ಪ್ರೀತಿ – ಮುನಿಸು : ರಾಧಾ ಕೃಷ್ಣರ ಸಂವಾದ

ಜಯದೇವ ಕವಿಯ ಗೀತ ಗೋವಿಂದ ಕೃತಿಯಿಂದ ರಾಧಾ – ಕೃಷ್ಣ ಸಂವಾದದ ಚಿಕ್ಕ ತುಣುಕು । ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಕೃಷ್ಣ: ರಾಧೇ, ಕೋಮಲಾಂಗಿ ಮನದನ್ನೆ! ನಿನ್ನ ಚರಣಕಮಲಗಳನ್ನು ನನ್ನ ತಲೆಯ ಮೇಲಿರಿಸಿ ಕಾಮತಾಪದಿಂದ ಉಂಟಾದ ಉರಿಯನ್ನು ಶಮನಗೊಳಿಸು. ನಿನ್ನ ಪಾದಗಳನ್ನು ನನ್ನ ಶಿರಸ್ಸಿನ ಅಲಂಕಾರವಾಗಿರಿಸು. ನನ್ನೊಳಗೆ ವಿರಹಾಗ್ನಿ ಉರಿಯುತ್ತಿದೆ, ನಿನ್ನ ಸ್ಪರ್ಶವೆಂಬ ತಣ್ಣನೆಯ ಅಮೃತದಿಂದ ಅದನ್ನು ನಂದಿಸು.

ರಾಧೆ: ಅದಕ್ಕೆ ನಾನು ಹೊಣೆಯೇ? ಇಷ್ಟಕ್ಕೂ ಈಗೇಕೆ ನನ್ನ ಬಳಿ ಬಂದೆ? ಕತ್ತಲಲ್ಲಿ ನಾನೊಬ್ಬಳೇ ಕಾಯುತ್ತಿದ್ದಾಗ ನೀನು ವನ ಕನ್ನಿಕೆಯರೊಡನೆ ನಲಿಯುತ್ತಿದ್ದೆಯಲ್ಲವೆ? ಹುಣ್ಣಿಮೆ ಬೆಳಕಲ್ಲಿ ನರ್ತಿಸುತ್ತಿದ್ದೆಯಲ್ಲವೆ? ಹೋಗು, ನಿನ್ನ ಉರಿಯನ್ನು ಅವರಿಂದಲೇ ಶಮನಗೊಳಿಸಿಕೋ. ನಿನ್ನ ಮಾತುಗಳು ಮಧುರ ನಿಜ, ಆದರೆ ನಿನ್ನ ಹೃದಯ ಕಡಲ ಅಲೆಯಂತೆ ಕ್ಷಣಿಕ.

ಕೃಷ್ಣ: ಹಾಗನ್ನಬೇಡ ರಾಧೆ, ನೀನು ನನ್ನ ಮುಕುಟ ಮಣಿ, ನೀನೇ ನನ್ನ ಪ್ರಾಣ, ನನ್ನ ಮನಸ್ಸೆಂಬ ಸಮುದ್ರದ ಏಕೈಕ ರತ್ನ ನೀನು. ನಾನು ತಪ್ಪು ಮಾಡಿದ್ದರೆ, ನನ್ನನ್ನು ದಂಡಿಸು, ನಿನ್ನ ಉಗುರುಗಳಿಂದ ನನ್ನ ಮೈಮೇಲೆ ಗೆರೆ ಮೂಡಿಸು ಅಥವಾ ನಿನ್ನ ಬಾಹುಗಳಿಂದ ನನ್ನನ್ನು ಬಿಗಿಯಾಗಿ ಬಂಧಿಸು. ಆದರೆ ಬಿರುಮಾತಿನಿಂದ ನನ್ನನ್ನು ಶಿಕ್ಷಿಸಬೇಡ.

ರಾಧೆ: ನನ್ನನ್ನು ಪ್ರಾಣ ಅನ್ನುತ್ತೀಯ, ವಿರಹದಲ್ಲಿ ಬಾಡಿಹೋಗುವಂತೆ ಬಿಟ್ಟುಬಿಡುತ್ತೀಯ. ಎಲ್ಲರನ್ನೂ ಮರುಳುಗೊಳಿಸಿ ಮಾಯವಾಗುವ, ಕೊಳಲೂದುವ ಮೋಹನಾಂಗನನ್ನು ನಾನು ನಂಬುವುದಾದರೂ ಹೇಗೆ?

ಕೃಷ್ಣ: ಪ್ರಿಯೆ, ನಿನ್ನ ಹೆಸರನ್ನು ಉಸುರದ ಯಾವ ರಾಗವನ್ನೂ ಈ ಕೊಳಲು ನುಡಿಸುವುದಿಲ್ಲ. ಪ್ರತಿಯೊಂದು ಸ್ವರವೂ ನಿನಗಾಗಿರುವ ನನ್ನ ವಿರಹದ ವೇದನೆಯನ್ನು ಸಾರುತ್ತದೆ. ಈ ಲತಾಗೃಹವನ್ನು ಬಿಟ್ಟು ಬೇರೆ ಯಾವ ಆಶ್ರಯವೂ, ರಾಧೆಯನ್ನು ಬಿಟ್ಟು ಬೇರೆ ಯಾರೂ ರಾಣಿಯೂ ನನ್ನ ಹೃದಯದೊಳಗಿಲ್ಲ. ನನ್ನನ್ನು ನಂಬು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.