ನಮ್ಮನ್ನು ನಾವೇ ನಾಶಮಾಡಿಕೊಳ್ಳುವ ವಿದ್ಯಮಾನ

ಝಿಝೆಕ್ ಅವರ ಪ್ರಕಾರ, ಈ ರೀತಿಯಾಗಿ ಎಲ್ಲವನ್ನೂ ಸ್ಫೋಟಿಸಿಬಿಡಬೇಕು ಎನ್ನುವ ಬಯಕೆಯೇ ಸ್ವಾತಂತ್ರ್ಯದ ಒಂದು ಲಕ್ಷಣ, ಅಥವಾ ಕನಿಷ್ಠ ಸ್ವತಂತ್ರರಾಗಿದ್ದೇವೆ ಎನ್ನುವ ಭಾವನೆಯನ್ನು ಅನುಭವಿಸುವ ಅಗತ್ಯ. ಅವರ ಪ್ರಕಾರ, “ಮರಣ ಪ್ರೇರಣೆ ಎನ್ನುವುದು ಸ್ವಯಂ ವಿನಾಶದತ್ತ ಕೊಂಡೊಯ್ಯುವ ಒಂದು ರಚನೆ; ಅದು ಸ್ವಾತಂತ್ರ್ಯದ ಕನಿಷ್ಠ ರೂಪವನ್ನು ಪ್ರತಿನಿಧಿಸುತ್ತದೆ । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಮನುಷ್ಯರಿಗೆ ಸಂಗತಿಗಳನ್ನು ಹಾಳುಮಾಡಿಕೊಳ್ಳುವ ಒಂದು ಅಭ್ಯಾಸವಿದೆ. ನಮ್ಮ ಅಸ್ತಿತ್ವದೊಳಗೆ ನಾಟಕೀಯತೆಗಾಗಿ ಹಾತೊರೆಯುವ ಒಂದು ವಿಚಿತ್ರ ಭಾಗವಿದೆ. ನಾವು ಅದರಿಂದಲೇ ಉತ್ಸಾಹ ಪಡೆಯುತ್ತೇವೆ. ಹಾಗಾಗಿ ಸಂಘರ್ಷವನ್ನು ಹುಡುಕುತ್ತೇವೆ; ತೊಂದರೆಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ, ಏಕೆಂದರೆ ಅದು ನಮಗೆ ಏನಾದರೂ ಮಾಡಲು ಕೆಲಸ ಕೊಡುತ್ತದೆ. ನಮ್ಮ ಮನಸ್ಸಿಗೆ ನಿರಂತರ ಚಟುವಟಿಕೆ ಬೇಕು; ಏನೂ ಬದಲಾಗದೆ ಹಾಗೆಯೇ ಇರುವ ಸ್ಥಿತಿಗಿಂತ ಆತ್ಮವನ್ನು ಬೇಸರಗೊಳಿಸುವುದು ಮತ್ತೊಂದಿಲ್ಲ.

ಇದು ಬಹಳ ಪುರಾತನವಾದ ವಿಚಾರ. ಆದರೆ ಆಧುನಿಕ ಕಾಲದಲ್ಲಿ ಇದಕ್ಕೆ ಒಂದು ವಿಶಿಷ್ಟ ಅಭಿವ್ಯಕ್ತಿಯನ್ನು ಸ್ಲಾವೊಯ್ ಝಿಝೆಕ್ ಅವರ ಚಿಂತನೆಗಳಲ್ಲಿ ಕಾಣಬಹುದು.

ಮನುಷ್ಯರಲ್ಲಿ ಯಾವುದೋ ಒಂದು ಸಂಗತಿ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಇತರ ಎಲ್ಲ ಪ್ರಾಣಿಗಳು ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಳಗೆ ಒಂದು ರೀತಿಯ ಸ್ಥಿರತೆಯನ್ನು ಕಂಡುಕೊಳ್ಳುತ್ತವೆ. ಅವುಗಳಿಗೆ ಒಂದು ಆದರ್ಶ ಸ್ಥಿತಿ ಇರುತ್ತದೆ; ಅದನ್ನು ಹುಡುಕುತ್ತವೆ; ಅದನ್ನು ಕಂಡುಕೊಂಡ ನಂತರ ಅಲ್ಲಿಯೇ ಉಳಿಯುತ್ತವೆ. ಆದರೆ ಮನುಷ್ಯರು ಮಾತ್ರ ವಿಪತ್ತು ಮತ್ತು ನಾಟಕೀಯತೆಯಲ್ಲಿಯೇ ವಿಚಿತ್ರವಾದ ಆನಂದವನ್ನು ಕಂಡುಕೊಳ್ಳುತ್ತಾರೆ. ಒಂದೇ ಸ್ಥಿತಿಯಲ್ಲಿ ನಿಶ್ಚಲವಾಗಿ ನಿಂತುಕೊಂಡಿರುವುದರಲ್ಲಿ ನಮಗೆ ಎಂದಿಗೂ ಸಂಪೂರ್ಣ ತೃಪ್ತಿ ಸಿಗುವುದಿಲ್ಲ.

ಸಿಗ್ಮಂಡ್ ಫ್ರಾಯ್ಡ್ ನಮ್ಮೊಳಗಿನ ಈ ಪ್ರವೃತ್ತಿಯನ್ನು ‘ಮರಣ ಪ್ರೇರಣೆ’ (Death Drive) ಎಂದು ಕರೆಯುತ್ತಾನೆ. ನಮ್ಮನ್ನು ನಾವೇ ನಾಶಮಾಡಿಕೊಳ್ಳಬೇಕು, ಯುದ್ಧ ಮಾಡಬೇಕು ಎನ್ನುವ ಆಂತರಿಕ, ಅಶಾಂತ ಅಗತ್ಯವೇ ಅದು. ಬಹಳ ಸಂತೋಷದಿಂದ ಬದುಕುತ್ತಿರುವ ದಂಪತಿ ಜಗಳವಾಡುವುದನ್ನು ನೋಡಬೇಕೆನ್ನಿಸುವುದು, ಅಥವಾ ಯಾರೋ ಕಟ್ಟಿದ ಮರಳಿನ ಕೋಟೆಯನ್ನು ಉರುಳಿಸಬೇಕೆನ್ನಿಸುವುದು, ಇವೆಲ್ಲವೂ ಅದೇ ಪ್ರವೃತ್ತಿಯ ಸಣ್ಣ ರೂಪಗಳು. ಕುಡಿಯಬೇಕು, ಸುಳ್ಳು ಹೇಳಬೇಕು, ಕದಿಯಬೇಕು, ಅಥವಾ ಯಾವುದೇ ಕಾರಣವಿಲ್ಲದೆ ಜಗತ್ತನ್ನು ಕೆಣಕಬೇಕು ಎನ್ನುವ ನಿಮ್ಮೊಳಗಿನ ಆ ಭಾಗವೂ ಅದೇ.

ಝಿಝೆಕ್ ಅವರ ಪ್ರಕಾರ, ಈ ರೀತಿಯಾಗಿ ಎಲ್ಲವನ್ನೂ ಸ್ಫೋಟಿಸಿಬಿಡಬೇಕು ಎನ್ನುವ ಬಯಕೆಯೇ ಸ್ವಾತಂತ್ರ್ಯದ ಒಂದು ಲಕ್ಷಣ, ಅಥವಾ ಕನಿಷ್ಠ ಸ್ವತಂತ್ರರಾಗಿದ್ದೇವೆ ಎನ್ನುವ ಭಾವನೆಯನ್ನು ಅನುಭವಿಸುವ ಅಗತ್ಯ. ಅವರ ಪ್ರಕಾರ, “ಮರಣ ಪ್ರೇರಣೆ ಎನ್ನುವುದು ಸ್ವಯಂ ವಿನಾಶದತ್ತ ಕೊಂಡೊಯ್ಯುವ ಒಂದು ರಚನೆ; ಅದು ಸ್ವಾತಂತ್ರ್ಯದ ಕನಿಷ್ಠ ರೂಪವನ್ನು ಪ್ರತಿನಿಧಿಸುತ್ತದೆ. ಅದು ಉಪಯುಕ್ತತೆಯನ್ನು ಆಧರಿಸಿದ ಬದುಕುಳಿಯುವ ಮನೋಭಾವದಿಂದ ಬೇರ್ಪಟ್ಟಿರುವ ಒಂದು ವರ್ತನೆ.”

ಮನುಷ್ಯರು ಅತೃಪ್ತರು; ತಮ್ಮ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳದವರು; ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡುವವರು. ನಮಗೆ ಒಬ್ಬ ಶತ್ರು ಬೇಕು ಎನ್ನುವವರು. ನೀಷೆ ಹೇಳಿದಂತೆ, “ಶಾಂತಿಯ ಕಾಲದಲ್ಲಿ, ಯುದ್ಧಪ್ರಿಯ ಮನುಷ್ಯನು ತನ್ನ ಮೇಲೆಯೇ ದಾಳಿ ಮಾಡಿಕೊಳ್ಳುತ್ತಾನೆ.”

ಹಾಗಾಗಿ, ನಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದಾಗ, ನಾವೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಲು ಪ್ರಾರಂಭಿಸುತ್ತೇವೆ. ನಾಶಮಾಡಲು ಏನೂ ಇಲ್ಲದಿದ್ದಾಗ, ನಮ್ಮನ್ನೇ ನಾವು ನಾಶಮಾಡಿಕೊಳ್ಳುತ್ತೇವೆ.

ನಿಜಕ್ಕೂ, ನಾವು ಎಂತಹ ವಿಚಿತ್ರ ಜೀವಿಗಳಾಗಿದ್ದೇವೆ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.