ಬುದ್ಧನನ್ನು ಪ್ರೀತಿಸುವುದೆಂದರೆ ನಿಮ್ಮೊಳಗಿನ ಅಸ್ತಿತ್ವದ ಆಳಕ್ಕೆ ಇಳಿಯುವುದು ಎಂದರ್ಥ. ಗುರುವು ಶಿಷ್ಯನನ್ನು ಅವನದೇ ಅಂತರಂಗದ ಆಳಕ್ಕೆ ಕರೆದೊಯ್ಯಬೇಕು; ಅವನನ್ನು ಅವನೊಳಗೇ ಮುಳುಗಿಸಬೇಕು — ಓಶೋ / The Buddha Disease । ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ನಿಜವಾಗಿಯೂ ಬುದ್ಧನನ್ನು ಅನುಸರಿಸಬೇಕೆಂದಿದ್ದರೆ, ಯಾರದೋ ಪ್ರತಿಯಾಗಬೇಕೆಂಬ ಆಕರ್ಷಣೆಯನ್ನು ನೀವು ಮೊದಲು ವಿರೋಧಿಸಬೇಕು. ಏಕೆಂದರೆ, ನಿಮ್ಮೊಳಗೆ ಅರಿವಿನ ಹೂವು ಅರಳಿ, ನೀವು ನಿಮ್ಮ ನಿಜಸ್ವರೂಪವನ್ನು ಕಂಡುಕೊಂಡಾಗ ಮಾತ್ರ ನೀವು ಬುದ್ಧನನ್ನು ನಿಜಾರ್ಥದಲ್ಲಿ ಅನುಸರಿಸಿದಂತಾಗುತ್ತದೆ. ಆಗ ಅದು ಯಾವುದರ ಅನುಕರಣೆಯೂ ಆಗಿರುವುದಿಲ್ಲ. ಏಕೆಂದರೆ, ನಿಮ್ಮಂತಹ ವ್ಯಕ್ತಿ ಈ ಹಿಂದೆ ಎಂದೂ ಇರಲಿಲ್ಲ; ಮುಂದೆಯೂ ಇರಲಾರ. ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ. ಪ್ರತಿಯೊಬ್ಬ ವ್ಯಕ್ತಿಗೂ ದೇವರು ನೀಡುವ ಗೌರವವೇ ಇದು. ಆತ ಸೃಷ್ಟಿಸುವುದು ಅನನ್ಯ ವ್ಯಕ್ತಿಗಳನ್ನು ಮಾತ್ರ. ಆತ ಯಾರನ್ನೂ ಮತ್ತೊಬ್ಬರ ನಕಲಾಗಿ ಸೃಷ್ಟಿಸುವುದಿಲ್ಲ. ಆತ ಯಾವುದನ್ನೂ ಪುನರಾವರ್ತಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದು ಮೂಲ ಸೃಷ್ಟಿ.
ಆದರೆ ಈ ಅನುಕರಣೆ ಎನ್ನುವುದು ಬಹಳ ಆಕರ್ಷಕವಾದ ಆಮಿಷ. ಅರ್ಥವಾಗುತ್ತಿದೆಯೇ? ನೀವು ಯೇಸುವನ್ನು ಪ್ರೀತಿಸಿದಾಗ, ಅವನನ್ನೇ ಅನುಕರಿಸಬೇಕೆಂದು ಬಯಸುತ್ತೀರಿ. ಬುದ್ಧನನ್ನು ಪ್ರೀತಿಸಿದಾಗ, ಅವನಂತೆಯೇ ಆಗಬೇಕೆಂದು ಬಯಸುತ್ತೀರಿ. ಆದರೆ ನೀವು ಅನುಕರಿಸಲು ಆರಂಭಿಸಿದರೆ, ನಿಮ್ಮ ನಿಜವಾದ ಗುರಿಯನ್ನೇ ಕಳೆದುಕೊಳ್ಳುತ್ತೀರಿ.
ನನ್ನನ್ನು ಪ್ರೀತಿಸುವುದೆಂದರೆ, ಬುದ್ಧನನ್ನು ಪ್ರೀತಿಸುವುದೆಂದರೆ ನಿಮ್ಮೊಳಗಿನ ಅಸ್ತಿತ್ವದ ಆಳಕ್ಕೆ ಇಳಿಯುವುದು ಎಂದರ್ಥ. ಗುರುವು ಶಿಷ್ಯನನ್ನು ಅವನದೇ ಅಂತರಂಗದ ಆಳಕ್ಕೆ ಕರೆದೊಯ್ಯಬೇಕು; ಅವನನ್ನು ಅವನೊಳಗೇ ಮುಳುಗಿಸಬೇಕು.
ಹೀಗಾಗಿಯೇ, ಅನುಕರಿಸಬೇಕೆಂಬ ಈ ಆಮಿಷಕ್ಕೆ ಝೆನ್ ಪರಂಪರೆ ಒಂದು ಸೂಕ್ತವಾದ ಹೆಸರನ್ನಿಡುತ್ತದೆ, ‘ಬುದ್ಧನಾಗುವ ರೋಗ’ (The Buddha Disease) ಎಂದು. ಝೆನ್ ಗೆ ಬುದ್ಧನ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವವಿದೆ. ಆದರೂ ಈ ಪ್ರವೃತ್ತಿಯನ್ನು ಝೆನ್ ‘ಬುದ್ಧನಾಗುವ ರೋಗ’ ಎಂದೇ ಕರೆಯುತ್ತದೆ. ಏಕೆಂದರೆ ಬುದ್ಧ ಅಷ್ಟು ಸುಂದರವಾದ ವ್ಯಕ್ತಿತ್ವದವನು; ಸಹಜವಾಗಿಯೇ ಯಾರಿಗಾದರೂ ಅವನಂತೆಯೇ ಆಗಬೇಕೆಂಬ ಆಸೆ ಮೂಡುತ್ತದೆ. ಆದರೆ ಆ ಆಸೆಯೇ ಅನುಕರಣೆಯಾಗಿ ಬದಲಾದಾಗ, ಅದು ಒಂದು ರೋಗವಾಗುತ್ತದೆ.

