“ಒಂದು ಮಹಾನ್ ಸುಳ್ಳು ಇರಬೇಕು. ಅದನ್ನು ಎಲ್ಲರೂ, ಆದರ್ಶಪ್ರಾಯವಾಗಿ ಆಡಳಿತಗಾರರೂ ಸೇರಿದಂತೆ, ಎಲ್ಲರೂ ನಂಬಬೇಕು. ಅದು ಸಾಧ್ಯವಾಗದಿದ್ದರೆ, ಕನಿಷ್ಠ ನಗರದ ಉಳಿದ ಜನರಾದರೂ ಅದನ್ನು ನಂಬಬೇಕು!” ಅನ್ನುತ್ತಾನೆ ಪ್ಲೇಟೋ ~ ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಬ್ರಿಟನ್ ನಾಜಿಗಳನ್ನು ಏಕಾಂಗಿಯಾಗಿ ಸೋಲಿಸಿತು. ಅಮೆರಿಕದ Pilgrim Fathers ಸಂತರೆನಿಸಿಕೊಂಡಿದ್ದರು. ಚೀನಾ ಯಾವಾಗಲೂ ಒಂದು ದೊಡ್ಡ, ಸಂತೋಷಭರಿತ ಕುಟುಂಬವಾಗಿತ್ತು. ಮಂಡೇಲಾ ದಕ್ಷಿಣ ಆಫ್ರಿಕಾವನ್ನು ನಿರ್ಮಿಸಿದರು. ಗಾಂಧಿ ಪರಿಪೂರ್ಣರಾಗಿದ್ದರು. ನೆಪೋಲಿಯನ್ ಇತಿಹಾಸದಲ್ಲೇ ಶ್ರೇಷ್ಠ ಫ್ರೆಂಚ್ ವ್ಯಕ್ತಿ.
ಖಂಡಿತವಾಗಿಯೂ, ಇವುಗಳಲ್ಲಿ ಯಾವುದೂ ಸಂಪೂರ್ಣ ಸತ್ಯವಲ್ಲ. ಆದರೆ ಪ್ಲೇಟೋನ ಪ್ರಕಾರ, ಇವು ನಿಜವೆಂದು ನಾವು ನಂಬುವುದು ಒಳಿತಾಗಿರಬಹುದು.
ತನ್ನ ರಿಪಬ್ಲಿಕ್ ಕೃತಿಯಲ್ಲಿ ಪ್ಲೇಟೋ ಒಂದು ಪ್ರಶ್ನೆಯನ್ನು ಕೇಳುತ್ತಾನೆ: ನೂರಾರು ಮೈಲುಗಳಷ್ಟು ದೂರದಲ್ಲಿರುವ ಅಪರಿಚಿತರೊಂದಿಗೆ ಜನರು ಬಾಂಧವ್ಯ ಬೆಳೆಸಿಕೊಳ್ಳುವಂತೆ, ಅವರ ಬಗ್ಗೆ ಕಾಳಜಿ ವಹಿಸುವಂತೆ ಒಂದು ಸರ್ಕಾರ ಹೇಗೆ ಮಾಡಬಲ್ಲದು? ಅದಕ್ಕೆ ಅವನು ನೀಡುವ ಉತ್ತರವೇ ‘ಉದಾತ್ತ ಸುಳ್ಳು’ (The Noble Lie)! ಉದಾತ್ತ ಸುಳ್ಳು ಎನ್ನುವುದು ಜನರನ್ನು ಒಂದೇ ಧ್ವಜದಡಿ ಒಗ್ಗೂಡಿಸುವ ಒಂದು ಪುರಾಣ ಅಥವಾ ಕಥೆ.
ಪ್ಲೇಟೋ ನ ಪ್ರಕಾರ,
“ಒಂದು ಮಹಾನ್ ಸುಳ್ಳು ಇರಬೇಕು. ಅದನ್ನು ಎಲ್ಲರೂ, ಆದರ್ಶಪ್ರಾಯವಾಗಿ ಆಡಳಿತಗಾರರೂ ಸೇರಿದಂತೆ, ಎಲ್ಲರೂ ನಂಬಬೇಕು. ಅದು ಸಾಧ್ಯವಾಗದಿದ್ದರೆ, ಕನಿಷ್ಠ ನಗರದ ಉಳಿದ ಜನರಾದರೂ ಅದನ್ನು ನಂಬಬೇಕು!”
ಉದಾತ್ತ ಸುಳ್ಳಿಗೆ ಎರಡು ಕಾರ್ಯಗಳಿರಬೇಕು.
ಮೊದಲನೆಯದಾಗಿ, ಅದು ನಾವು ಸೇರಿರುವೆವು ಎಂದು ಭಾವಿಸಬಹುದಾದ ಒಂದು ನಾಗರಿಕ ಅಥವಾ ರಾಷ್ಟ್ರೀಯ ಅಸ್ಮಿತೆಯನ್ನು ಸೃಷ್ಟಿಸಬೇಕು. ಅದು, ‘ಇದು ನಮ್ಮ ಮನೆ, ಇದು ನಮ್ಮ ಭೂಪ್ರದೇಶ’ ಎಂದು ಹೇಳುತ್ತದೆ.
ಎರಡನೆಯದಾಗಿ, ಅದು ಕೆಲವು ನಿರ್ದಿಷ್ಟ ಮೌಲ್ಯಗಳನ್ನು ಆಧರಿಸಿದ ಒಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಬೇಕು. ಪ್ಲೇಟೋನ ಕಾಲದ ಗ್ರೀಸ್‌ನಲ್ಲಿ ಇದರ ಅರ್ಥ ಮೂರು ವರ್ಗಗಳ ವ್ಯವಸ್ಥೆಯಾಗಿತ್ತು: ಕಂಚಿನ ವರ್ಗದ ನಾಗರಿಕರು, ಬೆಳ್ಳಿಯ ವರ್ಗದ ನಾಗರಿಕರು ಮತ್ತು ಅಗ್ರಸ್ಥಾನದಲ್ಲಿರುವ ಚಿನ್ನದ ವರ್ಗದ ನಾಗರಿಕರು.
ಹಾಗಾದರೆ, ಉದಾತ್ತ ಸುಳ್ಳಿನ ಆಧುನಿಕ ರೂಪ ಯಾವುದು?
ಬಹುಶಃ, ಕಷ್ಟಪಟ್ಟು ದುಡಿದರೆ ಯಾವಾಗಲೂ ಶ್ರೀಮಂತರಾಗಬಹುದು ಎನ್ನುವುದು. ಅಥವಾ ಮಾರುಕಟ್ಟೆ ಯಾವಾಗಲೂ ಅರ್ಹತೆಯನ್ನು ಗುರುತಿಸಿ ಪ್ರತಿಫಲ ನೀಡುತ್ತದೆ ಎನ್ನುವುದು. ‘ನಾವು ಸಹಿಷ್ಣುಗಳು, ನಾವೇ ಸದ್ಗುಣಿಗಳು’ ಎನ್ನುವುದೂ ಆಗಿರಬಹುದು!
ಉದಾತ್ತ ಸುಳ್ಳು ಎಲ್ಲರ ಒಳಿತಿಗಾಗಿ ಇರಬೇಕು ಎಂದು ಪ್ಲೇಟೋ ವಾದಿಸಿದನು. ಆದರೆ ಇಂದಿಗೂ ಅದು ನಿಜವೇ? ಹೀಗಾಗಿ, ಇಂದು ನಾವು ನಮ್ಮನ್ನು ಹೀಗೆ ಪ್ರಶ್ನಿಸಬಹುದು:
ನಾವು ಒಂದು ಉದಾತ್ತ ಸುಳ್ಳಿನ ಬಗ್ಗೆ ಕೇಳಿದಾಗ, ಅದನ್ನು ನಂಬಲು ನಾವು ಯಾವ ಸತ್ಯಗಳನ್ನು ಕಡೆಗಣಿಸಬೇಕಾಗುತ್ತದೆ?
***********************************

