ಶಿವೋSಹಮ್ ಸರಣಿ ~ 3 : ಸಮ್ಯಕ್ ಪ್ರಯಾಸ, ಸಮ್ಯಕ್ ಅಭ್ಯಾಸ..

photoನಮ್ಮ ಎಲ್ಲ ಇಂದ್ರಿಯಗಳು ಮುಂಜಾನೆ ನಿದ್ರೆ ಮುಗಿಸಿ ಎದ್ದ ಕೂಡಲೆ ಸಕ್ರಿಯವಾಗತೊಡಗುತ್ತವೆ. ಏಳುತ್ತಿದ್ದ ಹಾಗೆಯೇ ನಮಗೆ ‘ನಾನು ಇದ್ದೇನೆ’ ಎನ್ನುವ ಅರಿವು ಉಂಟಾಗುತ್ತದೆ; ಮತ್ತು ಈ ಅರಿವಿನೊಂದಿಗೆ ಇಂದ್ರಿಯಗಳು ಹೊರ ಜಗತ್ತಿಗೆ ಸ್ಪಂದಿಸುತ್ತಾ ತಮ್ಮ ಕೆಲಸ ಶುರು ಮಾಡುತ್ತವೆ. ವ್ಯಕ್ತಿಯು ಲೌಕಿಕ ವ್ಯವಹಾರಗಳಲ್ಲಿ ತಲ್ಲೀನನಾಗಿ ಹೋಗುತ್ತಾನೆ. ಐಹಿಕ ಜಗತ್ತಿನಲ್ಲಿ ತನ್ನನ್ನು ತಾನು ಎಷ್ಟು ಮರೆತುಬಿಡುತ್ತಾನೆಂದರೆ, ತಾನು ಯಾರು, ಏನಾಗಿದ್ದೇನೆ ಎಂಬ ಚಿಂತನೆಯು ಹಿಂದೆಯೇ ಉಳಿದುಹೋಗುತ್ತದೆ.  :Whosoever Ji

(ಹಿಂದಿನ ಭಾಗವನ್ನು ಇಲ್ಲಿ ಓದಿ…)

ದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು – ಇವು ಯೋಗ ಅಥವಾ ಸಾಂಖ್ಯದ ಅವಧಾರಣವಾಗಿವೆ. ಮತ್ತೊಂದು ಅವಧಾರಣದ ಪ್ರಕಾರ ಈ ದೇಹದ ದಶ ರಂಧ್ರಗಳು – ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಒಂದು ಜನನೇಂದ್ರಿಯ ಹಾಗೂ ಒಂದು ಮಲದ್ವಾರ: ಈ ಒಂಭತ್ತು ರಂಧ್ರಗಳು ಸಂಸಾರದೊಂದಿಗೆ, ಲೌಕಿಕ ಜಗತ್ತಿನೊಂದಿಗೆ ಬೆಸೆದುಕೊಂಡಿವೆ. ಈ ಎಲ್ಲ ದ್ವಾರಗಳೂ ಹೊರಜಗತ್ತಿಗೆ ತೆರೆದುಕೊಳ್ಳುತ್ತವೆ. ಆದರೆ ಮತ್ತೂ ಒಂದು ದ್ವಾರವಿದೆ. ಅದು ಮುಚ್ಚಿಕೊಂಡಿದೆ. ಸಾಧನೆಯ ಮೂಲಕ ಅದನ್ನು ತೆರೆಯಬಹುದು.
ಈ ಹತ್ತನೇ ದ್ವಾರವನ್ನು (ರಂಧ್ರವನ್ನು) ಆಜ್ಞಾಚಕ್ರ, ತ್ರಿನೇತ್ರ, ಶಿವನೇತ್ರ, ಮೂರನೆ ಕಣ್ಣು (ಥರ್ಡ್ ಐ) ಎಂದೆಲ್ಲ ಕರೆಯಲಾಗುತ್ತದೆ. ಆದರೆ ಇದು ತೆರೆದುಕೊಂಡಿರುವುದಿಲ್ಲ. ಸಾಧನೆಯ ಮೂಲಕ ಅದನ್ನು ತೆರೆಯಬೇಕಾಗುತ್ತದೆ. ಆದರೆ ಇದು ಬಹಿರಂಗಕ್ಕೆ ತೆರೆದುಕೊಳ್ಳುವುದಿಲ್ಲ. ಬದಲಿಗೆ, ಅಂತರಗದೆಡೆಗೆ ತೆರೆದುಕೊಳ್ಳುತ್ತದೆ. ಈ ದ್ವಾರವು ವ್ಯಕ್ತಿಯನ್ನು ಸತ್ಯದೆಡೆಗೆ, ಪರಮಾತ್ಮದೆಡೆಗೆ ಜೋಡಿಸುತ್ತದೆ. ಉಳಿದ ಒಂಬತ್ತು ದ್ವಾರಗಳು ಜಗತ್ತಿನೊಡನೆ ಬೆಸೆದರೆ, ಈ ಹತ್ತನೆಯ ದ್ವಾರವು ಸ್ವಯಮಿಕೆಯೊಂದಿಗೆ, ಆತ್ಮದೊಂದಿಗೆ, ಪರಮಾತ್ಮನೊಂದಿಗೆ ಬೆಸೆಯುತ್ತದೆ. ಈ ಹತ್ತನೆಯ ದ್ವಾರ ಅಥವಾ ಆಜ್ಞಾ ಚಕ್ರವು ತೆರೆದುಕೊಂಡರಷ್ಟೆ ಅದ್ವೈತದ ಅನುಭೂತಿ ಸಾಧ್ಯವಾಗುವುದು.

ಹೊರಮುಖವಾಗಿ ತೆರೆದುಕೊಳ್ಳುವ ದ್ವಾರಗಳು ಸಾಂಸಾರಿಕ ಆಕರ್ಷಣೆಗಳಲ್ಲಿ, ಸಾಂಸಾರಿಕ ವಾಂಛೆ – ವಾಸನೆಗಳಲ್ಲಿ ಸಿಕ್ಕಿಸಿಹಾಕುತ್ತವೆ. ಕಣ್ಣುಗಳು ನೋಟದಲ್ಲಿ, ಕಿವಿಗಳು ಶಬ್ದದಲ್ಲಿ, ನಾಲಗೆಯು ರುಚಿಯಲ್ಲಿ, ಮೂಗು ಗಂಧದಲ್ಲಿ ಮತ್ತು ಚರ್ಮವು ಸ್ಪರ್ಶದಲ್ಲಿ ನಮ್ಮನ್ನು ಕಟ್ಟಿ ಹಾಕುತ್ತವೆ. ಈ ಎಲ್ಲ ಒಂಭತ್ತು ದ್ವಾರಗಳೂ ಹೊರಮುಖವಾಗಿಯೇ ತೆರೆದುಕೊಳ್ಳುವಂಥವು. ಇವೆಲ್ಲವೂ ನಮ್ಮನ್ನು ಲೌಕಿಕ ಜಗತ್ತಿನ ಜೊತೆಗೇನೋ ಬೆಸೆಯುತ್ತವೆ; ಆದರೆ ಸ್ವಯಂನಿಂದ ಬಹುದೂರ ಕೊಂಡೊಯ್ಯುತ್ತವೆ. ಸೆಲ್ಫ್ ಫಾರ್ಗೆಟ್‍ಫುಲ್‍ನೆಸ್- ಸ್ವ ವಿಸ್ಮರಣೆಯು ಹೀಗೆ ಬಾಹ್ಯ ಜಗತ್ತಿನೊಡನೆ ಸಂಬಂಧವೇರ್ಪಟ್ಟಿದ್ದರ ಪರಿಣಾಮವೇ ಆಗಿದೆ. ಎಲ್ಲ ಭ್ರಾಂತಿಗೂ ಕ್ಲೇಷಗಳಿಗೂ ಈ ಸ್ವ ವಿಸ್ಮರಣೆಯೇ ಮೂಲ. ಆಜ್ಞಾ ಚಕ್ರ ಅಥವಾ ಮೂರನೆ ಕಣ್ಣು ತೆರೆದುಕೊಂಡರಷ್ಟೆ ಆತ್ಮಕ್ಕೆ ಸ್ವಯಂಬೋಧೆ ಸಾಧ್ಯವಾಗುವುದು.

ನಮ್ಮ ಎಲ್ಲ ಇಂದ್ರಿಯಗಳು ಮುಂಜಾನೆ ನಿದ್ರೆ ಮುಗಿಸಿ ಎದ್ದ ಕೂಡಲೆ ಸಕ್ರಿಯವಾಗತೊಡಗುತ್ತವೆ. ಏಳುತ್ತಿದ್ದ ಹಾಗೆಯೇ ನಮಗೆ ‘ನಾನು ಇದ್ದೇನೆ’ ಎನ್ನುವ ಅರಿವು ಉಂಟಾಗುತ್ತದೆ; ಮತ್ತು ಈ ಅರಿವಿನೊಂದಿಗೆ ಇಂದ್ರಿಯಗಳು ಹೊರ ಜಗತ್ತಿಗೆ ಸ್ಪಂದಿಸುತ್ತಾ ತಮ್ಮ ಕೆಲಸ ಶುರು ಮಾಡುತ್ತವೆ. ವ್ಯಕ್ತಿಯು ಲೌಕಿಕ ವ್ಯವಹಾರಗಳಲ್ಲಿ ತಲ್ಲೀನನಾಗಿ ಹೋಗುತ್ತಾನೆ. ಐಹಿಕ ಜಗತ್ತಿನಲ್ಲಿ ತನ್ನನ್ನು ತಾನು ಎಷ್ಟು ಮರೆತುಬಿಡುತ್ತಾನೆಂದರೆ, ತಾನು ಯಾರು, ಏನಾಗಿದ್ದೇನೆ ಎಂಬ ಚಿಂತನೆಯು ಹಿಂದೆಯೇ ಉಳಿದುಹೋಗುತ್ತದೆ.

ನಾವೀಗ ಶಂಕರರ ಮಾತುಗಳತ್ತ ಮರಳೋಣ.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ, ಮದೋ ನೈವ ಮಾತ್ಸರ್ಯಭಾವಃ….. “ನಾನು ದ್ವೇಷಾನುರಾಗಗಳಲ್ಲ, ಲೋಭಮೋಹಗಳೂ ಅಲ್ಲ. ನಾನು ಗರ್ವವೂ ಅಲ್ಲ, ಮತ್ಸರವೂ ಅಲ್ಲ….”

ಈಗ ಶಂಕರರು ಮನೋವೃತ್ತಿಗಳ ಬಗ್ಗೆ ಹೇಳುತ್ತಿದ್ದಾರೆ. ಒಮ್ಮೆ ವ್ಯಕ್ತಿಯು ಅನುರಾಗಕ್ಕೋ ದ್ವೇಷಕ್ಕೋ ಅಥವಾ ವಾಸನೆಯ ಹಿಡಿತಕ್ಕೋ ಒಳಗಾದರೆ ಸಾಕು, ಅದು ಅತನನ್ನು ನುಂಗಿ ನೊಣೆದುಬಿಡುತ್ತದೆ. ಈ ಮನೋವೃತ್ತಿಗಳು ಕೆಲವೊಮ್ಮೆ ಸಮಾಜದಿಂದ ನಿಷೇಧಿಸಲ್ಪಟ್ಟ, ನೀತಿ ಬಾಹಿರವಾದ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತವೆ. ಈ ಮನೋವೃತ್ತಿಯು, ಈ ವಾಸನೆಯು ಮನುಷ್ಯನಿಂದ ಅತ್ಯಂತ ನೀಚ ಕಾರ್ಯಗಳನ್ನು ಮಾಡಿಸಬಲ್ಲದಾಗಿರುತ್ತದೆ. ಸಮಾಜವು ಕೆಲವು ನಡತೆಗಳನ್ನು ಇವು ಸಮ್ಮತ, ಇವು ಅಸಮ್ಮತ ಎಂದು ಬಹಳ ಹಿಂದಿನಿಂದಲೂ ಪಟ್ಟಿ ಮಾಡಿಕೊಂಡು ಅದರಂತ ನಡೆಯುತ್ತ ಬಂದಿದೆ. ಇಂಥವನ್ನು ಮಾಡಬಹುದು, ಇಂಥವನ್ನು ಮಾಡಬಾರದು ಎಂಬ ನಿಯಮಗಳನ್ನು ರೂಪಿಸಿದೆ. ಹಾಗೆಯೇ ನಿಮ್ಮನ್ನು ನೀವು ಅವೆಲ್ಲವನ್ನೂ ಮಾಡುವ – ಬಿಡುವ ಕರ್ತನೆಂದು ತಿಳಿಯುತ್ತೀರಿ. ಯಾವಾಗ ಕಾಮನೆಗಳು ಉದಿಸುತ್ತವೆಯೋ ಮತ್ತು ಅವನ್ನು ಪೂರೈಸಿಕೊಳ್ಳುವ ಅವಕಾಶ ಇರುವುದಿಲ್ಲವೋ ಆಗ ನೀವು ಅದನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುತ್ತೀರಿ.

ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ;  ಕಾಮನೆಗಳು ನಿಮ್ಮನ್ನು ಕೇಳಿ ಹುಟ್ಟಿಕೊಳ್ತವೆಯೋ ಅಥವಾ ಹುಟ್ಟಿಕೊಂಡು ನಿಮ್ಮನ್ನು ಕೈಗೊಂಬೆಯಾಗಿಸಿಕೊಂಡು ಆಟವಾಡಿಸುತ್ತವೆಯೋ? ನಿಮ್ಮನ್ನು ನುಂಗಿ ತಮ್ಮ ಗುಲಾಮನಾಗಿಸಿಕೊಳ್ತವೆಯೋ? ಅವನ್ನು ನಿರ್ಮಿಸಿದವರ್ಯಾರು? ಕಾಮನೆಗಳು ನಿನ್ನಿಂದ ಹುಟ್ಟಿಕೊಂಡವೋ ಅಥವಾ ನಿನಗೆ ಸಿಕ್ಕಂಥವೋ?

ಎಲ್ಲವೂ ನಮಗೆ ಸಿಕ್ಕಂಥವೇ. ಪ್ರತಿಯೊಂದೂ ಪ್ರಕೃತಿ ಸಹಜವೇ. ನಾವು ಅಕಾರಣವಾಗಿ, ಸುಮ್ಮನೆ ಆಲೋಚನೆ ಮಾಡುತ್ತೇವೆ. ಆದರೆ ಆ ಯಾವ ಚಿಂತನೆಗಳಲ್ಲೂ ಹುರುಳಿರುವುದಿಲ್ಲ. ಸದ್ವಿಚಾರಗಳನ್ನು, ಸಮ್ಯಕ್ ಸಂಗತಿಗಳನ್ನು (ಚೈತನ್ಯಯುತ ವಿಚಾತಗಳನ್ನು) ಕುರಿತು ಚಿಂತನೆ ನಡೆಸುವುದು ಕೂಡ ಒಂದು ಕಲಿಕೆ. ಅದೊಂದು ಶಿಕ್ಷಣ. ಅದೊಂದು ಬೇರೆಯೇ ವಿಧಾನ. ಆದರೆ ಯಾರೂ ಅದನ್ನು ಕಲಿಸಿಕೊಡುವುದಿಲ್ಲ. ಸಮ್ಯಕ್ ಸಂಗತಿಗಳ ಶಿಕ್ಷಣವನ್ನು ಯಾವ ಶಾಲಾ ಕಾಲೇಜುಗಳೂ ನೀಡುವುದಿಲ್ಲ. ವಿಶ್ವವಿದ್ಯಾಲಯಗಳಿರಲಿ, ಸಮಾಜ – ಪರಿವಾರಗಳು ಕೂಡ ನೀಡುವುದಿಲ್ಲ.
ಹೀಗಿದ್ದರೂ ಕೂಡ ಕೆಲವೊಮ್ಮೆ ಕೆಲವರು ಸಮ್ಯಕ್ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆನ್ನುವುದು ಅಚ್ಚರಿಯ ವಿಷಯ. ಅಂಥವರಿಗೆ ಸರಿ ತಪ್ಪುಗಳನ್ನು ವಿಂಗಡಿಸಿ ನೋಡುವ ವಿವೇಕ ಬುದ್ಧಿಯು ಲಭ್ಯವಾಗುತ್ತದೆ. ಇಂತಹ ವಿವೇಕ ಬುದ್ಧಿಯು ಯಾರಾದರೂ ಸದ್ಗುರುವಿನ ಸನ್ನಿಧಿಯಲ್ಲಿ ಸಮ್ಯಕ್ ಪ್ರಯಾಸದಿಂದ, ಸಮ್ಯಕ್ ಅಭ್ಯಾಸ ನಡೆಸುವುದರಿಂದ ದೊರೆಯಬಲ್ಲದು.

1 Comment

Leave a Reply to ದಯಾ ದಯಾನಂದCancel reply