ಸಿಸಿಫಸ್‌ನ ರೂಪಕ

The Myth of Sisyphus ಎಂಬ ಕೃತಿ, ಬದುಕಿನಲ್ಲಿ ಯಾವುದೇ ಅರ್ಥವಿಲ್ಲದಿದ್ದರೂ ಹೇಗೋ ದಿನಗಳನ್ನು ದೂಡುವುದರ ಕಷ್ಟದ ಬಗ್ಗೆ ಮಾತ್ರವಲ್ಲ. ಪ್ರತಿದಿನವೂ ಬದುಕನ್ನು ಮುಂದುವರಿಸಲು ಬೇಕಾಗುವ ಮನೋಬಲದ ಬಗ್ಗೆಯೂ ಆಗಿದೆ…। ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಆಲ್ಬರ್ಟ್ ಕಮೂ ನ The Myth of Sisyphus, ತತ್ತ್ವಶಾಸ್ತ್ರದ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧವಾದ ರೂಪಕಗಳಲ್ಲಿ ಒಂದಾಗಿದೆ. ಇದು ಬಹುತೇಕ ತತ್ತ್ವಶಾಸ್ತ್ರದ ಒಂದು ‘ಮೀಮ್’ ಆಗಿಬಿಟ್ಟಿದೆ. ಆದರೆ ಇದರ ನಿಜವಾದ ಅರ್ಥವನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಮತ್ತು ತಪ್ಪಾಗಿ ನಿರೂಪಿಸಿದ್ದಾರೆ.

ಸಿಸಿಫಸ್ ಒಬ್ಬ ರಾಜನಾಗಿದ್ದವನು. ಅವನು ಸಾವನ್ನೇ ವಂಚಿಸಿದವನು. ಅದಕ್ಕಾಗಿ ದೇವತೆಗಳು ಅವನಿಗೆ ಒಂದು ಶಿಕ್ಷೆ ವಿಧಿಸುತ್ತಾರೆ. ಶಿಕ್ಷೆಯ ಪ್ರಕಾರ ಒಂದು ಬೃಹತ್ ಬಂಡೆಯನ್ನು ಬೆಟ್ಟದ ತುದಿಗೆ ತಳ್ಳಿಕೊಂಡು ಹೋಗಬೇಕು ಅವನು. ಆದರೆ ಅವನು ಬೆಟ್ಟದ ತುದಿಯನ್ನು ತಲುಪಿದಾಗಲೆಲ್ಲಾ ಆ ಬಂಡೆ ಮತ್ತೆ ಮತ್ತೆ ಕೆಳಕ್ಕೆ ಉರುಳುತ್ತಿತ್ತು. ಹೀಗೆ ಅವನು ಅನಂತಕಾಲವೂ ಅದೇ ಕೆಲಸವನ್ನು ಮಾಡುತ್ತಲೇ ಇರಬೇಕಾಗಿತ್ತು.

ಹೀಗಾಗಿ, ಸಿಸಿಫಸ್ ಎಂದರೆ ನಾವು ಜೀವನದಲ್ಲಿ ಮಾಡಬೇಕಾಗಿ ಬರುವ ಪ್ರತಿಯೊಂದು ಅರ್ಥಹೀನ ಕೆಲಸದ ಪ್ರತೀಕವಾಗಿಬಿಟ್ಟಿದ್ದಾನೆ.
ಪಾತ್ರೆ ತೊಳೆಯುವುದೇ? ಸಿಸಿಫಸ್!
ಮತ್ತೆ ಮತ್ತೆ ಅದೇ ಸ್ಪರ್ಧೆಯ ಓಟದಲ್ಲಿ ಓಡುವುದೇ? ಸಿಸಿಫಸ್!
ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಜಗತ್ತಿನಲ್ಲಿ ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದು ಬದುಕನ್ನು ಎದುರಿಸಬೇಕಾಗುವುದೇ? ಅದೂ ಸಿಸಿಫಸ್!

ಆದರೆ ಕಮೂ ಈ ಕಥೆಯ ಬೇರೆಯದೇ ಒಂದು ಅಂಶವನ್ನು ಒತ್ತಿಹೇಳುತ್ತಾನೆ. ಅವನ ಮಾತಿನಲ್ಲೇ ಹೇಳುವುದಾದರೆ:
“ಸಿಸಿಫಸ್ ನನ್ನ ಆಸಕ್ತಿಯನ್ನು ಸೆಳೆಯುವುದು, ಅವನು ಹಿಂದಿರುಗುವ ಆ ಕ್ಷಣದಲ್ಲಿ, ಆ ವಿರಾಮದಲ್ಲಿ!”
The Myth of Sisyphus ಎಂಬ ಕೃತಿ, ಬದುಕಿನಲ್ಲಿ ಯಾವುದೇ ಅರ್ಥವಿಲ್ಲದಿದ್ದರೂ ಹೇಗೋ ದಿನಗಳನ್ನು ದೂಡುವುದರ ಕಷ್ಟದ ಬಗ್ಗೆ ಮಾತ್ರವಲ್ಲ. ಪ್ರತಿದಿನವೂ ಬದುಕನ್ನು ಮುಂದುವರಿಸಲು ಬೇಕಾಗುವ ಮನೋಬಲದ ಬಗ್ಗೆಯೂ ಆಗಿದೆ. ಮತ್ತೆ ಪಾತ್ರೆ ತೊಳೆಯಲು ಮರಳುವುದರ ಬಗ್ಗೆ ಇದು. ಮತ್ತೆ ಅದೇ ಸ್ಪರ್ಧೆಯ ಓಟಕ್ಕೆ ಮರಳುವುದರ ಬಗ್ಗೆ ಇದು. ಎಲ್ಲದರ ನಡುವೆಯೂ ಬದುಕನ್ನು ಮುಂದುವರಿಸುವುದರ ಬಗ್ಗೆ ಇದು.

ಸಿಸಿಫಸ್ ಬೆಟ್ಟದ ತುದಿಯಲ್ಲಿ, ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಕ್ಷಣಕಾಲ ನಿಂತು, ಬಳಿಕ ತಿರುಗಿ ತನ್ನ ಬಂಡೆಯನ್ನು ತರಲು ಬೆಟ್ಟದ ಕೆಳಕ್ಕೆ ನಡೆದುಹೋಗುವುದನ್ನು ನಾನು ಆಗಾಗ ಕಲ್ಪಿಸಿಕೊಳ್ಳುತ್ತೇನೆ. ಬೆಟ್ಟದ ಕೆಳಗೆ ತನಗಾಗಿ ಏನು ಕಾಯುತ್ತಿದೆ ಎನ್ನುವುದು ಅವನಿಗೆ ನಿಖರವಾಗಿ ತಿಳಿದಿದೆ.
ಕಮೂ ಹೇಳುವಂತೆ, ಇದೇ ‘ಪ್ರಜ್ಞೆಯ ಕ್ಷಣ’ (the hour of consciousness). ಆ ನಡಿಗೆಯಲ್ಲಿ ಸಿಸಿಫಸ್ ತನ್ನ ಬಂಡೆಗಿಂತಲೂ ಬಲಶಾಲಿಯಾಗಿರುತ್ತಾನೆ!

ನಾಳೆ ಏನು ಕಾದಿದೆ ಎನ್ನುವುದು ಸಂಪೂರ್ಣವಾಗಿ ತಿಳಿದಿದ್ದರೂ, ಪ್ರತಿದಿನವೂ ಮತ್ತೆ ಎದ್ದು ನಮ್ಮ ಕರ್ತವ್ಯಕ್ಕೆ ಹಾಜರಾಗುವುದರಲ್ಲೇ ಒಂದು ವೀರೋಚಿತ ಗುಣವಿದೆ.
ಜಗತ್ತು ನಮ್ಮೊಳಗಿನ ಜೀವಂತಿಕೆಯನ್ನು ಹಂತಹಂತವಾಗಿ ಹಿಸುಕಿ ತೆಗೆಯಲು ನಿರ್ಧರಿಸಿದಂತಿದ್ದರೂ, ಮರುದಿನ ಮತ್ತೆ ಅದೇ ಬದುಕಿಗೆ ಮರಳುವುದರಲ್ಲಿ ಒಂದು ಸೌಂದರ್ಯವಿದೆ.
ನಾವೆಲ್ಲರೂ ನಮ್ಮ ನಮ್ಮ ಬಂಡೆಗಳನ್ನು ಹೊತ್ತುಕೊಳ್ಳಲು ಆ ಬೆಟ್ಟದ ಕೆಳಕ್ಕೆ ಮತ್ತೆ ಮತ್ತೆ ಇಳಿದುಹೋಗುವಾಗ, ನಮ್ಮೊಳಗೆ ಒಂದು ಮಹತ್ವದ ಗುಣ ವ್ಯಕ್ತವಾಗುತ್ತದೆ. ಏಕೆಂದರೆ, ಬದುಕಿನ ಮಹತ್ವವು ನಾವು ಎಷ್ಟು ಬಾರಿ ಬೀಳುತ್ತೇವೆ ಎನ್ನುವುದರಲ್ಲಿ ಇಲ್ಲ; ಎಲ್ಲವೂ ತಿಳಿದಿದ್ದರೂ ಮತ್ತೆ ಎದ್ದು ಮುನ್ನಡೆಯಲು ಸಿದ್ಧರಾಗುತ್ತೇವೆ ಎನ್ನುವುದರಲ್ಲಿ ಇದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.