ಗೃಹಸ್ಥಾಶ್ರಮದ ಬುನಾದಿ ಯಾವುದು? : ಶಿವ – ಪಾರ್ವತಿ ಸಂವಾದ

ಮೂಲ: ಮಹಾಭಾರತ, ಅನುಶಾಸನ ಪರ್ವ, ಅಧ್ಯಾಯ 146–149 । ಸಂಗ್ರಹ – ಭಾವಾನುವಾದ : ಚೇತನಾ ತೀರ್ಥಹಳ್ಳಿ

ಪಾರ್ವತಿ: ಮಹಾದೇವ, ಮೋಕ್ಷ ಮತ್ತು ಬ್ರಹ್ಮಾಂಡದ ನಿಯಮಗಳ ಗಹನವಾದ ತತ್ವಗಳನ್ನೇನೋ ನೀನು ನನಗೆ ಉಪದೇಶಿಸಿದೆ. ಈಗ ದೈನಂದಿನ ಜೀವನದ ಸೂಕ್ಷ್ಮ ಧರ್ಮಗಳ ಬಗ್ಗೆಯೂ ತಿಳಿಸಿಕೊಡು. ಏಕೆಂದರೆ ಸೃಷ್ಟಿ ನಿಂತಿರುವುದು ಲೌಕಿಕದ ದೈನಂದಿನ ಚಟುವಟಿಕೆಗಳ ಮೇಲೆ. ಅದರ ಮುಖ್ಯ ಭಾಗವಾದ ಗೃಹಸ್ಥಾಶ್ರಮದ ಬಗ್ಗೆ ತಿಳಿಸು. ಗೃಹಸ್ಥಾಶ್ರಮವನ್ನು ಗಟ್ಟಿಗೊಳಿಸುವ ಬಗೆ ಯಾವುದು? ಗಂಡ – ಹೆಂಡತಿ ದೀರ್ಘಕಾಲ ಜೊತೆಯಾಗಿ ಬಾಳುವಂತೆ ಮಾಡುವ ಧರ್ಮಸೂಕ್ಷ್ಮ ಯಾವುದು?

ಶಿವ: ದೇವಿ, ಗೃಹಸ್ಥಾಶ್ರಮವನ್ನು ಬಾಹ್ಯ ಆಚರಣೆಗಳ ಬುನಾದಿಯ ಮೇಲಲ್ಲ, ಪರಸ್ಪರ ಪ್ರೀತಿ, ಸತ್ಯ ಮತ್ತು ಒಬ್ಬರನ್ನೊಬ್ಬರು ರಕ್ಷಿಸುವ ಬದ್ಧತೆಯ ಬುನಾದಿಯ ಮೇಲೆ ಕಟ್ಟಬೇಕು. ಆಗ ಅದು ಚಿರಕಾಲ ಬಾಳುವುದು. ಅಹಿಂಸೆ, ಹಿತವಾದ ಮಾತು ಮತ್ತು ತಮ್ಮ ಮನೆಯನ್ನು ಅಭಯ ತಾಣವನ್ನಾಗಿರಿಸಿಕೊಳ್ಳುವುದು ಗೃಹಸ್ಥರ ಪರಮ ಧರ್ಮವಾಗಿದೆ.

ಪಾರ್ವತಿ: ಮಹಾದೇವ, ದಾಂಪತ್ಯವು ಎರಡು ಆಧಾರಸ್ತಂಭಗಳ ಮೇಲೆ ನಿಂತಿದೆ. ಯಾವ ಮನೆಯಲ್ಲಿ ಪತ್ನಿಯನ್ನು ಗೌರವಿಸಲಾಗುತ್ತದೆಯೋ, ರಕ್ಷಿಸಲಾಗುತ್ತದೆಯೋ ಮತ್ತು ಧರ್ಮ, ಸಮೃದ್ಧಿ ಹಾಗೂ ಆನಂದದ ಪ್ರತಿಯೊಂದು ಕಾರ್ಯದಲ್ಲೂ ಅವಳನ್ನು ಸಮಾನ ಪಾಲುದಾರಳಾಗಿ ಸ್ವೀಕರಿಸಲಾಗುತ್ತದೆಯೋ, ಆ ಮನೆಯು ಮಾತ್ರ ಸುಭಿಕ್ಷವಾಗಿರುತ್ತದೆ ಅಲ್ಲವೆ?

ಶಿವ: ನಿನ್ನ ಮಾತು ನಿಜ. ಗಂಡ – ಹೆಂಡತಿ ಪುರುಷ (ಪರಮ ಪ್ರಜ್ಞೆ) ಮತ್ತು ಪ್ರಕೃತಿಯ (ಸೃಷ್ಟಿಶೀಲ ಶಕ್ತಿ) ಸ್ವರೂಪರು. ಅವರ ಕರ್ತವ್ಯಗಳು ಭಿನ್ನವಾಗಿದ್ದರೂ, ಮೂಲತತ್ವದಲ್ಲಿ ಅವರಿಬ್ಬರೂ ಸಂಪೂರ್ಣವಾಗಿ ಒಂದೇ. ಅವರು ಅವಿಭಾಜ್ಯರು. ದಂಪತಿಗಳ ನಡುವೆ ಪರಸ್ಪರ ವಿಶ್ವಾಸ ಮತ್ತು ಶ್ರದ್ಧೆ ಇರುವ ಮನೆಯು ದೈವಿಕತೆಯಿಂದ ಕಂಗೊಳಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.