ವಾದಿಸಿದ. ಇಲ್ಲಿ ಪ್ರಕೃತಿಯೆಂದರೆ ಚಂಡಮಾರುತಗಳು, ಪ್ರವಾಹಗಳಂತಹ ಪ್ರಕೃತಿಯ ಶಕ್ತಿಗಳು ಮಾತ್ರವಲ್ಲ; ಮರಣವೂ ಕೂಡ. ನಮ್ಮದೇ ಮರಣ ಮತ್ತು ನಮ್ಮ ಪ್ರೀತಿಪಾತ್ರರ ಮರಣ, ಎರಡೂ ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತವೆ.
ಆದ್ದರಿಂದ ನಾವು ಆಕಾಶದಲ್ಲಿರುವ ಒಬ್ಬ ತಂದೆಯ ರೂಪದ ದೇವರನ್ನು ಕಲ್ಪಿಸಿಕೊಂಡಿದ್ದೇವೆ. ಆತ ನಮ್ಮನ್ನು ನೋಡಿಕೊಳ್ಳುತ್ತಾನೆ, ನಮ್ಮನ್ನು ರಕ್ಷಿಸುತ್ತಾನೆ ಎಂಬ ಭಾವನೆ ನಮಗೆ ಭದ್ರತೆಯನ್ನು ನೀಡುತ್ತದೆ. ಏಕೆಂದರೆ ತಂದೆ ಎಂಬ ಕಲ್ಪನೆಯೇ ಭದ್ರತೆ, ಸಾಂತ್ವನ ಮತ್ತು ರಕ್ಷಣೆಯ ಸಂಕೇತವಾಗಿದೆ. ಫ್ರಾಯ್ಡ್ ಪ್ರಕಾರ, ಒಂದು ಧರ್ಮ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದು ಮೂರು ಕೆಲಸಗಳನ್ನು ಮಾಡಬೇಕು.
ಮೊದಲನೆಯದು: ಅದು “ಪ್ರಕೃತಿಯ ಭೀತಿಗಳನ್ನು ದೂರ ಮಾಡಬೇಕು” ಅಂದರೆ ಜಗತ್ತನ್ನು ಸ್ವಲ್ಪವಾದರೂ ಕಡಿಮೆ ಭಯಾನಕವಾಗಿಸಬೇಕು. ಎಲ್ಲವೂ ಅಸ್ತವ್ಯಸ್ತವಾಗಿ ಮತ್ತು ಅರ್ಥವಿಲ್ಲದಂತೆ ಕಾಣುವಾಗ, ಆ ಗೊಂದಲಕ್ಕೆ ಒಂದು ಅರ್ಥವನ್ನು ನೀಡಬೇಕು.
ಎರಡನೆಯದು: ಅದು ನಮಗೆ ಒಂದು ರೀತಿಯ ಮಾನಸಿಕ ದೃಢತೆ, ಸ್ಥೈರ್ಯ ಮತ್ತು ಎದುರಿಸುವ ಶಕ್ತಿಯನ್ನು ನೀಡಬೇಕು. “ನೀನು ಇದನ್ನು ಮಾಡಬಲ್ಲೆ, ಏಕೆಂದರೆ ದೇವರು ನಿನ್ನ ಪರವಾಗಿದ್ದಾನೆ” ಎಂಬ ನಂಬಿಕೆಯನ್ನು ನೀಡಬೇಕು.
ಮೂರನೆಯದು: ಅದು ನಮಗೆ ಒಂದು ರೀತಿಯ ಸಾಂತ್ವನ ಮತ್ತು ಪ್ರತಿಫಲದ ಭರವಸೆಯನ್ನು ನೀಡಬೇಕು. ಮರಣಾನಂತರದ ಜೀವನ, ಸ್ವರ್ಗ ಅಥವಾ ಇನ್ನಾವುದೋ ಬಹುಮಾನ. “ನೀನು ಇದನ್ನೆಲ್ಲ ಸಹಿಸಿಕೊಂಡರೆ, ಅದರ ಪ್ರತಿಫಲವಾಗಿ ನಿನಗೆ ಅದು ದೊರೆಯುತ್ತದೆ” ಎಂಬ ಭರವಸೆ.
ಕುತೂಹಲಕಾರಿಯಾಗಿ, ಇವುಗಳಲ್ಲಿ ಯಾವುದೂ ಧರ್ಮವನ್ನು ಸತ್ಯ ಅಥವಾ ಸುಳ್ಳು ಎಂದು ಸಾಬೀತುಪಡಿಸುತ್ತದೆ ಎಂದು ಫ್ರಾಯ್ಡ್ ಹೇಳಲಿಲ್ಲ. ದೇವರು ನಿಜವಾಗಿಯೂ ಇರಬಹುದು ಎಂಬ ಸಾಧ್ಯತೆಯನ್ನು ಅವನು ತಳ್ಳಿಹಾಕಲಿಲ್ಲ. ಫ್ರಾಯ್ಡ್ ಹೇಳಲು ಪ್ರಯತ್ನಿಸಿದ್ದು ಧರ್ಮವು ನಮಗೆ ಏಕೆ ಇಷ್ಟೊಂದು ಆಕರ್ಷಕವಾಗಿದೆ ಎನ್ನುವುದನ್ನು ಮಾತ್ರ.
ಅವನ ದೃಷ್ಟಿಯಲ್ಲಿ ಧರ್ಮವು ಜಗತ್ತನ್ನು ಎದುರಿಸಲು ನಮಗೆ ಸಹಾಯ ಮಾಡುವ ಒಂದು ವಿಧಾನ. ಅದು ಒಂದು ರೀತಿಯ ಮನೋವೈಜ್ಞಾನಿಕ ಆಸರೆ. ಬದುಕನ್ನು ಸ್ವಲ್ಪ ಸುಲಭವಾಗಿಸಿಕೊಳ್ಳಲು ನಾವು ಬಳಸಿಕೊಳ್ಳುವ ಒಂದು ಆಧಾರ.
ಅಂದರೆ, ಧರ್ಮವು ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗಿಂತ, ಮನುಷ್ಯನು ಧರ್ಮವನ್ನು ಏಕೆ ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅದರಿಂದ ಅವನಿಗೆ ಯಾವ ಮಾನಸಿಕ ನೆಮ್ಮದಿ ದೊರೆಯುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಫ್ರಾಯ್ಡ್ ನ ಮುಖ್ಯ ಉದ್ದೇಶವಾಗಿತ್ತು.

