ಸಮಗ್ರವಾಗಿ ನೋಡಿದರಷ್ಟೇ ಅರ್ಥ ನೀಡಲು ಸಾಧ್ಯ

“ಯಾವುದೇ ಸತ್ಯಾಂಶ, ವಸ್ತು ಅಥವಾ ವ್ಯಕ್ತಿಯನ್ನು ಪ್ರತ್ಯೇಕ ತುಣುಕುಗಳಾಗಿ ನೋಡಿದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಪ್ರತಿಯೊಂದೂ ಮತ್ತಾವುದೋ ಸಂಗತಿಯೊಂದಿಗಿನ ಸಂಬಂಧದ ಮೂಲಕವೇ ತನ್ನ ಅರ್ಥವನ್ನು ಪಡೆದುಕೊಳ್ಳುತ್ತದೆ” ಎಂದು ಹೆಗೆಲ್ ವಾದಿಸುತ್ತಾನೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಯಾವುದೂ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ಪ್ರತಿಯೊಂದು ವಸ್ತುವಿನ ಹಿಂದೆ, ಪ್ರತಿಯೊಬ್ಬ ವ್ಯಕ್ತಿಯ ಹಿಂದೆ, ಅವುಗಳು ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬಂದವು ಎನ್ನುವುದನ್ನು ವಿವರಿಸುವ, ವರ್ಣಿಸಲಸಾಧ್ಯವಾದಷ್ಟು ದೀರ್ಘವಾದ ಕಥೆಯೊಂದು ಇರುತ್ತದೆ. ಯಾವುದನ್ನಾದರೂ ಅರ್ಥಮಾಡಿಕೊಳ್ಳಬೇಕಾದರೆ, ಅದನ್ನು ಅದರ ಸಂದರ್ಭದೊಳಗೆ, ಅದರ ಚೌಕಟ್ಟಿನೊಳಗೆ ಮತ್ತು ಸಮಸ್ತ ಕಾಲದೊಂದಿಗಿನ ಅದರ ಸಂಬಂಧದ ಹಿನ್ನೆಲೆಯಲ್ಲಿ ನೋಡಬೇಕು. ದೇವರು ಎಲ್ಲವನ್ನೂ ಹೇಗೆ ನೋಡುತ್ತಾನೋ ಹಾಗೆ ನಾವು ನೋಡಬೇಕು, ನಿರಂತರವಾಗಿ ಬದಲಾಗುತ್ತಿರುವ, ಸದಾ ವಿಕಸನಗೊಳ್ಳುತ್ತಿರುವ ಮತ್ತು ಪ್ರಗತಿ ಹೊಂದುತ್ತಿರುವ, ವಿಶ್ವವ್ಯಾಪಿಯಾದ ಪರಸ್ಪರ ಸಂಬಂಧದ ರೂಪದಲ್ಲಿ ನೋಡಬೇಕು.

ಇದನ್ನೇ ಹೆಗೆಲ್ Weltgeist ಎಂದು ಕರೆಯುತ್ತಾನೆ. ಯಾವುದೇ ಸತ್ಯಾಂಶ, ವಸ್ತು ಅಥವಾ ವ್ಯಕ್ತಿಯನ್ನು ಪ್ರತ್ಯೇಕ ತುಣುಕುಗಳಾಗಿ ನೋಡಿದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೆಗೆಲ್ ವಾದಿಸುತ್ತಾನೆ. ಪ್ರತಿಯೊಂದೂ ಮತ್ತಾವುದೋ ಸಂಗತಿಯೊಂದಿಗಿನ ಸಂಬಂಧದ ಮೂಲಕವೇ ತನ್ನ ಅರ್ಥವನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ವೀಡಿಯೊವನ್ನೇ ತೆಗೆದುಕೊಳ್ಳಿ. ಅದರ ಹಿಂದೆ ಒಂದು ಕ್ಯಾಮೆರಾ ಇದೆ, ಒಂದು ಸ್ಕ್ರಿಪ್ಟ್ ಇದೆ ಮತ್ತು ಮಾತನಾಡುತ್ತಿರುವ ಒಬ್ಬ ವ್ಯಕ್ತಿ ಇದ್ದಾನೆ. ಆ ವ್ಯಕ್ತಿಯ ಹಿಂದೆ, ಅವನಿಗೆ ಶಿಕ್ಷಣ ನೀಡಿದ ಸಂಸ್ಥೆಗಳಿವೆ, ಅವನನ್ನು ಪ್ರೋತ್ಸಾಹಿಸಿದ ತಂದೆ-ತಾಯಿಯರಿದ್ದಾರೆ, ಮತ್ತು ಅದು ಹೀಗೇ ಹೀಗೆ ಮುಂದುವರಿಯುತ್ತದೆ.

ಈ ರೀತಿಯಾಗಿ ವಿಶ್ವದಲ್ಲಿರುವ ಪ್ರತಿಯೊಂದು ಸತ್ಯಾಂಶದ ಹಿಂದೆಯೂ ಇರುವ ಸಂಬಂಧಗಳನ್ನು ಪರಿಶೀಲಿಸುತ್ತಾ ಹೋದಾಗ, Weltgeist ಎಷ್ಟು ವಿಶಾಲವಾದದ್ದು ಎನ್ನುವುದು ನಮಗೆ ಅರಿವಾಗತೊಡಗುತ್ತದೆ. Geist ಎನ್ನುವ ಜರ್ಮನ್ ಪದವನ್ನು ಸಾಮಾನ್ಯವಾಗಿ ‘ಮನಸ್ಸು’ ಅಥವಾ ‘ಆತ್ಮ’ ಎಂದು ಅನುವಾದಿಸಲಾಗುತ್ತದೆ. ಆದರೆ ಹೆಚ್ಚಿನ ತತ್ತ್ವಜ್ಞಾನಿಗಳು ಅದನ್ನು Weltgeist ಎಂದೇ ಉಳಿಸಿಕೊಂಡಿದ್ದಾರೆ. ಇದರ ಅರ್ಥ ‘ವಿಶ್ವಾತ್ಮ’ ಅಥವಾ ‘ವಿಶ್ವಚೇತನ’. Weltgeist ಎನ್ನುವುದು ಅಸ್ತಿತ್ವದಲ್ಲಿರುವ ಎಲ್ಲದರ ಸಮಗ್ರ ರೂಪ. ಅದರಲ್ಲಿ ನಾವು ಕೇವಲ ಒಂದು ಸಣ್ಣ ಭಾಗವಷ್ಟೇ.

ನಿನ್ನದು, ನನ್ನದು ಮತ್ತು ಪ್ರತಿಯೊಬ್ಬರದ್ದೂ ಆದ ಪ್ರತ್ಯೇಕ ವ್ಯಕ್ತಿತ್ವಗಳು ಈ Weltgeist ನಲ್ಲಿ ತಮ್ಮದೇ ಆದ ಅತಿ ಸಣ್ಣ ಪಾತ್ರವನ್ನು ನಿರ್ವಹಿಸುತ್ತವೆ. ನಮ್ಮ ಸಣ್ಣದಾದರೂ ಅತ್ಯಗತ್ಯವಾದ ಕೊಡುಗೆಯ ಮೂಲಕ ಅದನ್ನು ನಾವು ಮುಂದಕ್ಕೆ ಕೊಂಡೊಯ್ಯುತ್ತವೆ. ಹೆಗೆಲ್‌ನ Weltgeist ಪರಿಕಲ್ಪನೆಯ ಪ್ರಕಾರ, ‘ನಾನು’ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾನು ಒಬ್ಬ ಮಗುವಾಗಿದ್ದೇನೆ, ಒಬ್ಬ ಬರಹಗಾರನಾಗಿದ್ದೇನೆ, ಒಬ್ಬ ಸ್ನೇಹಿತನಾಗಿದ್ದೇನೆ ಮತ್ತು ಒಬ್ಬ ಮಾನವನಾಗಿದ್ದೇನೆ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕು. ನಮ್ಮ ಸಂಬಂಧಗಳೇ ನಮ್ಮನ್ನು ವ್ಯಾಖ್ಯಾನಿಸುತ್ತವೆ.
ನಾವೆಲ್ಲರೂ ಈ ಸಮಗ್ರ ಅಸ್ತಿತ್ವದ ಒಂದು ಭಾಗ. ನಾವೆಲ್ಲರೂ ಇದರ ಜೊತೆ ಒಟ್ಟಾಗಿ ಸಾಗುತ್ತಿದ್ದೇವೆ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.