ಭಯವನ್ನು ಬಿಸಾಡಿದ ಶಿಷ್ಯ

ಮ್ಮೆ ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಸಂಜೆಗತ್ತಲಾದ ಹಾಗೆಲ್ಲಾ ಕಾಡಿನ ದಾರಿ ಕೂಡಾ ದಟ್ಟವಾಗತೊಡಗಿತು.

ಗುರು ಒಂದು ಚೀಲವನ್ನುಹಿಡಿದುಕೊಂಡಿದ್ದ. ಅದು ಭಾರವಾಗಿತ್ತು. ಅವರು ಕಾಡಿಗೆ ತೆರಳುವ ಮುಂಚೆ ಸತ್ಸಂಗ ಏರ್ಪಡಿಸಿದ್ದ ಗೃಹಸ್ಥನೊಬ್ಬ ಅವರಿಗೆ ಅದನ್ನು ಕಾಣಿಕೆಯಾಗಿ ನೀಡಿದ್ದ.

ಕಾಡಿನಲ್ಲಿ ಮುಂದುವರಿದಂತೆಲ್ಲ ಗುರು ಮತ್ತೆಮತ್ತೆ ತನ್ನ ಶಿಷ್ಯನಿಗೆ “ನಾವು ಭಯಪಡುವ  ಅಗತ್ಯವಿಲ್ಲವಷ್ಟೆ?” ಎಂದು ಕೇಳುತ್ತಿದ್ದ.

ಶಿಷ್ಯನಿಗೆ ಗುರುವಿನ ವರ್ತನೆ ವಿಚಿತ್ರ ಅನ್ನಿಸುತ್ತಿತ್ತು. ಹಾಗೇ ನಡೆಯುತ್ತಾ ಅವರೊಂದು ಕೊಳವನ್ನು ತಲುಪಿದರು. ಅಲ್ಲಿ ಗುರು ಶೌಚಕ್ಕೆ ಇಳಿದಾಗ ಶಿಷ್ಯ, ಗುರುವಿನ ಚೀಲದಲ್ಲಿ ಏನಿದೆ ನೋಡೇಬಿಡೋಣ ಅಂದುಕೊಂಡು ತೆರೆದ. ಅದರಲ್ಲಿ ಚಿನ್ನದ ಗಟ್ಟಿಯನ್ನು ಕಂಡ. ಏನೋ ಹೊಳೆದಂತಾಗಿ ಆ ಚಿನ್ನದ ಗಟ್ಟಿಯನ್ನು ತೆಗೆದು ಬಿಸಾಡಿ, ಅದರಲ್ಲಿ ಕಲ್ಲುಗಳನ್ನು ತುಂಬಿದ.

ಗುರು ಮತ್ತೆ ಪ್ರಯಾಣಕ್ಕೆ ಸಿದ್ಧನಾಗಿ, ಚೀಲವನ್ನು ಎತ್ತಿಕೊಂಡು, “ಹೊರಡೋಣವೇ? ನಾವು ಭಯ ಪಡುವ ಅಗತ್ಯವಿಲ್ಲವಷ್ಟೆ?” ಎಂದು ಕೇಳಿದ.

ಶಿಷ್ಯ ನಗುತ್ತಾ, “ಖಂಡಿತವಾಗಿಯೂ ಇಲ್ಲ ಗುರುಗಳೇ. ನಾನು ಭಯವನ್ನು ಚೀಲದೆಂದು ತೆಗೆದು ಬಿಸಾಡಿಬಿಟ್ಟೆ!” ಅಂದ.  

Leave a Reply