ನಿಜವಾದ ಪ್ರೀತಿ ಭೌತಿಕ ರೂಪ ಮತ್ತು ಲೌಕಿಕ ಗುಣಗಳನ್ನು ಮೀರಿದ್ದು ಎಂದು ಶಿವನು ಬೋಧಿಸುತ್ತಾನೆ. ಮತ್ತೊಬ್ಬರಲ್ಲಿ ತನ್ನದೇ ಆದ ಆತ್ಮವನ್ನು ಗುರುತಿಸುವುದೇ ನಿಜವಾದ ಪ್ರೀತಿ ಎಂದು ಪಾರ್ವತಿಗೆ ವಿವರಿಸುತ್ತಾನೆ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಪಾರ್ವತಿ ಶಿವನನ್ನು ಕೇಳಿದಳು, “ಮಹಾದೇವ, ಮನುಷ್ಯರು ಪ್ರೀತಿಯನ್ನು ಅಪಾರ ಸಂತೋಷವನ್ನು ತರುವ, ಅಷ್ಟೇ ತೀವ್ರವಾದ ದುಃಖವನ್ನೂ ತರುವ ಬಂಧನವೆಂದು ಕರೆಯುತ್ತಾರೆ. ಅವರು ವಿರಹದಲ್ಲಿ ಅಳುತ್ತಾರೆ; ಅದೇ ವೇಳೆಗೆ, ತಮಗೆ ಪ್ರಿಯವಾದದ್ದನ್ನು ಕಳೆದುಕೊಳ್ಳುವ ಭಯದಿಂದ ನರಳುತ್ತಾರೆ. ಈ ಪ್ರೀತಿಯ ನಿಜವಾದ ಸ್ವರೂಪವೇನು? ಅದು ಬಂಧನವೋ ಅಥವಾ ಮುಕ್ತಿಯೋ?”
ಶಿವ ತನ್ನ ನೋಟದಲ್ಲೇ ಸಾಂತ್ವನದ ಮುಗುಳು ನಗು ತುಳುಕಿಸುತ್ತ ಹೇಳಿದ. “ದೇವಿ, ಮನುಷ್ಯರು ಯಾವುದನ್ನು ಪ್ರೀತಿ ಎಂದು ಕರೆಯುತ್ತಾರೋ, ಅದು ಬಹುತೇಕ ಆಸೆ ಮತ್ತು ಭಯದಿಂದ ಹುಟ್ಟಿದ ಮೋಹವಷ್ಟೇ. ಅವರು ದೇಹವನ್ನು ಪ್ರೀತಿಸುತ್ತಾರೆ, ಕೇವಲ ಕ್ಷಣಿಕವಾದ ನೆರಳನ್ನು ಪ್ರೀತಿಸುತ್ತಾರೆ. ಆ ದೇಹ ವಯಸ್ಸಿನ ಜೊತೆ ಬದಲಾಗುತ್ತ ನಡೆದಾಗ ಅಥವಾ ಮರೆಯಾದಾಗ ಅದನ್ನು ಒಪ್ಪಿಕೊಳ್ಳಲಾಗದೆ ಕಷ್ಟಪಡುತ್ತಾರೆ, ದುಃಖಿಸುತ್ತಾರೆ. ಏಕೆಂದರೆ ಅವರು ಮೋಹದ ಬಂಧನಕ್ಕೆ ಸಿಲುಕಿರುತ್ತಾರೆ. ಆದರೆ ನಿಜವಾದ ಪ್ರೀತಿ ಹಾಗಲ್ಲ. ಅದು ಬಂಧನವಲ್ಲ; ಅದು ಆತ್ಯಂತಿಕ ಮುಕ್ತಿ.”
“ಹಾಗಾದರೆ ದುಃಖಿಸದೆ ಪ್ರೀತಿಸಲು ಸಾಧ್ಯವೇ ಇಲ್ಲವೆ?” ಪಾರ್ವತಿಯ ಮರುಪ್ರಶ್ನೆ.
“ನಾವು ಯಾರನ್ನು ಪ್ರೀತಿಸುತ್ತೀವೋ ಅವರು ನಮಗಿಂತ ಬೇರೆಯಲ್ಲ ಅನ್ನುವುದನ್ನು ಅರಿತುಕೊಂಡರೆ, ದುಃಖವಿಲ್ಲದೆ ಪ್ರೀತಿಸಲು ಸಾಧ್ಯ. ನಮ್ಮನ್ನೇ ನೋಡು… ನನ್ನನ್ನು ಪಡೆಯಲು ನೀನು ಕಠಿಣ ತಪಸ್ಸು ಮಾಡಿದೆ. ನಾವಿಬ್ಬರೂ ಒಂದಾಗಿ ನಮ್ಮ ಪೂರ್ಣತೆಯನ್ನು ಅರಿತುಕೊಂಡೆವು. ನೀನು ಪ್ರಕೃತಿ… ನೀನು ಶಕ್ತಿ. ನೀನು ಸೃಷ್ಟಿ ಮತ್ತು ಅಭಿವ್ಯಕ್ತಿ. ನಾನು ಪುರುಷ… ನಾನು ಸಾಕ್ಷಿ ಮತ್ತು ಪ್ರಜ್ಞೆ. ನಮ್ಮ ಪ್ರೀತಿ ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಒಂದಾದ ಹಾಗಲ್ಲ; ಇದು ನಾವಿಬ್ಬರೂ ಒಂದೇ ಎಂಬ ಪರಮ ಸತ್ಯದ ಸಾಕ್ಷಾತ್ಕಾರ. ಇಂಥಾ ಸಾಕ್ಷಾತ್ಕಾರ ಘಟಿಸಿದ ಮೇಲೆ ದುಃಖವೆಲ್ಲಿಯದು?”

