ಮಾರ್ಕಂಡೇಯ ಪುರಾಣದಲ್ಲಿ ಬರುವ ಮದಾಲಸಾ ಉಪದೇಶ ಅದ್ವೈತ ತತ್ವವನ್ನು ಸಾರುವ ಅಪರೂಪದ ಜೋಗುಳ…
ಋತ್ವಧ್ವಜ ರಾಜನ ರಾಣಿಯಾದ ಮದಾಲಸಾ ಮಹಾಜ್ಞಾನಿ. ಅವಳು ತನ್ನ ಮಕ್ಕಳು ಅಳುವಾಗ ಅವರನ್ನು ಆಟಿಕೆಗಳಿಂದ ಸಮಾಧಾನಪಡಿಸುವ ಬದಲು, ಅವರಿಗೆ ವೇದಾಂತದ ಸತ್ಯವನ್ನು, ಆತ್ಮಜ್ಞಾನವನ್ನು ಜೋಗುಳದ ರೂಪದಲ್ಲಿ ಹಾಡಿ ಬೋಧಿಸುತ್ತಿದ್ದಳು ಎಂದು ಮಾರ್ಕಂಡೇಯ ಪುರಾಣದಲ್ಲಿ ಹೇಳಲಾಗಿದೆ (ಅಧ್ಯಾಯ 25 ರಿಂದ 30)
ಮದಾಲಸೆಗೆ ವಿಕ್ರಾಂತ, ಸುಬಾಹು, ಶತ್ರುಮರ್ದನ ಮತ್ತು ಅಲರ್ಕ ಎಂಬ ನಾಲ್ವರು ಮಕ್ಕಳಿದ್ದರು. ಮೊದಲ ಮೂವರು ಮಕ್ಕಳು ತಾಯಿಯ ಉಪದೇಶದಿಂದ ಪ್ರಭಾವಿತರಾಗಿ ಜಗತ್ತಿನ ಮೋಹವನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದರು. ಇದರಿಂದ ಋತ್ವಧ್ವಜನಿಗೆ ತನ್ನ ವಂಶವನ್ನು ಮುನ್ನಡೆಸಲು ಯಾರೂ ಇಲ್ಲವಲ್ಲ ಎಂಬ ಚಿಂತೆ ಕಾಡಲಾರಂಭಿಸಿತು. ಪತಿಯ ಇಚ್ಛೆಯಂತೆ ಮದಾಲಸಳು ತನ್ನ ನಾಲ್ಕನೆಯ ಮಗನಾದ ಅಲರ್ಕನಿಗೆ ಸಂನ್ಯಾಸತ್ವದ ಬದಲು ರಾಜಧರ್ಮ ಮತ್ತು ರಾಜನೀತಿಯನ್ನು ಬೋಧಿಸಿದಳು.
ಇಲ್ಲಿ ನೀಡಲಾಗಿರುವ ಶ್ಲೋಕ ಮದಾಲಸೆಯ ಜೋಗುಳದಿಂದ ಒಂದು ಚರಣ :
ಯಾನಂ ಕ್ಷಿತೌ ತತ್ರ ಗತಶ್ಚ ದೇಹೋ
ದೇಹೋಽಪಿ ಚಾನ್ಯಃ ಪುರುಷೋ ನಿವಿಷ್ಟಃ।
ಮಮತ್ವಮುರೋವ್ಯಾ ನ ಯಥಾ ತಥಾಸ್ಮಿನ್
ದೇಹೇತಿ ಮಾತ್ರಂ ಬತ ಮೂಢರೌಷಃ॥ಅರ್ಥ: ಭೂಮಿಯ ಮೇಲೆ ಚಲಿಸುವ ವಾಹನ ಮತ್ತು ಅದರಲ್ಲಿ ಕುಳಿತಿರುವ ದೇಹ ಎರಡೂ ಬೇರೆ ಬೇರೆಯಾಗಿರುವಂತೆ, ಈ ಭೌತಿಕ ದೇಹ ಮತ್ತು ಅದರೊಳಗೆ ನೆಲೆಸಿರುವ ಆತ್ಮ ಎರಡೂ ಸಂಪೂರ್ಣವಾಗಿ ಭಿನ್ನವಾಗಿವೆ. ವಾಹನದ ಮೇಲೆ ನಮಗೆ ‘ನನ್ನದು’ ಎಂಬ ಮೋಹ ಇರುವುದಿಲ್ಲವೋ, ಹಾಗೆಯೇ ಈ ದೇಹದ ಮೇಲೆಯೂ ಅತಿಯಾದ ಮೋಹ ಇರಬಾರದು. ‘ನಾನೇ ಈ ದೇಹ’ ಎಂದು ಭಾವಿಸಿ ಅಜ್ಞಾನದಿಂದ ಅಳುವುದು ಮೂರ್ಖತನ.
ಭಾವಾರ್ಥ: ಭೂಮಿಯ ಮೇಲೆ ಚಲಿಸುವ ವಾಹನವು ಅದರಲ್ಲಿ ಕುಳಿತಿರುವವನಿಗಿಂತ ಹೇಗೆ ಬೇರೆಯೋ, ಹಾಗೆಯೇ ಈ ದೇಹವು ಒಳಗಿರುವ ಆತ್ಮನಿಂದ ಸಂಪೂರ್ಣ ಭಿನ್ನವಾಗಿದೆ. ಆತ್ಮವು ನಶ್ವರ ದೇಹದ ಮೇಲೆ ಮೋಹ ಬೆಳೆಸಿಕೊಳ್ಳುವುದು ಅತ್ಯಂತ ಮೂಢತನ. ಪ್ರಯಾಣಿಕರು ವಾಹನದ ಮೇಲೆ ಮೋಹ ಇಟ್ಟುಕೊಳ್ಳದೆ ತಮ್ಮ ಯಾನ ಮುಗಿದ ಮೇಲೆ ಇಳಿದುಹೋಗುವಂತೆ, ಆತ್ಮವೂ ಜೀವನ ಯಾನಕ್ಕೆ ಸಾಧನವಾದ ದೇಹವನ್ನು ಮೋಹಿಸದೆ, ಅದನ್ನು ಕೇವಲ ಒಂದು ವಾಹನದಂತೆ ಬಳಸಬೇಕು.
ಮದಲಾಸಾ ಜೋಗುಳದ 13 ಶ್ಲೋಕಗಳು ಮತ್ತು ಭಾವಾರ್ಥ ಇಲ್ಲಿವೆ :
ಶುದ್ಧೋಽಸಿ ಬುದ್ಧೋಽಸಿ ನಿರಂಜನೋಽಸಿ ಸಂಸಾರಮಾಯಾಪರಿವರ್ಜಿತೋಽಸಿ ।
ಸಂಸಾರಸ್ವಪ್ನಂ ತ್ಯಜ ಮೋಹನಿದ್ರಾಂ ಮದಾಲಸಾವಾಕ್ಯಮುವಾಚ ಪುತ್ರಮ್ ॥
ಭಾವಾರ್ಥ: ಮಗುವೇ, ನೀನು ಪರಮ ಶುದ್ಧನಾಗಿದ್ದೀಯೆ, ಜ್ಞಾನಸ್ವರೂಪಿಯಾಗಿದ್ದೀಯೆ ಮತ್ತು ಕಳಂಕವಿಲ್ಲದವನಾಗಿದ್ದೀಯೆ. ಸಂಸಾರದ ಈ ಮಾಯಾ ನಿದ್ರೆಯಿಂದ ಎದ್ದೇಳು.
ಶುದ್ಧೋಽಸಿ ರೇ ತಾತ ನ ತೇಽಸ್ತಿ ನಾಮ ಕೃತಂ ಹಿ ತತ್ ಕಲ್ಪನಯಾ ತವಾಪಿ ।
ಪಂಚಾತ್ಮಕಂ ದೇಹಮಿದಂ ನ ತೇಽಸ್ತಿ ನೈವಾಸ್ಯ ತ್ವಂ ರೋದಿಸಿ ಕಸ್ಯ ಹೇತೋಃ ॥
ಭಾವಾರ್ಥ: ನಿನಗೆ ಯಾವುದೇ ಹೆಸರಿಲ್ಲ, ಅದು ಕೇವಲ ಕಲ್ಪನೆ. ಪಂಚಭೂತಗಳ ಈ ದೇಹವು ನೀನಲ್ಲ. ಮತ್ತೇಕೆ ಅಳುತ್ತಿದ್ದೀಯೆ?
ನ ವೈ ಭವಾನ್ ರೋದಿತಿ ವಿಶ್ವಜನ್ಮಾ ಶಬ್ದೋಽಯಮಾಯಾತ್ಯ ಉಪಚಾರತಸ್ತೇ ।
ವಿಕಲ್ಪ್ಯಮಾನೋ ವಿವಿಧೈರ್ಗುಣೈಸ್ತೇ ಗುಣಾಶ್ಚ ಭೌತಾಃ ಸಕಲೇನ್ದ್ರಿಯೇಷು ॥
ಭಾವಾರ್ಥ: ಇಡೀ ವಿಶ್ವದ ಮೂಲ ಚೈತನ್ಯ ನೀನು. ಈ ಅಳುವಿನ ಧ್ವನಿ ಕೇವಲ ಇಂದ್ರಿಯಗಳ ಭೌತಿಕ ಪ್ರಕ್ರಿಯೆಯಷ್ಟೇ. ಗುಣದೋಷಗಳು ಇಂದ್ರಿಯಗಳಿಗೆ ಸೇರಿದ್ದೇ ಹೊರತು ನಿನ್ನ ಆತ್ಮಕ್ಕಲ್ಲ.
ಭೂತಾನಿ ಭೂತೈಃ ಪರಿದುರ್ಬಲಾನಿ ವೃದ್ಧಿಂ ಸಮಾಯಾತಿ ಯಥೇಹ ಪುಂಸಃ ।
ಅನ್ನಾಂಬುಪಾನಾದಿಭಿರೇವ ತಸ್ಮಾತ್ ನ ತೇಽಸ್ತಿ ವೃದ್ಧಿರ್ನ ಚ ತೇಽಸ್ತಿ ಹಾನಿಃ ॥
ಭಾವಾರ್ಥ: ಅನ್ನ ಮತ್ತು ನೀರಿನಿಂದ ಪಂಚಭೂತಗಳ ದೇಹವು ಬೆಳೆಯುತ್ತದೆ ಅಥವಾ ಕ್ಷೀಣಿಸುತ್ತದೆ. ಆದರೆ ಅದರಿಂದ ಆತ್ಮನಾದ ನಿನಗೆ ವೃದ್ಧಿಯೂ ಇಲ್ಲ, ನಾಶವೂ ಇಲ್ಲ.
ತ್ವಂ ಕಂಚುಕೇ ಶೀರ್ಯಮಾಣೇ ನಿಜೋಸ್ಮಿನ್ ತಸ್ಮಿನ್ ದೇಹೇ ಮೂಢತಾಂ ಮಾ ವ್ರಜೇಥಾಃ ।
ಶುಭಾಶುಭೈಃ ಕರ್ಮಭಿರ್ದೇಹಮೇತತ್ ಮದಾದಿಭಿರ್ಮೂಢೈಃ ಕಂಚುಕಸ್ತೇ ಪಿನದ್ಧಃ ॥
ಭಾವಾರ್ಥ: ಹಳೆಯ ಅಂಗಿಯನ್ನು ಕಳಚುವಂತೆ ಕರ್ಮಗಳ ಕಾರಣದಿಂದ ಬಂದ ಈ ದೇಹವನ್ನು ಆತ್ಮವು ಕಳಚುತ್ತದೆ. ಮೋಹದಿಂದ ತೊಟ್ಟಿರುವ ಈ ಕವಚಕ್ಕೆ (ದೇಹಕ್ಕೆ) ಹಾನಿಯಾಯಿತೆಂದು ಮೂರ್ಖರಂತೆ ದುಃಖಿಸಬೇಡ.
ತಾತೇತಿ ಕಿಂಚಿತ್ ತನಯೇತಿ ಕಿಂಚಿತ್ ಅಂಬೇತಿ ಕಿಂಚಿದ್ದಯಿತೇತಿ ಕಿಂಚಿತ್ ।
ಮಮೇತಿ ಕಿಂಚಿನ್ನ ಮಮೇತಿ ಕಿಂಚಿತ್ ತ್ವಂ ಭೂತಸಂಘಂ ಬಹುಮಾನಯೇಥಾಃ ॥
ಭಾವಾರ್ಥ: ತಂದೆ, ಮಗ, ತಾಯಿ, ಪತ್ನಿ, ನನ್ನದು, ನನ್ನದಲ್ಲ ಎಂಬುದೆಲ್ಲವೂ ಕೇವಲ ಭೌತಿಕ ತತ್ವಗಳ ಸಂಘಟನೆಯಷ್ಟೇ. ಇವೆಲ್ಲವೂ ತಾತ್ಕಾಲಿಕ ಭ್ರಮೆಗಳು.
ದುಃಖಾಯ ತೇಷಾಂ ಹಿ ಭವೇದ್ವಿನಾಶೋ ಭೋಗೇಷು ಸಕ್ತಾ ಮತಿರಲ್ಪಬುದ್ಧೇಃ ।
ವಿರಕ್ತಬುದ್ಧಿರ್ನ ಚ ತೇಷು ಸಕ್ತಃ ಸುಖಂ ಸಮಾಪ್ನೋತಿ ಸದಾ ವಿಮುಕ್ತಃ ॥
ಭಾವಾರ್ಥ: ಭೋಗಗಳಲ್ಲಿ ಮುಳುಗಿದ ಅಲ್ಪಬುದ್ಧಿಯ ಜನರಿಗೆ ಅವುಗಳನ್ನು ಕಳೆದುಕೊಂಡಾಗ ದುಃಖವಾಗುತ್ತದೆ. ಆದರೆ ವೈರಾಗ್ಯವುಳ್ಳ ಜ್ಞಾನಿಗಳು ಸದಾ ಮುಕ್ತನಾಗಿ ನಿಜವಾದ ಸುಖವನ್ನು ಅನುಭವಿಸುತ್ತಾರೆ.
ತ್ವಮೇವ ತತ್ ಸರ್ವಮಿದಂ ಜಗಚ್ಚ ತ್ವಯ್ಯೇವ ಸರ್ವಂ ಪ್ರತಿಭಾವ ಭಾತಿ ।
ತ್ವಂ ಜ್ಯೋತಿರೇಕಂ ಜಗದಾವಭಾಸಿ ತಸ್ಮಾತ್ ಸ್ವಭೂತಂ ಭವ ಮುಕ್ತಸಂಗಃ ॥
ಭಾವಾರ್ಥ: ನೀನೇ ಆ ಪರಬ್ರಹ್ಮ, ಇಡೀ ಜಗತ್ತು ನಿನ್ನಲ್ಲೇ ಪ್ರಕಾಶಿಸುತ್ತಿದೆ. ನೀನು ಜಗತ್ತನ್ನು ಬೆಳಗುವ ದಿವ್ಯ ಜ್ಯೋತಿ. ಆದ್ದರಿಂದ ಎಲ್ಲ ಆಸೆಗಳನ್ನು ತೊರೆದು ನಿನ್ನ ಆತ್ಮಸ್ವರೂಪಿಯಾಗು.
ಸುಖಾನಿ ದುಃಖೋಪಶಮಾಯ ಭೋಗಾನ್ ಸುಖಾಯ ಜಾನಾತಿ ವಿಮೂಢಚೇತಾಃ ।
ತಾನ್ಯೇವ ದುಃಖಾನಿ ಪುನಃ ಸುಖಾನಿ ಜಾನಾತಿ ವಿದ್ವಾನವಿಮೂಢಚೇತಾಃ ॥
ಭಾವಾರ್ಥ: ಮೂಢರು (ಅಜ್ಞಾನಿ) ಕೇವಲ ತನ್ನ ದುಃಖವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿಕೊಳ್ಳುವುದನ್ನೇ ‘ಸುಖ’ ಎಂದು ಭಾವಿಸುತ್ತಾರೆ ಮತ್ತು ಭೌತಿಕ ಭೋಗಗಳಲ್ಲಿ ಸುಖವನ್ನು ಹುಡುಕುತ್ತಾರೆ. ಆದರೆ, ಜ್ಞಾನಿಯಾದವರು ಈ ಲೌಕಿಕ ಸುಖಗಳೇ ಮುಂದೆ ದುಃಖಕ್ಕೆ ಕಾರಣವಾಗುತ್ತವೆ ಎಂಬುದನ್ನು ಸ್ಪಷ್ಟವಾಗಿ ಅರಿತಿರುತ್ತಾರೆ.
ಅಸ್ಥಿಪ್ರಬದ್ಧಂ ಮಾಂಸೇನ ರುಧಿರೇಣ ವಿಲೇಪಿತಮ್ ।
ಚರ್ಮಾವನದ್ಧಂ ಮಲಪೂರ್ಣಂ ದೇಹಂ ಜಾನಾತಿ ಯೋ ಹ್ಯಹಮ್ ॥
ಭಾವಾರ್ಥ: ಮೂಳೆಗಳಿಂದ ಕಟ್ಟಿ, ಮಾಂಸ ಮತ್ತು ರಕ್ತದಿಂದ ಲೇಪಿತವಾಗಿ, ಚರ್ಮದಿಂದ ಮುಚ್ಚಲ್ಪಟ್ಟಿರುವ ಹಾಗೂ ಮಲ ಮೂತ್ರಗಳಿಂದ ತುಂಬಿರುವ ಈ ಭೌತಿಕ ದೇಹವನ್ನು ಯಾರು ‘ನಾನು’ ಎಂದು ತಿಳಿಯುತ್ತಾರೋ, ಅವರು ಎಂದಿಗೂ ಮಾಯೆಯಿಂದ ಮುಕ್ತರಾಗಲಾರರು. (ದೇಹದ ಅಶಾಶ್ವತತೆಯನ್ನು ಅರಿತು ಆತ್ಮನ ಕಡೆಗೆ ಗಮನಹರಿಸು).
ಯತ್ತ್ವಂ ರೋದಿಷಿ ತೇನಾಸಿ ಮೋಹೇನ ಮಹತಾ ವೃತಃ ।
ತ್ಯಜೇಮಂ ಮಮತಾಬಂಧಂ ಯೇನಾಸಿ ಪರಿವೇಷ್ಟಿತಃ ॥
ಭಾವಾರ್ಥ: ಮಗುವೇ, ನೀನು ಈಗ ಅಳುತ್ತಿರುವುದಕ್ಕೆ ಕಾರಣ ನಿನ್ನನ್ನು ಆವರಿಸಿರುವ ತೀವ್ರವಾದ ಲೌಕಿಕ ಮೋಹ. ನಿನ್ನನ್ನು ಸುತ್ತುವರೆದಿರುವ ಈ ಮಮಕಾರದ ಬಂಧನವನ್ನು ಕಡಿದು ಬಿಸುಟಿಬಿಡು. ಆಗ ನಿನಗೆ ನಿಜವಾದ ಶಾಂತಿ ಸಿಗುತ್ತದೆ.

