ಪರಸ್ಪರರ ಮೇಲೆ ನಿಯಂತ್ರಣ ಹೇರದೆ, ಪರಸ್ಪರರ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಧಕ್ಕೆ ತರದೆ, ಇಬ್ಬರೂ ಒಂದೇ ಸತ್ಯವನ್ನು ನೆಚ್ಚಿ, ಸಮಾನವಾಗಿ ಸಾಗುವುದೇ ನಿಜವಾದ ದಾಂಪತ್ಯ. ನಾನು ಕೇವಲ ನಿಮ್ಮ ನೆರಳಾಗಿದ್ದರೆ, ನನ್ನ ಸೃಷ್ಟಿಯ ದಿವ್ಯ ಉದ್ದೇಶವೇ ಇಲ್ಲದಂತಾಗುತ್ತದೆ... । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ವಸಿಷ್ಠ: ಅರುಂಧತಿ, ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಅನೇಕರು ದಾಂಪತ್ಯದಲ್ಲಿ ನಾನೇ ಮೇಲೆಂಬ ಸ್ವಾಮಿತ್ವದ ಬಲೆಗೆ ಬೀಳುತ್ತಾರೆ. ಅಲ್ಲಿ ಒಬ್ಬರು ಮುನ್ನಡೆದರೆ ಇನ್ನೊಬ್ಬರು ಅವರನ್ನು ಕೇವಲ ಅನುಕರಿಸುತ್ತಾರೆ, ಅಥವಾ ಒಬ್ಬರು ಸೂರ್ಯನಂತೆ ನಿಂತರೆ ಇನ್ನೊಬ್ಬರು ಅವರ ನೆರಳಾಗಷ್ಟೇ ಉಳಿಯುತ್ತಾರೆ. ಈ ಜಗತ್ತಿನ ನಿಯಮಗಳು ಹಾಗೂ ಅನುಸರಣೆಯನ್ನು ಗಮನದಲ್ಲಿಟ್ಟುಕೊಂಡು, ಗೃಹಸ್ಥಾಶ್ರಮದಲ್ಲಿ ಪ್ರೇಮದ ನಿಜವಾದ ತತ್ತ್ವವೇನು ಹೇಳು.
ಅರುಂಧತಿ: ದಾಂಪತ್ಯವೆಂದರೆ ಒಬ್ಬರು ಇನ್ನೊಬ್ಬರ ನೆರಳಾಗಿ ನಡೆಯುವುದಲ್ಲ, ಅಥವಾ ಒಬ್ಬರು ಮುಂದೆ ಸಾಗಿ ಇನ್ನೊಬ್ಬರು ಹಿಂದೆ ಸಾಗುವುದೂ ಅಲ್ಲ. ಪರಸ್ಪರರ ಮೇಲೆ ನಿಯಂತ್ರಣ ಹೇರದೆ, ಪರಸ್ಪರರ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಧಕ್ಕೆ ತರದೆ, ಇಬ್ಬರೂ ಒಂದೇ ಸತ್ಯವನ್ನು ನೆಚ್ಚಿ, ಸಮಾನವಾಗಿ ಸಾಗುವುದೇ ನಿಜವಾದ ದಾಂಪತ್ಯ. ನಾನು ಕೇವಲ ನಿಮ್ಮ ನೆರಳಾಗಿದ್ದರೆ, ನನ್ನ ಸೃಷ್ಟಿಯ ದಿವ್ಯ ಉದ್ದೇಶವೇ ಇಲ್ಲದಂತಾಗುತ್ತದೆ. ನೀವು ನನ್ನ ಒಡೆಯರಾದರೆ, ಪ್ರೇಮದ ಜಾಗದಲ್ಲಿ ದಾಸ್ಯ ಬಂದುಬಿಡುತ್ತದೆ; ದಾಸ್ಯವಿರುವಲ್ಲಿ ಧರ್ಮವು ಉಸಿರಾಡಲು ಸಾಧ್ಯವಿಲ್ಲ. ನಿಜವಾದ ಮಿಲನವೆಂದರೆ ಒಬ್ಬರು ಇನ್ನೊಬ್ಬರಲ್ಲಿ ವಿಲೀನವಾಗುವುದಲ್ಲ, ಬದಲಿಗೆ ಇಬ್ಬರೂ ಸ್ವತಂತ್ರ ತೇಜಸ್ಸಾಗಿ ಒಂದೇ ದಿವ್ಯ ಗುರಿಯತ್ತ ಜೊತೆಯಾಗಿ ಸಾಗುವುದು.
ವಸಿಷ್ಠ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿಂದ ಸಂಘರ್ಷ ಉಂಟಾದಾಗ ಒಬ್ಬರು ಇನ್ನೊಬ್ಬರಿಗೆ ಬಗ್ಗಬೇಕೆಂದು ಲೋಕವು ಬಯಸುತ್ತದೆ. ಇಂಥ ಸಂದರ್ಭದಲ್ಲಿ ಪ್ರೇಮದ ಸಮತೋಲನ ಕಾಯ್ದುಕೊಳ್ಳುವುದು ಹೇಗೆ?
ಅರುಂಧತಿ: ದಾಂಪತ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರೇಮವು ತನ್ನ ಅಸ್ತಿತ್ವವನ್ನು ಬಿಟ್ಟುಕೊಡಬೇಕಾಗಿಲ್ಲ; ಅಹಂಕಾರವನ್ನು ತ್ಯಜಿಸುವ ಮೂಲಕ ಅದನ್ನು ಸಾಧಿಸಬಹುದಾಗಿದೆ. ಹೇಗೆ ಎರಡು ನಕ್ಷತ್ರಗಳು ಒಂದು ಮತ್ತೊಂದರ ಬೆಂಕಿ ತಗುಲಿಸಿಕೊಳ್ಳದೆ ಒಂದೇ ಗುರುತ್ವಾಕರ್ಷಣೆಯ ಕೇಂದ್ರವನ್ನು ಹಂಚಿಕೊಳ್ಳುವವೋ, ಹಾಗೇ ಗಂಡ – ಹೆಂಡತಿಯಾದವರು ಪ್ರೇಮದ ಪರಮ ಸತ್ಯದ ಗುರುತ್ವಕ್ಕೆ ಆಕರ್ಷಿತರಾಗಿ ಅದರ ಸುತ್ತ ತಿರುಗುತ್ತ ಇರುತ್ತಾರೆ. ಇಬ್ಬರೂ ಒಂದೇ ಸತ್ಯದ ಸುತ್ತ ಸುತ್ತುತ್ತ ಇರುವಾಗ ಯಾರೂ ಮೇಲಲ್ಲ, ಯಾರೂ ಕೆಳಗಲ್ಲ, ಮತ್ತು ಯಾರೂ ಹಿಂದೆ ಉಳಿಯುವುದೂ ಇಲ್ಲ. (ಘರ್ಷಣೆಗೆ ಕೊನೆ ಹಾಡಲು ಒಬ್ಬರು ಹಿಂದೆ, ಒಬ್ಬರು ಮುಂದೆ ಇರುವಂತೆ ಆ ಕ್ಷಣಕ್ಕೆ ತೋರಿದರೂ ವಾಸ್ತವದಲ್ಲಿ ಹಾಗೆ ಇರುವುದಿಲ್ಲ, ಇರಕೂಡದು)
ವಸಿಷ್ಠ: ಹಾಗಾದರೆ, ಈ ಮಾರ್ಗದಲ್ಲಿ ಹೆಜ್ಜೆ ಇಡುವ ಪ್ರತಿಯೊಬ್ಬರಿಗೂ ಇದೇ ಪರಮ ವ್ರತವಾಗಲಿ: ಪ್ರೇಮವೆಂದರೆ ಬಂಧನವಲ್ಲ, ಅದು ಪರಸ್ಪರ ಸ್ವತಂತ್ರರಾಗಿ, ಸದಾ ಸಾಮರಸ್ಯದಿಂದ ಸಾಗುವ ದಿವ್ಯ ಪಯಣ ಎಂಬ ಸತ್ಯವು ಚಿರಕಾಲ ಸ್ಥಾಪಿತವಾಗಲಿ.
(ಆಕರ : ಗೃಹ್ಯಸೂತ್ರಗಳು)

