ತಿರುಗುವ ಧ್ಯಾನ

ಬಹುತೇಕ ಎಲ್ಲೆಡೆ ಪೋಷಕರು ತಮ್ಮ ಮಕ್ಕಳನ್ನು ಹೀಗೆ ತಿರುಗುವುದರಿಂದ ತಡೆಯುತ್ತಾರೆ; ಅವರಿಗೆ ಮಕ್ಕಳು ತಲೆ ಸುತ್ತಿ ಬೀಳಬಹುದು ಎಂಬ ಭಯ. ಆದರೆ ಆ ಮಕ್ಕಳು ಒಂದು ಅತ್ಯಂತ ವಿಶೇಷವಾದ ಅನುಭವವನ್ನು ಆನಂದಿಸುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ರೂಮಿ ಒಬ್ಬ ಸೂಫಿ ಅನುಭಾವಿ . ‘ರೂಮಿ’ ಎನ್ನುವುದಕ್ಕೆ ನಿರ್ದಿಷ್ಟ ಅರ್ಥವೇನೂ ಇಲ್ಲ; ಅದು ಒಂದು ಸ್ಥಳದ ಹೆಸರು. ಅವನು ‘ರೂಮ್’ ಎಂಬ ಪ್ರದೇಶದಿಂದ ಬಂದಿದ್ದರಿಂದ ಅವನನ್ನು ರೂಮಿ ಎಂದು ಕರೆಯಲಾಯಿತು.

ಅವನ ಸಂದೇಶ ಪ್ರೀತಿ ಮತ್ತು ಅವನು ಬುದ್ಧನ ಅತ್ಯುನ್ನತ ವರ್ಗಕ್ಕೆ ಸೇರಿದವನು. ಧ್ಯಾನದ ಒಂದು ಹೊಸ ವಿಧಾನವನ್ನು ಕಂಡುಹಿಡಿದವನು  ರೂಮಿ, ಸುತ್ತುತ್ತಾ ತಿರುಗುವ ಧ್ಯಾನ, ‘Whirling’ mediation. ನೂರಾರು ಧ್ಯಾನ ವಿಧಾನಗಳು ಇವೆ. ರೂಮಿ ಕೂಡ ಒಂದು ವಿಶಿಷ್ಟ ವಿಧಾನವನ್ನು ಕೊಡುಗೆಯಾಗಿ ನೀಡಿದ್ದಾನೆ. ಅವನು ಬುದ್ಧನಂತೆ ಮೌನವಾಗಿ ಕುಳಿತು ಜ್ಞಾನೋದಯವನ್ನು ಪಡೆದವನಲ್ಲ; ಅವನು  ನೃತ್ಯ ಮಾಡುತ್ತಾ ಜ್ಞಾನೋದಯವನ್ನು ಪಡೆದವನು. ಅವನ ನೃತ್ಯ ಒಂದು ವಿಶೇಷ ರೀತಿಯ ನೃತ್ಯ. ಇಲ್ಲಿ ನೀವು ಸುತ್ತುತ್ತಾ, ಸುತ್ತುತ್ತಾ ತಿರುಗುತ್ತೀರಿ, ವೇಗವಾಗಿ ಚಲಿಸುತ್ತಿರುವ ಒಂದು ಚಕ್ರದಂತೆ. ನೀವು ಒಂದೇ ಸಮಯದಲ್ಲಿ ಅಕ್ಷವೂ (axle) ಆಗಿರುತ್ತೀರಿ, ಚಕ್ರವೂ (wheel)  ಆಗಿರುತ್ತೀರಿ.

ಚಿಕ್ಕ ಮಕ್ಕಳು ಇದನ್ನು ಬಹಳ ಆನಂದದಿಂದ ಮಾಡುತ್ತಾರೆ. ಬಹುತೇಕ ಎಲ್ಲೆಡೆ ಪೋಷಕರು ತಮ್ಮ ಮಕ್ಕಳನ್ನು ಹೀಗೆ ತಿರುಗುವುದರಿಂದ ತಡೆಯುತ್ತಾರೆ; ಅವರಿಗೆ ಮಕ್ಕಳು ತಲೆ ಸುತ್ತಿ ಬೀಳಬಹುದು ಎಂಬ ಭಯ. ಆದರೆ ಆ ಮಕ್ಕಳು ಒಂದು ಅತ್ಯಂತ ವಿಶೇಷವಾದ ಅನುಭವವನ್ನು ಆನಂದಿಸುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಒಬ್ಬ ಚಿಕ್ಕ ಮಗು ನಿರಂತರವಾಗಿ ಸುತ್ತುತ್ತಾ ಹೋದಾಗ, ನಿಧಾನವಾಗಿ ತನ್ನ ದೇಹದೊಂದಿಗಿನ ‘ನಾನು’ ಎಂಬ ಭಾವನೆ ಕಳೆದುಕೊಳ್ಳಲು ಆರಂಭಿಸುತ್ತಾನೆ. ಅವನು ತನ್ನ ದೇಹದ ಮೇಲೆಯೇ ತೇಲುತ್ತಿರುವಂತೆ ಅನುಭವಿಸುತ್ತಾನೆ. ತನ್ನದೇ ದೇಹ ಸುತ್ತುತ್ತಿರುವುದನ್ನು ಅವನು ನೋಡಬಲ್ಲನು,  ಇದೇ ಈ ವಿಧಾನದ ಅದ್ಭುತ. ಆದರೆ ಬಾಲ್ಯದಲ್ಲಿಯೇ ನಮ್ಮ ಪೋಷಕರು ನಮ್ಮನ್ನು ತಡೆಯುತ್ತಾರೆ.

ಜಲಾಲುದ್ದೀನ್ ರೂಮಿ ಈ ವಿಧಾನವನ್ನು ಪರಿಚಯಿಸಿದ. ಅವನೇ ಸ್ವತಃ ಮೂವತ್ತಾರು ಗಂಟೆಗಳ ಕಾಲ ನಿರಂತರವಾಗಿ ಸುತ್ತುತ್ತಾ ತಿರುಗುವುದರ ಮೂಲಕ ಜ್ಞಾನೋದಯವನ್ನು ಪಡೆದ ಎಂದು ಹೇಳಲಾಗುತ್ತದೆ. ಹಗಲು-ರಾತ್ರಿ ಎನ್ನದೆ ಅವನು ಸುತ್ತುತ್ತಲೇ ಇದ್ದ. ಅವನು  ಮೋಡದ ಮೇಲೆ ಸವಾರಿ ಮಾಡುತ್ತಿರುವಂತೆ ತಿರುಗುತ್ತಿದ್ದ; ಕೊನೆಗೆ ನೆಲಕ್ಕೆ ಬಿದ್ದುಹೋಗುವವರೆಗೂ ಅವನಿಗೆ ನಿಲ್ಲಲು ಸಾಧ್ಯವಾಗಲಿಲ್ಲ.
ಆದರೆ ಅವನು ಕಣ್ಣು ತೆರೆದು ಎದ್ದು ನಿಂತಾಗ, ಸಂಪೂರ್ಣವಾಗಿ ಹೊಸ ಮನುಷ್ಯನಾಗಿದ್ದ. ಹಳೆಯ ವ್ಯಕ್ತಿ ಅಲ್ಲಿ ಇರಲೇ ಇಲ್ಲ.

ಅವನನ್ನು ನೋಡಲು ಸಾವಿರಾರು ಜನರು ಸೇರಿದ್ದರು, ಏಕೆಂದರೆ ಅವನು ಆಗಲೇ ಪ್ರಸಿದ್ಧ ಅನುಭಾವಿ ಎಂದು ಹೆಸರಾಗಿದ್ದ. ಅವನಿಗೆ ಏನಾಗಿತ್ತು? ಅವನು ಹುಚ್ಚನಾಗಿಬಿಟ್ಟನೆ? ಅಥವಾ ಏನಾದರೂ ವಿಚಿತ್ರವಾದದ್ದು ಸಂಭವಿಸಿತೇ? ಆದರೆ ಅವನು ತನ್ನ ಶಿಷ್ಯರಿಗೆ ತನ್ನನ್ನು ಯಾರೂ ಅಡ್ಡಿಪಡಿಸಬಾರದು ಎಂದು ಮೊದಲೇ ಹೇಳಿದ್ದ. ಮೂವತ್ತಾರು ಗಂಟೆಗಳ ಕಾಲ ಅವನು ಕುಣಿದ, ಕುಣಿದ, ಕುಣಿದ.  ನರ್ತಕನೇ ನೃತ್ಯದಲ್ಲಿ ಕಣ್ಮರೆಯಾದ. ಆಗ ಅಲ್ಲಿ ನೃತ್ಯ ಮಾತ್ರ ಉಳಿಯಿತು; ನರ್ತಕ ಇರಲಿಲ್ಲ.

ಅಹಂಕಾರ ಸತ್ತುಹೋಯಿತು.

ಮತ್ತು ಅವನು ತನ್ನದೇ ದೇಹವನ್ನು ಮೇಲಿನ ಯಾವುದೋ ಎತ್ತರದ ಸ್ಥಿತಿಯಿಂದ ನೋಡಬಲ್ಲವನಾಗಿದ್ದ,  ಭೂಮಿಯ ಮೇಲೆ ಎಲ್ಲೋ ತನ್ನ ದೇಹ ನೃತ್ಯ ಮಾಡುತ್ತಿರುವುದನ್ನು.
ಅವನು ಬೆಟ್ಟದ ಮೇಲಿರುವ ಸಾಕ್ಷಿಯಂತಾದ; ಅವನ ದೇಹವು ಕೆಳಗಿನ ಆಳವಾದ ಕತ್ತಲೆಯ ಕಣಿವೆಯಲ್ಲಿತ್ತು.

ಹೀಗೆ ಅವನು ಈ ವಿಧಾನವನ್ನು ತಮ್ಮ ಶಿಷ್ಯರಿಗೆ ಪರಿಚಯಿಸಿದ. ಅವನ ಸಂದೇಶ ಪ್ರೀತಿ ಮತ್ತು ನೃತ್ಯ. ಇಡೀ ಅಸ್ತಿತ್ವವನ್ನು ಪ್ರೀತಿಸಿ,  ಆಗ ನೀವು ನೃತ್ಯ ಮಾಡಬಲ್ಲಿರಿ. ಮತ್ತು ನಿಮ್ಮನ್ನು ಸಂಪೂರ್ಣವಾಗಿ ಮರೆತು ನೃತ್ಯ ಮಾಡಿ,  ಆಗ ನೀವು ಪ್ರೀತಿಸಬಲ್ಲಿರಿ.




~ ಓಶೋ / Darshan Diary — “I Am Not As Think As You Drink I Am” (ಅಪ್ರಕಟಿತ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.