ಈ ಸಂವಾದವು ಉಪನಿಷತ್ತುಗಳ ಅತ್ಯಂತ ಶ್ರೇಷ್ಠ ಭಾಗಗಳಲ್ಲಿ ಒಂದಾಗಿದೆ. ಮನುಷ್ಯನಿಗೆ ಭೌತಿಕ ಸಂಪತ್ತು ಎಂದಿಗೂ ಶಾಶ್ವತ ನೆಮ್ಮದಿಯನ್ನಾಗಲಿ, ಮುಕ್ತಿಯನ್ನಾಗಲಿ ನೀಡುವುದಿಲ್ಲ; ಕೇವಲ ಆಧ್ಯಾತ್ಮಿಕ ಅರಿವು (ಆತ್ಮಜ್ಞಾನ) ಮಾತ್ರ ಮನುಷ್ಯನನ್ನು ಮೃತ್ಯುವಿನಿಂದ ಅಮೃತತ್ವದ ಕಡೆಗೆ ಕೊಂಡೊಯ್ಯಬಲ್ಲದು ಎಂಬುದೇ ಈ ಸಂವಾದದ ಒಟ್ಟು ಸಂದೇಶ । ಸಂಗ್ರಹ – ನಿರೂಪಣೆ : ಚೇತನಾ ತೀರ್ಥಹಳ್ಳಿ (ಆಧಾರ : ಶುಕ್ಲ ಯಜುರ್ವೇದ, ಬೃಹದಾರಣ್ಯಕ ಉಪನಿಷತ್ತು, ಅಧ್ಯಾಯ 2)
ಮಹರ್ಷಿ ಯಾಜ್ಞವಲ್ಕ್ಯರು ಗೃಹಸ್ಥಾಶ್ರಮವನ್ನು ತ್ಯಜಿಸಿ ವಾನಪ್ರಸ್ಥಕ್ಕೆ ತೆರಳಲು ನಿರ್ಧರಿಸುತ್ತಾರೆ. ಕಾಡಿಗೆ ಹೋಗುವ ಮುನ್ನ ತಮ್ಮ ಇಬ್ಬರು ಪತ್ನಿಯರಾದ ಕಾತ್ಯಾಯನಿ ಮತ್ತು ಮೈತ್ರೇಯಿಯರಿಬ್ಬರಿಗೂ ತಮ್ಮ ಆಸ್ತಿಯನ್ನು ಹಂಚಿ, ಅವರ ಭವಿಷ್ಯವನ್ನು ಭದ್ರಪಡಿಸಲು ಮುಂದಾಗುತ್ತಾರೆ.
ಯಾಜ್ಞವಲ್ಕ್ಯ: ಮೈತ್ರೇಯಿ, ನಾನು ಈ ಗೃಹಸ್ಥಾಶ್ರಮವನ್ನು ಬಿಟ್ಟು ಸನ್ಯಾಸಾಶ್ರಮಕ್ಕೆ ಹೋಗುತ್ತಿದ್ದೇನೆ. ಆದ್ದರಿಂದ, ನನ್ನ ಸಂಪತ್ತನ್ನು ನಿನಗೂ ಮತ್ತು ಕಾತ್ಯಾಯನಿಗೂ ಹಂಚಿಹೋಗಲು ಇಚ್ಛಿಸುತ್ತೇನೆ
ಮೈತ್ರೇಯಿ: ಸ್ವಾಮಿ, ಸಂಪತ್ತಿನಿಂದ ತುಂಬಿರುವ ಈ ಇಡೀ ಭೂಮಿಯೇ ನನ್ನದಾದರೂ ಅದರಿಂದ ನಾನು ಅಮರತ್ವವನ್ನು ಪಡೆಯಬಹುದೇ? ಅಥವಾ ಮುಕ್ತಿ ಪಡೆಯಬಹುದೇ?
ಯಾಜ್ಞವಲ್ಕ್ಯ: ಇಲ್ಲ ಮೈತ್ರೇಯಿ. ಸಂಪತ್ತಿನಿಂದ ನಿನ್ನ ಜೀವನವು ಸುಖಮಯವಾಗಿರಬಹುದು. ಆದರೆ ಅದರಿಂದ ಮುಕ್ತಿ ಅಥವಾ ಅಮರತ್ವವನ್ನು ಎಂದಿಗೂ ಪಡೆಯಲಾಗುವುದಿಲ್ಲ. ಅದಕ್ಕೂ ಸಂಪತ್ತಿಗೂ ಯಾವುದೇ ಸಂಬಂಧವಿಲ್ಲ.
ಮೈತ್ರೇಯಿ: ಸ್ವಾಮಿ, ಯಾವುದರಿಂದ ನಾನು ಅಮೃತಳಾಗುವುದಿಲ್ಲವೋ, ಆ ಸಂಪತ್ತನ್ನು ಇಟ್ಟುಕೊಂಡು ನಾನೇನು ಮಾಡಲಿ? (ಯೇನಾಹಂ ನಾಮೃತಾ ಸ್ಯಾಂ ಕಿಮಹಂ ತೇನ ಕುರ್ಯಾಮ್?) ಯಾವುದರಿಂದ ನಾನು ಅಮರತ್ವವನ್ನು ಪಡೆಯಬಹುದೆಂದು ನೀವು ತಿಳಿದಿರುವಿರೋ, ಆ ಜ್ಞಾನವನ್ನು ಮಾತ್ರ ನನಗೆ ದಯಪಾಲಿಸಿ. ನನಗೆ ಈ ನಶ್ವರವಾದ ಸಂಪತ್ತು ಬೇಡ.
ಯಾಜ್ಞವಲ್ಕ್ಯ: ಮೈತ್ರೇಯಿ, ನೀನು ಮೊದಲಿನಿಂದಲೂ ನನಗೆ ಅತ್ಯಂತ ಪ್ರಿಯಳು. ಈಗ ನಿನ್ನ ಈ ಮಾತು ನಿನ್ನ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿತು. ಬಾ, ಕುಳಿತುಕೋ. ನಿನಗೆ ಆ ಅಮೃತತ್ವದ ಜ್ಞಾನವನ್ನು ವಿವರಿಸುತ್ತೇನೆ. ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೋ.
(ಇಲ್ಲಿಂದ ಯಾಜ್ಞವಲ್ಕ್ಯರು ‘ಆತ್ಮ’ ಮತ್ತು ‘ಪ್ರೀತಿ’ಯ ನೈಜ ಸ್ವರೂಪದ ಕುರಿತು ಮಹತ್ವದ ತತ್ತ್ವೋಪದೇಶವನ್ನು ನೀಡುತ್ತಾರೆ)
ಯಾಜ್ಞವಲ್ಕ್ಯ: ಮೈತ್ರೇಯಿ, ಹೆಂಡತಿಗೆ ಗಂಡನು ಪ್ರಿಯನಾಗುವುದು ಅವನ ಮೇಲಿನ ಪ್ರೀತಿಗಾಗಿಯಲ್ಲ, ಬದಲಾಗಿ ತನ್ನ ಆತ್ಮದ ಸುಖಕ್ಕಾಗಿ. ಅದೇ ರೀತಿ, ಗಂಡನಿಗೆ ಹೆಂಡತಿಯು ಪ್ರಿಯಳಾಗುವುದು ಹೆಂಡತಿಯ ಮೇಲಿನ ಪ್ರೀತಿಗಾಗಿಯಲ್ಲ, ತನ್ನ ಆತ್ಮದ ಸಂತೋಷಕ್ಕಾಗಿಯೇ ಹೆಂಡತಿ ಪ್ರಿಯಳಾಗುತ್ತಾಳೆ. ಮಕ್ಕಳು, ಸಂಪತ್ತು, ಜಾನುವಾರುಗಳು, ದೇವರುಗಳು, ಬ್ರಹ್ಮ, ಮತ್ತು ಈ ಇಡೀ ಜಗತ್ತು – ಇವಾವುವೂ ಅವುಗಳಿಗಾಗಿಯೇ ನಮಗೆ ಪ್ರಿಯವಾಗುವುದಿಲ್ಲ. ಬದಲಾಗಿ ನಮ್ಮೊಳಗಿರುವ ಆತ್ಮದ ಕಾರಣದಿಂದಲೇ ಅವೆಲ್ಲವೂ ನಮಗೆ ಪ್ರಿಯವಾಗುತ್ತವೆ. ಜಗತ್ತಿನ ಎಲ್ಲ ಪ್ರೀತಿಗೂ ಮೂಲ ಕಾರಣ ನಮ್ಮೊಳಗಿನ ‘ಆತ್ಮತತ್ತ್ವ’ವೇ ಹೊರತು ಭೌತಿಕ ವಸ್ತುಗಳಲ್ಲ. ಆದ್ದರಿಂದ ಮೈತ್ರೇಯಿ, ನಾವು ಅರಿಯಬೇಕಾದದ್ದು, ನೋಡಬೇಕಾದದ್ದು, ಕೇಳಬೇಕಾದದ್ದು, ಮನನ ಮಾಡಬೇಕಾದದ್ದು ಮತ್ತು ಧ್ಯಾನಿಸಬೇಕಾದದ್ದು ಈ ‘ಆತ್ಮ’ವನ್ನು ಮಾತ್ರ (ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯೋ ಮೈತ್ರೇಯಿ). ಆತ್ಮನ ದರ್ಶನ, ಶ್ರವಣ, ಮನನ ಮತ್ತು ಅರಿವಿನಿಂದ ಮಾತ್ರ ಈ ಇಡೀ ಜಗತ್ತು ನಮಗೆ ತಿಳಿದಂತಾಗುತ್ತದೆ. ಆತ್ಮವನ್ನು ಅರಿತವನಿಗೆ ಎಲ್ಲವೂ ತಿಳಿದಂತೆ. ಈ ಆತ್ಮಜ್ಞಾನವೇ ಅಮರತ್ವಕ್ಕೆ (ಮುಕ್ತಿಗೆ) ಇರುವ ಏಕೈಕ ಮಾರ್ಗ.

