ಬೆಕ್ಕಿನಂತೆ ಬದುಕುವುದು…

ತಮ್ಮ ಪುಸ್ತಕದ ಕೊನೆಯಲ್ಲಿ, ನಾವು ಹೇಗೆ ಬೆಕ್ಕಿನಂತೆ ಬದುಕಲು ಕಲಿಯಬಹುದು ಎನ್ನುವುದರ ಕುರಿತು ಜಾನ್ ಗ್ರೇ ಕೆಲವು ಸುಳಿವುಗಳನ್ನು ನೀಡುತ್ತಾರೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಬೆಕ್ಕು ಫಿಲಾಸೊಫಿ ಮಾತಾಡುವುದಿಲ್ಲ. ಮತ್ತು ಜಾನ್ ಗ್ರೇ ಅವರ ಪ್ರಕಾರ, ಅದೇ ಕಾರಣಕ್ಕೆ ಅದು ಬೇರೆಯವರಿಗಿಂತಲೂ ಉತ್ತಮ ತತ್ತ್ವಜ್ಞಾನಿ! ತಮ್ಮ 2020ರ Feline Philosophy (ಬೆಕ್ಕಿನ ತತ್ತ್ವಶಾಸ್ತ್ರ) ಎಂಬ ಪುಸ್ತಕದಲ್ಲಿ ಗ್ರೇ ವಾದಿಸುವುದೇನೆಂದರೆ, ಮನುಷ್ಯರಿಗೆ ತತ್ತ್ವಶಾಸ್ತ್ರವೆನ್ನುವುದು ಒಂದು ರೀತಿಯ ಔಷಧಿಯಂತೆ ಕೆಲಸ ಮಾಡುತ್ತದೆ. ಏಕೆಂದರೆ, ತಾನು ಒಂದು ದಿನ ಸಾಯುತ್ತೇನೆ ಎನ್ನುವುದು ತಿಳಿದಿರುವ ಏಕೈಕ ಪ್ರಾಣಿ ಮನುಷ್ಯ. ಈ ಅರಿವು ಅವನಲ್ಲಿ ಒಂದು ರೀತಿಯ ಆತಂಕವನ್ನು ಹುಟ್ಟಿಸುತ್ತದೆ. ಪ್ರಕೃತಿಯ ಬೇರೆ ಯಾವುದೇ ಜೀವಿಗಳಲ್ಲಿ ಇಂತಹ ಆತಂಕ ಕಾಣಸಿಗುವುದಿಲ್ಲ.

ಈ ಆತಂಕವನ್ನು ಎದುರಿಸುವುದಕ್ಕಾಗಿ ನಾವು ಧರ್ಮಗಳು, ಸಿದ್ಧಾಂತಗಳು, ಸ್ವಯಂ-ಸುಧಾರಣೆಯ ಪ್ರಯತ್ನಗಳು ಮತ್ತು ನಮ್ಮ ಬದುಕನ್ನು ನಿರಂತರವಾಗಿ ಪರಿಶೀಲಿಸುತ್ತಾ, ವಿಶ್ಲೇಷಿಸುತ್ತಾ ಬದುಕುವಂತಹ ಮಾರ್ಗಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಇವೆಲ್ಲವೂ ನಮ್ಮ ಆತಂಕಕ್ಕೆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡುತ್ತವೆ. ಆದರೆ, ವಾಸ್ತವದಲ್ಲಿ ಇವುಗಳಲ್ಲಿ ಯಾವುದೂ ಆ ಆತಂಕವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಹಾಗಾದರೆ, ಇದಕ್ಕೆ ಪರಿಹಾರವೇನು?

ನಾವು ಬೆಕ್ಕಿನಂತೆ ಬದುಕುವುದನ್ನು ಕಲಿಯಬೇಕು.
‘ಮೊ’ ಎಂಬ ಹೆಸರಿನ ಒಂದು ಬೆಕ್ಕನ್ನು ಕಲ್ಪಿಸಿಕೊಳ್ಳಿ.
ಮೊ ತನ್ನ ಬದುಕಿಗೆ ಯಾವುದೇ ಅರ್ಥವನ್ನು ಹುಡುಕುವುದಿಲ್ಲ. ತಾನು ಇನ್ನೂ ಉತ್ತಮ ಬೆಕ್ಕಾಗಬೇಕು ಎಂದು ಪ್ರಯತ್ನಿಸುವುದಿಲ್ಲ. ತನ್ನ ಬದುಕು ಯಶಸ್ವಿಯಾಗಬಹುದು, ವಿಫಲವಾಗಬಹುದು ಎನ್ನುವ ದೃಷ್ಟಿಯಿಂದಲೂ ಅದು ತನ್ನ ಜೀವನವನ್ನು ನೋಡುವುದಿಲ್ಲ. ಅದು ಬೇಟೆಯಾಡುತ್ತದೆ, ನಿದ್ರಿಸುತ್ತದೆ, ಬಿಸಿಲಿನಲ್ಲಿ ಮೈ ಕಾಯಿಸಿಕೊಳ್ಳುತ್ತದೆ. ಅದಕ್ಕೆ ನೋವಾದಾಗ, ‘ನನಗೇಕೆ ಹೀಗಾಯಿತು?’ ಎಂದು ಪ್ರಶ್ನಿಸುತ್ತಾ ತನ್ನ ನೋವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಿಲ್ಲ.
ಹೀಗಾಗಿ, ಮೊ ಬುದ್ಧಿವಂತಳು ಎನ್ನುವುದು ಗ್ರೇ ಅವರ ವಾದವಲ್ಲ. ಮೊ ಅನಾರೋಗ್ಯದಿಂದ ಬಳಲುತ್ತಿಲ್ಲ ಎನ್ನುವುದೇ ಅವರ ಮಾತಿನ ಸಾರ.

ಅನಾರೋಗ್ಯದಿಂದ ಬಳಲುತ್ತಿರುವವರು ನಾವು, ಮನುಷ್ಯರು. ತಮ್ಮ ಪುಸ್ತಕದ ಕೊನೆಯಲ್ಲಿ, ನಾವು ಹೇಗೆ ಬೆಕ್ಕಿನಂತೆ ಬದುಕಲು ಕಲಿಯಬಹುದು ಎನ್ನುವುದರ ಕುರಿತು ಗ್ರೇ ಕೆಲವು ಸುಳಿವುಗಳನ್ನು ನೀಡುತ್ತಾರೆ. ಈ ಅನಾರೋಗ್ಯಪೀಡಿತ, ಮುರಿದುಹೋಗಿರುವ ಮಾನವ ದೃಷ್ಟಿಕೋನದಿಂದ ನಾವು ಸ್ವಲ್ಪ ದೂರ ಸರಿಯಬೇಕು.
ನಿಮ್ಮ ಸಂಕಟದಲ್ಲಿ ಯಾವುದೋ ಅರ್ಥವನ್ನು ಹುಡುಕಲು ಪ್ರಯತ್ನಿಸಬೇಡಿ. ಇತರರು ಹೆಚ್ಚು ವಿವೇಕಯುತವಾಗಿ ವರ್ತಿಸಬೇಕು ಎಂದು ಅವರನ್ನು ಒಪ್ಪಿಸಲು ಪ್ರಯತ್ನಿಸಬೇಡಿ.
ಏಕೆಂದರೆ, ನೀವು ಹೇಗಿದ್ದೀರೋ ಹಾಗೆಯೇ ಇದ್ದೀರಿ; ವಾಸ್ತವವು ಹೇಗಿದೆಯೋ ಹಾಗೆಯೇ ಇದೆ. ಕೆಲವೊಮ್ಮೆ ಬದುಕಿನಲ್ಲಿ ಕೆಲವು ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತವೆ.

ಆದ್ದರಿಂದ, ಮರಗಳನ್ನು ಹತ್ತಿ, ಚೆಂಡಿನೊಂದಿಗೆ ಆಟವಾಡಿ, ಇನ್ನಷ್ಟು ಹೊತ್ತು ನಿದ್ರಿಸಿ. ಚಳಿ ಮತ್ತು ಕತ್ತಲೆ ಆವರಿಸಿದಾಗ, ಬೆಂಕಿಯ ಪಕ್ಕದಲ್ಲಿ ಮೈ ಬೆಚ್ಚಗೆ ಮಾಡಿಕೊಂಡು ಮಲಗಿ.
ಎಲ್ಲದಕ್ಕೂ ಅರ್ಥ ಹುಡುಕುತ್ತಾ, ಬದುಕನ್ನು ಸರಿಪಡಿಸುವ ಪ್ರಯತ್ನದಲ್ಲೇ ನಿಮ್ಮ ಬದುಕನ್ನು ಕಳೆಯಬೇಡಿ. ಕೆಲವೊಮ್ಮೆ ಬದುಕನ್ನು ಬದುಕಿದರೆ ಸಾಕು, ಬೆಕ್ಕಿನಂತೆ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.