ಮಧ್ಯಮ ಮಾರ್ಗ : ಸಿದ್ಧಾರ್ಥ – ಸುಜಾತಾ ನಡುವಿನ ಸಂವಾದ

“ನಿಮ್ಮ ದೇಹವನ್ನು ಬಿಲ್ಲಿನಂತೆ ಭಾವಿಸಿ. ಬಾಗಿಸಿ ಬಿಗಿದ ಸೂತ್ರವೇ ಕಡಿದುಹೋದರೆ, ನಿಮ್ಮ ಹುಡುಕಾಟದ ಬಾಣ ತನ್ನ ಗುರಿ ಮುಟ್ಟುವುದು ಹೇಗೆ? ನೀವು ಹುಡುಕುತ್ತಿರುವ ಪರಮ ಸತ್ಯವನ್ನು ಕಂಡುಕೊಳ್ಳುವುದು ಹೇಗೆ?” ಕೇಳಿದಳು ಸುಜಾತಾ… । ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಸುಜಾತಾ: ತಾಪಸಿ, ದಯವಿಟ್ಟು ಈ ಕಾಣಿಕೆಯನ್ನು ಸ್ವೀಕರಿಸಿ. ವನದೇವತೆಗಳಿಗೆ ಅರ್ಪಿಸಲೆಂದು ನಾನಿದನ್ನು ತಂದೆ. ಆದರೆ ಈಗ ಇದನ್ನು ನಿಮಗೇ ನೀಡಬೇಕೆಂದು ಬಲವಾಗಿ ಅನಿಸುತ್ತಿದೆ. ದಯವಿಟ್ಟು ಇದನ್ನು ಸೇವಿಸಿ, ನನ್ನನ್ನು ಹರಸಿ.

ಸಿದ್ಧಾರ್ಥ: (ಮೆಲ್ಲನೆ ಕಣ್ಣು ತೆರೆಯುತ್ತಾ, ಕ್ಷೀಣ ಧ್ವನಿಯಲ್ಲಿ) ಕ್ಷಮಿಸು, ನಾನಿದನ್ನು ತಿನ್ನಲಾರೆ. ನಾನು ಈ ದೇಹವನ್ನು ಮೀರಲು ಯತ್ನಿಸುತ್ತಿರುವವನು. ನನಗೇಕೆ ಇದನ್ನು ಕೊಡುತ್ತಿದ್ದೀಯ? ಇದನ್ನು ಸೇವಿಸಿದರೆ ನನ್ನ ಕಠಿಣ ತಪಸ್ಸು ವ್ಯರ್ಥವಾಗುವುದು. ಸತ್ಯದ ಹುಡುಕಾಟದಲ್ಲಿ ನಾನು ವರ್ಷಗಟ್ಟಲೆ ಈ ದೇಹವನ್ನು ದಂಡಿಸಿದ್ದೇನೆ.

ಸುಜಾತಾ: ದಯವಿಟ್ಟು ಕ್ಷಮಿಸಿ ಮಹಾಶಯರೇ, ದೇಹವನ್ನು ಇಷ್ಟು ಕಠಿಣವಾಗಿ ದಂಡಿಸುವುದು ಸರಿಯೇ? ಬಿಲ್ಲಿನ ಹೆದೆಯನ್ನು ಅತಿಯಾಗಿ ಎಳೆದರೆ ಅದು ಕಡಿದು ಹೋಗುತ್ತದೆ. ಅದೇ ರೀತಿ, ತೀರಾ ಸಡಿಲಗೊಳಿಸಿದರೆ ಅದು ಠೇಂಕಾರ ಹೊರಡಿಸುವುದಿಲ್ಲ. ನಿಮ್ಮ ದೇಹವನ್ನು ಬಿಲ್ಲಿನಂತೆ ಭಾವಿಸಿ. ಬಾಗಿಸಿ ಬಿಗಿದ ಸೂತ್ರವೇ ಕಡಿದುಹೋದರೆ, ನಿಮ್ಮ ಹುಡುಕಾಟದ ಬಾಣ ತನ್ನ ಗುರಿ ಮುಟ್ಟುವುದು ಹೇಗೆ? ನೀವು ಹುಡುಕುತ್ತಿರುವ ಪರಮ ಸತ್ಯವನ್ನು ಕಂಡುಕೊಳ್ಳುವುದು ಹೇಗೆ?

ಸಿದ್ಧಾರ್ಥ: (ಸ್ವಗತದಲ್ಲಿ) ಅತಿಯಾಗಿ ಎಳೆದರೆ ಕಡಿದುಹೋಗುತ್ತದೆ… ತೀರಾ ಸಡಿಲಗೊಳಿಸಿದರೆ ಠೇಂಖರಿಸುವುದಿಲ್ಲ!

ಸುಜಾತಾ: ಇದನ್ನು ತಿನ್ನಿ. ಇದರಿಂದ ನೀವು ಹುಡುಕುತ್ತಿರುವುದನ್ನು ಕಂಡುಕೊಳ್ಳಲು ನಿಮಗೆ ಶಕ್ತಿ ಸಿಗುತ್ತದೆ.

ಸಿದ್ಧಾರ್ಥ: (ನಡುಗುವ ಕೈಗಳನ್ನು ಚಾಚಿ ಪಾತ್ರೆಯನ್ನು ಸ್ವೀಕರಿಸುತ್ತಾ) ನಿನ್ನ ತಿಳುವಳಿಕೆ ಎಷ್ಟು ಸರಳ! ಆದರೂ ಒಂದೇ ಮಾತಿಗೆ ಅದು ನನ್ನ ಅಹಂಕಾರವನ್ನು ಪುಡಿಗಟ್ಟಿತು. ನಮ್ಮನ್ನು ಕಾಯುವ ದೇಹವನ್ನೇ ಹಾನಿಗೀಡು ಮಾಡಿದರೆ ಮುಕ್ತಿ ದೊರೆಯುವುದಾದರೂ ಹೇಗೆ? ನೀನು ನನಗೆ ಬಿಗಿಯೂ ಅಲ್ಲದ, ಸಡಿಲವೂ ಅಲ್ಲದ ಮಧ್ಯಮ ಮಾರ್ಗವನ್ನು ತೋರಿಸಿಕೊಟ್ಟೆ. ನಾನು ನಿನಗೆ ಆಭಾರಿ.


(ಸಿದ್ಧಾರ್ಥ, ಬುದ್ಧನಾಗುವ ಹಂತದಲ್ಲಿ ಸುಜಾತಾ ನೀಡಿದ ಹಾಲನ್ನವನ್ನು ಸ್ವೀಕರಿಸಿ, ಆಕೆಯ ಮಾತಿನಿಂದ ಮಧ್ಯಮ ಮಾರ್ಗದ ಹೊಳಹು ಪಡೆಯುತ್ತಾನೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.