ಆಚರಣೆಗಳ ಪ್ರಯೋಜನ

ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜಗತ್ತಿನ ವಿವಿಧ ಧರ್ಮಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಅವು ಪರಸ್ಪರ ಬಹಳ ವಿಭಿನ್ನವಾಗಿವೆ ಎಂದು ತೋರುತ್ತದೆ. ಆದರೆ ಸಮಾಜಶಾಸ್ತ್ರಜ್ಞ ಅಥವಾ ಮಾನವಶಾಸ್ತ್ರಜ್ಞನ ಕೆಲಸವೆಂದರೆ ಸ್ವಲ್ಪ ಹಿಂದೆ ಸರಿದು, ಇಡೀ ಚಿತ್ರವನ್ನು ವಿಶಾಲವಾಗಿ ನೋಡುವುದು. ಹಾಗೆ ನೋಡಿದಾಗ, ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲಿಯೂ ಕೆಲವು ಸಾಮಾನ್ಯ ಎಳೆಗಳು ಇರುವುದನ್ನು ನಾವು ಗಮನಿಸಬಹುದು. ಅಂತಹ ಒಂದು ಸಾಮಾನ್ಯ ಅಂಶವೆಂದರೆ ಧಾರ್ಮಿಕ ಆಚರಣೆಗಳು ಮತ್ತು ವಿಧಿವಿಧಾನಗಳು (rituals).

ನಮಗೆ ತಿಳಿದಿರುವ ಬಹುತೇಕ ಪ್ರತಿಯೊಂದು ಧರ್ಮದಲ್ಲಿಯೂ ಆಚರಣೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಚಿಂತಕ ಸೈಮನ್ ಕ್ರಿಚ್ಲಿಯವರ ಪ್ರಕಾರ, ಜೀವನದ ಕಷ್ಟಗಳನ್ನು ಸಹಿಸಿಕೊಳ್ಳಲು ಮತ್ತು ಎದುರಿಸಲು ಆಚರಣೆಗಳು ವ್ಯಕ್ತಿಗೆ ನೆರವಾಗುತ್ತವೆ. ಅವರ ಮಾತಿನಲ್ಲಿಯೇ ಹೇಳುವುದಾದರೆ:

“ಆಚರಣೆಗಳನ್ನು ಪಾಲಿಸುವುದರಿಂದ ಜಗತ್ತಿನ ಭೀಕರತೆಗಳು ಸ್ವಲ್ಪ ಮೃದುವಾಗಿ, ಸ್ವಲ್ಪ ಸಹನೀಯವಾಗಿ ಕಾಣಿಸಬಹುದು. ಮಂತ್ರಗಳು ಮತ್ತು ಜೀಸಸ್ ಪ್ರೇಯರ್’ನಂತಹ ಕೆಲವು ಪದಗಳನ್ನು ಮತ್ತೆ ಮತ್ತೆ ಉಚ್ಚರಿಸುವುದಷ್ಟೇ ಆಗಿರಬಹುದು; ಆದರೆ ಆ ನಿರಂತರ ಪುನರಾವರ್ತನೆಯೇ ಮನಸ್ಸಿನ ಮೇಲಿನ ಭಾರವನ್ನು ಸ್ವಲ್ಪ ಕಡಿಮೆ ಮಾಡಬಹುದು.

ಸಮಾಜಶಾಸ್ತ್ರಜ್ಞ ಮಿರ್ಚಿಯಾ ಎಲಿಯಾಡೆ ಅವರ ಪ್ರಕಾರ, ಆಚರಣೆಗಳು ಪೌರಾಣಿಕ ಹಾಗೂ ಪವಿತ್ರ ಘಟನೆಗಳನ್ನು ಮತ್ತೆ enact ಅಂದರೆ ಪುನರಾವರ್ತಿಸಿ ಅನುಭವಿಸುವ ರೀತಿಯಲ್ಲಿ ರೂಪುಗೊಂಡಿವೆ. ಆ ಮೂಲಕ, ಆಚರಣೆ ಮಾಡುವ ವ್ಯಕ್ತಿ ದೈನಂದಿನ ಬದುಕಿನ ಸಂಕಷ್ಟಗಳಿಂದ ದೂರವಾದ, ಅವುಗಳ ಪ್ರಭಾವದಿಂದ ಮುಕ್ತವಾಗಿರುವಂತಹ ಒಂದು ಪವಿತ್ರ ಸ್ಥಳ ಅಥವಾ ಪವಿತ್ರ ಅನುಭವದ ಸ್ಥಿತಿಗೆ ಪ್ರವೇಶಿಸುತ್ತಾನೆ. ಅಂದರೆ, ಆಚರಣೆಗಳು ನಮ್ಮ ಸಾಮಾನ್ಯ, ದೈನಂದಿನ ಜಗತ್ತನ್ನು ಸ್ವಲ್ಪ ಹೆಚ್ಚು ಸಹನೀಯವಾಗಿಸುವ ಪ್ರಯತ್ನ ಎಂದು ಹೇಳಬಹುದು.

ಆಧುನಿಕ ಮನೋವಿಜ್ಞಾನವೂ ಆಚರಣೆಗಳ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತದೆ. ನಾವು ಯಾವುದೇ ಕೆಲಸವನ್ನು ನಿಯಮಿತವಾಗಿ ಮತ್ತು ಮತ್ತೆ ಮತ್ತೆ ಮಾಡುತ್ತಿದ್ದರೆ, ಅದು ಮಂತ್ರವನ್ನು ನಿಧಾನವಾಗಿ ಜಪಿಸುವುದಾಗಿರಬಹುದು, ಜಪಮಾಲೆಯ ಮಣಿಗಳನ್ನು ಒಂದೊಂದಾಗಿ ಎಣಿಸುವುದಾಗಿರಬಹುದು, ಅಥವಾ ಸರಳವಾಗಿ ಪ್ರತಿದಿನ ಸ್ವಲ್ಪ ಹೊತ್ತು ನಡೆಯುವುದಾಗಿರಬಹುದು , ಇಂತಹ ನಿರಂತರ ಹಾಗೂ ಲಯಬದ್ಧ ಕ್ರಿಯೆಗಳು ಮನಸ್ಸನ್ನು ಶಾಂತಗೊಳಿಸುತ್ತವೆ.

ಹೀಗಾಗಿ ಆಚರಣೆಗಳ ಮಹತ್ವವನ್ನು ನಾವು ಗುರುತಿಸಿದಾಗ, ಒಂದು ಕುತೂಹಲಕಾರಿ ಪ್ರಶ್ನೆ ಎದುರಾಗುತ್ತದೆ:

ಹೆಚ್ಚೆಚ್ಚು ಧರ್ಮನಿರಪೇಕ್ಷವಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಧಾರ್ಮಿಕ ವಿಧಿವಿಧಾನಗಳ ಸ್ಥಾನವನ್ನು ಯಾವುದರಿಂದ ತುಂಬಲಾಗುತ್ತಿದೆ? ಇಂದು ನಮ್ಮ ಆಚರಣೆಗಳು ಯಾವುವು? ನಮ್ಮ ಮನಸ್ಸಿಗೆ ನೆಮ್ಮದಿ, ಅರ್ಥ ಮತ್ತು ಸ್ಥಿರತೆಯನ್ನು ನೀಡುವ ಆ ಪುನರಾವರ್ತಿತ ಕ್ರಿಯೆಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.