ನಾವು ‘ಗುರು’ ಎಂದು ಕರೆಯುವುದು…

ನಾವು ‘ಗುರು’ ಎಂದು ಕರೆಯುವುದು ನಮಗೆ ಸತ್ಯವನ್ನು ನೀಡಬಲ್ಲ ವ್ಯಕ್ತಿಯನ್ನು. ಆದರೆ ಅವರು ಸತ್ಯವನ್ನು ಕಲಿಸಬಲ್ಲರು ಎನ್ನುವುದಲ್ಲ, ಸತ್ಯವನ್ನು ಕಲಿಸಲು ಸಾಧ್ಯವಿಲ್ಲ; ಅದನ್ನು ಗ್ರಹಿಸಿಕೊಳ್ಳಬಹುದು. ಗುರುವಿನ ಸಾನ್ನಿಧ್ಯವು ನಮಗೆ ಸತ್ಯವನ್ನು ಗ್ರಹಿಸಿಕೊಳ್ಳಲು ಸಹಾಯ ಮಾಡಬಲ್ಲದು ~ ಓಶೋ / What Is, Is, What Ain’t, Ain’t । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಗುರು ಎನ್ನುವ ಪರಿಕಲ್ಪನೆ ಪೂರ್ವದ ಕೊಡುಗೆ. ಆ ಪದವನ್ನು ಬೇರೆ ಭಾಷೆಗೆ ಸರಿಯಾಗಿ ಅನುವಾದಿಸುವುದೇ ಸಾಧ್ಯವಿಲ್ಲ. ನಾವು ಅದನ್ನು ‘ಮಾಸ್ಟರ್’ ಎಂದು ಅನುವಾದಿಸಿದಾಗ ಅದರ ಬಹುಪಾಲು ಅರ್ಥ ಕಳೆದುಹೋಗುತ್ತದೆ. ಏಕೆಂದರೆ ಮಾಸ್ಟರ್ ಎಂದರೆ ಒಬ್ಬ ಶಿಕ್ಷಕ, ಆದರೆ ಗುರು ಶಿಕ್ಷಕನಲ್ಲ. ಪಾಶ್ಚಾತ್ಯ ಚಿಂತನಾ ಪರಂಪರೆಯಲ್ಲಿ ಗುರುವಿನಂತಹ ವ್ಯಕ್ತಿತ್ವ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ಆ ವಿದ್ಯಮಾನ ಪೂರ್ವದ್ದಾಗಿದೆ. ಅದು ಮೂಲಭೂತವಾಗಿ ಪೂರ್ವದ ಅನುಭವವಾಗಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು.

ನಾವು ‘ಗುರು’ ಎಂದು ಕರೆಯುವುದು ನಮಗೆ ಸತ್ಯವನ್ನು ನೀಡಬಲ್ಲ ವ್ಯಕ್ತಿಯನ್ನು. ಆದರೆ ಅವರು ಸತ್ಯವನ್ನು ಕಲಿಸಬಲ್ಲರು ಎನ್ನುವುದಲ್ಲ, ಸತ್ಯವನ್ನು ಕಲಿಸಲು ಸಾಧ್ಯವಿಲ್ಲ; ಅದನ್ನು ಗ್ರಹಿಸಿಕೊಳ್ಳಬಹುದು. ಗುರುವಿನ ಸಾನ್ನಿಧ್ಯವು ನಮಗೆ ಸತ್ಯವನ್ನು ಗ್ರಹಿಸಿಕೊಳ್ಳಲು ಸಹಾಯ ಮಾಡಬಲ್ಲದು. ಅವರು ಒಂದು ವೇಗವರ್ಧಕದಂತೆ. ಅವರು ವಾಸ್ತವವಾಗಿ ಏನನ್ನೂ ಮಾಡಲು ಹೋಗುವುದಿಲ್ಲ. ಅವರು ಕರ್ತನಲ್ಲ. ಒಬ್ಬ ವ್ಯಕ್ತಿ ತನ್ನ ಕರ್ತೃತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಾಗಲೇ ಅವನು ಗುರುವಾಗುತ್ತಾನೆ. ಆಗ ಅವನು ಮಾಡುವವನಾಗಿ ಉಳಿದಿರುವುದಿಲ್ಲ. ಕರ್ತೃತ್ವ ಹೋದಾಗ ಅಹಂಕಾರವೂ ಹೋಗುತ್ತದೆ. ಅವನು ಸಂಪೂರ್ಣವಾಗಿ ನಿಷ್ಕ್ರಿಯನಾಗುತ್ತಾನೆ. ಅವನೊಳಗೆ ಅಲ್ಪಮಾತ್ರದ ಬಯಕೆಯ ಅಲೆಯೂ ಏಳುವುದಿಲ್ಲ. ಬಯಕೆಯೇ ಇಲ್ಲದಿರುವಾಗ ಮಾಡುವಿಕೆಯೂ ಇರಲು ಸಾಧ್ಯವಿಲ್ಲ. ಏಕೆಂದರೆ ಮಾಡುವಿಕೆಗೆ ಬಯಕೆ ಬೇಕು, ಮಾಡುವಿಕೆಗೆ ಒಬ್ಬ ಕರ್ತನೂ ಬೇಕು.

ಗುರು ಅಥವಾ ಮಾಸ್ಟರ್ ಎಂದರೆ ಅಸ್ತಿತ್ವವೇ ಇಲ್ಲದವನಂತೆ, ಯಾರೂ ಅಲ್ಲದವನಂತೆ ಇರುವ ವ್ಯಕ್ತಿ. ಆದರೆ ಅವನ ಆ ‘ಯಾರೂ ಅಲ್ಲದಿರುವಿಕೆ’ಯ ಮೂಲಕ ಅನಂತವು ಹರಿಯತೊಡಗುತ್ತದೆ. ಅವನ ಶೂನ್ಯತೆಯ ಮೂಲಕ ಇಡೀ ಅಸ್ತಿತ್ವವೇ ಪ್ರವಾಹದಂತೆ ಒಳಹೊಕ್ಕು ತುಂಬಿಕೊಳ್ಳುತ್ತದೆ. ಗುರು ಎಂದರೆ ಯಾರ ಸಾನ್ನಿಧ್ಯದಲ್ಲಿ ಸತ್ಯವನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅಂತಹ ವ್ಯಕ್ತಿ.

ಆದರೆ ಇದರಲ್ಲಿ ಶಿಷ್ಯನ ಪಾತ್ರವೂ ಬಹಳ ಮುಖ್ಯ. ಏಕೆಂದರೆ ಗುರು ಕರ್ತನಲ್ಲ. ಅವರು ಬೆಳಕಿನ ಜ್ವಾಲೆಯಂತೆ ಸುಮ್ಮನೆ ಇರುತ್ತಾರೆ. ನೀನು ಕಣ್ಣುಗಳನ್ನು ತೆರೆದರೆ, ನಿನ್ನ ಕಣ್ಣುಗಳು ಬೆಳಕಿನಿಂದ ತುಂಬಿಕೊಳ್ಳುತ್ತವೆ. ಕಣ್ಣುಗಳನ್ನು ಮುಚ್ಚಿಕೊಂಡೇ ಇದ್ದರೆ, ಜ್ವಾಲೆಯು ಅಲ್ಲಿಯೇ ಇರುತ್ತದೆ; ಆದರೆ ಅದು ನಿನ್ನ ಮೇಲೆ ಆಕ್ರಮಣ ಮಾಡುವುದಿಲ್ಲ.

ಅದು ನಿನ್ನ ಕಣ್ಣುರೆಪ್ಪೆಗಳನ್ನು ತಟ್ಟುವುದಿಲ್ಲ. ‘ಕಣ್ಣುಗಳನ್ನು ತೆರೆ’ ಎಂದು ಹೇಳುವುದಿಲ್ಲ. ಅದು ಏನನ್ನೂ ಹೇಳುವುದಿಲ್ಲ. ಅದು ಸುಮ್ಮನೆ ಅಲ್ಲಿಯೇ ಇರುತ್ತದೆ. ನಿನ್ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನೀನು ಕಣ್ಣುಗಳನ್ನು ತೆರೆದರೆ, ನೀನು ಸ್ವೀಕರಿಸುವವನಾಗುತ್ತೀಯೆ. ಕಣ್ಣುಗಳನ್ನು ತೆರೆಯದಿದ್ದರೆ, ನೀನು ಕಳೆದುಕೊಳ್ಳುತ್ತೀಯೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.